ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತೋಟದ ಹೂವುಗಳು

ಕಥಾಸ್ಪರ್ಧೆ ಫಲಿತಾಂಶ
Last Updated 6 ಫೆಬ್ರುವರಿ 2016, 19:30 IST
ಅಕ್ಷರ ಗಾತ್ರ

ಒಂದು ಊರು. ಆ ಊರಿನ ಹೆಸರು ಮಲ್ಲಿಗೆ ಹಳ್ಳಿ. ಆ ಊರಿನಲ್ಲಿ ಒಂದು ತೋಟ ಇತ್ತು. ಅದು ತುಂಬ ಸುಂದರವಾಗಿತ್ತು. ಆ ತೋಟದಲ್ಲಿ ತರ ತರಹದ ಪುಟ್ಟ ಪುಟ್ಟ ಹೂಗಿಡ ಬಳ್ಳಿಗಳು, ಸಸ್ಯಗಳು ಇದ್ದವು. ಮಣ್ಣಿನ ಮಡಿಯಲ್ಲಿ ಮಲ್ಲಿಗೆ, ಗುಲಾಬಿ, ಸೇವಂತಿಗೆ, ಚಂಡು ಹೂ ಅರಳಿ ನಿಂತಿದ್ದವು. ತೋಟದ ಮಾಲೀಕ ಅವುಗಳನ್ನು ಚೆನ್ನಾಗಿ ನೋಡಿಕೊಳ್ಳುತ್ತಿದ್ದ. ತೋಟದ ಸಮೀಪ ಒಂದು ಕೆಸರಿನ ಗುಂಡಿಯಿತ್ತು. ಅದರಲ್ಲಿ ಈರುಳ್ಳಿ ಮತ್ತು ಬೆಳ್ಳುಳ್ಳಿಯ ಪುಟ್ಟ ಪುಟ್ಟ ಸಸಿಗಳು ಬೆಳೆದಿದ್ದವು.

ತೋಟದಲ್ಲಿದ್ದ ಮಲ್ಲಿಗೆ, ಗುಲಾಬಿ, ಸೇವಂತಿಗೆ, ಚಂಡು ಹೂ ತುಂಬಾ ಸುಂದರವಾಗಿದ್ದವು. ಒಂದು ದಿನ ಹೊರಗೆ ಬಂದ ಮಲ್ಲಿಗೆ, ಗುಲಾಬಿ, ಸೇವಂತಿಗೆ, ಚಂಡು ಹೂಗಳು, ಕೆಸರಿನಲ್ಲಿ ಬೆಳೆದಿದ್ದ ಈರುಳ್ಳಿ ಮತ್ತು ಬೆಳ್ಳುಳ್ಳಿಯನ್ನು ಕಂಡು ಕಿಸಕ್ಕನೆ ನಕ್ಕವು. ಮಾತಿನಲ್ಲೇ  ಹೀಯಾಳಿಸಿದವು. ‘ಹೇ, ಹೇ... ಬೆಳ್ಳುಳ್ಳಿ, ಈರುಳ್ಳಿ, ಕೆಸರಿನ ಮಳ್ಳಿ, ಕರ್ರನೆ ಕಳ್ಳಿ! ನಿಮ್ಮನ್ನು ಮುಟ್ಟಿಸಿಕೊಳ್ಳಲು ಹೇಸಿಗೆಯಾಗುತ್ತೆ. ಹಂದಿ, ನಾಯಿಗಳೂ ಹೊರಳಾಡುತ್ತವೆ. ನಿಮ್ಮ ಮೈ ತುಂಬ ಹೊಲಸು. ನೀವು ಅಂತಹ ಕೆಸರಿನಲ್ಲಿ ಹೇಗೆ ಇರುತ್ತೀರಪ್ಪ?’ ಎಂದವು.

ಹೂಗಳು ಹೀಯಾಳಿಸಿದ್ದರಿಂದ ಬೆಳ್ಳುಳ್ಳಿ, ಈರುಳ್ಳಿ ಮುಖ ಸಪ್ಪಗೆ ಮಾಡಿದವು. ‘ಹೇ ಈರುಳ್ಳಿ, ಬೆಳ್ಳುಳ್ಳಿ ನಮ್ಮನ್ನು ನೋಡಿ, ನಾವು ಹೇಗೆ ಥಳ ಥಳ ಹೊಳೆಯುತ್ತಿದ್ದೀವಿ. ನಾವು  ತುಂಬಾ ಆರೋಗ್ಯದಿಂದ ಇದ್ದೀವಿ. ನಮ್ಮ ಮೈಮೇಲೆ ಸ್ವಲ್ಪವಾದರೂ ಧೂಳು, ಹೊಲಸು ಇದೆಯಾ? ನೀವೇ ನೋಡಿ’ ಎಂದು ಸ್ವಲ್ಪ ಮುಂದಕ್ಕೆ ಬಾಗಿದವು.

ಈರುಳ್ಳಿ ಮತ್ತು ಬೆಳ್ಳುಳ್ಳಿ ಬಹಳಷ್ಟು ಬೇಸರದಿಂದಲೇ ಕಾಲ ಕಳೆಯತೊಡಗಿದವು. ಒಂದು ದಿನ ಅದಕ್ಕೆ ಒಂದು ಯೋಚನೆ ಬಂತು. ‘ತೋಟದ ಹೂವುಗಳ ಕಡೆ ಹೋಗಿ, ಅವುಗಳನ್ನು ಮಾತನಾಡಿಸಬೇಕು. ನಾವೂ ನಿಮ್ಮ ಸ್ನೇಹಿತರಾಗ್ತೀವಿ ಅಂತ ಹೇಳಬೇಕು’ ಅಂತ ಅನಿಸಿತು. ಈರುಳ್ಳಿ ಮತ್ತು ಬೆಳ್ಳುಳ್ಳಿ ನಿಧಾನವಾಗಿ ಬಗ್ಗಿ ಬಗ್ಗಿ ನಡೆಯುತ್ತ ತೋಟದ ಹೂಗಳತ್ತ ಹೆಜ್ಜೆಹಾಕಿದವು.

ಹೂಗಳು ಕಾಣುತ್ತಿದ್ದಂತೆ ನಿಂತ ಈರುಳ್ಳಿ, ಬೆಳ್ಳುಳ್ಳಿ, ‘ನಾವು ನಿಮ್ಮ ಸ್ನೇಹಿತರಾಗಿ ಮಾಡಿಕೊಳ್ಳುವುದಿಲ್ಲ. ನೀವು ಕೆಸರಿನಲ್ಲಿ ಇರುತ್ತೀರಿ. ನಾವು ಸುಂದರವಾದ, ತೋಟದ ಮಡಿಗಳಲ್ಲಿ ಇರುತ್ತೇವೆ. ನಿಮ್ಮನ್ನು ಗೆಳೆಯರನ್ನಾಗಿ ಮಾಡಿಕೊಂಡರೆ ನಾವೂ ನಿಮ್ಮಂತೆ ಆಗಿ ಬಿಡುತ್ತೇವೆ’ ಎಂದು ಹೂಗಳು, ಬೆಳ್ಳುಳ್ಳಿ, ಈರುಳ್ಳಿಯ ಮನವಿಯನ್ನು ತಿರಸ್ಕರಿಸಿದವು.

ನಂತರ ಒಂದೊಂದು ಹೂವು ತಾನೆಷ್ಟು ಸುಂದರ, ತಾನು ಹೇಗೆ ಬೆಳೆಯುವೆ, ಎಂತಹ ಸುಂದರವಾದ ಹೂವುಗಳನ್ನು ಬಿಡುವೆ. ಯಾರು ಮುಡಿಯುತ್ತಾರೆ ಎಂದು ತನ್ನಷ್ಟಕ್ಕೆ ತಾನು ಜಂಬ ಕೊಚ್ಚಿಕೊಂಡಿತು.

‘ನಾನು ತುಂಬ ಸುಂದರವಾಗಿದ್ದೀನಿ. ನನಗೆ ಸೂಜಿಯಿಂದ ಚುಚ್ಚಿ ದಾರದಲ್ಲಿ ಪೋಣಿಸಿ ದಂಡೆ ಮಾಡಿಕೊಂಡು ಹೆಣ್ಣುಮಕ್ಕಳು ಮುಡಿದು ಕೊಳ್ಳುತ್ತಾರೆ. ಅವರು ನನ್ನನ್ನು ಮುಡಿದ ಮೇಲೆಯೇ ಹೆಚ್ಚು ಸುಂದರವಾಗಿ ಕಾಣುತ್ತಾರೆ. ನಾನು ಎಲ್ಲಿ ಇರುತ್ತೇನೆಯೋ ಅಲ್ಲಿ ಸುಗಂಧ ಇರುತ್ತದೆ’ ಎಂದು ಮಲ್ಲಿಗೆ ಹೂವು ತನ್ನನ್ನೇ ಮೂಸಿಕೊಂಡು ಮೂಗು ಅರಳಿಸಿತು.

‘ನಾನೂ ತುಂಬ ಸುಂದರವಾಗಿದ್ದೀನಿ. ನನ್ನನ್ನು ಜನರು ರೋಜಾ ಅಂತ ಕರೆಯುತ್ತಾರೆ. ನನ್ನ ಜತೆಗೆ ನನ್ನ ಗೆಳೆಯ ಮುಳ್ಳು ಸಹ ಇರುತ್ತಾನೆ. ಆದ್ದರಿಂದ ಜನರು ನನ್ನನ್ನು ಹುಷಾರಾಗಿ ಮುಟ್ಟುತ್ತಾರೆ’ ಎಂದು ಗುಲಾಬಿ ತನ್ನ ಮುಖವನ್ನು ಮತ್ತಷ್ಟು ಕೆಂಪಗೆ ಮಾಡಿಕೊಂಡು ನಿಂತಿತು.

‘ನನಗೆ ಕಾಮನಬಿಲ್ಲಿನ ಎಲ್ಲ ಬಣ್ಣಗಳು ಗೊತ್ತು. ಏಳು ಬಣ್ಣಗಳಲ್ಲಿ ಹೂವುಗಳನ್ನು ಬಿಡುತ್ತೇನೆ. ಹಳದಿ ಬಣ್ಣದಲ್ಲಿ ಹೂವು ಬಿಟ್ಟಾಗ, ಬಂಗಾರವೂ ತಲೆತಗ್ಗಿಸಬೇಕು ನನ್ನ ಚೆಲುವು ಕಂಡು ನನ್ನನ್ನು ಬಡವರು, ಶ್ರೀಮಂತರು ಎಲ್ಲರೂ ಇಷ್ಟಪಡುತ್ತಾರೆ’ ಸೇವಂತಿಗೆ ಹೂವು ತನ್ನ ನೂರಾರು ಪಕಳೆಗಳ ಮೇಲೆ ಕೈಯಾಡಿಸಿಕೊಂಡಿತು.

‘ಹಬ್ಬ ಹುಣ್ಣಿಮೆಯಲ್ಲಿ ಬಾಗಿಲುಗಳಿಗೆ ತೋರಣವಾಗಿ ಯಾರನ್ನು ಸಿಂಗರಿಸುತ್ತಾರೆ. ನನ್ನನ್ನು, ಚಂಡು ಹೂವನ್ನು ಅದೆಷ್ಟು ಚಂದ ಕಾಣುತ್ತೆ ಬಾಗಿಲು ನನ್ನನ್ನು ಕಟ್ಟಿದ ದಿನ’ ಚಂಡು ಹೂ ತನ್ನ ಉದ್ದನೆ ಕತ್ತು ಬಾಚಿ ಹೇಳಿತು. ‘ಬೆಳ್ಳುಳ್ಳಿ, ಈರುಳ್ಳಿ ಹೂವುಗಳಿಂದ ಸುವಾಸನೆ ಬರಲ್ಲ. ನಿಮ್ಮನ್ನು ಯಾರೂ ಮುಡಿಯಲ್ಲ. ಹ್ಹ ಹ್ಹ ಹ್ಹ’ ಅಂತ ನಗುತ್ತ ಹೂಗಳು ಮತ್ತೆ ತೋಟದತ್ತ ನಡೆದವು.

ಕೆಲವು ದಿನಗಳು ಹೀಗೆ ಕಳೆದವು. ತೋಟದ ಮಾಲೀಕ ಕೆಲಸದ ನಿಮಿತ್ತ ವಾರ ಹದಿನೈದು ದಿನ ಬೇರೆ ಊರಿಗೆ ಹೋದ. ತೋಟದ ಹೂ ಗಿಡಗಳು ಬಾಡತೊಡಗಿದವು. ಹಸಿವಿನಿಂದ ನರಳತೊಡಗಿದವು. ಎಲ್ಲ ಹೂವುಗಳಿಗೆ ಜ್ವರ, ನೆಗಡಿ, ಕೆಮ್ಮು ಬಂತು. ಬಣ್ಣ ಬಣ್ಣದ ಚಿಟ್ಟೆಗಳಿಗೂ ಚಿಂತೆ ಕಾಡಿತು. ಹೂವುಗಳ ಸಮೀಪ ಬಂದ ಚಿಟ್ಟೆಗಳು, ‘ನೀವು ಜ್ವರಕ್ಕೆ ಔಷಧ ತೆಗೆದುಕೊಳ್ಳದೇ ಹೋದರೆ, ಬೇಗ ಸಾಯುತ್ತೀರಿ, ಬೆಳ್ಳುಳ್ಳಿಯ ಬಳಿಗೆ ಹೋಗಿ ಔಷಧ ಕೇಳಿ. ಬೆಳ್ಳುಳ್ಳಿಯ ಮರಿಗಳನ್ನು ತಿಂದರೆ ನಿಮ್ಮ ಜ್ವರ, ನೆಗಡಿ, ಕೆಮ್ಮು ವಾಸಿಯಾಗುತ್ತದೆ’ ಎಂದು ಬುದ್ಧಿ ಹೇಳಿದವು.

ಹೂವುಗಳು ಬಾಡಿದ ಮೂಖ ಹೊತ್ತು, ಹೆಜ್ಜೆಗೊಮ್ಮೆ ಕೆಮ್ಮುತ್ತ, ಸೀನುತ್ತ, ಬೆಳ್ಳುಳ್ಳಿ, ಈರುಳ್ಳಿ ಇದ್ದ ಕೆಸರಿನ ಹೊಂಡದ ಬಳಿ ಹೋದವು. ಈರುಳ್ಳಿಯೇ ಮೊದಲು ಎದ್ದು ನಿಂತು, ಹೂವುಗಳ ಸ್ಥಿತಿಗೆ ಮರುಕಪಟ್ಟಿತು. ಬೆಳ್ಳುಳ್ಳಿ ತನ್ನ ಬುಡದಲ್ಲಿ ಬೆಳೆದ ಮರಿಗಳನ್ನು ಕಿತ್ತು ಎಲ್ಲ ಹೂವುಗಳಿಗೆ ತಿನ್ನಲು ಕೊಟ್ಟಿತು. ಔಷಧ ತಿಂದ ಹೂವುಗಳು ಗುಣಮುಖವಾದವು. ಹೂವುಗಳು ಕೆಸರಿನ ಹೊಂಡದಲ್ಲಿ ಇಳಿದು, ಬೆಳ್ಳಳ್ಳಿ, ಈರುಳ್ಳಿಯನ್ನು ಅಪ್ಪಿಕೊಂಡವು. ‘ನೀವು ತುಂಬ ಒಳ್ಳೆಯವರು, ಕೆಸರಿನಲ್ಲಿ ಇದ್ದರೂ ನಿಮ್ಮ ಗುಣ ಹೂವಿಗಿಂತ ದೊಡ್ಡದು. ಇನ್ನು ಮುಂದೆ ನಾವೆಲ್ಲರೂ ಸ್ನೇಹಿತರಾಗಿ ಇರೋಣ’ ಎಂದು ಚಂಡು ಹೂ ಜೋರಾದ ದನಿಯಲ್ಲಿ ಹೇಳಿತು. ಅದಕ್ಕೆ ಮಲ್ಲಿಗೆ, ಗುಲಾಬಿ, ಸೇವಂತಿಗೆ ತಲೆಯಾಡಿಸಿದವು. ಬೆಳ್ಳುಳ್ಳಿ, ಈರುಳ್ಳಿ ಸಸಿಗಳು ಸಂತಸದಲ್ಲಿ ತೇಲಿದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT