ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತುಂಗಭದ್ರಾ ನದಿಗೆ ಕಿರು ಅಣೆಕಟ್ಟೆಗಳು?

Last Updated 26 ನವೆಂಬರ್ 2014, 19:30 IST
ಅಕ್ಷರ ಗಾತ್ರ

ಬೆಂಗಳೂರು: ತುಂಗಭದ್ರಾ ನದಿಗೆ ಚಿಕ್ಕ ಚಿಕ್ಕ ಅಣೆಕಟ್ಟುಗಳನ್ನು ನಿರ್ಮಿಸುವ ಸಾಧ್ಯತೆ­ಗಳ ಬಗ್ಗೆ ಸರ್ಕಾರ ಚಿಂತನೆ ನಡೆಸಿದೆ. ತುಂಗಭದ್ರಾ ಜಲಾಶಯದಲ್ಲಿ ಹೂಳು ತುಂಬಿ, ಅಲ್ಲಿ ಸಾಕಷ್ಟು ಪ್ರಮಾಣದಲ್ಲಿ ನೀರು ಸಂಗ್ರಹ ಆಗುತ್ತಿಲ್ಲದ ಕಾರಣ, ಸರ್ಕಾರ ಈ ಚಿಂತನೆ ನಡೆಸಿದೆ.

ಬಳ್ಳಾರಿ ಜಿಲ್ಲೆಯ ಹೊಸಪೇಟೆ ಬಳಿ ತುಂಗಭದ್ರಾ ನದಿಗೆ ಅಣೆಕಟ್ಟು ನಿರ್ಮಿಸಲಾಗಿದೆ. ಇದಕ್ಕೆ 133 ಟಿಎಂಸಿ ಅಡಿ ನೀರು ಸಂಗ್ರಹಿಸಿಟ್ಟುಕೊಳ್ಳುವ ಸಾಮರ್ಥ್ಯ ಇತ್ತು. ಆದರೆ ದಶಕಗಳಿಂದ ಇದರಲ್ಲಿ ಹೂಳು ತುಂಬುತ್ತಿರುವ ಕಾರಣ, ನೀರು ಸಂಗ್ರಹ ಪ್ರಮಾಣ ಕಡಿಮೆಯಾಗಿದೆ.

ಜಲಾಶಯದ ಇಂದಿನ ನೀರು ಸಂಗ್ರಹಣಾ ಸಾಮರ್ಥ್ಯ 100 ಟಿಎಂಸಿ ಅಡಿ ಮಾತ್ರ. ಬಳ್ಳಾರಿ, ರಾಯಚೂರು ಮತ್ತು ಕೊಪ್ಪಳ ಜಿಲ್ಲೆಗಳಿಗೆ ಕುಡಿಯಲು ಮತ್ತು ಕೃಷಿ ಚಟುವಟಿಕೆಗಳಿಗೆ ಈ ಜಲಾಶಯದಿಂದ ನೀರು ಪೂರೈಸಲಾಗುತ್ತಿದೆ. ನೆರೆಯ ಆಂಧ್ರಪ್ರದೇಶದ ಮೂರು ಜಿಲ್ಲೆಗಳಿಗೆ ಕೂಡ ಇದೇ ಜಲಾಶಯದಿಂದ ನೀರು ಪೂರೈಕೆ ಆಗುತ್ತದೆ. ಹೂಳು ನಿರಂತರ­ವಾಗಿ ತುಂಬುತ್ತಿರುವ ಕಾರಣ,

ಜಲಾ­ಶಯದ ನೀರು ಸಂಗ್ರಹಣಾ ಸಾಮರ್ಥ್ಯ ಪ್ರತಿ ವರ್ಷ 0.5ರಿಂದ 0.6 ಟಿಎಂಸಿ ಅಡಿಯಷ್ಟು ಕಡಿಮೆ­ಯಾಗುತ್ತಿದೆ.
ಇಲ್ಲಿ ನೀರಿನ ಸಂಗ್ರಹಣಾ ಸಾಮರ್ಥ್ಯ ಕಡಿಮೆಯಾಗಿರುವುದಕ್ಕೆ ಪರಿಹಾರ ಹುಡುಕಿ, ವಿಸ್ತೃತ ಯೋಜನಾ ವರದಿ (ಡಿಪಿಆರ್‌) ಸಿದ್ಧಪಡಿಸಲು ರಾಜ್ಯ ಸರ್ಕಾರ ಜಾಗತಿಕ ಟೆಂಡರ್‌ ಕರೆದಿದೆ. ತುಂಗಭದ್ರಾ ನದಿಗೆ ಚಿಕ್ಕ ಚಿಕ್ಕ ಅಣೆಕಟ್ಟುಗಳನ್ನು ನಿರ್ಮಿಸುವುದು ಕೂಡ ಪರಿಹಾರೋಪಾಯಗಳಲ್ಲಿ ಒಂದು. ಈಗಿರುವ ಅಣೆಕಟ್ಟೆಯ ಎತ್ತರ ಹೆಚ್ಚಿಸಿ, ನೀರು ಸಂಗ್ರಹಣಾ ಸಾಮರ್ಥ್ಯ ಹೆಚ್ಚು ಮಾಡುವ ಸಲಹೆಯನ್ನು ಯೋಜನೆಯ ನೋಡಲ್‌ ಸಂಸ್ಥೆಯಾಗಿರುವ ಕರ್ನಾಟಕ ನೀರಾವರಿ ನಿಗಮ ಮುಂದಿಟ್ಟಿದೆ.

‘ಹೂಳು ಎತ್ತಿ, ಈಗಿರುವ ಜಲಾಶ­ಯದ ಸಾಮರ್ಥ್ಯ ಹೆಚ್ಚು ಮಾಡುವುದು ಆರ್ಥಿಕವಾಗಿ ಅನುಕೂಲವಲ್ಲ. ಜಲಾಶ­ಯದಲ್ಲಿ ಸಂಗ್ರಹವಾಗಿರುವ ಅಷ್ಟೂ ಹೂಳು ಎತ್ತಿದರೆ, ಅದನ್ನು ಸುರಿಯಲು 50 ಸಾವಿರ ಎಕರೆ ಜಾಗ ಬೇಕಾಗುತ್ತದೆ. ಹೂಳಿನ ಗುಪ್ಪೆ 15 ಅಡಿ ಎತ್ತರ ಇರಲಿದೆ. ಅಲ್ಲದೆ, ಈ ಕೆಲಸಕ್ಕೆ ₨ 10 ಸಾವಿರ ಕೋಟಿ, ಎರಡರಿಂದ ಐದು ವರ್ಷಗಳ ಕಾಲಾವಧಿ ಬೇಕಾಗ­ಬಹುದು’ ಎಂದು ಕೃಷ್ಣಾ ಭಾಗ್ಯ ಜಲ ನಿಗಮದ ತಾಂತ್ರಿಕ ಉಪ ಸಮಿತಿಯ ನಿರ್ದೇಶಕ ಅರವಿಂದ ಗಲಗಲಿ ಹೇಳಿದರು.

ಹೊಸ ಅಣೆಕಟ್ಟು ನಿರ್ಮಿಸಲು ಜಮೀನು ಸ್ವಾಧೀನ ಪ್ರಕ್ರಿಯೆ ನಡೆಯ­ಬೇಕು. ಇಲ್ಲಿ ಪರಿಸರ, ಪುನರ್ವಸತಿ ಸಮಸ್ಯೆ ಕೂಡ ಎದುರಾಗುತ್ತದೆ. ಟೆಂಡರ್‌ ಪಡೆದುಕೊಳ್ಳುವವರು ಈ ಎಲ್ಲ ವಿಚಾರಗಳ ಬಗ್ಗೆ ಪರಿಶೀಲಿಸಿ ಡಿಪಿಆರ್‌ ಸಿದ್ಧಪಡಿಸಬೇಕು. ನಂತರ ಯೋಜನೆಗೆ ಎಷ್ಟು ಹಣ ಬೇಕಾಗುತ್ತದೆ ಎಂಬುದು ಗೊತ್ತಾಗುತ್ತದೆ ಎಂದು ಅವರು ಹೇಳಿದರು. ಡಿಪಿಆರ್‌ ಸಿದ್ಧವಾದ ನಂತರ, ಅದನ್ನು ಕೇಂದ್ರ ಜಲ ಆಯೋಗ ಮತ್ತು ತುಂಗಭದ್ರಾ ಮಂಡಳಿಯ ಅನುಮೋ­ದನೆಗೆ ಕಳುಹಿಸಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT