ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತೆರಿಗೆ ಪಾಲು ಹೆಚ್ಚಳ; ರಾಜ್ಯಗಳಿಗೆ ಲಾಭವೆಷ್ಟು?

Last Updated 4 ಮಾರ್ಚ್ 2015, 14:44 IST
ಅಕ್ಷರ ಗಾತ್ರ

 ಒಕ್ಕೂಟ ವ್ಯವಸ್ಥೆಯಲ್ಲಿ ಇದೇ ಮೊದಲ ಬಾರಿಗೆ ನೈಜ ಸ್ವರೂಪದ ಆರ್ಥಿಕ ವಿಕೇಂದ್ರೀಕರಣವಾಗಿದೆ. ಸಹಕಾರ ಒಕ್ಕೂಟ ತತ್ವಕ್ಕೆ ಮಾನ್ಯತೆ ದೊರೆತಿದೆ. ರಾಜ್ಯಗಳಿಗೆ ಹೆಚ್ಚಿನ ಅನುದಾನ ನೀಡುವ ಮೂಲಕ ಕೇಂದ್ರವು ತನ್ನ  ಜವಾಬ್ದಾರಿಯನ್ನು ಕಡಿಮೆ ಮಾಡಿಕೊಂಡಿದೆ ಎಂಬುದು ಒಬ್ಬ ಆರ್ಥಿಕ ತಜ್ಞರ ಅಭಿಪ್ರಾಯವಾಗಿದ್ದರೆ, ಕೇಂದ್ರ ಸರ್ಕಾರ ಪ್ರಾಯೋಜಿತ ಯೋಜನೆಗಳಿಗೆ ನೀಡುವ ಅನುದಾನದ ಪಾಲನ್ನು ಕಡಿಮೆ ಮಾಡಿ, ರಾಜ್ಯಗಳಿಗೆ ನೀಡುವ ತೆರಿಗೆ ಪಾಲನ್ನು ಶೇ 10ರಷ್ಟು ಹೆಚ್ಚಳ ಮಾಡುವುದರಿಂದ ಹೆಚ್ಚಿನ ಉಪಯೋಗ ಆಗುವುದಿಲ್ಲ ಎಂಬುದು ಮತ್ತೊಬ್ಬ ಆರ್ಥಿಕ ತಜ್ಞರ ಸ್ಪಷ್ಟ ಅಭಿಮತ. ಹಾಗಿದ್ದರೆ, ಕೇಂದ್ರ ಸರ್ಕಾರ ತಾನು ಸಂಗ್ರಹಿಸುವ ತೆರಿಗೆಯಲ್ಲಿ ರಾಜ್ಯಗಳಿಗೆ ಹಂಚಿಕೆ ಮಾಡುವ ಪಾಲನ್ನು ಹೆಚ್ಚಿಸಿರುವುದರ ಪರಿಣಾಮ ಏನು? ಇಲ್ಲಿದೆ, ಆರ್ಥಿಕ ತಜ್ಞರ ವಿಶ್ಲೇಷಣೆ...

ಕೇಂದ್ರ ಸರ್ಕಾರ ತೆರಿಗೆ ರೂಪದಲ್ಲಿ ಸಂಗ್ರಹಿಸುವ ಒಟ್ಟು ಸಂಪನ್ಮೂಲದಲ್ಲಿ ಶೇ 42ರಷ್ಟು ಪಾಲು ಇನ್ನು ಮುಂದೆ ರಾಜ್ಯಗಳಿಗೆ ದೊರೆ ಯುವುದರಿಂದ ಅವುಗಳ ಆರ್ಥಿಕ ಸ್ವಾವಲಂಬನೆಗೆ ಅನುಕೂಲವಾಗಲಿದೆ.

14ನೇ ಹಣಕಾಸು ಆಯೋಗದ ಬಹುತೇಕ ಶಿಫಾರಸುಗಳನ್ನು ಕೇಂದ್ರ ಸರ್ಕಾರ ಯಥಾವತ್ತಾಗಿ ಒಪ್ಪಿಕೊಂಡಿದ್ದು ರಾಜ್ಯಗಳಿಗೆ ನೀಡುವ ತೆರಿಗೆ ಪಾಲನ್ನು  ಶೇ 32ರಿಂದ 42ಕ್ಕೆ ಏರಿಸಿರುವುದು ಗಮನಾರ್ಹ.

ಕೇಂದ್ರ ಸರ್ಕಾರ ತೆಗೆದುಕೊಂಡಿರುವ ಐತಿಹಾಸಿಕ ತೀರ್ಮಾನದಿಂದಾಗಿ 2015-–-16ನೇ ಹಣಕಾಸು ವರ್ಷದಲ್ಲಿ ರಾಜ್ಯಗಳಿಗೆ ಹೆಚ್ಚುವರಿಯಾಗಿ ರೂ1.78 ಲಕ್ಷ ಕೋಟಿ  ಅನುದಾನ ದೊರೆಯಲಿದೆ.

ಭಾರತೀಯ ರಿಸರ್ವ್ ಬ್ಯಾಂಕ್‌ನ ಮಾಜಿ ಗವರ್ನರ್ ವೈ.ವಿ.ರೆಡ್ಡಿ ನೇತೃತ್ವದ 14ನೇ ಹಣಕಾಸು ಆಯೋಗ ಮಾಡಿರುವ ಶಿಫಾರಸಿನ ಪ್ರಕಾರ 2015ರಿಂದ 2020ರವರೆಗೆ ರಾಜ್ಯಗಳಿಗೆ ಒಟ್ಟು ರೂ39.48 ಲಕ್ಷ ಕೋಟಿ ಅನುದಾನ ಲಭಿಸಲಿದೆ.

ಇದುವರೆಗೆ ಯೋಜನೇತರ ವೆಚ್ಚವನ್ನು ಆಧರಿಸಿ ರಾಜ್ಯಗಳಿಗೆ ನೀಡುವ ತೆರಿಗೆಯ ಪಾಲನ್ನು ನಿರ್ಧರಿಸಲಾಗುತ್ತಿತ್ತು. ಆದರೆ, ಈ ಬಾರಿ ಯೋಜನೆ, ಯೋಜನೇತರ ಹಾಗೂ ರೆವಿನ್ಯೊ (ತೆರಿಗೆ) ವೆಚ್ಚವನ್ನು ಆಧರಿಸಿಯೇ ತೆರಿಗೆಯ ಪಾಲಿನ ಪ್ರಮಾಣವನ್ನು ನಿರ್ಧರಿಸಲಾಗಿದೆ.

ರಾಜ್ಯಗಳಿಗೆ ದೊರೆಯುವ ತೆರಿಗೆ ಪಾಲಿನಲ್ಲಿ ಶೇ 10ರಷ್ಟು ಹೆಚ್ಚಳವಾಗಿರುವುದು ಮೇಲ್ನೋಟಕ್ಕೆ ಕಂಡು ಬರುತ್ತದೆ. ಆದರೆ, ವಾಸ್ತವವಾಗಿ ನೋಡಿದಾಗ ಶೇ 10ರಷ್ಟು ಪಾಲು ರಾಜ್ಯಗಳಿಗೆ ದೊರೆಯುವುದಿಲ್ಲ ಎನ್ನುತ್ತಾರೆ ಆರ್ಥಿಕ ತಜ್ಞ ಪ್ರೊ. ಜಿ.ತಿಮ್ಮಯ್ಯ.
ಒಟ್ಟು ತೆರಿಗೆ ಸಂಗ್ರಹದಲ್ಲಿ ಶೇ 4.33ರಷ್ಟನ್ನು ಕರ್ನಾಟಕಕ್ಕೆ ನೀಡಲಾಗುತ್ತಿತ್ತು. ಈಗ ಆ ಪ್ರಮಾಣ ಶೇ 4.75ಕ್ಕೆ ಏರಿದೆ. ಪ್ರಾಥಮಿಕ ಅಂದಾಜಿನ ಪ್ರಕಾರ ಕರ್ನಾಟಕಕ್ಕೆ ಪ್ರತಿ ವರ್ಷ ರೂ1 ಸಾವಿರ ಕೋಟಿ ಹೆಚ್ಚಿನ ಅನುದಾನ ದೊರೆಯಲಿದೆ. ಐದು ವರ್ಷಗಳಲ್ಲಿ ರೂ5 ಸಾವಿರ ಕೋಟಿ ಹೆಚ್ಚಿನ ಅನುದಾನ ರಾಜ್ಯಕ್ಕೆ ದೊರೆಯಲಿದೆ ಎಂಬುದು ಅವರ ವಿಶ್ಲೇಷಣೆ.

ಎನ್‌ಡಿಎ ಬದ್ಧವಾಗಿದೆ

ಆಯೋಗದ ಶಿಫಾರಸುಗಳನ್ನು ಕೇಂದ್ರ ಸರ್ಕಾರ ಒಪ್ಪಿಕೊಂಡಿದೆ. ಸಹಕಾರಿ ಒಕ್ಕೂಟ ವ್ಯವಸ್ಥೆಯನ್ನು ಬಲಪಡಿಸಲು ಎನ್‌ಡಿಎ ಬದ್ಧವಾಗಿದೆ.

ಕೇಂದ್ರ ಸರ್ಕಾರ ಸಂಗ್ರಹಿಸುವ ತೆರಿಗೆಯಲ್ಲಿ ರಾಜ್ಯಗಳಿಗೆ ಗಣನೀಯ ಪಾಲು ನೀಡುವ ಉದ್ದೇಶ, ಕ್ರಮೇಣ ರಾಜ್ಯಗಳನ್ನು ಸಂಪೂರ್ಣ ಸ್ವಾವಲಂಬಿ ಯನ್ನಾಗಿ ಮಾಡುವುದೇ ಆಗಿದೆ. ಆ ನಿಟ್ಟಿನಲ್ಲಿ ಮೊದಲ ಹೆಜ್ಜೆ ಇಟ್ಟಿದ್ದೇವೆ. ಇದು ದೇಶದ ಸರ್ವತೋ ಮುಖ ಅಭಿವೃದ್ಧಿಗೆಸಹಕಾರಿಯಾಗಲಿದೆ.
ಅರುಣ್‌ ಜೇಟ್ಲಿ
ಕೇಂದ್ರ ಹಣಕಾಸು ಸಚಿವ

2015–16ನೇ ಹಣಕಾಸು ವರ್ಷದಲ್ಲಿ ರೂ15.67 ಲಕ್ಷ ಕೋಟಿ ತೆರಿಗೆ ಸಂಗ್ರಹವಾಗಲಿದೆ ಎಂಬ ನಿರೀಕ್ಷೆ ಇದೆ. ಇದರಲ್ಲಿ ರಾಜ್ಯಗಳಿಗೆ ರೂ5.79 ಲಕ್ಷ ಕೋಟಿ ಹಂಚಿಕೆಯಾಗಲಿದೆ.
ಪಶ್ಚಿಮ ಬಂಗಾಳ, ಜಮ್ಮು ಕಾಶ್ಮೀರ ಹಾಗೂ ಇತ್ತೀಚೆಗೆ ವಿಭಜನೆಗೊಂಡಿರುವ ಆಂಧ್ರಪ್ರದೇಶ ಮತ್ತು ತೆಲಂಗಾಣ ರಾಜ್ಯಗಳು ಆರ್ಥಿಕವಾಗಿ ಬಹಳ ಸಂಕಷ್ಟದಲ್ಲಿವೆ. ಆ ರಾಜ್ಯಗಳಿಗೆ 2015–-16ನೇ ಸಾಲಿನಲ್ಲಿ ರೂ48,906 ಕೋಟಿ ಅನುದಾನ ದೊರೆಯಲಿದೆ.
ವೈಜ್ಞಾನಿಕವಾಗಿ ತೆರಿಗೆ ಪಾಲಿನ ಹಂಚಿಕೆಗೆ ಕೇಂದ್ರ ಸರ್ಕಾರ ಮುಂದಾಗಿರುವುದರಿಂದ 2015–-16ನೇ ಹಣಕಾಸು ವರ್ಷದಲ್ಲಿ ರಾಜ್ಯಗಳಿಗೆ ಒಟ್ಟು ರೂ5.26 ಲಕ್ಷ ಕೋಟಿ ಅನುದಾನ ದೊರೆಯಲಿದೆ. 2014–-15ರಲ್ಲಿ ರೂ3.48 ಲಕ್ಷ ಕೋಟಿ  ಅನುದಾನ ದೊರೆತಿತ್ತು.

ಸ್ಥಳೀಯ ಸಂಸ್ಥೆಗಳಿಗೂ ಲಾಭ
ರಾಜ್ಯಗಳಿಗೆ ಹೆಚ್ಚಿನ ಅನುದಾನ ದೊರೆಯುವುದರಿಂದ ಸಹಜವಾಗಿಯೇ  ನಗರ ಮತ್ತು ಗ್ರಾಮೀಣ ಸ್ಥಳೀಯ ಸಂಸ್ಥೆಗಳಿಗೆ ದೊರೆಯುವ ಅನುದಾನದಲ್ಲೂ ಹೆಚ್ಚಳವಾಗಲಿದೆ.
ಈ ಸಂಸ್ಥೆಗಳಿಗೆ ಐದು ವರ್ಷಗಳ ಅವಧಿಯಲ್ಲಿ ರೂ2.87 ಲಕ್ಷ ಕೋಟಿ ಅನುದಾನ ನೀಡುವಂತೆ ಆಯೋಗ ಶಿಫಾರಸು ಮಾಡಿದ್ದು, ಇದಕ್ಕೆ ಕೇಂದ್ರ ಸರ್ಕಾರವೂ ಸಮ್ಮತಿ ಸೂಚಿಸಿದೆ.

ನೈಜ ಆರ್ಥಿಕ ವಿಕೇಂದ್ರೀಕರಣ
ಒಕ್ಕೂಟ ವ್ಯವಸ್ಥೆಯಲ್ಲಿ ಇದೇ ಮೊದಲ ಬಾರಿಗೆ ನಿಜವಾದ ಆರ್ಥಿಕ ವಿಕೇಂದ್ರೀಕರಣ ಆಗಿದ್ದು, ಸಹಕಾರ ಒಕ್ಕೂಟ ತತ್ವಕ್ಕೆ ಮಾನ್ಯತೆ ದೊರೆತಿದೆ. ರಾಜ್ಯಗಳಿಗೆ ಹೆಚ್ಚಿನ ಅನುದಾನ ನೀಡುವ ಮೂಲಕ ಕೇಂದ್ರವು ತನ್ನ  ಜವಾಬ್ದಾರಿಯನ್ನು ಕಡಿಮೆ ಮಾಡಿಕೊಂಡಿದೆ ಎಂದು ವ್ಯಾಖ್ಯಾನಿಸುತ್ತಾರೆ ತಿಮ್ಮಯ್ಯ.

ಕೇಂದ್ರ ಸರ್ಕಾರ ಪ್ರಾಯೋಜಿತ ಯೋಜನೆಗಳಿಗೆ ನೀಡುವ ಅನುದಾನದ ಪಾಲನ್ನು ಕಡಿಮೆ ಮಾಡಿ, ರಾಜ್ಯಗಳಿಗೆ ನೀಡುವ ತೆರಿಗೆ ಪಾಲನ್ನು ಶೇ 10ರಷ್ಟು ಹೆಚ್ಚಳ ಮಾಡುವುದರಿಂದ ಹೆಚ್ಚಿನ ಉಪಯೋಗ ಆಗುವುದಿಲ್ಲ ಎಂಬುದು ಮತ್ತೊಬ್ಬ ಆರ್ಥಿಕ ತಜ್ಞ ಪ್ರೊ. ಅಬ್ದುಲ್‌ ಅಜೀಜ್‌ ಅವರ ಅಭಿಪ್ರಾಯ.

ಯೋಜನೆ ಜಾರಿ ಪ್ರಶ್ನೆ
ಕೇಂದ್ರ ಪ್ರಾಯೋಜಿತ ಯೋಜನೆಗಳಿಗೆ ಹಣಕಾಸು ಹೊಂದಾಣಿಕೆ ಮಾಡಿಕೊಳ್ಳುವುದು ರಾಜ್ಯಗಳಿಗೆ ಕಷ್ಟವಾಗಲಿದೆ. ಹಣ ಇಲ್ಲ ಎಂದು ರಾಜ್ಯಗಳು ಯೋಜನೆಗಳ ಜಾರಿಗೆ ಹಿಂದೇಟು ಹಾಕಬಹುದು. ಆದರೆ  ಆ ರೀತಿ ಮಾಡಿದರೆ ಚುನಾವಣೆ ಸಂದರ್ಭದಲ್ಲಿ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂದು ಗಮನ ಸೆಳೆಯುತ್ತಾರೆ ಅಜೀಜ್‌.
ತೆರಿಗೆ ಪಾಲಿನ ಹಂಚಿಕೆಯಲ್ಲಿ ಶೇ 10ರಷ್ಟು ಹೆಚ್ಚಳ ಮಾಡಿರುವುದು ಮೇಲ್ನೋಟಕ್ಕೇನೋ ಚೆನ್ನಾಗಿದೆ ಅನಿಸುತ್ತದೆ. ಆದರೆ, ಕೇಂದ್ರ ಸರ್ಕಾರ ಪ್ರಾಯೋಜಿತ ಯೋಜನೆಗಳಿಗೆ ಎಷ್ಟು ಪಾಲು ಹಣವನ್ನು ನೀಡಲಾಗುತ್ತದೆ ಎಂಬ ಮುಖ್ಯ ಅಂಶ ಸ್ಪಷ್ಟವಾದ ನಂತರವೇ ವಾಸ್ತವ ಚಿತ್ರಣ ದೊರೆಯಲಿದೆ ಎನ್ನುತ್ತಾರೆ ಅವರು.

ಪಾಲು ವಾಪಸ್‌ ಶಿಫಾರಸು!
ಇದುವರೆಗೆ ಕೇಂದ್ರ ಸರ್ಕಾರದ ಪ್ರಾಯೋಜಿತ 30 ಯೋಜನೆಗಳಿಗೆ ಕೇಂದ್ರವು ತನ್ನ ಪಾಲಿನ ಆರ್ಥಿಕ ನೆರವು ನೀಡುತ್ತಿತ್ತು. ಆದರೆ, ಆಯೋಗ ಈಗ ಕೇಂದ್ರ ಸರ್ಕಾರ ತನ್ನ ಪಾಲನ್ನು ವಾಪಸ್‌ ಪಡೆದುಕೊಳ್ಳಬೇಕು ಎಂದು ಶಿಫಾರಸು ಮಾಡಿದೆ.

ಈ ಶಿಫಾರಸನ್ನು ಒಂದೊಮ್ಮೆ ಯಥಾವತ್‌ ಜಾರಿಗೊಳಿಸಿದರೆ ಯೋಜನೆಗಳಿಗೆ ಹಣ ಹೊಂದಾಣಿಕೆ ಮಾಡಿಕೊಳ್ಳುವುದು ರಾಜ್ಯಗಳಿಗೆ ಬಹಳ ಕಷ್ಟವೇ ಆಗಲಿದೆ. ಅಲ್ಲದೆ ಶೇ 10ರಷ್ಟು ತೆರಿಗೆ ಪಾಲು ಹೆಚ್ಚಳ ಮಾಡಿದರೂ ರಾಜ್ಯಗಳಿಗೆ ಉಪಯೋಗವೇನೂ ಆಗುವುದಿಲ್ಲ.

ಬಡತನ ನಿರ್ಮೂಲನೆ, ನರೇಗಾ, ಶಿಕ್ಷಣ, ಆರೋಗ್ಯ, ಗ್ರಾಮೀಣಾಭಿವೃದ್ಧಿ, ಕೃಷಿ ಮುಂತಾದ ರಾಷ್ಟ್ರೀಯ ಆದ್ಯತೆಯ ಯೋಜನೆಗಳಿಗೆ ಕೇಂದ್ರವು ಬೆಂಬಲ ಮುಂದುವರಿಸಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರೇನೋ ಹೇಳಿದ್ದಾರೆ. ಇದರ ಬೆನ್ನಲ್ಲೇ ರಾಜ್ಯಗಳಲ್ಲಿ ಸಂಪನ್ಮೂಲಗಳ ಲಭ್ಯತೆ ಇದ್ದಾಗ ಹೊಸ ಸಾಧ್ಯತೆ, ಬದಲಾವಣೆ ಅಗತ್ಯವಿರುತ್ತದೆ ಎನ್ನುವ ಮಾತುಗಳನ್ನೂ ಉಲ್ಲೇಖಿಸಿದ್ದಾರೆ.

ಎಲ್ಲ ರಾಜ್ಯಗಳಿಗೆ ಒಂದೇ ಗಾತ್ರದ ಯೋಜನೆಗಳು ಹೊಂದಿಕೆ ಆಗುವುದಿಲ್ಲ. ಆದ್ದರಿಂದ ರಾಜ್ಯಗಳಿಗೆ ಅವುಗಳ ಅಗತ್ಯಗಳಿಗೆ ಅನುಸಾರವಾಗಿ ಬದಲಾವಣೆಗೆ ಅವಕಾಶ ಇರಬೇಕಾಗುತ್ತದೆ ಎಂದೂ ಮೋದಿ ಹೇಳಿದ್ದಾರೆ.

ಅಸ್ಪಷ್ಟ ಪ್ರಕಟಣೆ
ಕೇಂದ್ರ ಹಣಕಾಸು ಸಚಿವ ಅರುಣ್‌ ಜೇಟ್ಲಿ ಅವರು ಎಂಟು ಯೋಜನೆಗಳನ್ನು ಕೇಂದ್ರದಿಂದ ರಾಜ್ಯಗಳಿಗೆ ವರ್ಗಾಯಿಸುವುದಾಗಿ ಪ್ರಕಟಿಸಿದ್ದಾರೆ. ಈ ಯೋಜನೆಗಳ ಅನುಷ್ಠಾನದ ಹೊಣೆಯನ್ನು ಸಂಪೂರ್ಣವಾಗಿ ರಾಜ್ಯಗಳೇ ಹೊರಬೇಕೇ ಅಥವಾ ಕೇಂದ್ರವು ಸ್ವಲ್ಪಮಟ್ಟಿನ ಆರ್ಥಿಕ ನೆರವು ನೀಡಲಿದೆಯೇ ಎಂಬುದು ಸ್ಪಷ್ಟವಾಗಿಲ್ಲ.

ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಸೇರಿದಂತೆ ಪ್ರಮುಖ ಯೋಜನೆಗಳಿಗೆ ಕೇಂದ್ರ ಸರ್ಕಾರವೇ ಹಣ ಭರಿಸಲಿದೆ ಎಂದು ಜೇಟ್ಲಿ ಹೇಳಿದ್ದಾರೆ. ಆದರೆ, ಆ ಪ್ರಮುಖ ಯೋಜನೆಗಳು ಯಾವುವು? ಎಂಬ ಬಗ್ಗೆ ಸ್ಪಷ್ಟತೆ ಇಲ್ಲ. ಹೀಗಾಗಿ ಕೆಲವೊಂದು ಗೊಂದಲಗಳಿವೆ. 14ನೇ ಹಣಕಾಸು ಆಯೋಗದ ಶಿಫಾರಸುಗಳನ್ನು ಒಪ್ಪಿಕೊಂಡಿರುವ ಬಗ್ಗೆ ಅಧಿಕೃತವಾಗಿ ಆದೇಶ ಹೊರಡಿಸಿ, ಯಾವುದಕ್ಕೆ ಎಷ್ಟು ಅನುದಾನ ಎಂಬುದನ್ನು ಪ್ರಕಟಿಸಿದಾಗ ಮಾತ್ರವೇ ಈ ಎಲ್ಲ ಗೊಂದಲಗಳಿಗೆ ಉತ್ತರ ದೊರೆಯಲಿದೆ.

ಜಿಎಸ್‌ಟಿ ಜಾರಿ ನಂತರ...
ಬಹುನಿರೀಕ್ಷಿತ ಸರಕು ಮತ್ತು ಸೇವೆಗಳ ತೆರಿಗೆ (ಜಿಎಸ್‌ಟಿ) ಪದ್ಧತಿ ಜಾರಿಗೆ ಬಂದ ನಂತರ ಮೊದಲ ಮೂರು ವರ್ಷಗಳಲ್ಲಿ ರಾಜ್ಯಗಳಿಗೆ ಶೇ 100ರಷ್ಟು ಪರಿಹಾರ ನೀಡಬೇಕಾಗುತ್ತದೆ. ನಾಲ್ಕನೇ ವರ್ಷ ಶೇ 75 ಮತ್ತು ಐದನೇ ವರ್ಷ ಶೇ 50ರಷ್ಟು ಪರಿಹಾರ ನೀಡಬೇಕು ಎಂದು ಆಯೋಗ ಸಲಹೆ ಮಾಡಿದೆ.

ಶಾಸನ ಬದ್ಧವಾಗಿ ಸ್ವಾಯತ್ತವಾದ ಜಿಎಸ್‌ಟಿ ಪರಿಹಾರ ನಿಧಿಯನ್ನು ಸ್ಥಾಪಿಸಲು ಆಯೋಗ ಶಿಫಾರಸು ಮಾಡಿದೆ. ಇದರಿಂದಾಗಿ ರಾಜ್ಯಗಳಿಗೆ ಜಿಎಸ್‌ಟಿ ಜಾರಿಗೊಳಿಸಲು ಹೆಚ್ಚು ಅನುಕೂಲವಾಗಲಿದೆ ಎಂಬ ನಿರೀಕ್ಷೆ ಇದೆ.

ತೆರಿಗೆ ಪಾಲು ಹಂಚಿಕೆ ಘೋಷಣೆಯಲ್ಲಿ ಕೆಲವು ಅಂಶಗಳ ಬಗ್ಗೆ ಅಸ್ಪಷ್ಟತೆ, ಗೊಂದಲಗಳು ಇದ್ದರೂ, ರಾಜ್ಯಗಳಿಗೆ ತೆರಿಗೆ ಪಾಲು ಹೆಚ್ಚಿಸಿರುವ ಕೇಂದ್ರದ ನಿರ್ಧಾರ ಮಾತ್ರ ಸ್ವಾಗತಾರ್ಹ.

ಆರ್ಥಿಕವಾಗಿ ಹೆಚ್ಚಿನ ಅನುಕೂಲ ಆಗದೆ ಇದ್ದರೂ, ರಾಜ್ಯಗಳಿಗೆ ಸ್ವತಂತ್ರವಾಗಿ ನಿರ್ಧಾರ ತೆಗೆದುಕೊಳ್ಳುವ ಅಧಿಕಾರ ಇರುತ್ತದೆ. ಅಗತ್ಯಕ್ಕೆ ತಕ್ಕಂತೆ ಯೋಜನೆಗಳಲ್ಲಿ ಮಾರ್ಪಾಡು ಮಾಡಿಕೊಳ್ಳುವ, ರಾಜ್ಯ ಮಟ್ಟದಲ್ಲೇ ನಿರ್ಧಾರಗಳನ್ನು ತೆಗೆದುಕೊಳ್ಳುವ ಸ್ವಾತಂತ್ರ್ಯ ದೊರೆಯಲಿದೆ. ಈ ಮೂಲಕ ಒಕ್ಕೂಟ ವ್ಯವಸ್ಥೆ ಬಲವರ್ಧನೆ ಆಗಲಿದೆ ಎಂದರೆ ತಪ್ಪಾಗಲಾರದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT