ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಾಂತ್ರಿಕ ದೋಷ: ಯಶ ಕಾಣದ ಮೊದಲ ಯತ್ನ

ಮಾಗಡಿ ರಸ್ತೆಯಿಂದ ಮೈಸೂರು ರಸ್ತೆ ಮಾರ್ಗ: ಮೆಟ್ರೊ ರೈಲಿನ ಪರೀಕ್ಷಾರ್ಥ ಸಂಚಾರ
Last Updated 26 ಮಾರ್ಚ್ 2015, 19:51 IST
ಅಕ್ಷರ ಗಾತ್ರ

ಬೆಂಗಳೂರು: ಮಾಗಡಿ ರಸ್ತೆಯಿಂದ ಮೈಸೂರು ರಸ್ತೆವರೆಗಿನ  ಮಾರ್ಗದಲ್ಲಿ ಪರೀಕ್ಷಾರ್ಥ ಸಂಚಾರ ನಡೆಸುವ ಮೆಟ್ರೊ ರೈಲಿನ ಮೊದಲ ಯತ್ನ ಗುರುವಾರ ಯಶ ಕಾಣಲಿಲ್ಲ.

ಬೆಂಗಳೂರು ಮೆಟ್ರೊ ರೈಲು ನಿಗಮದ ಅಧಿಕಾರಿಗಳ ಯೋಜನೆ ಪ್ರಕಾರ ಸಂಜೆ 4.30ರ ಹೊತ್ತಿಗೆ ಮೈಸೂರು ರಸ್ತೆಯ ನಾಯಂಡಹಳ್ಳಿ ನಿಲ್ದಾಣಕ್ಕೆ ರೈಲು ಬರಬೇಕಿತ್ತು. ಆದರೆ ಬರಲಿಲ್ಲ.

ಈ ಬಗ್ಗೆ ವರದಿಗಾರರೊಂದಿಗೆ ಮಾತನಾಡಿದ ನಿಗಮದ ವ್ಯವಸ್ಥಾಪಕ ನಿರ್ದೇಶಕ ಪ್ರದೀಪ್‌ ಸಿಂಗ್‌ ಖರೋಲಾ, ‘ಮಧ್ಯಾಹ್ನ 3ರ ಬಳಿಕ ಮಾಗಡಿ ರಸ್ತೆ ನಿಲ್ದಾಣದಿಂದ ರೈಲು ಹೊರಟಿತು. ಮುಂದಿನ ನಿಲ್ದಾಣ (ಹೊಸಹಳ್ಳಿ) ತಲುಪುವ ಮೊದಲೇ ಸಂಕೇತ (ಸಿಗ್ನಲಿಂಗ್‌) ವ್ಯವಸ್ಥೆಯಲ್ಲಿ ಕಾಣಿಸಿಕೊಂಡ ದೋಷದಿಂದಾಗಿ ಮಾರ್ಗ ಮಧ್ಯೆ ನಿಂತು ಬಿಟ್ಟಿತು’ ಎಂದರು.

‘ಪರೀಕ್ಷಾರ್ಥ ಸಂಚಾರ ಎಂದರೆ ಹಳಿಗಳ ಮೇಲೆ ರೈಲು ಓಡಿಸುವಷ್ಟು ಸರಳ ಕಾರ್ಯವಲ್ಲ; ಹಳಿ, ಸಂಕೇತ ಮತ್ತು ವಿದ್ಯುನ್ಮಾನ ವ್ಯವಸ್ಥೆ ಹಾಗೂ ರೈಲಿನೊಳಗಿನ ವಿದ್ಯುನ್ಮಾನ ವ್ಯವಸ್ಥೆಯ ನಡುವೆ ನಿರಂತರ ಸಂಪರ್ಕ ಏರ್ಪಡಬೇಕು. ಅದನ್ನು ಹೆಜ್ಜೆ ಹೆಜ್ಜೆಗೂ ಖಾತರಿಪಡಿಸಿಕೊಂಡು ರೈಲನ್ನು ಮುಂದಕ್ಕೆ ಓಡಿಸಬೇಕು’ ಎಂದು ಅವರು ಹೇಳಿದರು.

‘ರಾತ್ರಿ ವೇಳೆಗೆ ತಾಂತ್ರಿಕ ದೋಷವನ್ನು ಸರಿಪಡಿಸಲಾಗುವುದು. ಶುಕ್ರವಾರ ಬೆಳಿಗ್ಗೆ 11ರ ಹೊತ್ತಿಗೆ ಮೈಸೂರು ರಸ್ತೆಯ ನಿಲ್ದಾಣಕ್ಕೆ ರೈಲು ಬರಲಿದೆ’ ಎಂದು ಅವರು ತಿಳಿಸಿದರು.

‘ಪರೀಕ್ಷಾರ್ಥ ಸಂಚಾರ ಎರಡು ತಿಂಗಳ ಕಾಲ ನಡೆಯಲಿದೆ. ಮೊದ ಮೊದಲು ರೈಲನ್ನು ಗಂಟೆಗೆ ಐದು ಕಿ.ಮೀ ವೇಗದಲ್ಲಿ ಓಡಿಸಲಾಗುವುದು. ನಂತರದಲ್ಲಿ ಗಂಟೆಗೆ ಗರಿಷ್ಠ 90 ಕಿ.ಮೀ ವೇಗದಲ್ಲಿ ಓಡಿಸಿ ಪರಿಶೀಲಿಸಲಾಗುವುದು. ಪರೀಕ್ಷಾ ಅವಧಿಯಲ್ಲಿ ಪ್ರತಿಯೊಂದು ಅಂಶವನ್ನು ದಾಖಲಿಸಿಕೊಂಡು, ವಿಶ್ಲೇಷಣೆಗೆ ಒಳಪಡಿಸಲಾಗುವುದು. ಆ ದತ್ತಾಂಶವನ್ನು ಸಂಕೇತ ವ್ಯವಸ್ಥೆ ಅನುಮತಿ ಪ್ರಾಧಿಕಾರಕ್ಕೆ ಸಲ್ಲಿಸಿ, ಪ್ರಮಾಣ ಪತ್ರ ಪಡೆಯಲಾಗುವುದು. ಬಳಿಕ ಮೆಟ್ರೊ ರೈಲು ಸುರಕ್ಷತಾ ಆಯುಕ್ತರ ಅನುಮತಿ ಕೋರಿ ಅರ್ಜಿ ಸಲ್ಲಿಸಲಾಗುವುದು’ ಎಂದು ಅವರು ವಿವರಿಸಿದರು.

‘ಈ ಮಾರ್ಗದಲ್ಲಿ ಬರುವ ಆರು ನಿಲ್ದಾಣಗಳ ನಿರ್ಮಾಣ ಕಾರ್ಯ ಅಂತಿಮ ಘಟ್ಟ ತಲುಪಿದೆ. ಸಣ್ಣ ಪುಟ್ಟ ಕಾರ್ಯಗಳು ಬಾಕಿ ಇವೆ. ಅವು ಎರಡರಿಂದ ಆರು ವಾರಗಳ ಅವಧಿಯಲ್ಲಿ ಮುಗಿಯಲಿವೆ. ಒಟ್ಟಾರೆ ಜೂನ್‌ ಒಳಗೆ ನಿಲ್ದಾಣಗಳ ನಿರ್ಮಾಣ ಕಾರ್ಯ ಪೂರ್ಣಗೊಳ್ಳಲಿದೆ’ ಎಂದು ಅವರು ನುಡಿದರು.

‘ಪೀಣ್ಯ ಇಂಡಸ್ಟ್ರಿಯಿಂದ ಹೆಸರಘಟ್ಟ ಕ್ರಾಸ್‌ವರೆಗಿನ 3 ಕಿ.ಮೀ ಉದ್ದದ ಮಾರ್ಗದಲ್ಲಿ ಪರೀಕ್ಷಾರ್ಥ ಸಂಚಾರ ಯಶಸ್ವಿಯಾಗಿದೆ. ಆ ಮಾರ್ಗಕ್ಕೆ ಸುರಕ್ಷತಾ ಆಯುಕ್ತರು ಭೇಟಿ ನೀಡಿ, ಅನುಮತಿ ಕೊಡಬೇಕಿದೆ. ಈ ಮಾರ್ಗದಲ್ಲಿ ಏಪ್ರಿಲ್‌ ತಿಂಗಳಲ್ಲಿ ಹಾಗೂ ಮಾಗಡಿ ರಸ್ತೆ– ಮೈಸೂರು ರಸ್ತೆ ಮಾರ್ಗದಲ್ಲಿ ಜುಲೈ ವೇಳೆಗೆ ರೈಲಿನ ವಾಣಿಜ್ಯ ಸಂಚಾರ ಆರಂಭವಾಗುವ ನಿರೀಕ್ಷೆ ಇದೆ’ ಎಂದು ಅವರು ತಿಳಿಸಿದರು.

ಜೂನ್‌ನಲ್ಲಿ ‘ಗೋದಾವರಿ’ ಯಂತ್ರ ಸಿದ್ಧ
‘ಸಂಪಿಗೆ ರಸ್ತೆ– ಮೆಜೆಸ್ಟಿಕ್‌ ನಡುವೆ ‘ಗೋದಾವರಿ’ ಹೆಸರಿನ ಸುರಂಗ ಕೊರೆಯುವ ಯಂತ್ರ (ಟಿಬಿಎಂ) ಕೆಟ್ಟು ನಿಂತಿದೆ. ಅದರ ಕೊರೆಯುವ ಮುಂಭಾಗವನ್ನು (ಕಟರ್‌ ಹೆಡ್‌) ಇಟಲಿಯಿಂದ ತರಿಸಿಕೊಳ್ಳಲಾಗುತ್ತಿದೆ’ ಎಂದು ಪ್ರದೀಪ್‌ ಸಿಂಗ್‌ ಖರೋಲಾ ತಿಳಿಸಿದರು.

‘ಹಡಗಿನಲ್ಲಿ ಬರುತ್ತಿರುವ ಕಟರ್‌ ಹೆಡ್‌, ಏಪ್ರಿಲ್‌ ಮೂರನೇ ವಾರದ ಹೊತ್ತಿಗೆ ಚೆನ್ನೈಗೆ ಬರಲಿದೆ. ಅದನ್ನು ಬೆಂಗಳೂರಿಗೆ ತರಿಸಿಕೊಂಡು ‘ಗೋದಾವರಿ’ಯ ದುರಸ್ತಿ ಮಾಡಲಾಗುವುದು. ಜೂನ್‌ ತಿಂಗಳಲ್ಲಿ ‘ಗೋದಾವರಿ’ಯು ಸುರಂಗ ನಿರ್ಮಿಸುವ ಕಾರ್ಯವನ್ನು ಮತ್ತೆ ಆರಂಭಿಸಲಿದೆ’ ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT