ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತುಸು ತಣ್ಣಗಿನ ಸಿಂಹ

Last Updated 15 ಆಗಸ್ಟ್ 2014, 19:30 IST
ಅಕ್ಷರ ಗಾತ್ರ

ಕತ್ತನ್ನು ತುಸು ಬಲಕ್ಕೆ ವಾಲಿಸಿ, ಹುರಿಗಟ್ಟಿದ ಕೈಗಳನ್ನು ಇನ್ನಷ್ಟು ಗಟ್ಟಿ ಮಾಡಿಕೊಂಡು ನಾಯಕ ಅಜಯ್‌ ದೇವಗನ್‌ ನಡೆದರೆ ಕೆಲವೊಮ್ಮೆ ಅವರಿಗೆ ರೀರೆ­ಕಾರ್ಡಿಂಗ್‌ ಸಾಥ್‌ ನೀಡುತ್ತದೆ. ಬಹುತೇಕ ಸಂದರ್ಭಗಳಲ್ಲಿ ಸಾಜಿದ್‌–ಫರ್ಹಾದ್‌ ಜೋಡಿ ಬರೆದ ಮಾತುಗಳು ಜೊತೆಯಾಗುತ್ತವೆ.

ತಮಿಳಿನಲ್ಲಿ ಬಂದ ‘ಸಿಂಗಂ’ನ ಹಿಂದಿ ರೀಮೇಕ್‌ನಲ್ಲಿ ಹಿಂದೆ ಅಜಯ್‌ ನಟಿಸಿ ಗೆದ್ದಿದ್ದರು. ಈ ಸಲ ಅವರು ರೀಮೇಕ್‌ ಮಾಡದೆ, ಹೆಸರು, ಸೂತ್ರ ಆತ್ಮವನ್ನು ಉಳಿಸಿಕೊಂಡ ಈ ಸಿನಿಮಾಗೆ ಬಣ್ಣಹಚ್ಚಿದ್ದಾರೆ. ನಿರ್ದೇಶಕ ರೋಹಿತ್‌ ಶೆಟ್ಟಿ ಸಿನಿಮಾಗಳಿಗೆ ಕಾರ್ಟೂನ್‌ ಚಿತ್ರಪಟಗಳಿಗೆ ಇರುವ ‘ತಲೆ–ಬುಡ ಇಲ್ಲದಿದ್ದರೂ ಮನರಂಜನೆ ಇರಬೇಕು’ ಎಂಬ ಗುಣವಿತ್ತು. ಈ ಸಿನಿಮಾಗೆ ಆ ಮಾತು ಸಂಪೂರ್ಣವಾಗಿ ಅನ್ವಯ­ವಾಗದು. ಮೊದಲರ್ಧ ನಿಧಾನಗತಿಯಲ್ಲಿ ಸಾಗುವುದು, ಬಹುತೇಕ ಕಡೆ ಅಬ್ಬರದ ರೀರೆಕಾರ್ಡಿಂಗ್‌ ಇಲ್ಲದಿರು­ವುದು, ಪದೇಪದೇ ಸಾಹಸ ದೃಶ್ಯಗಳು ಮೂಡದಿ­ರುವುದು ಇದಕ್ಕೆ ಸಾಕ್ಷ್ಯಗಳು.

ಹಾಗೆ ನೋಡಿದರೆ ಚಿತ್ರಕಥೆಗೆ ವೇಗ ದಕ್ಕುವುದು ಸಿನಿಮಾ ಮುಗಿಯಲು ಒಂದು ಗಂಟೆ ಬಾಕಿ ಇದೆ ಎನ್ನುವಾಗ. ಚಿತ್ರಕಥೆಯ ದೃಶ್ಯಗಳನ್ನು ರೂಪಿಸುವಾಗಲೇ ಯೂನಿಸ್‌ ಸಜಾವಲ್‌ ಲೆಕ್ಕಾಚಾರದ ಭಾವ ರಸಾಯನವನ್ನು ಮನಸ್ಸಿನಲ್ಲಿ ಕಲಸಿರಬೇಕು. ಆಗೀಗ ಸಂಭಾಷಣೆ ಕೆರಳಿಸುವುದು, ಮೆಲೊಡ್ರಾಮಾ ಇದ್ದೂ ಅನೇಕ ಸಲ ತಗ್ಗಿದಂತೆ ಪ್ರಕಟಗೊಳ್ಳುವುದು, ಅಪರೂ­ಪಕ್ಕಷ್ಟೇ ನಗು ತರಿಸುವುದು, ಅಳು ಬಂದರೂ ಕಣ್ಣಲ್ಲಿ ನೀರು ಜಿನುಗದಂತೆ ಮುಂದಿನ ದೃಶ್ಯದ ಮೂಲಕವೇ ಅದನ್ನು ಒರೆಸುವುದು ಚಿತ್ರಕಥಾ ಹೆಣಿಗೆಯಲ್ಲಿ ಇರುವ ಅನುಕೂಲಸಿಂಧು ಗುಣಕ್ಕೆ ಕನ್ನಡಿ ಹಿಡಿಯುತ್ತವೆ.

ಕಡೆದಿಟ್ಟ ದೇಹವಿದೆ ಎಂದಮಾತ್ರಕ್ಕೆ ಅದನ್ನು ಪದೇ­ಪದೇ ತೋರಿಸದ ಅಜಯ್‌ ದೇವಗನ್‌ ಕಣ್ಣಿನಿಂದಲೇ ಅಭಿನಯಿಸಿದ್ದಾರೆ. ಚಿತ್ರ ಸಹಜವೂ ತಣ್ಣಗೂ ಕಾಣುವಲ್ಲಿ ಅವರ ಅಭಿನಯ ಕೌಶಲದ ಕೊಡುಗೆ ಮುಖ್ಯ. ಕೆಲವು ಸಾಹಸ ದೃಶ್ಯಗಳಲ್ಲಿ ಅವರ ತನ್ಮಯತೆ ಎದ್ದುಕಾಣುತ್ತದೆ. ಕರೀನಾ ಕಪೂರ್‌ ಗ್ಲಾಮರ್‌ ಕುಂದಿದ್ದು, ಕೆಲವು ಕೋನಗಳಲ್ಲಿ ಅವರು ಬೇಯಿಸಿದ ಆಲೂಗಡ್ಡೆಯಂತೆ ಕಾಣುತ್ತಾರೆ. ಖಳನಾಯಕನಾಗಿ ಅಮೋಲ್‌ ಗುಪ್ತೆ ಪಾತ್ರ ನಿರ್ವಹಣೆ ಮನರಂಜನಾತ್ಮಕ. ಇಷ್ಟಾದರೂ ‘ಸಿಂಗಂ 2’ ತಮಿಳು ಸಿನಿಮಾದಲ್ಲಿ ಇರುವ ತೀವ್ರತೆ ಇದರಲ್ಲಿ ಇಲ್ಲ. ರೋಹಿತ್‌ ಶೆಟ್ಟಿ ಅವರಂತೂ ಸ್ವಲ್ಪ ಬದಲಾಗಿದ್ದಾರೆ.
–ವಿಶಾಖ ಎನ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT