ಭೋಗವೇರಿದೆ ವೇಗದ ಬೆನ್ನು,
ಲಾಭವಿದ್ದರೆ ನೋ ಟೆನ್ಷನ್ನು
ಓಡು ಹಿಂದಿಕ್ಕು ಕೇಳಬೇಡ ಕ್ವೆಶ್ಚನ್ನು
ವಿಶ್ವಗ್ರಾಮದ ಪ್ರಜೆ ನಿನ್ನ ಲ್ಯಾಪ್ಟಾಪಲಿ ದೇಶವೆ ಬಂಧಿ
ಕಾಲವಂತೂ ಟೈಂಝೋನುಗಳ ಮರುಧರೆಯ ನದಿ

ಸನ್ನಿವೇಶ ೧: ಮಧ್ಯಮವರ್ಗದ ಅಡುಗೆಮನೆ. ಭಾನುವಾರದ ಬಿಡುವೆಂದು ಖುಷಿಯಾಗಿ ಅಕ್ಕಿರೊಟ್ಟಿ ಮಾಡಿ ಮಕ್ಕಳನ್ನು ತಿಂಡಿಗೆ ಕರೆಯುತ್ತಿರುವ ತಾಯಿ. ‘ಅಯ್ಯೋ ಇದಾ?‘ ಎಂದು ಮುಖ ಸಿಂಡರಿಸಿ ಪಿಜ್ಜಾ ಆರ್ಡರ್ ಕೊಡಲು ಫೋನು ಎತ್ತಿಕೊಳ್ಳುವ ಹದಿಹರೆಯದ ಮಗ.

ಸನ್ನಿವೇಶ ೨: ಮಕ್ಕಳಿಗೆ ಮನೆಕೆಲಸ ಕಲಿಸಬೇಕೆಂದು ಹೆಣಗುವ ತಾಯಿ. ಫೇಸ್ ಬುಕ್, ಮೊಬೈಲ್ ಫೋನುಗಳಲ್ಲಿ ಮುಳುಗಿ ಮಾತಿಗೂ ವ್ಯವಧಾನವಿಲ್ಲದ ಕಾಲೇಜು ಹುಡುಗಿ. ‘ಲೈಫ್ ಸ್ಕಿಲ್ಸ್ ಕ್ಲಾಸ್’ಗೆ ಹೋದ್ರಾಯ್ತು ಬಿಡಮ್ಮಾ ಎಂದು ಅಮ್ಮನಿಗೆ ಸಮಾಧಾನ ಹೇಳುವ ಮಗಳು.

ಸನ್ನಿವೇಶ ೩: ತಂದೆ ಹುಡುಕಿದ ಯಾವ ಹುಡುಗಿಯನ್ನೂ ಒಪ್ಪದೆ ತಾನು ಗಂಡಸನ್ನೇ ಮದುವೆಯಾಗುತ್ತೇನೆಂದು ಹೇಳುತ್ತಿರುವ ಮಗ. ವಿಹ್ವಲಗೊಂಡ ತಂದೆ.

ಸನ್ನಿವೇಶ ೪: ಸಾಂಪ್ರದಾಯಿಕ ಮದುವೆ ಓಲ್ಡ್ ಫ್ಯಾಷನ್ಡ್ ಎನ್ನುತ್ತ ಲಿವ್ ಇನ್ ಸಂಬಂಧ ಇಟ್ಟುಕೊಂಡರೇನು ತಪ್ಪು ಎಂದು ವಾದಿಸುವ ಮಗಳು. ಉತ್ತರ ಕೊಡಲಾಗದೆ ಚಡಪಡಿಸುವ ತಾಯಿ.

ಕರ್ನಾಟಕದ, ಅಷ್ಟೇ ಏಕೆ ಭಾರತದ ಯಾವುದೇ ನಗರದ ಮಧ್ಯಮವರ್ಗದ ಮನೆಯಲ್ಲಾದರೂ ಕಾಣಸಿಗಬಹುದಾದ ಸನ್ನಿವೇಶಗಳಿವು. ನಮ್ಮ ಗಮನವನ್ನು ಮೇಲೆ ಹೇಳಿದ ಸನ್ನಿವೇಶಗಳಲ್ಲಿನ ಬಡಪಾಯಿ ತಾಯಿ ತಂದೆಯರ ಕಡೆಗೆ ಒಮ್ಮೆ ಹರಿಸೋಣ. ಇವರ ಪೀಳಿಗೆಯು ತ್ರಿಶಂಕು ಪೀಳಿಗೆ ಎಂದು ಕರೆಸಿಕೊಳ್ಳಬಹುದಾದದ್ದು. ಎಪ್ಪತ್ತನೇ ಇಸವಿಯ ಆಸುಪಾಸಿನಲ್ಲ ಹುಟ್ಟಿ ಈಗ ನಲವತ್ತರ ಆಸುಪಾಸಿನಲ್ಲಿರುವ ಪೀಳಿಗೆ ಇದು. ಇದರ ಪೇಚಾಟಗಳು ಒಂದೊಂದಲ್ಲ.

ತಾನು ಬಿಸಿಬೇಳೆಭಾತು, ಕೋಡುಬಳೆ ಮುಂತಾದ ತಿಂಡಿಗಳನ್ನು ಸವಿದಿದ್ದು ಅವನ್ನು ರಚಿಕರ ತಿಂಡಿಗಳು ಎಂದು ಭಾವಿಸಿದ್ದರೂ ತನ್ನ ಮಕ್ಕಳು ಅದಕ್ಕೆ ಕ್ಯಾರೇ ಎನ್ನದೆ ‘ಪಿಜ್ಜಾ ಕೊಡಿಸು’ ಎಂದು ಹಟ ಮಾಡುವುದಕ್ಕೆ ಸಾಕ್ಷಿಯಾಗಬೇಕು. ಕೇಬಲ್ ಟೀವಿಯನ್ನು ತಾನು ಮೊದಲು ನೋಡಿದ್ದು ಬಾಲ್ಯ ಕಳೆದ ನಂತರವಾದರೂ ನೂರಾರು ಚಾನಲ್ಲುಗಳ ಅಬ್ಬರದಲ್ಲಿ ಸದಾ ರಿಮೋಟ್ ಹಿಡಿದಿರುವ ತನ್ನ ಮಕ್ಕಳು ಕಳೆದುಹೋಗದಂತೆ ನೋಡಿಕೊಳ್ಳಬೇಕು. ತಾನು ಕಂಪ್ಯೂಟರನ್ನು ಕಂಡಿದ್ದು ಪದವಿ ಓದಿದ ನಂತರವಾದರೂ ಸದಾ ಕಾಲ ಕಂಪ್ಯೂಟರಿನೊಂದಿಗೆ ತೊಡಗಿಕೊಂಡಿರುವ ಲೋಕದಲ್ಲಿ ಬದುಕಬೇಕು. ತನ್ನ ಹದಿಹರೆಯದಲ್ಲಿ ಬೀದಿ ಬದಿಯ ಎಸ್.ಟಿ.ಡಿ. ಬೂತಿನಲ್ಲಿ ಕ್ಯೂ ನಿಂತು ಪೋನು ಮಾಡುತ್ತಿದ್ದವನು, ತನ್ನ ಮಧ್ಯವಯಸ್ಸಿನಲ್ಲಿ ಬೀದಿಯಲ್ಲಿ ಹೋಗುತ್ತಿರುವ ಪ್ರತಿಯೊಬ್ಬರ ಬಳಿಯೂ ಒಂದೋ ಎರಡೋ ಮೊಬೈಲ್ ಫೋನುಗಳಿರುವದನ್ನು ನೋಡಬೇಕು.

ಸಿನಿಮಾ ಎಂದರೆ ತನ್ನ ಬಡಾವಣೆಯ ಟಾಕೀಸಿಗೆ ಬಂದ ಸಿನಿಮಾ ಎಂಬ ತಿಳಿವಳಿಕೆಯನ್ನು, ಸಿನಿಮಾ ನೋಡುವುದು ಎಂದರೆ ಶಾಪಿಂಗ್ ಮಾಲ್ ನ ಮಲ್ಟಿಪ್ಲೆಕ್ಸ್ ಗೆ ಹೋಗುವುದು ಎಂದು ಬದಲಾಯಿಸಿಕೊಳ್ಳಬೇಕು. ಶಾಪಿಂಗ್ ಎಂದರೆ ಮನೆಗೆ ಅನಿವಾರ್ಯವಾಗಿ ಬೇಕಾದ ಸಾಮಾನನ್ನು ಪರಿಚಯದ ಕಾಕಾ ಅಂಗಡಿಗೆ ಹೋಗಿ ತರುವುದಲ್ಲ, ವೀಕೆಂಡಿನಲ್ಲಿ ಮಾಲ್ ನಲ್ಲಿ ಟ್ರಾಲಿ ಹಿಡಿದು ನಿಧಾನವಾಗಿ ಸುತ್ತುತ್ತ ತಲೆಯಲ್ಲಿರುವ ಬೇಕು ಬೇಡಗಳ ಸ್ವಿಚ್ಚನ್ನು ಆಫ್ ಮಾಡಿಕೊಳ್ಳುವುದು ಎಂಬ ಹೊಸ ವ್ಯಾಖ್ಯಾನವನ್ನು ಅರಿಯಬೇಕು. ದೂರದರ್ಶನ ಮಾತ್ರ ಇದ್ದಾಗ ಚಿತ್ರಹಾರ್, ಚಿತ್ರಮಂಜರಿ ನೋಡುತ್ತಾ ಬೆಳೆದವರು ತಮ್ಮ ಮಕ್ಕಳು ಪ್ರಪಂಚದ ಯಾವ್ಯಾವುದೋ ಚ್ಯಾನಲ್ ಗಳನ್ನು ನೋಡಿ ಖುಷಿಪಡುವುದನ್ನು ಕಂಡು ಸುಮ್ಮನಾಗಬೇಕು.

ಹೀಗೆ, ಈಗಿನ ಹದಿಹರೆಯದವರಿಗೆ ಅಪ್ಪ ಅಮ್ಮನಾಗಿರುವವವರ ಮುಂದೆ ಅನೇಕ ಸವಾಲುಗಳಿವೆ. ಮಾಹಿತಿ ತಂತ್ರಜ್ಞಾನದ ಕ್ರಾಂತಿಗೆ ಸಾಕ್ಷಿಯಾದ, ಜಾಗತೀಕರಣದ ಮುಂಚಿನ ಕೊನೆಯ ಪೀಳಿಗೆ ಇವರದು. ಬಹುಶಃ ಒಂದು ಬದುಕಿನ ವಿಧಾನದ ಕೊನೆಯ ಕೊಂಡಿ ಈ ತಲೆಮಾರು. ಕಾಲ್ ಸೆಂಟರುಗಳು ಹದಿನೆಂಟು, ಹತ್ತೊಂಬತ್ತರ ಯುವಕರಿಗೆ ಝಣಝಣ ಕಾಂಚಾಣವನ್ನು ಹತ್ತು ಸಾವಿರ, ಇಪ್ಪತ್ತು ಸಾವಿರಗಳ ಲೆಕ್ಕದಲ್ಲಿ ಸುರಿಯಲು ಶುರು ಮಾಡಿದಾಗ ನಮ್ಮ ಬದುಕಿನ ನೇಯ್ಗೆಯಲ್ಲಿ ದೊಡ್ಡ ಬದಲಾವಣೆ ಬಂತು.

ಬಿಪಿಓ ಸೆಂಟುರಗಳ ರಾತ್ರಿ ಪಾಳಿಗಳ ಉದ್ಯೋಗಗಳು ನಮ್ಮ ದೈನಂದಿನ ವೇಳಾಪಟ್ಟಿಯನ್ನು ಬದಲಾಯಿಸಿದವು. ಹೆಸರನ್ನು ಮತ್ತು ಮಾತಿನ ಶೈಲಿಯನ್ನು ತಾನು ಸೇವೆ ನೀಡುತ್ತಿರುವ ದೇಶಕ್ಕನುಗುಣವಾಗಿ ಬದಲಾಯಿಸಿಕೊಳ್ಳಬೇಕಾದ ತುರ್ತಿನಿಂದ ನಮ್ಮ ಬದುಕಿನ ಸಮೀಕರಣಗಳು ಬದಲಾಗುತ್ತಾ ಬಂದವು. ಹಿರಿಯರು ಮತ್ತು ಕಿರಿಯರ ನಡುವಿನ ಸಾಂಪ್ರದಾಯಿಕ ಶ್ರೇಣೀಕೃತ ಸಂಬಂಧ ಬದಲಾಯಿತು. ಇಲ್ಲೇ ಶುರುವಾಗಿದ್ದು ಎಪ್ಪತ್ತರ ದಶಕದ ವರ್ಷಗಳಲ್ಲಿ ಹುಟ್ಟಿದ ತಲೆಮಾರಿನ ತಳಮಳ. ಈ ತಲೆಮಾರಿನ ದ್ವಂದ್ವವು ಒಂದು ರೀತಿಯಲ್ಲಿ ಆಧುನಿಕೋತ್ತರ (ಜಾಗತೀಕರಣದ ನಂತರದ ಕಾಲ) ಭಾರತದ ದ್ವಂದ್ವ. ಇದು ಬಹುಮುಖೀ ಸಂಸ್ಕೃತಿಯೊಂದು ಹೊರಳುದಾರಿಯಲ್ಲಿ ನಿಂತಿರುವ ಸನ್ನವೇಶ; ಸಾಮಾಜಿಕ ಸ್ಥಿತ್ಯಂತರದ ಕಾಲ.

ಮೇಲೆ ಹೇಳಿದ ಈ ತಲೆಮಾರು ಯೌವನದಲ್ಲಿದ್ದಾಗ ಜಾಗತೀಕರಣ ಆಗಷ್ಟೇ ಪ್ರಾರಂಭವಾಗಿತ್ತು. ಈಗ ಅದರ ಪರಿಣಾಮಗಳು ದೈನಂದಿನ ಬದುಕಿನಲ್ಲಿ ಢಾಳಾಗಿ ಕಾಣಿಸಿಕೊಳ್ಳುವ ಹೊತ್ತಿಗೆ ಇವರಿಗೆ ಮಧ್ಯವಯಸ್ಸು. ಬಾಲ್ಯದಲ್ಲಿ ತುಸುವಾದರೂ ಗ್ರಾಮೀಣ ಅನುಭವಗಳಿಗೆ ಮುಖಾಮುಖಿಯಾಗಿದ್ದು ಭಾರತದ ಗಡಿಯಾಚೆಗಿನ ಜೀವನಶೈಲಿಗಳ ಪರಿಚಯ ಕೇವಲ ದೂರದ ಅರಿವಾಗಿ ಮಾತ್ರ ಇದ್ದ ಜನ ಇವರು. ತಮ್ಮ ಅಪ್ಪ ಅಮ್ಮ ಬದುಕಿದಂತೆ ಹೆಚ್ಚೆಂದರೆ ತುಸು ಪರಿಷ್ಕೃತರಾಗಿ ಬದುಕಲು ಸಿದ್ಧವಾದವರು.

ಬಹುಶಃ ಈ ಪೀಳಿಗೆಯಷ್ಟು ತೀವ್ರ ಬದಲಾವಣೆಗಳಿಗೆ ಸಾಕ್ಷಿಯಾದ ಪೀಳಿಗೆ ಇನ್ನೊಂದಿರಲಾರದು. ತಾನು ಬೆಳೆದ ಕಾಲಕ್ಕೂ ಈಗ ಬದುಕುತ್ತಿರುವ ಕಾಲದಲ್ಲೂ ಅಜಗಜಾಂತರವಿರುವುದನ್ನು ಅನುಭವಿಸುತ್ತಿರುವ ತಲೆಮಾರಿದು. ತಾನು ಸವಿದ ಯಾವುದನ್ನೂ ತನ್ನ ಮಕ್ಕಳು ಸವಿಯುತ್ತಿಲ್ಲ. ತಾನು ಉತ್ತಮವೆಂದು ನಂಬಿದ್ದನ್ನು ಮಕ್ಕಳಿಗೆ ಉತ್ತಮವೆಂದು ಕನ್ವಿನ್ಸ್ ಮಾಡುವುದು ಸಾಧ್ಯವಾಗುತ್ತಿಲ್ಲ. ರುಚಿ ಅಭಿರುಚಿಗಳು ತೀವ್ರವಾಗಿ ಬದಲಾಗಿವೆ. ತಂತ್ರಜ್ಞಾನದ ವೇಗವಂತೂ ಅಸಾಧ್ಯ. ಊಟ, ಉಡುಪು, ಮೌಲ್ಯವ್ಯವಸ್ಥೆ, ಕೌಟುಂಬಿಕ ಸಂಬಂಧಗಳು ಯಾವುದೇ ವಿಚಾರವಾದರೂ ತಾನು ನಂಬಿಕೊಂಡು ಬಂದದ್ದನ್ನು ತನ್ನ ಮಕ್ಕಳಿಗೆ ಕಲಿಸಲಾಗದ ಮಿಡುಕಾಟದಲ್ಲಿರುವ ಪೀಳಿಗೆ ಇದು. ತಾನು ಕಲಿತಿದ್ದು ಈ ಹೈಟೆಕ್ ಯುಗದಲ್ಲಿ ಯಾವುದಕ್ಕೂ ಸಲ್ಲುವುದಿಲ್ಲವೇನೋ ಎಂಬ ಪೇಚಿಗೆ ಸಿಕ್ಕಿರುವ ಸಮುದಾಯ ಇದು. ಲ್ಯಾಂಡ್ ಲೈನ್ ಫೋನಿನ ಕಾಲದಲ್ಲಿ ಹುಟ್ಟಿ ಸ್ಮಾರ್ಟ್ ಫೋನಿನ ಸ್ಮಾರ್ಟ್ ನೆಸ್ ಗೆ ಬೆರಗಾಗಿರುವ ಸಮುದಾಯ.

ಹಳೆಯದನ್ನು ಪೂರ್ತಿ ಬಿಡಲಾಗದ ಹೊಸದನ್ನು ಪೂರ್ತಿ ಕಟ್ಟಿಕೊಳ್ಳಲಾಗದೆ, ಬದಲಾವಣೆಯನ್ನೇ ಹಾಸಿ ಹೊದೆಯಬೇಕಾದ ಈ ಪೀಳಿಗೆಯ ಮುಂದಿರುವ ಸವಾಲುಗಳು ನೂರಾರು. ಗ್ರಾಮೀಣ ಪ್ರದೇಶದಿಂದ ಬಂದು ನಗರದಲ್ಲಿ ಬದುಕುತ್ತಿರುವ ಮಧ್ಯವಯಸ್ಕರ ಗೊಂದಲಗಳು ಇನ್ನೂ ಹೆಚ್ಚು. ಇವತ್ತಿನ ಸೃಜನಶೀಲ ಸಾಹಿತ್ಯದಲ್ಲೂ ನಾವು ಈ ತವಕ ತಲ್ಲಣಗಳನ್ನು ಗಮನಿಸಬಹುದು.
ಮೌಲ್ಯಗಳ ಪ್ರಶ್ನೆ ಒಂದೆಡೆಯಾದರೆ ಹವಾಮಾನ ವೈಪರೀತ್ಯಗಳಿಂದ ಸಂಭವಿಸುತ್ತಿರುವ ನಾನಾ ಅವಘಡಗಳಿಗೂ ಈ ತಲೆಮಾರು ಸಾಕ್ಷಿಯಾಗಿದೆ. ತಮ್ಮ ಕಣ್ಣೆದುರೇ ನೂರಾರು ಎಕರೆ ಕೃಷಿ ಜಮೀನು, ಹೂವಿನ ತೋಟಗಳು ಎಸ್.ಇ.ಜೆಡ್ ಗಳಾಗಿ, ಅಪಾರ್ಟ್ ಮೆಂಟ್ ಕಾಂಪ್ಲೆಕ್ಸ್ ಗಳಾಗಿ ಬದಲಾಗುತ್ತಿರುವುದನ್ನು ನೋಡುತ್ತಾ ಇವರು ಕಕ್ಕಾಬಿಕ್ಕಿಯಾಗಿದ್ದಾರೆ. ದೊಡ್ಡ ಬದಲಾವಣೆಗಳು ತುಂಬ ವೇಗವಾಗಿ ಆಗಿಹೋದವು. ‘ಪುಟ್ಟಕ್ಕನ ಹೈವೇ’,

‘ಮಾತಾಡ್ ಮಾತಾಡ್ ಮಲ್ಲಿಗೆ‘ಯಂತಹ ಸಿನಿಮಾಗಳು ನೆನಪಾಗುತ್ತವಲ್ಲವೇ?
ಜಾಗತೀಕರಣದ ಪ್ರಸ್ತುತ ಸಂದರ್ಭದಲ್ಲಿ ಏಕಕಾಲದಲ್ಲಿ ಪ್ರಪಂಚದ ಅನೇಕ ಜೀವನಶೈಲಿಗಳಿಗೆ ನಮ್ಮ ಮಕ್ಕಳು ಪರಿಚಿತರಾಗುತ್ತಿದ್ದಾರೆ. ಸಮೂಹಮಾಧ್ಯಮಗಳು ಮತ್ತು ಶಿಕ್ಷಣ ಮಾಧ್ಯಮ ಈ ಕಲಿಕೆಯಲ್ಲಿ ತಮ್ಮ ಪಾಲು ನೀಡಿವೆ. ತಮ್ಮ ಹಿಂದಿನ ಯಾವುದೇ ಪೀಳಿಗೆಯ ಮಕ್ಕಳಲ್ಲಿ ಇರದಷ್ಟು ಅಗಾಧ ಮಾಹಿತಿ ಇವರಿಗೆ ಲಭ್ಯವಿದೆ. ವಿಪರೀತ ವೇಗದಲ್ಲಿ ಬೆಳೆಯುತ್ತಿರುವ ತಂತ್ರಜ್ಞಾನವು ಬೆರಳ ತುದಿಯಲ್ಲಿ ಪ್ರಪಂಚದ ಸಂಪರ್ಕ ಪಡೆದಿರುವ ಯುವಪೀಳಿಗೆಯನ್ನು ಸೃಷ್ಟಿಸಿದೆ. ತಮ್ಮ ಹಿರಿಯರನ್ನು ಮಾತ್ರ ನೋಡಿ ಬದುಕಿನ ರೀತಿಯನ್ನು ಕಲಿಯುವ ವಾತಾವರಣ ಈಗಿಲ್ಲ. ಒಬ್ಬ ಶಿಷ್ಯನಿಗೆ ಟೀವಿ, ಅಂತರ್ಜಾಲವೂ ಸೇರಿದಂತೆ ಅನೇಕ ಗುರುಗಳು. ಪಾಠಶಾಲೆಯೋ ಪ್ರಪಂಚದಗಲ!

ಒಟ್ಟಿನಲ್ಲಿ ಇದರ ಫಲಿತವೇನೆಂದರೆ ಹಿರಿಯರಿಗೂ ಮಕ್ಕಳಿಗೂ ಅರ್ಥಪೂರ್ಣ ಸಂವಾದ ಸಾಧ್ಯವಾಗುತ್ತಿಲ್ಲ. ಯುವಸಮೂಹದಲ್ಲಿ ಹೆಚ್ಚುತ್ತಿರುವ ವಿವಾಹ ವಿಚ್ಛೇದನಗಳು, ಆತ್ಮಹತ್ಯೆಗಳು. ಹೊಂದಾಣಿಕೆಯ ಸಮಸ್ಯೆಗಳು, ಒತ್ತಡದ ಜೀವನಶೈಲಿಯ ದುಷ್ಪರಿಣಾಮಗಳು ಇಡೀ ಸಮಾಜಕ್ಕೇ ಸವಾಲಾಗಿವೆ. ಮನಸ್ಥಿತಿಗಳನ್ನು ಬದಲಾಯಿಸಿಕೊಳ್ಳದಿದ್ದರೆ ಈ ಸನ್ನಿವೇಶವನ್ನು ಎದುರಿಸುವುದು ಕಷ್ಟ.

ಎಂತಹ ಕಪ್ಪು ಮೋಡಕ್ಕೂ ಬೆಳ್ಳಿ ಅಂಚು ಇರುವಂತೆ ಈ ಪರಿಸ್ಥಿತಿಗೂ ಒಂದು ಇತ್ಯಾತ್ಮಕ ಕೋನ ಇದೆ. ಬದಲಾವಣೆಗಳನ್ನು ಸ್ವೀಕರಿಸುವ ಮನಸ್ಸು ಹೊಂದಿ, ತುಸು ಸಹನೆಯಿಂದ ನಡೆದುಕೊಂಡರೆ ಮುಂದಿನ ಪೀಳಿಗೆಗೆಳ ಜೊತೆಗೆ ಅರ್ಥಪೂರ್ಣ ಸಂವಾದ ಸಾಧ್ಯವಾಗುತ್ತದೆ. ಪೀಳಿಗೆಗಳ ಅಂತರ ಕಡಿಮೆಯಾಗುತ್ತದೆ. ತ್ರಿಶಂಕು ಪೀಳಿಗೆಯ ಬಾಳಿನ ಎರಡನೇ ಇನ್ನಿಂಗ್ಸ್ ಆದರೂ ತ್ರಿಶಂಕುವಾಗುವುದು ತಪ್ಪುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.