ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಲ್ಲಣಗಳ ಕುಲುಮೆಯ ರಂಗಮಂಚ

ರಂಗಬಿನ್ನಹ
Last Updated 27 ಜೂನ್ 2015, 19:30 IST
ಅಕ್ಷರ ಗಾತ್ರ

ಕನ್ನಡದ ರಂಗಭೂಮಿ ಸಂದರ್ಭದಲ್ಲಿ ಊಹಿಸಿಕೊಳ್ಳಲು ಕಷ್ಟವಾದ ರಂಗ ಪ್ರಯೋಗ ಮರಾಠಿಯ ‘ಎಫ್-ಒನ್/ ಒನ್ ಝೀರೊ ಫೈವ್’ ನಾಟಕ. ಪುಣೆಯ ‘ಆಸಕ್ತ’ ತಂಡವು ಇತ್ತೀಚೆಗೆ ಕೊಲ್ಲಾಪುರದ ದೇವಲ ರಂಗಮಂದಿರದಲ್ಲಿ ಈ ನಾಟಕದ ಪ್ರಯೋಗ ನಡೆಸಿತು. ಅಶುತೋಷ ಪೋತದಾರ ಅವರು ರಚಿಸಿದ ಈ ನಾಟಕವನ್ನು ನೇಪಥ್ಯ ನಿರ್ಮಿಸಿ, ನಿರ್ದೇಶಿಸಿದವರು ಮೋಹಿತ ಟಾಕಳಕರ್.

ಮಹಾನಗರದ ‘ನೆರೆಹೊರೆ’ಯ ಕಾಸ್ಮೊಪಾಲಿಟನ್ (ಬಹು-ಭಾಷಿಕ–ಸಂಸ್ಕೃತಿಯ) ಸಂಸ್ಕೃತಿಯ ಸೂಕ್ಷ್ಮ ಪದರಗಳನ್ನು ಈ ನಾಟಕ ಅನಾವರಣಗೊಳಿಸುತ್ತದೆ. ಎಂಥ ಅಪಾಯಕಾರಿ ಮನೋಛಾಯೆಯಲ್ಲಿ ನಮ್ಮ ಬದುಕು ಸಾಗುತ್ತಿದೆ ಎನ್ನುವುದನ್ನು ಸೂಚಿಸುವ ಈ ನಾಟಕ ಸಹೃದಯರನ್ನು ಬೆಚ್ಚಿಬೀಳಿಸುತ್ತದೆ.

ಉದ್ಯೋಗ-ಹಣವಿದ್ದೂ ನೆರೆಹೊರೆಗಳಿದ್ದೂ ಅಸುರಕ್ಷಿತ ಭಾವ ಈ ದಂಪತಿಯನ್ನು ಕಾಡುತ್ತದೆ. ಬಹುವರ್ಣೀಯ ವಸ್ತುವನ್ನು ಬ್ಲಾಕ್ ಹ್ಯೂಮರಸ್ ನೆಲೆಗಟ್ಟಿನಲ್ಲಿ– ಸಾಮಾಜಿಕ, ಧಾರ್ಮಿಕ, ರಾಜಕೀಯ ಸಮಸ್ಯೆಗಳನ್ನು ಮನೋವೈಜ್ಞಾನಿಕ ನೆಲೆಯಲ್ಲಿ, ವ್ಯಕ್ತಿ ಮತ್ತು ಸಮಾಜದ ಸ್ತರದಲ್ಲಿ ನಾಟಕ ಅಭಿವ್ಯಕ್ತಿಸುತ್ತದೆ. ‘ಹಸಿರು’ ಬಣ್ಣಕ್ಕೆ ಹುಟ್ಟಿಕೊಳ್ಳುವ ಅರ್ಥಾಭಿವ್ಯಕ್ತಿ ರಾಜಕೀಯ ಮತ್ತು ಧಾರ್ಮಿಕ ಪ್ರೇರಿತವಾಗಿ ದೈಹಿಕ ಹಾಗೂ ಮಾನಸಿಕ ರೂಪದಲ್ಲಿ ಹಿಂಸಿಸುತ್ತದೆ.

ಸಮಕಾಲೀನ ಸಮಾಜದ ‘ಬಣ್ಣ’ಗಳ ರಾಜಕೀಯವು; ಹಸಿರಿನ ವಿವಿಧ ರೂಪಗಳು, ಇನ್ನಿತರ ಬಣ್ಣಗಳು, ನಗರದ ಮಧ್ಯಮವರ್ಗೀಯ ಶ್ರೇಣೀಕೃತ ಸಮುದಾಯದಲ್ಲಿ ಹಸ್ತಕ್ಷೇಪ ಮಾಡಿ ಭಯವನ್ನು ಸೃಷ್ಟಿಸುತ್ತವೆ. ಆಂತರಿಕ ಮತ್ತು ಬಾಹ್ಯದಲ್ಲಿ ಏಟು ನೀಡುತ್ತವೆ. ಹತಾಶೆಗೆ ಈಡು ಮಾಡುತ್ತದೆ. ಅಂತಹ ಒಂದು ವರ್ತುಲದಲ್ಲಿ ಸಿಲುಕಿದ ಯುವಪೀಳಿಗೆ ವಿವೇಕವಿಲ್ಲದೆ ವರ್ತಿಸಿ ಕೋಮು, ಭಾಷೆ, ಪ್ರಾಂತವಾದಗಳಿಂದ ವ್ಯವಹರಿಸುವ ರೀತಿಯನ್ನು ಈ ನಾಟಕವು ಹೇಳಲು ಯತ್ನಿಸುತ್ತದೆ.

ಅಪಾರ್ಟ್‌ಮೆಂಟ್‌ ಒಂದರ ಪುಟ್ಟ ಮನೆಯಲ್ಲಿ ಬದುಕುವ ಯುವ ದಂಪತಿ ಸಾಗರ ಮತ್ತು ಮುಮು. ಸಾಗರ ಕಂಪನಿಯೊಂದರಲ್ಲಿ ಉದ್ಯೋಗದಲ್ಲಿದ್ದಾನೆ. ಆತನ ಮಡದಿ ಮುಮು ‘ಎಫ್-ಒನ್/ ಒನ್ ಝೀರೊ ಫೈವ್’ನಲ್ಲಿ ಏಕಾಂಗಿ ನೆಲೆಸಿರುವಳು. ‘ಲಿಬರಲ್’ ಹೆಸರಿನ ರೆಸಿಡೆನ್ಸ್ ಅಪಾರ್ಟ್‌ಮೆಂಟ್ ಅದು. ಅಲ್ಲಿ ವಿವಿಧ ಭಾಷೆಯ ಜನ ವಾಸವಾಗಿರುವರು. ಮರಾಠಿಯೊಟ್ಟಿಗೆ ಗುಜರಾತಿ, ಹಿಂದಿ, ಇಂಗ್ಲಿಷ್ ಭಾಷಿಕರು.

ಆಗ ಉತ್ತರಭಾರತೀಯ ‘ಡಾನ್’ (ರಾಜಕುಮಾರ ತಾಂಗಡೆ) ಹೆಸರಿನವ ಸಾಗರ, ಮುಮು ಅವರ ಮನೆಗೆ ಬಣ್ಣ ಹಚ್ಚಲು ಬರುವನು. ‘ನಾಥ್’ ಎಂದು ಹೀಗಳೆವ ಸಂದಿಗ್ಧತೆ ಬಿಚ್ಚಿಕೊಳ್ಳುವುದು ಇಲ್ಲಿಯೇ. ಆಗ ನಾಟಕವು ಹೆಚ್ಚು ಸಂಕೀರ್ಣ ಮತ್ತು ತೀವ್ರತೆಯನ್ನು ಪಡೆಯುತ್ತ ಸಾಗುತ್ತದೆ. ಆತ ಬಂದವನೇ ನಿಧಾನ ಸುತ್ತಲೂ ಗೋಡೆ ವೀಕ್ಷಿಸುವ ಪರಿಯ ಅಭಿನಯದಲ್ಲೇ ದಂಡೆತ್ತಿ ಗೆಲ್ಲುತ್ತಾನೆ.

ಮನೆಗೆ ಬಣ್ಣ ಹಚ್ಚುವ ಪೇಂಟರ್‌ನ ಡಾನ್ ಪಾತ್ರ ನಿರ್ವಹಿಸಿದ ರಾಜಕುಮಾರ ತಾಂಗಡೆ ಸ್ವತಃ ಸಮಕಾಲೀನ ಪ್ರತಿಭಾವಂತ ನಾಟಕಕಾರರು. ರಾಜಕುಮಾರ ಅವರ ಸಂವಾದದ ಪ್ರೊಜೆಕ್ಷನ್ ಉಳಿದ ಪಾತ್ರಧಾರಿಗಳನ್ನು ತೀರ ಪೇಲವಗೊಳಿಸಿಬಿಡುತ್ತದೆ. ಸರಳಗೊಳಿಸಿ ಹೇಳುವುದಾದರೆ– ‘ಸಹ ಕಲಾವಿದರನ್ನು ನುಂಗುವ’ ಅಭಿನಯ ಮತ್ತು ಸಂವಾದದ ಅಭಿವ್ಯಕ್ತಿ ಅವರದು.

ಅಪಾರ್ಟಮೆಂಟ್‌ನ 105 ಫ್ಲಾಟ್‌ನ್ನು ಅವರು ಗ್ರಹಿಸುವ, ಅದನ್ನು ತನ್ನದಾಗಿಸುವ ಬಗೆ ದಾಹಕವಾದುದು. ರಾಜಕುಮಾರ ತಾಂಗಡೆ ಉತ್ತರ ಭಾರತೀಯ ಪ್ರಾದೇಶಿಕ ಹಿಂದಿಯ ಮೈವಳಿಕೆಯನ್ನು ದಕ್ಕಿಸಿಕೊಂಡಿರುವರು. ಆ ಪಾತ್ರದ ಸಂಭಾಷಣೆ ನುಡಿಸುವಲ್ಲಿ ಒಂದು ‘ವಜನ್’ (ತೂಕ) ಇದೆ. ಹೀಗಾಗಿ ಆ ಪಾತ್ರವು ಅಧಿಕ ಪರಿಣಾಮ ಬೀರುತ್ತದೆ.

ಮನೆಯೊಡತಿ ಏಕಾಂಗಿಯಾಗಿರುವ ಹೊತ್ತಲ್ಲಿ ಇಡೀ ಗೋಡೆಗಳನ್ನು ಸೂಕ್ಷ್ಮವಾಗಿ ನಿರುಕಿಸುತ್ತಿರುವಾಗ ಅವಳನ್ನು ಆಪೋಶನೆಗೈಯುವಂತೆ ನೋಡಿದಂತೆ ಮುಮುಗೆ ಭಾಸವಾಗುತ್ತದೆ. ಆಗ ಆಕೆ– ‘ಐಸೆ ಕ್ಯೋ ದೇಖ ರಹೆ ಹೋ’ ಅಂದೊಡನೆ ಪೇಂಟರ್– ‘ಮೈ ಆಪ ಕೋ ನಹಿ ದೇಖ ರಹಾ ಹುಂ ಮೆಡಮ್, ದೀವಾರ ಕೋ ದೇಖರಹಾ ಹುಂ...’ ಎಂದು ತಣ್ಣಗೆ ಉತ್ತರ ಕೊಡುವ ಶೈಲಿ ಅದ್ಭುತ! ಮನೆಯ ಒಂದು ದಿಕ್ಕಿನ ಗೋಡೆ ವೀಕ್ಷಿಸಿ– ‘ಸಾಹಬನೆ ಕಹಾ ಹೈ ಕೀ ಯಹಾಂ ಹರಾ ರಂಗ ಡಾಲನೆ ಕೆಲಿಯೆ.

ಲೇಕಿನ್ ಆಪ ಯಹಾಂ ಗಣೇಶ ಜೀ ಕೋ ಬೀಟಾತೆ ಹೈ ಕ್ಯಾ? ಗಣೇಶ ಜಿ ಕೋ ರಖನಾ ಹೈತೋ ಹರಾ ರಂಗ! ಕುಛ ಲೋಗ ಹರಾ ರಂಗ ಕೋ ಪಸಂದ ನಹೀ ಕರತೆ ಹೈ ಮೆಡಮ್!’– ಇಲ್ಲಿ ಸಹಜ ಬಣ್ಣಗಳು ಸಾಮಾಜಿಕ, ಧಾರ್ಮಿಕ ಸಂಕೇತಗಳ ಸ್ವರೂಪ ಪಡೆಯುತ್ತವೆ. ಅದರ ಅರ್ಥವು ಮೌಢ್ಯತೆಯ ರೂಪ ಪಡೆಯುತ್ತದೆ. ಕಪ್ಪು ಬಣ್ಣ ಅಶುಭ, ಹಸಿರು ಒಂದು ಕೋಮಿಗೆ, ನೀಲಿ ಮತ್ತು ಕೇಸರಿ ಮತ್ತೆ ಬೇರೆ ಬೇರೆ ಜಾತಿ-ಕೋಮುಗಳವರು ‘ಬ್ರಾಂಡ್’ ಮಾಡಿಕೊಂಡಂತೆ.

ಹೀಗೆ ಸಮಾಜದ ಕತ್ತಲಕೂಪದ ಕೊಳಕುಗಳು ಗೋಚರಗೊಳ್ಳುತ್ತ ಸಾಗುವವು. ವಿಶಾಲ ಮನೋವೃತ್ತಿ ಕುಸಿದು ಸಂಕುಚಿತ ಧೋರಣೆಯನ್ನು ಪೋಷಿಸುವ ರಾಜಕಾರಣ, ಅಧಿಕಾರ ಪ್ರವೃತ್ತಿ ಈ ಬಣ್ಣಗಳನ್ನು ಬಳಸುವ ಮಾನಸಿಕತೆಯಿಂದ ಸ್ಪಷ್ಟವಾಗುತ್ತದೆ. ಇದಕ್ಕೆ ಬಲಿಪಶು ಮಾತ್ರ ಸಾಮಾನ್ಯ ಪ್ರಜೆ.

ಹೀಗೆ ಬಲಿಪಶು ಆದವ ಡಾನ್ ಪೇಂಟರ್. ‘ನಾನು ಉತ್ತರದವನಾದರೂ ಹೊಟ್ಟೆಪಾಡಿನ ದುಡಿಮೆಗೆ ಇಲ್ಲಿ ಬಂದಿರುವೆ. ನನಗೆ ಮರಾಠಿಯೂ ಬರುತ್ತದೆ. ಮಕ್ಕಳು ಮರಾಠಿಯಲ್ಲೇ ಕಲಿಯುತ್ತಿವೆ ಸ್ವಾಮಿ...’ ಎಂದು ಪರಿಪರಿ ಬೇಡಿಕೊಂಡರೂ ಭಾಷೆಯ ಠೇಕೆದಾರರು ಹಲ್ಲೆ ನಡೆಸುತ್ತಾರೆ. ಅವರು ಡಾನ್‌ನನ್ನು ಅಪರಾಧಿಯಾಗಿಸುವ ಅಮಾನವೀಯ ನಡೆ ಎದೆ ನಡುಗಿಸುತ್ತದೆ.

ಭಾಷೆಯನ್ನು ರಾಜಕೀಯ ಅಸ್ತ್ರವಾಗಿಸುವವರು, ಧರ್ಮಾಂಧತೆಯನ್ನು ಬಿತ್ತುವವರು, ಸಮಾಜದೊಳಗೆ ಇರುವ ಬಹುಸಂಸ್ಕೃತಿ ಮತ್ತು ಬಹುಭಾಷಿಕತೆಯನ್ನು ಕುಸಿಯುವಂತೆ ಮಾಡುತ್ತಿರುವ ಬಗೆಯನ್ನು, ವ್ಯಕ್ತಿ ಸ್ವಾತಂತ್ರ್ಯವು ಹರಣವಾಗುವುದನ್ನು ನಾಟಕ ವ್ಯಾಪಕವಾಗಿ ಚರ್ಚಿಸುತ್ತದೆ.

ಸಾಗರ ಪಾತ್ರದ ಸಾಗರ ದೇಶಮುಖ, ಮುಮು ನಿರ್ವಹಿಸಿದ ಮೃಣ್ಮಯಿ ಗೋಡಬೋಲೆ ಮತ್ತು ಉಳಿದ ಪಾತ್ರಧಾರಿಗಳು ಸಂಭಾಷಣೆ ನುಡಿಸುವಿಕೆಯಲ್ಲಿ ಯಾವ ಮೈಲಿಗೆಯಿಲ್ಲದೆ ಅಶ್ಲೀಲ (?) ಪದಗಳನ್ನು ಆಶಯಕ್ಕೆ ಅನುಗುಣ ಬಳಸಿದರು. ಲೈಂಗಿಕ ಹಾವಭಾವದ ಆಂಗಿಕ ನಟನೆ ಪ್ರಸಂಗಾನುಸಾರವಿತ್ತು. ಇಲ್ಲಿ ಗಮನಿಸುವ ಮಹತ್ವದ ಸಂಗತಿಯೆಂದರೆ, ಅಲ್ಲಿ ನಾಟಕದ ಪಠ್ಯವನ್ನು ಅಪ್ರೂವಲ್ ಮಾಡಿಕೊಳ್ಳುವುದಕ್ಕೆ ಸೆನ್ಸಾರ್ ಇದೆಯೆನ್ನುವುದು.

ಶೈಲೀಕೃತ ಅಭಿನಯ, ರೆಪರ್ಟರಿಗಳ ಛಾಯೆಯಿಂದ ಹೊರಬರದ ಅಭಿವ್ಯಕ್ತಿಗಳಿಂದ ಕನ್ನಡ ನಾಟಕ ಪ್ರಯೋಗ ನೀರಸವೆನಿಸುತ್ತಿವೆ. ಆದರೆ ಮರಾಠಿಯಲ್ಲಿ ನಿರ್ದೇಶಕರು ಹೊಸದರ ಹುಡುಕಾಟದ ಶೈಲೀಕೃತ ಆಭಿನಯವನ್ನು ಕಲಾವಿದರಿಂದ ಹೊರಹೊಮ್ಮಿಸುತ್ತಿದ್ದಾರೆ. ಈ ನಾಟಕದ ಪ್ರಯೋಗ ಎಲ್ಲ ವಿಧಗಳಿಂದ ಹದವಾಗಿ ಬೆರೆತಿದೆ.

ವಿಂಗ್‌ಗಳಿಲ್ಲದೆ ಇಂಗ್ಲಿಷಿನ ‘ಯು’ ಆಕಾರದ ಬಿಳಿ ಕ್ಯಾನ್ವಾಸ್‌ನ ನೇಪಥ್ಯ, ಸುತ್ತಲೂ ಪಾತ್ರ ನಿರ್ವಹಿಸುವವರು ಕುಳಿತು ತಮ್ಮ ಸರದಿಗೆ ಅಭಿನಯ ನೀಡುವ ತಂತ್ರವು ಆಯ್ದ ವಸ್ತುವಿಗೆ ಪೂರಕ. ಹಿನ್ನೆಲೆಯಲ್ಲಿ ಎಲ್‌ಸಿಡಿ ಬಳಸಿ, ಅಮೂರ್ತ ಕಲಾಕೃತಿ ಮತ್ತು ಛಾಯಾಚಿತ್ರಗಳನ್ನು ಸನ್ನಿವೇಶದ ಅಭಿವ್ಯಕ್ತಿಯಂತೆ ಬಳಸಿದ್ದು ಗಮನಾರ್ಹ.

ಕೊನೆಯಲ್ಲಿ ಹಸಿರು ಬಣ್ಣದ್ದೇ ಪ್ರಕರಣ ಉಂಟಾಗಿ, ಈ ಎಲ್ಲ ಗೊಂದಲಕ್ಕೆ ಕಥಾನಾಯಕಿ ಕಾರಣಳೋ ಡಾನ್ ಪೇಂಟರ್ ಕಾರಣನೋ ಎನ್ನುವ ಸಂದಿಗ್ಧತೆಯಲ್ಲಿ ನಾಟಕ ಕೊನೆಗೊಳ್ಳುತ್ತದೆ. ಮತ್ತು ಅದರ ನಿರ್ಧಾರ ತೆಗೆದುಕೊಳ್ಳುವವರು ನೈತಿಕ ಪೊಲೀಸರಂತೆ ವರ್ತಿಸುವ ಅಪಾರ್ಟಮೆಂಟ್‌ನ ಜನರು. ಇದು ಎಂಥ ಅಸಂಗತ ಅಲ್ಲವೇ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT