ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಾಂತ್ರಿಕತೆಯಿಂದ ದೇಶದ ಬದಲಾವಣೆ ಸಾಧ್ಯ

‘ನಮ್ಮ ಮೆಟ್ರೊ’ ಮುಖ್ಯ ಎಂಜಿನಿಯರ್ ಅಭಿಮತ
Last Updated 4 ಅಕ್ಟೋಬರ್ 2015, 20:00 IST
ಅಕ್ಷರ ಗಾತ್ರ

ಕಲಬುರ್ಗಿ:  ‘ವಿಜ್ಞಾನ ಮತ್ತು ತಂತ್ರ ಜ್ಞಾನದಿಂದ ದೇಶವನ್ನು ಪ್ರಗತಿಯತ್ತ ಕೊಂಡೊಯ್ಯಲು ಸಾಧ್ಯವಿದೆ. ಆದ್ದರಿಂದ ಎಂಜಿನಿಯರಿಂಗ್ ವಿದ್ಯಾರ್ಥಿಗಳು ಈ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗಬೇಕು’ ಎಂದು ಬೆಂಗಳೂರಿನ ನಮ್ಮ ಮೆಟ್ರೊ ಮುಖ್ಯ ಎಂಜಿನಿಯರ್ ಕ್ಯಾಪ್ಟನ್ ಆರ್.ಆರ್.ದೊಡ್ಡಿಹಾಳ ಹೇಳಿದರು.

ನಗರದ ಪೂಜ್ಯ ದೊಡ್ಡಪ್ಪ ಅಪ್ಪ (ಪಿಡಿಎ) ಎಂಜಿನಿಯರಿಂಗ್ ಕಾಲೇಜಿನ ಸ್ಯಾಕ್ ಸಭಾಂಗಣದಲ್ಲಿ ಭಾನುವಾರ ಏರ್ಪಡಿಸಿದ್ದ 4ನೇ ಪದವಿ ಪ್ರದಾನ ಸಮಾರಂಭದಲ್ಲಿ ಅವರು ಮಾತನಾಡಿದರು.

‘ಜಾಗತಿಕ ಮೂಲ ಸೌಕರ್ಯ, ನೀರಾವರಿ ಮತ್ತು ಔದ್ಯೋಗಿಕ ಸೌಲಭ್ಯ ಕಲ್ಪಿಸಿದರೆ ದೇಶ ಖಂಡಿತವಾಗಿಯೂ ಅಭಿವೃದ್ಧಿಯಾಗುತ್ತದೆ ಎಂದು ಮಾಜಿ ಪ್ರಧಾನಿ ಜವಾಹರಲಾಲ್ ನೆಹರು ಬಲವಾಗಿ ನಂಬಿದ್ದರು. ಈ ಸೌಲಭ್ಯ ಕಲ್ಪಿಸಲು ಬೇಕಾದ ಆರ್ಥಿಕ ನೆರವನ್ನು ನೀಡಬಹುದು. ಆದರೆ, ತಾಂತ್ರಿಕತೆ, ವೃತ್ತಿ ಕೌಶಲ ಇರುವ ಎಂಜಿನಿಯರುಗಳೂ ಈ ದೇಶಕ್ಕೆ ಬೇಕು. ಆದ್ದರಿಂದ ಎಂಜಿನಿ
ಯರಿಂಗ್ ಪದವೀಧರರು ದೇಶ ಕಟ್ಟುವ ಕೆಲಸದಲ್ಲಿ ತೊಡಗಿಸಿಕೊಳ್ಳಬೇಕು’ ಎಂದು ಸಲಹೆ ನೀಡಿದರು.

ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಎಚ್.ಮಹೇಶಪ್ಪ ಮಾತನಾಡಿ, ‘ಎಂಜಿನಿಯರಿಂಗ್ ಪದವೀಧರರು ದೇಶದ ಉನ್ನತಿ, ಪ್ರಗತಿಗಾಗಿ ಶ್ರಮಿಸಬೇಕು. ಸಮಾಜಕ್ಕೆ ಏನನ್ನಾದರೂ ಕೊಡುಗೆ ನೀಡಬೇಕು. ಪದವಿ ನಂತರ ಸ್ವದೇಶದಲ್ಲೇ ಉದ್ಯೋಗದಲ್ಲಿ ತೊಡಗಿಸಿಕೊಳ್ಳಬೇಕು. ಐಎಎಸ್, ಐಪಿಎಸ್ ಅಧಿಕಾರಿಗಳಾಗಲು ಪ್ರಯತ್ನಿಸಬೇಕು. ತಾಂತ್ರಿಕತೆಯಿಂದ ಕೃಷಿಯಲ್ಲಿ ಬದಲಾವಣೆ ತರಲು ಮುಂದಾಗಬೇಕು’ ಎಂದು ಸಲಹೆ ನೀಡಿದರು.

ಆರ್ಕಿಟೆಕ್ಚರ್ ಕೌನ್ಸಿಲ್‌ನ ಅಧ್ಯಕ್ಷ ಉದಯ ಚಂದ್ರಕಾಂತ ಗಡಕರಿ ಮಾತನಾಡಿ, ‘2040ರ ವೇಳೆಗೆ ಭಾರತ ಜಗತ್ತಿನ ಎರಡನೇ ಅತಿ ದೊಡ್ಡ ಆರ್ಥಿಕ ರಾಷ್ಟ್ರವಾಗಿ ಹೊರಹೊಮ್ಮಲಿದೆ. ಈ ನಿಟ್ಟಿನಲ್ಲಿ ಎಲ್ಲರೂ ಒಂದಾಗಿ ದೇಶದ ಅಭಿವೃದ್ಧಿಗೆ ಪಣತೊಡಬೇಕು. ತಂತ್ರಜ್ಞಾನವನ್ನು ಬಳಕೆ ಮಾಡಿಕೊಂಡು ದೇಶದ ಅಭಿವೃದ್ಧಿಗೆ ಮಹತ್ತರ ಕೊಡುಗೆ ನೀಡಬೇಕು’ ಎಂದರು.

ವಿವಿಧ ವಿಭಾಗಗಳ 798 ವಿದ್ಯಾರ್ಥಿಗಳಿಗೆ ಪದವಿ, 20 ಪದವೀಧರರಿಗೆ ಚಿನ್ನದ ಪದಕ ವಿತರಿಸಲಾಯಿತು. ಕಾಲೇಜಿನ ಪ್ರಾಂಶುಪಾಲ ಡಾ.ಎಸ್.ಎಸ್. ಹೆಬ್ಬಾಳ ಪ್ರಾಸ್ತಾವಿಕವಾಗಿ ಮಾತನಾಡಿದರು.

ಎಚ್‌ಕೆಇ ಸಂಸ್ಥೆಯ ಅಧ್ಯಕ್ಷ ಬಸವರಾಜ ಎಸ್.ಭೀಮಳ್ಳಿ, ಎಚ್‌ಕೆಇ ಸಂಸ್ಥೆಯ ಪದಾಧಿಕಾರಿಗಳು, ವಿವಿಧ ವಿಭಾಗಗಳ ಮುಖ್ಯಸ್ಥರು, ವಿದ್ಯಾರ್ಥಿಗಳು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT