ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಿಪಟೂರು: ರಸ್ತೆ ಒತ್ತುವರಿ ದಿಢೀರ್ ತೆರವು

ಪೈ ಹೋಟೆಲ್ ಶೌಚಾಲಯ ಕೆಡವಿ ಮಾಯವಾದ ಜೆಸಿಬಿ
Last Updated 16 ಸೆಪ್ಟೆಂಬರ್ 2014, 9:21 IST
ಅಕ್ಷರ ಗಾತ್ರ

ತಿಪಟೂರು: ನಗರದ ದೊಡ್ಡಪೇಟೆ ರಸ್ತೆ ಒತ್ತುವರಿ ತೆರವು ಕಾರ್ಯಾಚರಣೆಗೆ ಕಳೆದ ವಾರ ಚಾಲನೆ ನೀಡಿದ್ದ ನಗರಾಡಳಿತ ಸೋಮವಾರ ಸಿಂಗ್ರಿನಂಜಪ್ಪ ವೃತ್ತದಿಂದ ರೈಲು ನಿಲ್ದಾಣದವರೆಗಿನ ರಸ್ತೆ ಒತ್ತುವರಿ ತೆರವಿಗೆ ಮುಂದಾಯಿತು.

ಸಿಂಗ್ರಿನಂಜಪ್ಪ ವೃತ್ತದಲ್ಲಿರುವ ಪೈ ಹೋಟ್‌ಲ್‌ನ ಕಾಂಪೌಂಡ್ ಹಾಗೂ ಕಟ್ಟಡಕ್ಕೆ ಹೊಂದಿಕೊಂಡಂತೆ ಇದ್ದ ಶೌಚಾಲಯ­ವನ್ನು ಜೆಸಿಬಿ ಮೂಲಕ ತೆರವುಗೊಳಿಸಲಾಯಿತು.

ತಿಂಗಳ ಹಿಂದೆ ದೊಡ್ಡಪೇಟೆಯ ಚರಂಡಿ ಕಾಮ­ಗಾರಿ ಆರಂಭ ಸಂಬಂಧ ನಡೆದ ಭೂಮಿ ಪೂಜೆ ವೇಳೆ, ‘ಸದ್ಯದಲ್ಲಿಯೆ ರೈಲು ನಿಲ್ದಾಣ ರಸ್ತೆ ಮತ್ತು ಕಾರೋನೇಷನ್ ರಸ್ತೆಗಳ ವಿಸ್ತರಣೆ ಆರಂಭಿಸ­ಲಾಗು­ವುದು’ ಎಂದು ಶಾಸಕ ಕೆ. ಷಡಕ್ಷರಿ ತಿಳಿಸಿದ್ದರು.

ಆದರೆ ಇಷ್ಟು ಶೀಘ್ರವಾಗಿ ಕಾರ್ಯಾಚರಣೆ ಆರಂಭವಾಗುತ್ತದೆ ಎಂಬ ಸಣ್ಣ ಸುಳಿವನ್ನೂ ನೀಡದೆ, ಒತ್ತುವರಿ ತೆರವು ಕಾರ್ಯಾಚರಣೆ ಆರಂಭಿಸಿ­ರುವುದು ಕೆಲವು ನಾಗರಿಕರಲ್ಲಿ ಆತಂಕ  ಉಂಟು­ಮಾಡಿದೆ.

ನಗರಸಭೆ ಕಂದಾಯ ಅಧಿಕಾರಿ ಈಶ್ವರಪ್ಪ ನೇತೃತ್ವ­­ದಲ್ಲಿ ಕಾರ್ಯಾಚರಣೆಗೆ ಇಳಿದ ತಂಡ, ರೈಲು ನಿಲ್ದಾಣ ರಸ್ತೆಯ ಒಂದು ಬದಿ ಕಟ್ಟಡಗಳ ಒತ್ತುವರಿಯನ್ನು ಗುರುತು (ಮಾರ್ಕಿಂಗ್) ಮಾಡಿತು. ಪೈ ಹೋಟಲ್ ಕಟ್ಟಡ ಕಾಂಪೌಂಡ್, ಶೌಚಾ­ಲಯ ಒತ್ತುವರಿ ಮಾಡಿ ನಿರ್ಮಿಸಲಾಗಿದೆ ಎಂದು ಗುರುತು ಹಾಕಿದ ಕೆಲವೇ ನಿಮಿಷಗಳಲ್ಲಿ ನಗರಾ­ಡಳಿತಕ್ಕೆ ಸೇರಿದ ಜೆಸಿಬಿ ಆ ಭಾಗವನ್ನು ನೆಲ­ಕ್ಕುರುಳಿಸಿತು.

ಸ್ಥಳದಲ್ಲಿದ್ದ ಕಂದಾಯಾಧಿಕಾರಿ ಈಶ್ವರಪ್ಪ ಕಾರ್ಯಾ­ಚರಣೆ ಬಗ್ಗೆ ‘ಪ್ರಜಾವಾಣಿ’ಗೆ ಮಾತ­ನಾಡಿ, ಸಿಡಿಪಿ ಯೋಜನೆ ಪ್ರಕಾರ ರೈಲು ನಿಲ್ದಾಣದ ರಸ್ತೆ  ವಿಸ್ತೀರ್ಣ 40 ಅಡಿ. ಆದರೆ ಈ ರಸ್ತೆ ಇಕ್ಕೆಲ­ಗಳ ಕಟ್ಟಡ ಮಾಲೀಕರು ಸೆಟ್ ಬ್ಯಾಕ್ ಸ್ಥಳವನ್ನು ನಿರ್ಮಾಣಕ್ಕೆ ಬಳಸಿಕೊಂಡಿದ್ದಾರೆ. ಸುಮಾರು 1.5 ಮೀಟರ್ ಒತ್ತುವರಿಯಾಗಿ­ರು­ವುದು ಕಂಡು ಬಂದಿದೆ. ಅದನ್ನು ಗುರುತಿಸಿ ಕಟ್ಟಡ­ಗಳ ಮಾಲೀಕರ ಗಮನಕ್ಕೆ ತರುವ ಕಾರ್ಯ ಆರಂಭಿಸಿ­ದ್ದೇವೆ. ಸ್ವತಃ ತೆರವಿಗೆ ಮುಂದಾಗುವ ಕಟ್ಟಡ ಮಾಲೀಕರಿಗೆ ನಗರಾಡಳಿತ ಜೆಸಿಬಿ ಯಂತ್ರ ನೀಡುವ ಮೂಲಕ ಸಹಕಾರ ನೀಡುತ್ತದೆ ಎಂದು ತಿಳಿಸಿದರು.

ಪೈ ಹೋಟೆಲ್ ಕಟ್ಟಡದ ಒತ್ತುವರಿ ಭಾಗ ತೆರವು­ಗೊಳಿಸಿದ ನಂತರ ಮತ್ತೆ ಯಾವುದೇ ಕಟ್ಟಡದ ಒತ್ತುವರಿ ತೆರವು ಮಾಡದೆ ಜೆಸಿಬಿ ಸ್ಥಳ­ದಿಂದ ಮಾಯವಾದ ರೀತಿ ನಿಗೂಢವಾಗಿಯೇ ಉಳಿಯಿತು.

ನಗರಾಡಳಿತ ದಿಢೀರ್ ಕಾರ್ಯಾಚರಣೆ ಬಗ್ಗೆ ಅಸಮಾಧಾನ ತೋಡಿಕೊಂಡ ಹೋಟೆಲ್ ಮಾಲೀಕ ರಮಾಕಾಂತ್ ಪೈ, ಕಟ್ಟಡ ಮಾಲೀಕರ ಒಪ್ಪಿಗೆ ನೆಪ ಮುಂದಿಟ್ಟುಕೊಂಡು, ಬಾಡಿಗೆ­ದಾರ­ನಾದ ನನಗೆ ಯಾವ ತಿಳಿವಳಿಕೆ ನೀಡದೆ ತೆರವು ಕಾರ್ಯಾ­ಚರಣೆಯನ್ನು ಏಕಾಏಕಿ ನಡೆಸಿದ್ದನ್ನು ಪ್ರಶ್ನಿಸಿದರು. ಚರಂಡಿ ಕಾಮಗಾರಿ ನಡೆದಿರುವ ದೊಡ್ಡ­ಪೇಟೆ ರಸ್ತೆಯಲ್ಲಿ ಉದ್ಭವವಾಗದ ಸೆಟ್‌ ಬ್ಯಾಕ್ ಒತ್ತುವರಿ ಪ್ರಶ್ನೆ ಈ ರಸ್ತೆಯಲ್ಲಿ ಉದ್ಭವ­ವಾದದ್ದು ಹೇಗೆ ಎಂದು ಕಿಡಿ ಕಾರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT