ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಥಾಯ್ಲೆಂಡ್ ಕಿನ್ನರಿ ‘ಫಿ ಫಿ’

Last Updated 1 ಮಾರ್ಚ್ 2014, 19:30 IST
ಅಕ್ಷರ ಗಾತ್ರ

ಪಾರದರ್ಶಕ ಪಚ್ಚೆ ಹಸಿರು ಬಣ್ಣದ ನೀರು. ಕನ್ನಡಕ ಧರಿಸಿ, ಉಸಿರಾಡಲು ಬಾಯಿಗೆ ಕೊಳವೆ ಇಟ್ಟುಕೊಂಡು ನೀರಿನಲ್ಲಿ ತಲೆಯಿಟ್ಟು ನೋಡಿದರೆ ಬಣ್ಣದ ಮೀನುಗಳು, ಕೋರಾಲ್‌ಗಳು ಕಾಣಿಸುತ್ತಾ, ಹೊಸ ಲೋಕ ಪ್ರವೇಶಿಸಿದಂತಾಗುತ್ತದೆ. ಲೈಫ್‌ ಜಾಕೆಟ್‌ ಧರಿಸಿರುವುದರಿಂದ ನೀರಿನಲ್ಲಿ ತೇಲುತ್ತಾ ನೀರೊಳಗಿನ ಲೋಕವನ್ನು ಬೆರಗಿನಿಂದ ನೋಡುತ್ತಾ ವಿಸ್ಮಯ ಲೋಕಕ್ಕೆ ಸಾಕ್ಷಿಯಾಗುತ್ತೇವೆ. ಈ ವಿಸ್ಮಯ ಲೋಕದ ಹೆಸರು ‘ಫಿ ಫಿ’.

ಥಾಯ್ಲೆಂಡ್‌ ದೇಶದ ಫುಕೆಟ್‌ ಪ್ರಾಂತ್ಯ ಮತ್ತು ಅಂಡಮಾನ್‌ ಸಮುದ್ರದ ನಡುವೆ ‘ಫಿ ಫಿ ದ್ವೀಪ’ಗಳಿವೆ. ಇಲ್ಲಿಗೆ ತಲುಪಲು ಫುಕೆಟ್‌ನ ಆಗ್ನೇಯ ದಿಕ್ಕಿನಲ್ಲಿ 50 ಕಿ.ಮೀ. ಸ್ಪೀಡ್‌ ಬೋಟ್‌ನಲ್ಲಿ ಪ್ರಯಾಣಿಸಬೇಕು. ಮಲಯಾ ಭಾಷೆಯಲ್ಲಿ ಇಲ್ಲಿ ಬೆಳೆಯುವ ಮ್ಯಾಂಗ್ರೂ ಮರಗಳಿಂದಾಗಿ ಈ ದ್ವೀಪಗಳನ್ನು ‘ಪುಲಾವ್‌ ಫಿ ಅ ಫಿ’ ಎಂದು ಕರೆಯಲಾಗುತ್ತದೆ; ಅದುವೇ ಈಗ ‘ಫಿ ಫಿ’ ಎಂದಾಗಿದೆ. ಫಿ ಫಿ ಡೊನ್‌, ಫಿ ಫಿ ಲೇ ಸೇರಿದಂತೆ ಒಟ್ಟು ಆರು ದ್ವೀಪಗಳು ಈ ಪರಿಸರದಲ್ಲಿವೆ. ಥಾಯ್ಲೆಂಡಿನ ಕ್ರಾಬಿ ಪ್ರಾಂತ್ಯಕ್ಕೆ ಇದು ಒಳಪಟ್ಟಿದೆ.

ಇಲ್ಲಿನ ಮೃದು ಮರಳಿನ ಬಿಳಿ ಮರಳ ಕಿನಾರೆ, ಹೆಚ್ಚು ಆಳವಿಲ್ಲದ, ಅಲೆಗಳ ಮೊರೆತವಿಲ್ಲದ ಸ್ವಚ್ಛವಾದ ನೀಲಿ ಸಮುದ್ರ, ಕೋರಾಲ್‌(ಹವಳ)ಗಳಿಂದಾಗಿ ತಿಳಿ ಹಸಿರು ಬಣ್ಣದ ನೀರು, ದಿಗಂತಕ್ಕೆ ಚಾಚಿದಂತಿರುವ ಹಸಿರು ಹೊದ್ದ ಸುಣ್ಣದ ಕಲ್ಲಿನ ಬೆಟ್ಟಗಳು– ಇವೆಲ್ಲ ಪ್ರವಾಸಿಗರನ್ನು ಕೈಬೀಸಿ ಕರೆಯುತ್ತವೆ. ಬಿಸಿಲನ್ನು ಚರ್ಮಕ್ಕೆ ಬಸಿದುಕೊಳ್ಳಲೆಂದೇ ವಿದೇಶಿಗರು ಇಲ್ಲಿಗೆ ಆಗಮಿಸುತ್ತಾರೆ. ವಿಶ್ವದ ಅತ್ಯಂತ ಸುಂದರ ಉಷ್ಣವಲಯದ ದ್ವೀಪವೆಂದೇ ಫಿ ಫಿ ಹೆಸರುವಾಸಿ. ಲಿಯಾನಾರ್ಡೊ ಡಿ ಕಾಪ್ರಿಯೋ ನಟಿಸಿದ್ದ ‘ದಿ ಬೀಚ್‌’ (2000) ಚಿತ್ರದಲ್ಲಿ ಫಿ ಫಿ ದ್ವೀಪ ಚಿತ್ರಣಗೊಂಡ ನಂತರವಂತೂ ಇಲ್ಲಿಗೆ ಬರುವ ಪ್ರವಾಸಿಗರ ಸಂಖ್ಯೆ ಇನ್ನಷ್ಟು ಹೆಚ್ಚಾಗಿದೆ. ಈ ದ್ವೀಪಗಳು ಥಾಯ್ಲೆಂಡಿನ ಅತ್ಯಂತ ಜನಪ್ರಿಯ ಪ್ರವಾಸಿ ಆಕರ್ಷಣೆ.

ಸಮುದ್ರದೊಳಗೆ ಕಲ್ಲುಬಂಡೆಗಳ ಬುನಾದಿಯ ಮೇಲೆ ಹಲವಾರು ಆಕಾರಗಳಲ್ಲಿ, ಅನೇಕ ಬಣ್ಣಗಳಲ್ಲಿ ವಿವಿಧ ಜಾತಿಯ ಕೋರಾಲ್‌ಗಳು

ಬೆಳೆಯುತ್ತವೆ. ಫಿ ಫಿ ಸಮುದ್ರದ ದಂಡೆಗಳು ಈ ಕೋರಾಲ್‌ ಅಥವಾ ಹವಳದ ದಂಡೆಗಳಿಂದ ಕೂಡಿವೆ. ಈ ಹವಳದ ದಂಡೆಗಳು ಸೂಕ್ಷ್ಮ ಜೀವಿಗಳಿಂದ ರೂಪುಗೊಳ್ಳುತ್ತವೆ. ಸಮುದ್ರದ ನೀರಿನಿಂದ ಕ್ಯಾಲ್ಸಿಯಂ ಉಪಯೋಗಿಸಿಕೊಂಡು ಈ ಜೀವಿಗಳು ಹವಳದ ಕೋಶಗಳನ್ನು ಕಟ್ಟುತ್ತವೆ.

ಇವಕ್ಕೆ ಸೂರ್ಯನ ಬೆಳಕೂ ಬೇಕು ಮತ್ತು ಸಮುದ್ರದ ನೀರೂ ಬೇಕು. ಹಾಗಾಗಿ ಕಡಿಮೆ ಆಳದಲ್ಲಿ ಸಮುದ್ರದ ಕಲ್ಲಿನ ತಳ ಇರುವುದರಿಂದ ಮತ್ತು ವಿಶಾಲ ಸಮುದ್ರದ ಅಲೆಗಳ ಹೊಡೆತ ಇಲ್ಲದುದರಿಂದ ಫಿ ಫಿ ದ್ವೀಪಗಳ ಸುತ್ತ ಹವಳದ ದಂಡೆಗಳು ರೂಪುಗೊಳ್ಳಲು ಪ್ರಶಸ್ತ ಜಾಗವಾಗಿದೆ. ಇಲ್ಲಿನ ಸಮುದ್ರದ ಸ್ಪಟಿಕ ಶುಭ್ರತೆಗೆ ಮತ್ತು ಅದರ ತಿಳಿ ಹಸಿರು ಬಣ್ಣಕ್ಕೆ ಈ ಹವಳದ ತಳವೇ ಕಾರಣ. 

ಫಿ ಫಿ ಗೆ ಹೋಗಲು ದೋಣಿಯೊಂದೇ ಸಾಧನ. ನೀರಿನಲ್ಲಿ ಹೋಗುವಾಗ ಹಲವಾರು ನಡುಗಡ್ಡೆಗಳು, ದ್ವೀಪಗಳು, ಸಮುದ್ರವನ್ನು ಕಡೆಯಲು ನಿಲ್ಲಿಸಿರುವಂತೆ, ನೀರಿನಿಂದ ಮೇಲೆ ಬೆಳೆದು ನಿಂತಂತೆ ಇರುವ ಎತ್ತರದ ಸುಣ್ಣದ ಕಲ್ಲಿನ ಪರ್ವತಗಳು ಸಿಗುತ್ತವೆ.

2004ರಲ್ಲಿ ಸುನಾಮಿ ಹೊಡೆತಕ್ಕೆ ಫಿ ಫಿ ದ್ವೀಪಗಳು ಜರ್ಝರಿತಗೊಂಡಿದ್ದವು. ಸುಮಾರು 18 ಅಡಿ ಎತ್ತರದ ಅಲೆಗಳು ಅಪ್ಪಳಿಸಿದ ರಭಸಕ್ಕೆ ಈ ದ್ವೀಪಗಳಲ್ಲಿದ್ದ ಸಾವಿರಾರು ಮಂದಿ ನೀರುಪಾಲಾದರು.

ಒಂದು ವರ್ಷದ ತರುವಾಯ ಹಲವಾರು ಸ್ವಯಂಸೇವಕರು ಆಗಮಿಸಿ ದ್ವೀಪವನ್ನು ಸ್ವಚ್ಛಗೊಳಿಸಿದರು. ಸುಮಾರು 23 ಸಾವಿರ ಟನ್‌ ತ್ಯಾಜ್ಯವನ್ನು ನೀರು ಹಾಗೂ ದ್ವೀಪದಿಂದ ಹೊರಕ್ಕೆ ಸಾಗಿಸಿ ಹವಳಗಳು ಮರುಜೀವಗೊಳ್ಳಲು ಶ್ರಮಿಸಿದರು. ಸುನಾಮಿ ಬಂದಿದ್ದ ಕುರುಹೂ ಉಳಿಯದಂತೆ ಪರಿಸರವನ್ನಿಲ್ಲಿ ಸಂರಕ್ಷಿಸಲಾಗಿದೆ.
ಫಿ ಫಿ ದ್ವೀಪಗಳಿಗೆ ಭೇಟಿ ನೀಡಲು ಸೂಕ್ತ ಸಮಯ ನವೆಂಬರ್‌–ಏಪ್ರಿಲ್ ನಡುವಣ ಅವಧಿ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT