ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತ್ರಿಶತಕ ಗಳಿಸಿ ಮೆರೆದಾಡಿದ ರಾಹುಲ್

ರಣಜಿ: ಅಬ್ರಾರ್‌ ಖಾಜಿ ಶತಕ, ಚಿನ್ನಸ್ವಾಮಿ ಅಂಗಳದಲ್ಲಿ ಇತಿಹಾಸ ಬರೆದ ಕರ್ನಾಟಕ
Last Updated 30 ಜನವರಿ 2015, 20:35 IST
ಅಕ್ಷರ ಗಾತ್ರ

ಬೆಂಗಳೂರು: ರಾಹುಲ್‌... ರಾಹುಲ್‌... ರಾಹುಲ್‌.
ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಉತ್ತಮ ಸಂಖ್ಯೆಯಲ್ಲಿ ಸೇರಿದ್ದ ಅಭಿಮಾನಿಗಳು ರಾಹುಲ್‌ ಕ್ರೀಸ್‌ನಲ್ಲಿ ಇದ್ದಷ್ಟು ಹೊತ್ತು ಕೂಗಿ ಸಂಭ್ರಮಿಸಿದ ಪರಿಯಿದು. ಅವರಿಗೆಲ್ಲಾ ಆ ಸುಂದರ ಇನಿಂಗ್ಸ್‌ ಕಣ್ತುಂಬಿಕೊಂಡ ಖುಷಿ. ಜೊತೆಗೆ ಭವಿಷ್ಯದ ತಾರೆ ರಾಹುಲ್‌ಗೆ ತ್ರಿಶತಕ ಬಾರಿಸಿ ಕರ್ನಾಟಕದ ರಣಜಿ ಇತಿಹಾಸದಲ್ಲಿ ಹೊಸ ಅಧ್ಯಾಯ ಬರೆದ ಸಂತೋಷ.

ಮೊದಲ ದಿನವೇ 300ಕ್ಕಿಂತಲೂ ಹೆಚ್ಚು ರನ್‌ ನೀಡಿ ಉತ್ತರ ಪ್ರದೇಶ ತಂಡ ಹೈರಾಣವಾಗಿತ್ತು. ಶುಕ್ರವಾರ ಕರ್ನಾಟಕದ ಬ್ಯಾಟ್ಸ್‌ಮನ್‌ಗಳ ಅಬ್ಬರದ ಮುಂದೆ ಎದುರಾಳಿ ತಂಡ ಪಂದ್ಯ ಮುಗಿಯುವ ಮೊದಲೇ ಸೋತು ಹೋಗಿದೆ. ರಾಜ್ಯ ತಂಡ ಮೊದಲ ಇನಿಂಗ್ಸ್‌ನಲ್ಲಿ 175 ಓವರ್‌ಗಳಲ್ಲಿ 9 ವಿಕೆಟ್‌ ನಷ್ಟಕ್ಕೆ 719 ರನ್‌ ಗಳಿಸಿದೆ.

ಮೊದಲ ಇನಿಂಗ್ಸ್‌ ಆರಂಭಿಸಿರುವ ಉತ್ತರ ಪ್ರದೇಶ ಮೂರು ಓವರ್‌ಗಳಲ್ಲಿ ವಿಕೆಟ್‌ ನಷ್ಟವಿಲ್ಲದೇ 10 ರನ್‌ ಗಳಿಸಿದೆ.

 ರಾಹುಲ್‌ ಮೇನಿಯಾ: ಮೊದಲ ದಿನದಾಟದಲ್ಲಿ 4 ವಿಕೆಟ್ ನಷ್ಟಕ್ಕೆ 326 ರನ್‌ ಗಳಿಸಿದ್ದ ಕರ್ನಾಟಕ ಎರಡನೇ ದಿನ ರನ್‌ ಹೊಳೆಯನ್ನೇ ಹರಿಸಿತು. ರಾಹುಲ್‌ ತ್ರಿಶತಕ ಮತ್ತು ಅಬ್ರಾರ್‌ ಖಾಜಿ ಶತಕದ ನೆರವಿನಿಂದ ಶುಕ್ರವಾರ 393 ರನ್‌ ಕಲೆ ಹಾಕಿತು. ದಿನದಾಟದ ಮೊದಲ ಅವಧಿಯ ಪಿಚ್‌ ವೇಗದ ಬೌಲರ್‌ ಗಳಿಗೆ ನೆರವಾಗುತ್ತಿದ್ದ ಕಾರಣ ರಾಹುಲ್‌ ಎಚ್ಚರಿಕೆಯಿಂದ ಆಡಿದರು. ಅನುಭವಿ ವೇಗಿ ಪ್ರವೀಣ್‌ ಕುಮಾರ್ ಎಸೆತಗಳನ್ನು ಅತ್ಯಂತ ರಕ್ಷಣಾತ್ಮಕವಾಗಿ ಎದುರಿಸಿದರು.

ರಾಹುಲ್‌ ಭೋಜನ ವಿರಾಮದ ವೇಳೆಗೆ 220 ರನ್‌ ಗಳಿಸಿದ್ದರು. ಬಳಿಕ ವೇಗದ ಆಟಕ್ಕೆ ಒತ್ತು ನೀಡಿದರು. ಸ್ಪಿನ್‌ ಬೌಲರ್‌ಗಳನ್ನೇ ಗುರಿಯಾಗಿರಿಸಿಕೊಂಡು ಹೆಚ್ಚು ರನ್‌ಗಳನ್ನು ಬಾರಿಸಿದರು. 11 ಗಂಟೆ ಹತ್ತು ನಿಮಿಷ ಕ್ರೀಸ್‌ನಲ್ಲಿದ್ದ ಬಲಗೈ ಬ್ಯಾಟ್ಸ್‌ಮನ್‌ ಒಟ್ಟು 337 ರನ್‌ ಗಳಿಸಿ  ರಾಜ್ಯ ರಣಜಿ ಕ್ರಿಕೆಟ್‌ನಲ್ಲಿ ಹೊಸ ಇತಿಹಾಸ ಬರೆದರು.

ಪ್ರಥಮ ದರ್ಜೆ ಮತ್ತು ರಣಜಿ ಕ್ರಿಕೆಟ್‌ನಲ್ಲಿ ಕರ್ನಾಟಕದ ಯಾವ ಆಟಗಾರನೂ ತ್ರಿಶತಕ ಗಳಿಸಿರಲಿಲ್ಲ. 2004-05ರಲ್ಲಿ ಬೆಂಗಳೂರಿನಲ್ಲಿ  ರೋಲಂಡ್‌ ಬ್ಯಾರಿಂಗ್ಟನ್‌ 283 ರನ್‌ ಗಳಿಸಿದ್ದು ಹಿಂದಿನ ದಾಖಲೆಯಾಗಿತ್ತು. ಮಧ್ಯಪ್ರದೇಶ ಎದುರಿನ ಪಂದ್ಯದಲ್ಲಿ ರೋಲಂಡ್‌ ಈ ಸಾಧನೆ ಮಾಡಿದ್ದರು. ಈಗ ರಾಹುಲ್ ಅದನ್ನು ಅಳಿಸಿ ಹಾಕಿದರು.

ವಲ್ಚರ್ಸ್‌ ಕ್ರಿಕೆಟ್‌ ಕ್ಲಬ್‌ ಪ್ರತಿನಿಧಿಸುವ ರಾಹುಲ್‌ ಬೌಂಡರಿಗಳ (47) ಮೂಲಕವೇ 188 ರನ್‌ ಗಳಿಸಿದರು. ನಾಲ್ಕು ಸಿಕ್ಸರ್‌ ಬಾರಿಸಿದರು. ರಾಹುಲ್‌ ಅಬ್ಬರದ ಬ್ಯಾಟಿಂಗ್‌ ಹೇಗಿತ್ತು ಎನ್ನುವುದಕ್ಕೆ ಈ ಅಂಕಿಅಂಶವೇ ಸಾಕ್ಷಿ.

ರಾಹುಲ್ ಅವರನ್ನು ಔಟ್‌ ಮಾಡಲು ಎದುರಾಳಿ ವೇಗಿ ಪ್ರವೀಣ್‌  ಹಲವು ಬಾರಿ ದಿಕ್ಕು ಬದಲಿಸಿ ಬೌಲಿಂಗ್ ಮಾಡಿದರು. ಪೆವಿಲಿಯನ್‌ ತುದಿ ಮತ್ತು ಅದರ ಎದುರಿನಿಂದ ಬೌಲ್‌ ಮಾಡಿ ಕರ್ನಾಟಕದ ಬ್ಯಾಟ್ಸ್‌ಮನ್‌ನನ್ನು ಗೊಂದಲಕ್ಕೆ ಸಿಲುಕಿಸಲು ಯತ್ನಿಸಿದರು. ಆದರೆ, ಇವರ ತಂತ್ರಕ್ಕೆ ರಾಹುಲ್‌ ಕೊಂಚವೂ ಅಂಜಲಿಲ್ಲ. ರಾಹುಲ್‌ ವಿಕೆಟ್‌್ ಲಭಿಸದೆ ಪರದಾಡಿದ ಪ್ರವೀಣ್‌ ಬೇರೆ ದಾರಿಯಿಲ್ಲದೇ ಸ್ಪಿನ್ನರ್‌ಗಳ ಕೈಗೆ ಚೆಂಡು ನೀಡಿದರು. ಆಗ ರಾಹುಲ್‌ ಆಟದ ಸೊಬಗು ಅನಾವರಣಗೊಂಡಿತು.

ನೇರ ಡ್ರೈವ್, ಲಾಂಗ್ ಆನ್‌, ಲಾಂಗ್‌ ಆಫ್‌ ಮತ್ತು ಮಿಡ್‌ವಿಕೆಟ್‌ ಬಳಿ ಕೇಂದ್ರಿಕರಿಸಿ ಆಡಿದ ರಾಹುಲ್‌ ಸ್ಪಿನ್ನರ್‌ಗಳಾದ ಅಲಿ ಮುರ್ತಜಾ ಮತ್ತು ಕುಲದೀಪ್ ಯಾದವ್ ಅವರ ಬೆವರಿಳಿಸಿದರು. ಈ ಇಬ್ಬರೂ ಬೌಲರ್‌ಗಳು ಕ್ರಮವಾಗಿ 178 ಮತ್ತು 168 ರನ್ ನೀಡಿದ್ದು ಇದಕ್ಕೆ ಸಾಕ್ಷಿ.

ರನ್‌ ಗಳಿಸುವ ಭರದಲ್ಲಿ ರಾಹುಲ್‌ 162ನೇ ಓವರ್‌ನಲ್ಲಿ ಮುರ್ತಜಾ ಕೈಗೆ ಕ್ಯಾಚ್‌ ನೀಡಿದರು. ಅವರು ಪೆವಿಲಿಯನ್‌ನತ್ತ ಹೋಗುತ್ತಿದ್ದಾಗ ಉತ್ತರ ಪ್ರದೇಶದ ಆಟಗಾರರು ರಾಹುಲ್‌ ಬಳಿ ಬಂದು ಅಭಿನಂದಿಸಿದರು. ಆಗ ಅಭಿಮಾನಿಗಳು ಎದ್ದುನಿಂತು ಚಪ್ಪಾಳೆ ತಟ್ಟಿದರು.

ಕೊನೆಗೂ ನೀಗಿದ ತ್ರಿಶತಕದ ಬರ
ರಣಜಿ ಮತ್ತು ಪ್ರಥಮ ದರ್ಜೆ ಕ್ರಿಕೆಟ್‌ ಇತಿಹಾಸದಲ್ಲಿ ಕರ್ನಾಟಕದ ಯಾವ ಆಟಗಾರ ಕೂಡ ತ್ರಿಶತಕ ಗಳಿಸಿರಲಿಲ್ಲ. ಕರ್ನಾಟಕ 1934ರಲ್ಲಿ ಮೊದಲ ರಣಜಿ ಆಡಿತ್ತು. ಆಗಿನಿಂದಲೂ ಯಾರಿಗೂ ಈ ಸಾಧನೆ ಮಾಡಲು ಆಗಿರಲಿಲ್ಲ. ಕರ್ನಾಟಕದ ವಿರುದ್ಧ ಇದುವರೆಗೆ ಮೂವರು ಆಟಗಾರರು ತ್ರಿಶತಕ ಬಾರಿಸಿದ್ದಾರೆ. 2000ರಲ್ಲಿ ವಿ.ವಿ.ಎಸ್‌. ಲಕ್ಷ್ಮಣ್‌ (353), 2013ರಲ್ಲಿ ಚೇತೇಶ್ವರ ಪೂಜಾರ (352) ಮತ್ತು 1967ರಲ್ಲಿ ಅಜಿತ್ ವಾಡೇಕರ್‌ (323) ಮುನ್ನೂರಕ್ಕಿಂತಲೂ ಹೆಚ್ಚು ರನ್‌ ಗಳಿಸಿದ್ದರು. ಆದರೆ, 81 ವರ್ಷಗಳಿಂದ ಕಾಡಿದ್ದ ಈ ನಿರಾಸೆಯನ್ನು ರಾಹುಲ್‌ ದೂರ ಮಾಡಿದರು.

443 ರನ್‌ ಗರಿಷ್ಠ ಸ್ಕೋರು
ರಣಜಿ ಇತಿಹಾಸದಲ್ಲಿ ವೈಯಕ್ತಿಕ ಗರಿಷ್ಠ ಸ್ಕೋರು ಗಳಿಸಿದ ದಾಖಲೆ ಮಹಾರಾಷ್ಟ್ರದ ಬಿ.ಬಿ. ನಿಂಬಾಳ್ಕರ್‌ ಅವರ ಹೆಸರಿನಲ್ಲಿದೆ. 1948-–49ರಲ್ಲಿ ಪುಣೆಯಲ್ಲಿ ನಡೆದ ಕಾಥೇವಾಡ ಎದುರಿನ ಪಂದ್ಯದಲ್ಲಿ ಅವರು ಅಜೇಯ 443 ರನ್‌ ಗಳಿಸಿದ್ದರು.

ಸುಂದರ ಜೊತೆಯಾಟ: ರಾಹುಲ್‌ ಅವರ ಸೊಗಸಾದ ಆಟಕ್ಕೆ ಅಬ್ರಾರ್‌ ಖಾಜಿ ಉತ್ತಮ ಬೆಂಬಲ ನೀಡಿ ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಚೊಚ್ಚಲ ಶತಕ ಗಳಿಸಿದರು. ಎಡಗೈ ಬ್ಯಾಟ್ಸ್‌ಮನ್‌ ಖಾಜಿ 29 ರನ್‌ ಗಳಿಸಿದ್ದ ವೇಳೆ ಮುಕುಲ್‌ ಔವರ್‌ನಲ್ಲಿ ಕ್ಯಾಚ್‌ ನೀಡಿ ಕ್ರೀಸ್‌ನಿಂದ ಹೊರ ನಡೆದಿದ್ದರು. ಅದೃಷ್ಟವೆಂದರೆ ಆ ಎಸೆತ ನೋ ಬಾಲ್‌ ಆಗಿತ್ತು!

ಇದೇ ಅವಕಾಶವನ್ನು ಬಳಸಿಕೊಂಡ ಖಾಜಿ ಅಜೇಯ 117 ರನ್ ಕಲೆ ಹಾಕಿದರು. ನಾಲ್ಕು ಗಂಟೆ 12 ನಿಮಿಷ ಕ್ರೀಸ್‌ನಲ್ಲಿದ್ದ ಈ ಬ್ಯಾಟ್ಸ್‌ಮನ್ 14 ಬೌಂಡರಿ ಮತ್ತು ನಾಲ್ಕು ಸಿಕ್ಸರ್‌ ಸಿಡಿಸಿದರು. ರಾಹುಲ್‌ ಮತ್ತು ಖಾಜಿ ಏಳನೇ ವಿಕೆಟ್‌ಗೆ 225 ರನ್‌ ಕಲೆ ಹಾಕಿ 37 ವರ್ಷಗಳ ದಾಖಲೆ ಅಳಿಸಿ ಹಾಕಿದರು.

1977-78ರಲ್ಲಿ ಜಿ.ಆರ್. ವಿಶ್ವನಾಥ್‌ ಮತ್ತು ಎ.ವಿ. ಜಯಪ್ರಕಾಶ್‌ ಅವರು ಮೋಹನ್‌ ನಗರದಲ್ಲಿ ನಡೆದ ಉತ್ತರ ಪ್ರದೇಶ ಎದುರಿನ ಪಂದ್ಯದಲ್ಲಿ ಏಳನೇ ವಿಕೆಟ್‌ಗೆ 152 ರನ್‌ ಗಳಿಸಿದ್ದು ಹಿಂದಿನ ದಾಖಲೆಯಾಗಿತ್ತು.

ಶ್ರೇಯಸ್‌ಗೆ ನಿರಾಸೆ:
ಭರವಸೆಯ ಬ್ಯಾಟ್ಸ್‌ಮನ್‌ ಶ್ರೇಯಸ್‌ ಗೋಪಾಲ್‌ ಮೊದಲ ದಿನ 88 ರನ್‌ ಗಳಿಸಿ ಕ್ರೀಸ್‌ನಲ್ಲಿದ್ದರು. ಆದರೆ, ಶುಕ್ರವಾರ ಎರಡು ರನ್ ಗಳಿಸಿ ಪ್ರವೀಣ್‌ ಎಸೆತದಲ್ಲಿ ಔಟಾಗಿ ಈ ಸಲದ ರಣಜಿಯಲ್ಲಿ ಮೂರನೇ ಶತಕ ಗಳಿಸುವ ಅವಕಾಶ ತಪ್ಪಿಸಿಕೊಂಡರು. ‌ಆದರೆ, ರಾಹುಲ್‌ ಅಬ್ಬರ ಮತ್ತು ಖಾಜಿ ಶತಕದ ಸೊಬಗಿನ ಮುಂದೆ ಶ್ರೇಯಸ್‌ ನಿರಾಸೆಯಲ್ಲಾ ಮಂಜಿನಂತೆ ಕರಗಿ ಹೋಯಿತು.

ಉತ್ತರ ಪ್ರದೇಶ ಎದುರಿನ ಪಂದ್ಯದಲ್ಲಿ ಶುಕ್ರವಾರದ ಅಂತ್ಯಕ್ಕೆ ಮೂಡಿ ಬಂದ ಪ್ರಮುಖ ದಾಖಲೆಗಳು
* ರಣಜಿ ಮತ್ತು ಪ್ರಥಮ ದರ್ಜೆ  ಕ್ರಿಕೆಟ್‌ನಲ್ಲಿ ತ್ರಿಶತಕ ಬಾರಿಸಿದ ರಾಜ್ಯದ ಮೊದಲ ಆಟಗಾರ ಕೆ.ಎಲ್. ರಾಹುಲ್. ಮಾಜಿ ಆಟಗಾರ ರೋಲಂಡ್‌ ಬ್ಯಾರಿಂಗ್ಟನ್‌ (283 ರನ್‌) ಹಿಂದಿನ ದಾಖಲೆ ಹೊಂದಿದ್ದರು.
* 337: ಇದು ರಣಜಿ ಮತ್ತು ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ರಾಹುಲ್‌ ಗಳಿಸಿದ ವೈಯಕ್ತಿಕ ಗರಿಷ್ಠ ಸ್ಕೋರು ಇದು. ಇದೇ ವರ್ಷದ ದುಲೀಪ್‌ ಟ್ರೋಫಿಯ ಕೇಂದ್ರ ವಲಯ ಎದುರು 185 ರನ್‌ ಗಳಿಸಿದ್ದು ಹಿಂದಿನ ಹೆಚ್ಚು ಮೊತ್ತವೆನಿಸಿತ್ತು. ಆಗ ಅವರು ದಕ್ಷಿಣ ವಲಯ ತಂಡವನ್ನು ಪ್ರತಿನಿಧಿಸಿದ್ದರು.

* ರಣಜಿ ಟ್ರೋಫಿಯಲ್ಲಿ ಕರ್ನಾಟಕದ ಪರ ಹೆಚ್ಚು ದ್ವಿಶತಕಗಳನ್ನು ಬಾರಿಸಿ ದವರು. ರಾಹುಲ್‌ ದ್ರಾವಿಡ್‌ (5), ರೋಲಂಡ್‌ ಬ್ಯಾರಿಂಗ್ಟನ್‌ (3), ವಿಜಯ್‌ ಭಾರದ್ವಾಜ್‌ (2), ಜಿ.ಆರ್‌. ವಿಶ್ವನಾಥ್‌ (2) ಮತ್ತು ಸಿ.ಎಂ. ಗೌತಮ್‌ (2).
* ರಣಜಿಯಲ್ಲಿ ರಾಹುಲ್ ತ್ರಿಶತಕ ಬಾರಿಸಿದ ಭಾರತದ 28ನೇ ಆಟಗಾರ ಎನಿಸಿದ್ದಾರೆ.
* ಈ ಋತುವಿನಲ್ಲಿ ಒಟ್ಟು ವೈಯಕ್ತಿಕ ಗರಿಷ್ಠ ಮೊತ್ತ ಗಳಿಸಿದ ಕೀರ್ತಿ ರಾಹುಲ್‌ ಪಾಲಾಯಿತು. 2014ರ ಡಿಸೆಂಬರ್‌ನಲ್ಲಿ ರಾಜ್‌ಕೋಟ್‌ನಲ್ಲಿ ನಡೆದ ಸೌರಾಷ್ಟ್ರ ಎದುರಿನ ಪಂದ್ಯದಲ್ಲಿ ಪಂಜಾಬ್‌ ತಂಡದ ಮನ್‌ದೀಪ್‌ ಸಿಂಗ್‌ 235 ರನ್ ಗಳಿಸಿದ್ದು ಹಿಂದಿನ ಗರಿಷ್ಠ ಸ್ಕೋರು.
* 719ಕ್ಕೆ9 ಡಿಕ್ಲೇರ್ಡ್: ಇದು ಉತ್ತರ ಪ್ರದೇಶ ಎದುರು ಕರ್ನಾಟಕ ಗಳಿಸಿದ ಒಟ್ಟು ಗರಿಷ್ಠ ಮೊತ್ತ. 1997–98ರಲ್ಲಿ 617ಕ್ಕೆ9 ಡಿಕ್ಲೇರ್ಡ್‌ ಹಿಂದಿನ ಉತ್ತಮ ಮೊತ್ತವಾಗಿತ್ತು.
* ಉತ್ತರ ಪ್ರದೇಶ ಎದುರು ತ್ರಿಶತಕ ಗಳಿಸಿದ ಎರಡನೇ ಆಟಗಾರ ಎನ್ನುವ ಕೀರ್ತಿ ರಾಹುಲ್‌ ಪಾಲಾಯಿತು. 2012–13ರಲ್ಲಿ ಮಹಾರಾಷ್ಟದ ಕೇದಾರ್‌ ಜಾಧವ್‌ 327 ರನ್‌ ಗಳಿಸಿದ್ದರು.
* 337: ಉತ್ತರ ಪ್ರದೇಶ ಎದುರು ರಾಜ್ಯದ ಆಟಗಾರರೊಬ್ಬರು ಗಳಿಸಿದ ವೈಯಕ್ತಿಕ ಗರಿಷ್ಠ ಮೊತ್ತವಿದು. 1977–78ರಲ್ಲಿ ಜಿ.ಆರ್‌. ವಿಶ್ವನಾಥ್‌ 247 ರನ್‌ ಗಳಿಸಿದ್ದು ಹಿಂದಿನ ದಾಖಲೆ.
* ಈ ಸಲದ ರಣಜಿ ಋತುವಿನಲ್ಲಿ ತ್ರಿಶತಕ ಬಾರಿಸಿದ ಮೊದಲ ಆಟಗಾರ ರಾಹುಲ್‌
* ರಣಜಿ ಟ್ರೋಫಿಯಲ್ಲಿ ಶತಕ ಗಳಿಸಿದ ರಾಜ್ಯದ 73ನೇ ಆಟಗಾರ  ಖಾಜಿ.

ಸಂಕ್ಷಿಪ್ತ ಸ್ಕೋರ್‌
ಕರ್ನಾಟಕ ಮೊದಲ ಇನಿಂಗ್ಸ್‌ 175 ಓವರ್‌ಗಳಲ್ಲಿ 719ಕ್ಕೆ9 ಡಿಕ್ಲೇರ್ಡ್‌
(ಗುರುವಾರದ ಅಂತ್ಯಕ್ಕೆ 90 ಓವರ್‌ಗಳಲ್ಲಿ 246ಕ್ಕೆ4)

ಕೆ.ಎಲ್‌. ರಾಹುಲ್‌ ಸಿ. ಮುಕುಲ್‌ ದಾಗರ್‌ ಬಿ. ಅಲಿ ಮುರ್ತುಜಾ  337
ಶ್ರೇಯಸ್‌ ಗೋಪಾಲ್‌ ಬಿ. ಪ್ರವೀಣ್‌ ಕುಮಾರ್‌  90
ಸಿ.ಎಂ. ಗೌತಮ್‌ ಸ್ಟಂಪ್ಡ್‌ ಏಕಲವ್ಯ ದ್ವಿವೇದಿ ಬಿ. ಕುಲದೀಪ್‌ ಯಾದವ್‌  57
ಅಬ್ರಾರ್‌ ಖಾಜಿ  ಔಟಾಗದೆ  117
ಆರ್‌. ವಿನಯ್‌ ಕುಮಾರ್‌ ಎಲ್‌ಬಿಡಬ್ಲ್ಯು ಬಿ. ಪ್ರವೀಣ್‌ ಕುಮಾರ್‌  02
ಅಭಿಮನ್ಯು ಮಿಥುನ್‌ ಸಿ. ಅರಿಷ್‌ ಆಲಮ್‌ (ಬದಲಿ ಆಟಗಾರ) ಬಿ. ಅಮಿತ್‌ ಮಿಶ್ರಾ  08
ಎಸ್‌. ಅರವಿಂದ್‌ ಔಟಾಗದೆ  04
ಇತರೆ: (ಬೈ-–9, ಲೆಗ್‌ ಬೈ-–10, ವೈಡ್‌-–5, ನೋ ಬಾಲ್‌-–1)  25
ವಿಕೆಟ್‌ ಪತನ: 5-–329 (ಶ್ರೇಯಸ್‌; 92.2), 6-–434 (ಗೌತಮ್‌; 115.2),          7-–659 (ರಾಹುಲ್; 161.3), 8–-679 (ವಿನಯ್; 166.5), 9–-690 (ಮಿಥುನ್‌; 169.5).
ಬೌಲಿಂಗ್‌: ಪ್ರವೀಣ್‌ ಕುಮಾರ್‌ 36-–10-–88–-5, ಅಮಿತ್‌ ಮಿಶ್ರಾ 35–-6–-124–-1, ಇಮ್ತಿಯಾಜ್‌ ಅಹ್ಮದ್‌ 25-–4-–133-–0, ಕುಲದೀಪ್‌ ಯಾದವ್‌ 40-–4–-178–-1, ಅಲಿ ಮುರ್ತಜಾ 36-–3-–168–-2, ಉಮಾಂಗ್‌ ಶರ್ಮ 3-–0–-9–-0.
ಉತ್ತರ ಪ್ರದೇಶ ಮೊದಲ ಇನಿಂಗ್ಸ್‌ 3 ಓವರ್‌ಗಳಲ್ಲಿ ವಿಕೆಟ್‌ ನಷ್ಟವಿಲ್ಲದೆ 10
ತನ್ಮಯ್‌ ಶ್ರೀವಾತ್ಸವ್‌ ಬ್ಯಾಟಿಂಗ್‌  02
ಮುಕುಲ್‌ ದಾಗರ್‌ ಬ್ಯಾಟಿಂಗ್‌  08
ಬೌಲಿಂಗ್‌: ವಿನಯ್‌ ಕುಮಾರ್ 2-–0-–8–-0, ಅಭಿಮನ್ಯು ಮಿಥುನ್‌ 1-–0-–2–-0.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT