ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಿರುಮಲಾಚಾರ್ಯರ ‘ಜ್ಯೋತಿಸ್ಸಿದ್ಧಾಂತ ಸಂಗ್ರಹ’

ಹಳತು ಹೊನ್ನು
Last Updated 23 ಜುಲೈ 2016, 19:30 IST
ಅಕ್ಷರ ಗಾತ್ರ

‘ಜ್ಯೋತಿಸ್ಸಿದ್ಧಾಂತ ಸಂಗ್ರಹ’ ಇಬ್ಬರು ಲೇಖಕರು ಸೇರಿ ರಚಿಸಿರುವ ಕೃತಿ. ಅವರಲ್ಲಿ ಒಬ್ಬರು ಬ್ರಹ್ಮಶ್ರೀ ಸಿದ್ಧಾಂತಿ ಪುಸ್ತಕಂ ಅಳಸಿಂಗರಾಚಾರ್ಯ ತಿರುಮಲಾಚಾರ್ಯ. ಇನ್ನೊಬ್ಬರು ಯಾರು ಎನ್ನುವುದು ತಿಳಿದುಬಂದಿಲ್ಲ.

ತಿರುಮಲಾಚಾರ್ಯರು ಭಾರತೀಯ ಜ್ಯೋತಿರ್ವಿಜ್ಞಾನವನ್ನು ಅರಿತಿದ್ದರೆ ಇನ್ನೊಬ್ಬರು ಪಾಶ್ಚಾತ್ಯರ ಖಗೋಳ ವಿಜ್ಞಾನ ವಿಚಾರಗಳನ್ನು ಕುರಿತ ಆಳವಾದ ತಿಳಿವಳಿಕೆಯುಳ್ಳ ಖಗೋಳಶಾಸ್ತ್ರಜ್ಞರು.

ದುರದೃಷ್ಟವಶಾತ್ ಆ ಲೇಖಕರ ಹೆಸರು, ಪ್ರಕಟಣೆಯಾಗಿರುವ ವರುಷ ನಮೂದಾಗಿರುವ ಮಾಹಿತಿ ಇರುವ ಪೀಠೀಕಾ ಭಾಗದ ಪುಟ, ಮುಖಪುಟ, ಮಾಹಿತಿ ಪುಟಗಳೆಲ್ಲ ಈ ಆವೃತ್ತಿಯಲ್ಲಿ ಹರಿದು ಹೋಗಿದೆ.

ಈ ಕೃತಿಯನ್ನು ಸುಮಾರು 1880ರ ಆಸುಪಾಸಿನಲ್ಲಿ ಮೈಸೂರಿನ ಗ್ರಾಡುಯೇಟ್ಸ್ ಟ್ರೇಡಿಂಗ್ ಅಸ್ಸೋಸಿಯೇಷನ್ ಮುದ್ರಣಾಲಯದ ಪರವಾಗಿ ಪಿ. ಪಲ್ಲಾಂಜಿ ಅವರು ಮುದ್ರಿಸಿರುತ್ತಾರೆ. 184 ಪುಟಗಳ ಇದು ಖಗೋಳವಿಜ್ಞಾನವನ್ನು ಕುರಿತ ಅಪೂರ್ವ ಕೃತಿ.

ಖಗೋಳ ವಿಜ್ಞಾನಕ್ಕೆ ಮೊದಲಿಗೆ ಜ್ಯೋತಿಶ್ಶಾಸ್ತ್ರವೆಂಬ ಹೆಸರಿತ್ತು. ಕನ್ನಡ ಭಾಷೆಯಲ್ಲಿ ಖಗೋಲ ವಿಜ್ಞಾನವನ್ನು ಕುರಿತು 1874ರಿಂದಲೇ ಪುಸ್ತಕಗಳು ಹೊರಬಂದಿವೆ.

1874ರಲ್ಲಿ ಮದರಾಸು ನಿರೀಕ್ಷಣಾಲಯದಲ್ಲಿ ಪರಿವೀಕ್ಷಕರಾಗಿದ್ದ ಚಿಂತಾಮಣಿ ರಘೂನಾಥಾಚಾರಿ ಎನ್ನುವವರು ‘ಶುಕ್ರಗ್ರಸ್ತ ಸೂರ್ಯಗ್ರಹಣ’ ಹೆಸರಿನ ಕನ್ನಡ ಕೃತಿಯನ್ನು ರಚಿಸಿದ್ದು, ಅವರು ಅದರ ಇಂಗ್ಲಿಷ್ (Transit of Venus), ತಮಿಳು ಮತ್ತು ಉರ್ದು ಅವತರಣಿಕೆಗಳನ್ನೂ ಹೊರತಂದಿರುತ್ತಾರೆ.

ಇದರ ಇಂಗ್ಲಿಷ್ ಹಾಗೂ ಕನ್ನಡ ಅವತರಣಿಕೆಗಳ ೧೮೭೪ರ ಮೊದಲ ಮುದ್ರಣದ ಮೂಲ ಪ್ರತಿಗಳು ಬೆಂಗಳೂರಿನಲ್ಲಿರುವ ‘ಭಾರತೀಯ ಖಗೋಳಭೌತಶಾಸ್ತ್ರ ಸಂಸ್ಥೆ’  ಗ್ರಂಥಾಲಯದ ಆರ್ಕೈವ್ಸ್‌ನಲ್ಲಿದೆ. ಈ ಕನ್ನಡ ಹಾಗೂ ಇಂಗ್ಲಿಷ್ ಆವೃತ್ತಿಗಳನ್ನು ಮೊದಲ ಮುದ್ರಣವಾದ 138 ವರ್ಷಗಳ ನಂತರ ೨೦೧೨ರಲ್ಲಿ, ಭಾರತೀಯ ಖಗೋಳಭೌತಶಾಸ್ತ್ರ ಸಂಸ್ಥೆಯಂತಹ ಪ್ರಖ್ಯಾತ ಪ್ರತಿಷ್ಠಿತ ಸಂಸ್ಥೆ ಪ್ರಕಟಿಸಿದೆ.

ಹಾಗೂ ಇದೇ ಕೃತಿಯ ಕನ್ನಡ ಮತ್ತು ಇಂಗ್ಲಿಷ್ ಅವತರಣಿಕೆಗಳನ್ನು ದೀರ್ಘ ವಿವರಣೆಗಳೊಂದಿಗೆ ಬೆಂಗಳೂರಿನ ಜವಹರಲಾಲ್ ನೆಹರೂ ತಾರಾಲಯದ ನಿರ್ದೇಶಕರಾದ ಡಾ. ಬಿ.ಎಸ್. ಶೈಲಜ ಅವರು ‘ಬೆಂಗಳೂರ್ ಅಸೋಸಿಯೇಷನ್ ಆಫ್ ಸೈನ್ಸ್ ಎಜುಕೇಷನ್’ ವತಿಯಿಂದ 2002ರಲ್ಲಿ ಪ್ರಕಟಿಸಿರುತ್ತಾರೆ.

ಮಂಗಳೂರಿನ ಬಾಸೆಲ್ ಮಿಷನ್ ಬುಕ್ ಅಂಡ್ ಟ್ರಾಕ್ಟ್ ಡೆಪಾಸಿಟರಿಯಿಂದ ‘ಗ್ರಹಣಗಳಾಗುವುದು ಹ್ಯಾಗೆ? ಮತ್ತು ಗ್ರಹಗಳೆಂದರೇನು?’ (1884), ‘ಚುಕ್ಕಿಗಳೂ ಬಾಲಚುಕ್ಕಿಗಳೂ ಎಂಬ 3 ಪುಸ್ತಕಗಳು’ (1981), ವೆಸ್ಲಿಯನ್ ಮಿಷನ್ ಪ್ರೆಸ್‌ನಿಂದ ‘ಗ್ರಹಣಗಳು ಸಚಿತ್ರ’ (1895), ಸಿ. ಚಿಕ್ಕಣ್ಣ ಅವರ ‘ದೃಕ್ ಸಿದ್ಧಾಂತ ದರ್ಪಣಂ’ (1914),

ನಂಗಪುರಂ ವೆಂಕಟೇಶ ಅಯ್ಯಂಗಾರ್ ಅವರ ‘ಸೂರ್ಯ ಸಚಿತ್ರ’ (1918), ಎಚ್.ಈ. ಲಿಂಗಣ್ಣ ಅವರ ‘ಸಚಿತ್ರ ಖಗೋಳ ಬಾಲಬೋಧೆ’ (1928), ನಂಗಪುರಂ ವೆಂಕಟೇಶ ಅಯ್ಯಂಗಾರ್ಯರ ‘ಜೋತಿರ್ವಿನೋದಿನಿ’ (1931),

ತಿರುಮಲರಾಯರ ‘ಆಕಾಶದಲ್ಲಿನ ಅದ್ಭುತ ಚಮತ್ಕಾರಗಳು’ (1931), ಮುಂತಾದ ಹಲವಾರು ಸಮೃದ್ಧ ಕೃತಿಗಳು ಖಗೋಳ ವಿಜ್ಙಾನವನ್ನು ಕುರಿತು ಪ್ರಕಟವಾಗಿವೆ. ಈ ಸಾಲಿನಲ್ಲಿ ‘ಜ್ಯೋತಿಸ್ಸಿದ್ಧಾಂತ ಸಂಗ್ರಹ’ ಎನ್ನುವ ಅತ್ಯಂತ ಉಪಯುಕ್ತ ಮಾಹಿತಿ, ವಿಶ್ಲೇಷಣೆ ಹಾಗೂ ಪ್ರಯೋಗದ ಪ್ರತಿಫಲಗಳನ್ನುಳ್ಳ ಸೊಗಸಾದ ಪ್ರಸಕ್ತ ಕೃತಿಯನ್ನು ಗಮನಿಸಬಹುದು.

ಸಿದ್ಧಾಂತಿ ತಿರುಮಲಾಚಾರ್ಯರನ್ನು ಕುರಿತೂ ಹೆಚ್ಚಿನ ಮಾಹಿತಿಗಳಿಲ್ಲ. ಇವರು ಮೈಸೂರಿನವರಾಗಿದ್ದು ಮೈಸೂರು ಶ್ರೀಮನ್ಮಹಾರಾಜರವರ ಸಂಸ್ಕೃತ ಕಾಲೇಜಿನಲ್ಲಿ ಜ್ಯೋತಿಶ್ಶಾಸ್ತ್ರೋಪಾಧ್ಯಾಯರಾಗಿದ್ದರು. ಈ ಕೃತಿಯನ್ನಲ್ಲದೆ ಅವರು ಇನ್ನೆರಡು ಕೃತಿಗಳನ್ನು ರಚಿಸಿರುತ್ತಾರೆ.

1880ರಲ್ಲಿ ಕನ್ನಡದ ನಾಗವರ್ಮನು ಸಂಸ್ಕೃತದಲ್ಲಿ ರಚಿಸಿರುವ ‘ಕರ್ಣಾಟಕ ಭಾಷಾಭೂಷಣಂ’ ಕೃತಿಗೆ ಕನ್ನಡದಲ್ಲಿ ಟೀಕೆ ಹಾಗೂ ಸಂಸ್ಕೃತದ ವಿಶಾಖದತ್ತನ ‘ಮುದ್ರಾಮಂಜೂಷ’ದ ಕನ್ನಡ ನಾಟಕದ ಅನುವಾದ ‘ಚಾಣಕ್ಯತಂತ್ರ ಚಮತ್ಕಾರ’ ಆ ಎರಡು ಕೃತಿಗಳು.

ಪ್ರಸಕ್ತ ಕೃತಿಯ ಪೀಠಿಕಾ ಭಾಗದಲ್ಲಿ – ‘ನಮಗೆ ತಿಳಿದ ಮಟ್ಟಿಗೂ ಕನ್ನಡ ಭಾಷೆಯಲ್ಲಿ ಜ್ಯೋತಿಸ್ಸಿದ್ಧಾಂತ ವಿಷಯಗಳನ್ನು ಕುರಿತು ಬಾಲಕರಿಗೆ ಮತ್ತು ಪಾಮರರಿಗೆ ಸುಲಭವಾಗಿ ಬೋಧಿಸುವ ಯಾವ ಗ್ರಂಥವೂ ಇಲ್ಲದೆ ಇರುವುದರಿಂದ ನಾವು ಬಾಲಕರಿಗೂ ಸಾಮಾನ್ಯಜನಗಳಿಗೂ ಸಿದ್ಧಾಂತ ವಿಷಯ ತಿಳಿಯುವಂತೆ ಕನ್ನಡದಲ್ಲಿ ಸಂಗ್ರಹವಾದ ಸುಲಭವಾದ ಒಂದು ಗ್ರಂಥವನ್ನು ಬರೆಯಬೇಕೆಂದು ಯೋಚನೆ ಹುಟ್ಟಿತು.

ನಾನು ಇಂಗ್ಲಿಷು ಜ್ಯೋತಿಷ್ಯವನ್ನು ಓದಿದ್ದರಲ್ಲಿ ನನಗೆ ತಿಳಿದ ಎಲ್ಲಾ ಅಂಶಗಳನ್ನೂ ತಿರುಮಲಾಚಾರ್ಯರಿಗೆ ತಿಳಿಸಿದೆನು. ಆದ್ದರಿಂದ ಉಭಯತ್ರರೂ ಸೇರಿ ಈ ಪುಸ್ತಕವನ್ನು ಬರೆಯಲಿಕ್ಕೆ ಸೌಲಭ್ಯವುಂಟಾಯಿತು’ ಎಂದು ಮತ್ತೊಬ್ಬ ಕೃತಿಕಾರರು ಹೇಳಿದ್ದಾರೆ. ಈ ಸೂಚನೆಯ ಮೇರೆಗೆ ತಿರುಮಲಾಚಾರ್ಯರೂ ಈ ಕೃತಿಯ ಕರ್ತೃಗಳಲ್ಲಿ ಒಬ್ಬರು ಎನ್ನುವುದು ಗೊತ್ತಾಗುತ್ತದೆ.

‘ವಿಷಯಾನುಕ್ರಮಣಿಕೆಯ ಭೂಮಿಕಾ’ ಎನ್ನುವ ಮೊದಲ ಭಾಗದಲ್ಲಿ ಭೂಮಿಯ ಆಕೃತಿ–ದಿನಗತಿ ವಾರ್ಷಿಕಗತಿ ಅಹೋರಾತ್ರ ವ್ಯತ್ಯಾಸಕಾರಣ–ಸ್ಥಲನಿರ್ಣಯ, ಚಂದ್ರ, ಕಾಲವಿಚಾರ, ಬುಧ, ಶುಕ್ರ, ಅಂಗಾರಕ, ಗುರು, ಶನಿ, ಉರಾನಸ್, ನೆಪ್ಷ್ಯೂನ್, ಧೂಮಕೇತು, ಖಗೋಳ, ಸ್ಥಿರನಕ್ಷತ್ರ, ಪತನಜ್ಯೋತಿ, ಆಕರ್ಷಣಶಕ್ತಿ, ಸ್ಪೆಕ್‌ಟ್ರಂ, ನೆಬುಲೀ – ಎನ್ನುವ ಅಧ್ಯಾಯಗಳಿವೆ.

‘ಶಕನಿರ್ಣಯ’ ಎನ್ನುವ ದ್ವಿತೀಯ ಭಾಗದಲ್ಲಿ ಶಕಕ್ಕೆ ಸಂವತ್ಸರ್ವನ್ನು ತಿಳಿಯುವ ಕ್ರಮ, ಕ್ರಿಸ್ತಶಕದಿಂದ ಇತರ ಶಕ, ತಾರೀಖಿಗೆ ವಾರ ತಿಳಿಯುವುದು, ತಾರೀಖಿಗೆ ತಿಥಿ ತಿಳಿಯುವ ಕ್ರಮ, ತಿಥಿಗೆ ತಾರೀಖು ಹೇಳುವುದು,

ಸಂವತ್ಸರಗಳ ಹೆಸರು, ನಕ್ಷತ್ರಗಳ ಹೆಸರು, ನಕ್ಷತ್ರಗಳ ಆಕಾರ, ನಕ್ಷತ್ರ ಸ್ಥಾನಗಳು, ಲಗ್ನ ಸ್ವರೂಪ, ರಾಶಿಗಳಿಗೆ ನಕ್ಷತ್ರ ವಿಭಾಗ, ಪಾದಛಾಯೆಯಿಂದ ಘಳಿಗೆ ತಿಳಿಯುವ ಕ್ರಮ, ನಕ್ಷತ್ರದಿಂದ ಘಳಿಗೆ ತಿಳಿಯುವ ರೀತಿ,

ಸೌರಮಾನದ ತಿಂಗಳ ಹೆಸರು ಮತ್ತು ಲಗ್ನದ ಕಾಲಪರಿಮಾಣ ಮುಂತಾದ್ದು ಎನ್ನುವ ಉಪಯುಕ್ತ ವಿಚಾರಗಳ ವಿವೇಚನೆ ವಿಶ್ಲೇಷಣೆಗಳಿವೆ. ವಿಷಯ ನಿರೂಪಣೆಗಳಿಗೆ ಪೂರಕವಾಗಿ ಗ್ರಹತಾರೆಗಳ ಹಾಗೂ ಗ್ರಹಣಗಳ ಚಿತ್ರಗಳನ್ನು ನೀಡಲಾಗಿದೆ.

ಈ ಕೃತಿಯಲ್ಲಿ ನಮ್ಮ ಪ್ರಾಚೀನ ಜ್ಯೋತಿಶ್ಶಾಸ್ತ್ರ ಲೇಖಕರಾದ ಮಯ, ಮಣಿತ್ಥ, ಮಣೀಂಧ, ಬಾದರಾಯಣ, ಹರಿದತ್ತ, ಪಿಂಗಳ, ವೈವಸ್ವತ, ಗಾರ್ಗಿ, ರವಿ, ಪರಾಶರ, ಗುರು, ವಸಿಷ್ಠ, (ಇವರ ಕೃತಿಗಳು ಲಭ್ಯವಿಲ್ಲ), ವರಾಹಮಿಹಿರ (ಪಂಚಸಿದ್ಧಾಂತಿಕಾ),

ಬ್ರಹ್ಮಗುಪ್ತ, ಭಾಸ್ಕರಾಚಾರ್ಯ, ಆರ್ಯಭಟ ಮುಂತಾದವರು ಪ್ರತಿಪಾದಿಸಿರುವ ಸಿದ್ಧಾಂತ ಜ್ಯೋತಿಷ ವಿಚಾರಗಳನ್ನೂ ಹಾಗೂ ಪಾಶ್ಚಾತ್ಯ ಸಿದ್ಧಾಂತಿಗಳಾದ ಬಾಲ್, ಲಾಕಿಯರ್, ಪ್ರೊಕ್ಟರ್, ಗಾಡ್‌ಪ್ರಿ ಮುಂತಾದವರು ಪ್ರತಿಪಾದಿಸಿರುವ ಆಧುನಿಕ ಸಿದ್ಧಾಂತಗಳನ್ನೂ ಅವುಗಳಲ್ಲಿರುವ ಸಮಾನಾಂಶಗಳನ್ನು ಸಮನ್ವಯಗೊಳಿಸಿ ಸರಳವಾದ ಕನ್ನಡದಲ್ಲಿ ನಿರೂಪಣೆ ಮಾಡಲಾಗಿದೆ.

ನಮ್ಮ ಪುರಾಣಗಳಲ್ಲಿ ಋಷಿವಾಕ್ಯಗಳೇ ಪ್ರಮಾಣವಾಗಿರುವ ಫಲಾಫಲಗಳು ಜನಗಳ ಶ್ರದ್ಧೆ ಮತ್ತು ನಂಬಿಕೆಗೆ ತಕ್ಕುದಾದ ವಿಚಾರ ಫಲಾಫಲಗಳನ್ನು ಇಲ್ಲಿ ಪರಿಗಣಿಸಿಲ್ಲ.

ಆದರೆ ನಮ್ಮ ಪ್ರಾಚೀನರು ನಿರೂಪಿಸಿರುವ ಗಣಿತದಿಂದಲೂ ಸಾಕ್ಷ್ಯಾಧಾರಗಳಿಂದಲೂ ಹಾಗೂ ಪ್ರತ್ಯಕ್ಷಾನುಭವದಿಂದಲೂ ಪ್ರಣೀತವಾದ ಖಗೋಳ ಸಿದ್ಧಾಂತದ ವಿಚಾರಗಳನ್ನು ಇಲ್ಲಿ ಗಂಭೀರವಾದ ಚರ್ಚೆಗೆ ಒಳಪಡಿಸಿ ಅಂಗೀಕರಿಸಲಾಗಿದೆ. ಸದ್ಯಕ್ಕೆ ಆಧಾರವಿಲ್ಲದ್ದರಿಂದ ಪುರಾಣಗಳಲ್ಲಿ ಹೇಳಲಾಗಿರುವ ಜ್ಯೋತಿಷ್ಯ ವಿಷಯಗಳನ್ನು ಇಲ್ಲಿ ಪರಿಗಣಿಸಿಲ್ಲ.

ಲೇಖಕರ ಶೈಲಿಗೆ ಒಂದು ನಿದರ್ಶನವನ್ನು ಗಮನಿಸಬಹುದು: ‘‘ಚಂದ್ರಗೋಳವು ಕೋಟ್ಯಂತರ ಯುಗಗಳಿಗೆ ಮುಂಚೆ ಸೂರ್ಯನಂತೆ ಸ್ವಪ್ರಕಾಶವುಳ್ಳದ್ದಾಗಿ ಅತ್ಯಂತ ಉಷ್ಣವುಳ್ಳ ಜ್ಯೋತಿರೂಪವಾಗಿ ಆವಿ ರೂಪವಾಗಿದ್ದು ಕ್ರಮೇಣ ಜಲರೂಪವನ್ನು ಹೊಂದಿ ಮೃದುವಾಗಿ ನಂತರ ಘನೀಭೂತವಾಗಿ ತನ್ನಲ್ಲಿದ್ದ ಎಲ್ಲಾ ಶಾಕವನ್ನೂ ಕಳೆದುಕ್ಕೊಂಡು ಬರೀ ಪೃಥ್ವೀಮಯವಾದ ಒಂದು ಗೋಳವಾಗಿ ಭೂಮಿಯ ಆಕರ್ಷಣ ಶಕ್ತಿಯಿಂದಲೂ ಮತ್ತು ಸೂರ್ಯನ ಆಕಷಣ ಶಕ್ತಿಯಿಂದಲೂ ಭೂಮಿಯನ್ನಾಶ್ರಯಿಸಿ ಭೂಮಿಯನ್ನು ಸುತ್ತುತ್ತಲೂ ಮತ್ತು ಸೂರ್ಯನ ಸುತ್ತಲೂ ಕೋಟ್ಯಂತರಯುಗಗಳಿಂದಲೂ ಸುತ್ತುತ್ತಲಿದೆ’’.

ಅತ್ಯಂತ ಜಟಿಲವಾದ ಪ್ರಾಚೀನ ಹಾಗೂ ಆಧುನಿಕ ಖಗೋಳ ವಿಜ್ಞಾನೀಯ ಸಿದ್ಧಾಂತಗಳನ್ನು ಸರಳವಾದ ಕನ್ನಡದಲ್ಲಿ ಸಾಮಾನ್ಯರ ಗ್ರಹಿಕೆಗೂ ದಕ್ಕುವಂತೆ ವಿಚಾರ ನಿರೂಪಣೆ ಮಾಡಿರುವುದು ಈ ಕೃತಿಯ ವಿಶೇಷ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT