ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತೀಕ್ಷ್ಣ ವಿಮರ್ಶಾ ಪ್ರಜ್ಞೆಯ ಮಿಣಜಗಿ

ವ್ಯಕ್ತಿ ಸ್ಮರಣೆ
Last Updated 3 ಅಕ್ಟೋಬರ್ 2015, 19:30 IST
ಅಕ್ಷರ ಗಾತ್ರ

ಸುಮಾರು ಅರವತ್ತು ವರ್ಷಗಳಷ್ಟು ಹಿಂದಿನ ಮಾತು. 1956–58ರಲ್ಲಿ ಕೀರ್ತಿನಾಥ ಕುರ್ತಕೋಟಿ ಅವರು ಎಂ.ಎ. ಓದುತ್ತಿದ್ದ ಕಾಲ. ಆಗ ನಾನು ಅದೇ ವರ್ಷ ಪ್ರಾರಂಭವಾದ ಕೆ.ಎಚ್‌.ಕಬ್ಬೂರ ಇನ್‌ಸ್ಟಿಟ್ಯೂಟ್‌ನಲ್ಲಿ ಸಿವಿಲ್‌ ಎಂಜಿನಿಯರಿಂಗ್ ಡಿಪ್ಲೊಮಾಕ್ಕೆ ಹೆಸರು ಹಚ್ಚಿದ್ದೆ. ಸುರೇಂದ್ರನಾಥ ಮಿಣಜಗಿ ಅವರು ತಮ್ಮ ಪಿಎಚ್‌.ಡಿ. ಪ್ರಬಂಧ ಬರೆಯುವ ಸಲುವಾಗಿ ಕರ್ನಾಟಕ ಕಾಲೇಜಿನ ಪಕ್ಕದಲ್ಲಿದ್ದ ಆನೆಸ್ಟಿ ಬ್ಲಾಕ್‌ನಲ್ಲಿ ಒಂದು ಕೊಠಡಿ ಮಾಡಿಕೊಂಡು ವಾಸವಿದ್ದರು. ಅವರು ವಿ.ಕೃ.ಗೋಕಾಕರ ಮಾರ್ಗದರ್ಶನದಲ್ಲಿ ಪಿಎಚ್‌.ಡಿ.ಗೆ ನೋಂದಣಿ ಮಾಡಿಸಿದ್ದರು.

‘ಟಿ.ಎಸ್‌.ಎಲಿಯಟ್ ಕವಿಯ ವಿಮರ್ಶಾ ಸಿದ್ಧಾಂತಗಳು’ ಅವರ ವಿಷಯವಾಗಿತ್ತು. ಶಂಕರ ಮೊಕಾಶೆ ಪುಣೇಕರ, ಕೀರ್ತಿನಾಥ ಕುರ್ತಕೋಟಿ ಹಾಗೂ ಎಸ್‌.ಬಿ.ಮಿಣಜಗಿ ಅವರು ಮೇಲಿಂದ ಮೇಲೆ ತಮ್ಮ ವಿಚಾರಗಳನ್ನು ಹಂಚಿಕೊಳ್ಳುತ್ತಿದ್ದರು. ಮೊಕಾಶಿ ಅವರು ಬೆಳಗಾವಿಯಲ್ಲಿ ಕೆಲಸ ಮಾಡುತ್ತಿದ್ದರು. ಆಗ ಅಲ್ಲಿಯೇ ಕೆಲಸ ಮಾಡುತ್ತಿದ್ದ ಎ.ಕೆ.ರಾಮಾನುಜನ್‌ ಸಹಿತ ಪ್ರತಿ ಭಾನುವಾರ ಧಾರವಾಡಕ್ಕೆ ಬಂದು ಜಿ.ಬಿ.ಜೋಶಿ ಅವರ ಮನೆಯಲ್ಲಿ ಝಾಂಡಾ ಊರುತ್ತಿದ್ದರು.

ಬೆಳಿಗ್ಗೆಯಿಂದ ರಾತ್ರಿಯವರೆಗೂ ಮನೋಹರ ಗ್ರಂಥಮಾಲೆಯ ಅಟ್ಟದಲ್ಲಿ ಹರಟೆ ಹೊಡೆದು ರಾತ್ರಿ ಮನೆ ಸೇರಿದ ಮೇಲೆ ಊಟ ಮುಗಿಸಿ ಮತ್ತೆ ಸಾಹಿತ್ಯಿಕ ಹರಟೆ ಮುಂದುವರಿಯುತ್ತಿತ್ತು. ನಡುನಡುವೆ ಚಹಾ ಸರಬರಾಜು ಮಾಡುವ ಕೆಲಸ ನನ್ನ ಪಾಲಿನದಾಗಿತ್ತು. ವಾರದ ಉಳಿದ ದಿನಗಳಲ್ಲಿ ಮಿಣಜಗಿ ಅವರು ಸಂಜೆ ಅಟ್ಟಕ್ಕೆ ಬಂದರೆ ಕೀರ್ತಿನಾಥ ಅವರೊಂದಿಗೆ ಮನೆಯವರೆಗೂ ಬಂದು ಮನೆಯಲ್ಲಿಯೇ ಊಟ ಮುಗಿಸುತ್ತಿದ್ದರು.

ರಾತ್ರಿ 10 ಗಂಟೆಗೆ ಮನೆಯಿಂದ ನಾವು ಮೂವರೂ ಹೊರಬಿದ್ದು ಸುಭಾಶ ರಸ್ತೆಯಲ್ಲಿರುವ ಪೈ ಔಷಧ ಅಂಗಡಿಯ ಪಕ್ಕದಲ್ಲಿದ್ದ ಮೊರಬ ಮಾಸ್ತರ ಪಾನ್‌ ಅಂಗಡಿಯಲ್ಲಿ ಬೀಡಾ ಕಟ್ಟಿಸಿಕೊಳ್ಳುತ್ತಿದ್ದೆವು. ಅಲ್ಲಿಂದ ಮಿಣಜಗಿ ತಮ್ಮ ರೂಮಿನ ಕಡೆಗೆ ಕಾಲು ಹಾಕಿದರೆ ನಾವು ಮನೆಯತ್ತ ಮರಳುತ್ತಿದ್ದೆವು.

ಇಲ್ಲಿ ಇನ್ನೊಂದು ವಿಶೇಷ ಹೇಳಲೇಬೇಕು. ಮೊರಬ ಮಾಸ್ತರ ಪಾನ್‌ ಅಂಗಡಿ ತೆಗೆಯುತ್ತಿದ್ದುದೇ ರಾತ್ರಿ 10ಕ್ಕೆ. ಮುಚ್ಚುತ್ತಿದ್ದುದು ಬೆಳಿಗ್ಗೆ 6ಕ್ಕೆ. ಇಡೀ ರಾತ್ರಿ ಅವರ ಪಾನ್‌ಗಾಗಿ ದಾರಿ ಕಾಯ್ದು ಕಟ್ಟಿಸಿಕೊಂಡು ತಿಂದು ಹೋಗುವುದೇ ಒಂದು ವಿಶೇಷ. ಅವರೆಂದೂ ಬೀಡಾ ಕಟ್ಟಿ ಇಡುತ್ತಿರಲಿಲ್ಲ. ಬಂದವರು ಕೇಳಿದ ಮೇಲೆಯೇ ಅವರವರ ಮನ್‌ಪಸಂದ್‌ ಬೀಡಾ ತಯಾರಿಸಿಕೊಡುತ್ತಿದ್ದರು. ಈಗ ಅವರೂ ಇಲ್ಲ, ಅಂಗಡಿಯೂ ಇಲ್ಲ.

ಮಿಣಜಗಿ ಅವರ ಪಿಎಚ್‌.ಡಿ. ಪ್ರಬಂಧ ಕುಂಟುತ್ತಾ ಸಾಗಿತ್ತು. ಗೋಕಾಕರು ಅವರು ಬರೆದು ಮುಗಿಸಿದ್ದ ಪ್ರಬಂಧವನ್ನು ಮತ್ತೆ ಆಮೂಲಾಗ್ರವಾಗಿ ಬದಲಾಯಿಸಿ ಬರೆಯಲು ಹೇಳಿದರಂತೆ. ಅದರಿಂದ ಅವರು ಮಾನಸಿಕವಾಗಿ ಧೈರ್ಯ ಕಳೆದುಕೊಂಡಿದ್ದರು. ಅಂತೂ ಕೊನೆಗೆ 1964ರಲ್ಲಿ ಮನ್ವಂತರದ ಮೂರನೇ ಸಂಚಿಕೆಯಾಗಿ ‘ಟಿ.ಎಸ್‌.ಎಲಿಯಟ್ ಕವಿಯ ವಿಮರ್ಶೆಯ ವಿಚಾರಗಳು’ ಎಂಬ ಅವರ ಪುಸ್ತಕವನ್ನು ಹೊರತರಲಾಯಿತು. ಆಗಿನ ಕಾಲದಲ್ಲಿ ಅತ್ಯಂತ ಹೊಸ ಅನ್ವೇಷಣೆಯಾದ ಮೋನೊ ಟೈಪಿಂಗ್‌ ವಿಧಾನದಲ್ಲಿ ಮಣಿಪಾಲದ ಪವರ್‌ ಪ್ರೆಸ್‌ನಲ್ಲಿ ಮುದ್ರಿಸಲಾಯಿತು. ಅದರ ಜತೆಗೆ ಗಿರೀಶ ಕಾರ್ನಾಡರ ತುಘಲಕ್‌ ನಾಟಕವೂ ಅಲ್ಲೇ ಮುದ್ರಿತವಾಯಿತು.

ಧಾರವಾಡದ ಟ್ಯಾಗೋರ್ ಹಾಲ್‌ನಲ್ಲಿ ಈ ಎರಡೂ ಪುಸ್ತಕಗಳ ಬಿಡುಗಡೆ ಕಾರ್ಯಕ್ರಮ ಏರ್ಪಾಟಾಗಿತ್ತು. ಮಿಣಜಗಿ ಅವರ ಪುಸ್ತಕವನ್ನು ಗೋಪಾಲ ಕೃಷ್ಣ ಅಡಿಗರು ಬಿಡುಗಡೆ ಮಾಡಿದರೆ, ತುಘಲಕ್‌ ನಾಟಕವನ್ನು ದ.ರಾ.ಬೇಂದ್ರೆ ಬಿಡುಗಡೆ ಮಾಡಿದ್ದರು. ಮಿಣಜಗಿ ಅವರು ಎಂ.ಎ. ಪರೀಕ್ಷೆಯಲ್ಲಿ ತೃತೀಯ ದರ್ಜೆಯಲ್ಲಿ ಪಾಸಾಗಿದ್ದರಿಂದ ಅವರಿಗೆ ಕಾಲೇಜಿನಲ್ಲಿ ಉಪನ್ಯಾಸಕ ಹುದ್ದೆ ದೊರೆಯುವುದು ಕಷ್ಟವಾಗಿತ್ತು. ಕೆಲವು ದಿನ ಧಾರವಾಡದ ಜೆಎಸ್ಎಸ್‌ ಕಾಲೇಜಿನಲ್ಲಿ ಕೆಲಸ ಮಾಡಿದರು.

ಆ ಹೊತ್ತಿಗಾಗಲೇ ಕೀರ್ತಿನಾಥ ಅವರು ಗುಜರಾತ್‌ನ ಆನಂದ ಪಟ್ಟಣಕ್ಕೆ ಹೋಗಿ ತಳವೂರಿದ್ದರು. ಗುಜರಾತ್‌ನಲ್ಲಿ ಇಂಗ್ಲಿಷ್‌ ಉಪನ್ಯಾಸಕರ ಹುದ್ದೆಗೆ ಜನ ಸಿಗದಿರುವಂಥ ಪರಿಸ್ಥಿತಿಯಲ್ಲಿ ಕೀರ್ತಿನಾಥ ಅವರನ್ನು ಅಲ್ಲಿಯ ವ್ಯವಸ್ಥಾಪಕ ಮಂಡಳಿಯವರು ಕೇಳಿಕೊಂಡ ಪ್ರಕಾರ, ಮಿಣಜಗಿ ಅವರನ್ನು ಕಳುಹಿಸಿ ಕೊಡಲಾಯಿತು. ಮಿಣಜಗಿ ಬಹಳ ನಿರಾಸಕ್ತ ಮನಸ್ಸಿನಿಂದ ಹೋದರೂ ಮುಂದೆ ಅಲ್ಲಿಯೇ ನೆಲೆಯೂರಿದರು. ತಮ್ಮ ಜೀವನದ ಸೇವೆಯನ್ನೆಲ್ಲ ಅಲ್ಲಿಯೇ ಕಳೆದರು. ನಿವೃತ್ತಿ ನಂತರವೇ ಬೆಂಗಳೂರಿಗೆ ಬಂದು ನೆಲೆಸಿದರು.

ಮಿಣಜಗಿ ಅವರು ದೊಡ್ಡ ಕುಟುಂಬದಿಂದ ಬಂದವರು. ಅವರಿಗೆ ಒಟ್ಟು ಆರು ಜನ ಸಹೋದರರು. ಒಬ್ಬರು ಸಹೋದರಿ. ಸುರೇಂದ್ರನಾಥ ಎರಡನೆಯವರು. ಮೊದಲನೆಯವರಾದ ದೇವೇಂದ್ರನಾಥ, ಇನ್ನೊಬ್ಬ ಸಹೋದರ ತವನಪ್ಪ ಮತ್ತು ಸಹೋದರಿ ಈಗಾಗಲೇ ತೀರಿಕೊಂಡಿದ್ದಾರೆ. ಸುರೇಂದ್ರನಾಥರು ಇತ್ತೀಚೆಗೆ ಬೆಳಿಗ್ಗೆ 5 ಗಂಟೆ ಸುಮಾರಿಗೆ ಹೃದಯಾಘಾತದಿಂದ ತೀರಿಕೊಂಡರು. ಆಗ ಅವರಿಗೆ 89 ವರ್ಷ ವಯಸ್ಸು. ಅವರ ಉಳಿದ ಸಹೋದರರಾದ ಚಂದ್ರನಾಥ, ವಜ್ರನಾಥ, ಧನ್ಯಕುಮಾರ ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಇನ್ನೊಬ್ಬ ಸಹೋದರ ಭುಜಬಲ ಈಚಲಕರಂಜಿಯಲ್ಲಿದ್ದಾರೆ.

ಸುರೇಂದ್ರನಾಥರಿಗೆ ಇಬ್ಬರು ಗಂಡು ಮಕ್ಕಳು. ಹಿರಿಯವ ಡಾ. ಮಂಜುನಾಥ ಇಂಗ್ಲೆಂಡ್‌ನಲ್ಲಿ ನೆಲೆಸಿದ್ದಾರೆ. ಅವರಿಗೆ ಇಬ್ಬರು ಮಕ್ಕಳು. ಕಿರಿಯವ ಅರಿಹಂತ ಎಂಜಿನಿಯರ್‌ ಆಗಿ ಬೆಂಗಳೂರಿನಲ್ಲೇ ನೆಲೆಸಿದ್ದಾರೆ. ಅವರಿಗೂ ಇಬ್ಬರು ಮಕ್ಕಳು. ಅವರ ಮನೆಯಲ್ಲೇ ಸುರೇಂದ್ರನಾಥ ತಮ್ಮ ಪತ್ನಿಯೊಂದಿಗೆ ನಿವೃತ್ತ ಜೀವನ ಕಳೆಯುತ್ತಿದ್ದರು.

ಮಿಣಜಗಿ ಅವರದು ಸಂಕೋಚ ಸ್ವಭಾವವಾಗಿತ್ತು. ಆದರೆ ಅವರ ವಿಮರ್ಶಾ ಬುದ್ಧಿ ಬಹಳ ತೀಕ್ಷ್ಣ ಮತ್ತು ಖಚಿತವಾಗಿತ್ತು. ಅವರು ಬರೆದದ್ದು ಅಲ್ಪವೇ ಆದರೂ ಕನ್ನಡ ವಿಮರ್ಶಾ ಲೋಕದಲ್ಲಿ ಅದು ಅತಿ ಪ್ರಮುಖವಾದುದು. ಅವರ ‘ಟಿ.ಎಸ್.ಎಲಿಯಟ್ ಕವಿಯ ವಿಮರ್ಶೆಯ ವಿಚಾರಗಳು’ ಬಂದ ನಂತರ ಸೃಜನ ಕ್ರಿಯೆ ಮತ್ತು ಸಂವೇದನೆ ಹಾಗೂ ಪ್ರತೀಯಮಾನ ಎಂಬ ಎರಡು ವಿಮರ್ಶಾ ಗ್ರಂಥಗಳನ್ನು ಅವರು ಪ್ರಕಟಿಸಿದ್ದರು. ಕೇಂದ್ರ ಸಾಹಿತ್ಯ ಅಕಾಡೆಮಿಯಿಂದ ವಿನಾಯಕ ಕೃಷ್ಣ ಗೋಕಾಕ ಎಂಬ ಪುಸ್ತಕವನ್ನೂ ಅವರು ಪ್ರಕಟಿಸಿದ್ದಾರೆ. ಈಗ ಅವರ ಅಗಲಿಕೆಯಿಂದ ಕನ್ನಡ ಸಾಹಿತ್ಯ ಲೋಕದ ಹಳೆಯ ತಲೆಮಾರಿನ ಮತ್ತೊಂದು ಕೊಂಡಿ ಕಳಚಿದಂತಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT