ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಿಂಗಳಲ್ಲಿ ಎಲ್ಲ ರಸ್ತೆಗಳು ಸುಸ್ಥಿತಿಗೆ: ಬಿಬಿಎಂಪಿ ಘೋಷಣೆ

ನವೆಂಬರ್‌ ‘ಗುಂಡಿ ಮುಚ್ಚುವ ಮಾಸಿಕ’
Last Updated 30 ಅಕ್ಟೋಬರ್ 2014, 20:02 IST
ಅಕ್ಷರ ಗಾತ್ರ

ಬೆಂಗಳೂರು: ‘ನಗರದ ರಸ್ತೆಗಳಲ್ಲಿ ಬಿದ್ದಿ­ರುವ ಅಪಾರ ಪ್ರಮಾಣದ ಗುಂಡಿ­ಗಳನ್ನು ಮುಚ್ಚಲು ನವೆಂಬರ್‌ ತಿಂಗ­ಳನ್ನು ‘ಗುಂಡಿ ಮುಚ್ಚುವ ಮಾಸಿಕ’ವಾಗಿ ಘೋಷಿಸಿ ಕಾರ್ಯಾಚರಣೆ ನಡೆಸಲಾ­ಗುತ್ತದೆ’ ಎಂದು ಬಿಬಿಎಂಪಿ ಆಯುಕ್ತ ಎಂ.ಲಕ್ಷ್ಮೀನಾರಾಯಣ ಪ್ರಕಟಿಸಿದರು.

ಕೌನ್ಸಿಲ್‌ ಸಭೆಯಲ್ಲಿ ಗುರುವಾರ ಸದಸ್ಯರು ರಸ್ತೆಗಳ ದುರವಸ್ಥೆ ಕುರಿತು ಎತ್ತಿದ ಪ್ರಶ್ನೆಗಳಿಗೆ ಅವರು ಪ್ರತಿಕ್ರಿ­ಯಿ­ಸಿದರು. ‘ರಸ್ತೆಗಳು ಹಾಳಾಗಿರುವುದು ನಮ್ಮ ಗಮನಕ್ಕೂ ಬಂದಿದೆ. ಈ ಸಂಬಂಧ ದುರಸ್ತಿ ಕಾರ್ಯಾಚರಣೆ ನಡೆಸಲು ತಯಾರಿ ಮಾಡಿಕೊಳ್ಳಲಾಗಿದೆ’ ಎಂದು ಹೇಳಿದರು.

‘ನಾಲ್ಕು ತಿಂಗಳ ಹಿಂದೆಯಷ್ಟೇ 500 ಕಿ.ಮೀ. ಉದ್ದದ ರಸ್ತೆ ದುರಸ್ತಿ ಮಾಡಿದ ಗುತ್ತಿಗೆದಾರರಿಗೆ ಅವುಗಳನ್ನು ಒಂದು ವರ್ಷದವರೆಗೆ ನಿರ್ವಹಣೆ ಮಾಡುವ ಹೊಣೆಯನ್ನೂ ಗುತ್ತಿಗೆ ನೀಡುವಾಗಲೇ ವಹಿಸಲಾಗಿದೆ. ಹೀಗಾಗಿ ಆ ರಸ್ತೆಗಳ ಗುಂಡಿ ಮುಚ್ಚಲು ಬಿಬಿಎಂಪಿಗೆ ಯಾವುದೇ ಆರ್ಥಿಕ ಹೊಣೆ ಬೀಳು­ವು­ದಿಲ್ಲ. ಮಿಕ್ಕ ರಸ್ತೆಗಳ ದುರಸ್ತಿಗೆ ಅನು­ದಾನ ಒದಗಿಸಲಾಗುತ್ತದೆ’ ಎಂದು ಅವರು ವಿವರಿಸಿದರು.
‘ಪ್ರತಿಯೊಬ್ಬ ಸದಸ್ಯರೂ ತಮ್ಮ ವಾರ್ಡ್‌ಗೆ ಸಿಗುವ ಅನುದಾನದಲ್ಲಿ ₨ 25 ಲಕ್ಷವನ್ನು ರಸ್ತೆಗಳ ಗುಂಡಿ ಮುಚ್ಚಲು ಒದಗಿಸಬೇಕು. ಇದರಿಂದ ಒಳರಸ್ತೆಗಳ ದುರಸ್ತಿಗೆ ಅನುಕೂಲವಾ­ಗುತ್ತದೆ’ ಎಂದು ಹೇಳಿದರು.

ಕಾಂಗ್ರೆಸ್‌ನ ಜ್ಞಾನಭಾರತಿ ವಾರ್ಡ್‌ ಸದಸ್ಯ ಗೋವಿಂದರಾಜು ತಮ್ಮ ಭಾಗದ ರಸ್ತೆಗಳ ದುರಸ್ತಿ ಹಾಗೂ ತ್ಯಾಜ್ಯ ವಿಲೇ­ವಾರಿ ಮಾಡದಿರುವುದನ್ನು ವಿರೋಧಿಸಿ ಮೇಯರ್‌ ಪೀಠದ ಮುಂದೆ ಧರಣಿ ಕುಳಿತರು. ಬಿಜೆಪಿಯ ಲಗ್ಗೆರೆ ವಾರ್ಡ್‌ ಸದಸ್ಯ ಲಕ್ಷ್ಮೀಕಾಂತ ರೆಡ್ಡಿ ಸಹ ಅವರ ಪಕ್ಕ ಬಂದು ಕುಳಿತರು. ಎರಡೂ ಪಕ್ಷಗಳ ಮುಖಂಡರು ಅವರನ್ನು ಸಮಾಧಾ­ನಪಡಿಸಿ ಕರೆದೊಯ್ದರು.

‘ಜಿಲ್ಲಾಉಸ್ತುವಾರಿ ಸಚಿವರು, ಮೇಯರ್‌ ಹಾಗೂ ಆಯುಕ್ತರು ಬೇರೆ ವಾರ್ಡ್‌ಗಳಲ್ಲಿ ಸಮೀಕ್ಷೆ ನಡೆಸುತ್ತಾರೆ. ನಮ್ಮ ವಾರ್ಡ್‌ಗೆ ಯಾರೂ ಬರುತ್ತಿಲ್ಲ. ಗುಂಡಿ ಬಿದ್ದ ರಸ್ತೆಯಲ್ಲಿ ವಾಹನ ಕೆಟ್ಟು­ನಿಂತರೆ ತಳ್ಳಬೇಕಾಗುತ್ತದಲ್ಲ ಎನ್ನುವ ಭಯ ಅವರಿಗೆ’ ಎಂದು ಗೋವಿಂದ­ರಾಜು ಕುಟುಕಿದರು.

‘ವಾರ್ಡ್‌ ಸದಸ್ಯರಿಗೆ ಬೈಗುಳ ತಿಂದು ಭಯವಾಗಿ ಜ್ವರ ಬಂದಿದ್ದು, ಕಳೆದ 3–4 ದಿನಗಳಿಂದ ಹಾಸಿಗೆ ಹಿಡಿದಿದ್ದೇನೆ’ ಎಂದು ಹೇಳಿದರು.
ಲಕ್ಷ್ಮೀಕಾಂತ ರೆಡ್ಡಿ, ‘ನೀವು ‘ಪ್ರಜಾ­ವಾಣಿ’ ನೋಡುತ್ತಿಲ್ಲವೇ? ನಿತ್ಯವೂ ಗುಂಡಿಗಳು ಬಿದ್ದ ಚಿತ್ರಗಳು ಬರುತ್ತಿವೆ. ನಮ್ಮ ಮಾನ, ಮರ್ಯಾದೆ ಹರಾಜು ಆಗುತ್ತಿದೆ. ಮೊದಲು ಗುಂಡಿಗಳನ್ನೆಲ್ಲ ಮುಚ್ಚಲು ಕ್ರಮ ಕೈಗೊಳ್ಳಬೇಕು’ ಎಂದು ಆಗ್ರಹಿಸಿದರು. ಶಾಸಕ ಎಸ್‌.ಆರ್‌.­ವಿಶ್ವನಾಥ್‌ ಸಹ ರಸ್ತೆಗಳ ಗುಂಡಿ ಮುಚ್ಚದಿರುವ ಕುರಿತು ಅಸಮಾಧಾನ ವ್ಯಕ್ತಪಡಿಸಿದರು.

ಜೆಡಿಎಸ್‌ ನಾಯಕ ಆರ್‌.ಪ್ರಕಾಶ್‌, ‘ನೂರಾರು ಕೋಟಿ ರೂಪಾಯಿ ಖರ್ಚು ಮಾಡಿದರೂ ರಸ್ತೆಗಳಲ್ಲಿ ಬಿದ್ದ ಗುಂಡಿಗಳು ಯಾಕೆ ಕಣ್ಮರೆಯಾಗಿಲ್ಲ’ ಎಂದು ಪ್ರಶ್ನಿಸಿದರು. ‘ಇಡೀ ರಸ್ತೆಗೆ ಮತ್ತೆ ಡಾಂಬರಿನ ಹೊದಿಕೆ ಹಾಕದೆ ಗುಂಡಿಗಳನ್ನು ಮಾತ್ರ ಮುಚ್ಚಬೇಕು’ ಎಂದು ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT