ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಥಾಯ್‌ ಖಾದ್ಯಗಳ ಮೆರವಣಿಗೆ

ರಸಾಸ್ವಾದ
Last Updated 26 ಆಗಸ್ಟ್ 2015, 19:44 IST
ಅಕ್ಷರ ಗಾತ್ರ

ನಗರದ ಬಾರ್ಬೆಕ್ಯು ಪ್ರಿಯರಿಗೆ ಭರ್ಜರಿ ರಸದೌತಣ ಒದಗಿಸುತ್ತ ಬಂದಿರುವ ಬಾರ್ಬೆಕ್ಯು ನೇಷನ್‌ನಲ್ಲಿ ಈಗ ‘ಸವಾತ್‌ದೀ’ ಎಂಬ ಥಾಯ್‌ ಆಹಾರೋತ್ಸವ ನಡೆಯುತ್ತಿದೆ. ಥಾಯ್‌ನಲ್ಲಿ ಸವಾತ್‌ದೀ ಅಂದರೆ ‘ಹಲೋ’ ಎಂದರ್ಥ. ಈ ಆಹಾರೋತ್ಸವ ಆಗಸ್ಟ್‌ 30ರವರೆಗೆ ನಡೆಯಲಿದೆ.

ಥಾಯ್‌ ಖಾದ್ಯಗಳ ಮಾರುಕಟ್ಟೆ ಈಗ ಅಂತರರಾಷ್ಟ್ರೀಯ ಮಟ್ಟಕ್ಕೂ ವಿಸ್ತರಿಸಿದೆ. ಘಮಘಮಿಸುವ ಪರಿಮಳ ಹೊಂದಿರುವ ಥಾಯ್‌ ತಿನಿಸುಗಳು ಎಲ್ಲ ದೇಶದ ಆಹಾರಪ್ರಿಯರ ತಟ್ಟೆಯಲ್ಲಿ ಕಾಣಿಸಿಕೊಂಡು ಬಹಳ ವರ್ಷಗಳೇ ಆಗಿವೆ. ಥಾಯ್‌ ತಿನಿಸುಗಳನ್ನು ಇಷ್ಟಪಡುವ ನಗರದ ಗ್ರಾಹಕರನ್ನು ಗಮನದಲ್ಲಿರಿಸಿಕೊಂಡು ಇಲ್ಲಿನ ಮುಖ್ಯ ಬಾಣಸಿಗ ವಿಜಯ್‌ ಬಕ್ಷಿ ಉತ್ಸವದ ಮೆನು ಸಿದ್ಧಪಡಿಸಿದ್ದಾರೆ. ಥಾಯ್‌ ಖಾದ್ಯಗಳ ಪಟ್ಟಿಯಲ್ಲಿ ಜನಪ್ರಿಯತೆ ಪಡೆದಿರುವ ಬಹುತೇಕ ತಿನಿಸುಗಳನ್ನು ಸವಿಯುವ ಅವಕಾಶ ಇಲ್ಲಿ ಲಭ್ಯವಿದೆ.

ಚೀಸ್‌ ಚಿಲ್ಲಿ ಮಶ್ರೂಮ್‌, ತಂದೂರ್‌ ಕ ಕೇಲಾ, ಕಫೀರ್‌ ಬಟರ್‌ ರೋಸ್ಟೆಡ್‌ ಕಾರ್ನ್‌, ಲ್ಯಾಮ್‌ಪಂಗ್‌ ತೋಫು  ಸ್ಟಾರ್ಟರ್‌ಗಳು ಸಸ್ಯಾಹಾರಿಗಳ ಊಟಕ್ಕೆ ಉತ್ತಮ ಆರಂಭ ನೀಡುತ್ತವೆ. ಹಿಕರಿ ವಿಂಗ್ಸ್‌, ಫಿಶ್‌ ಟಿಕ್ಕಾ, ಘಮಘಮಿಸುವ ಚಿಕನ್‌, ಮಟನ್‌ ಶೀಕ್‌, ಪಟ್ಟಾಯ ಸೀಫುಡ್‌ ಕೇಕ್ಸ್‌ ನಾನ್‌ವೆಜ್‌ ಪ್ರಿಯರ ಹಸಿವಿನ ದಾಹಕ್ಕೆ ರಸದೌತಣ ಒದಗಿಸುತ್ತವೆ. ಸ್ಟಾರ್ಟರ್‌ಗಳನ್ನು ಟೇಬಲ್‌ಗೆ ಸರ್ವ್‌ ಮಾಡುವ ಮುನ್ನ ವೇಟರ್‌ ಬಾವುಟವೊಂದನ್ನು ಟೇಬಲ್‌ ಮೇಲೆ ತಂದಿರಿಸುತ್ತಾನೆ.

ಸ್ಟಾರ್ಟರ್‌ಗಳೆಲ್ಲವನ್ನೂ ಟೇಬಲ್‌ನಲ್ಲೇ ಕುಳಿತು ಅನಿಯಮಿತವಾಗಿ ತಿನ್ನುವ ಅವಕಾಶ ಗ್ರಾಹಕರಿಗೆ ಇದೆ. ಸ್ಟಾರ್ಟರ್‌ಗಳು ಸಾಕೆನ್ನಿಸಿದಾಗ ಬಾವುಟವನ್ನು ಬಗ್ಗಿಸಿದರೆ ಮಾತ್ರ ಅವುಗಳ ಸರಬರಾಜು ಬಂದ್‌ ಆಗುತ್ತದೆ. ಸ್ಟಾರ್ಟರ್ಸ್‌ ರುಚಿ ನೋಡಿದ ನಂತರ ಥಾಯ್‌ ಸ್ಟ್ರೀಟ್‌ ಫುಡ್‌ ಸವಿ ನೋಡುವ ಅವಕಾಶ ಈ ಉತ್ಸವದಲ್ಲಿದೆ. ಅದಕ್ಕೆಂದೇ ಹೆಚ್ಚುವರಿಯಾಗಿ ‘ಸತಾಯ್‌ ಜಂಕ್ಷನ್‌’ ತೆರೆಯಲಾಗಿದೆ.

‘ಭಾರತೀಯರು ಆಹಾರಪ್ರಿಯರು. ಹೊಸ ತಿನಿಸುಗಳ ಸವಿರುಚಿಯನ್ನು ಅನುಭವಿಸಲು ಇಷ್ಟಪಡುವವರು. ಗ್ರಿಲ್ಡ್‌ ಫುಡ್‌ ನಮ್ಮ ರೆಸ್ಟೋರೆಂಟ್‌ನ ಬ್ರಹ್ಮಾಸ್ತ್ರವಿದ್ದಂತೆ. ವೈವಿಧ್ಯಮಯ ಗ್ರಿಲ್ಡ್‌ ಖಾದ್ಯಗಳೇ ನಮ್ಮ ಬಲ. ವಿಶ್ವದ ಎಲ್ಲ ಬಗೆಯ ಆಹಾರಗಳನ್ನು ನಾವು ನಮ್ಮದೇ ಶೈಲಿಯಲ್ಲಿ ಉಣಬಡಿಸುವ ಪರಿಪಾಠ ಇರಿಸಿಕೊಂಡು ಬಂದಿದ್ದೇವೆ.

ಅದರಲ್ಲಿ ಯಶಸ್ಸನ್ನೂ ಕಂಡಿದ್ದೇವೆ. ಈ ಬಾರಿಯ ಥಾಯ್‌ ಆಹಾರೋತ್ಸವದಲ್ಲಿ ನಾವು ಅಲ್ಲಿನ ದಿ ಬೆಸ್ಟ್‌ ತಿನಿಸುಗಳನ್ನು ಸವಿಯುವ ಅವಕಾಶ ಕಲ್ಪಿಸಿದ್ದೇವೆ. ಗ್ರಾಹಕರು ಬಾರ್ಬೆಕ್ಯು ಶೈಲಿಯಲ್ಲಿ ರುಚಿಕಟ್ಟಾದ ಥಾಯ್‌ ತಿನಿಸುಗಳನ್ನು ಸವಿಯಲು ನಮ್ಮ ಬಾಣಸಿಗರು ನೆರವಾಗುತ್ತಾರೆ’ ಎನ್ನುತ್ತಾರೆ ಬಾರ್ಬೆಕ್ಯು ನೇಷನ್‌ನ ಉದಯ್‌ ಮೆನನ್‌.

ಉತ್ಸವದ ಮುಖ್ಯ ಮೆನುವಿನಲ್ಲಿ ಚಿಕನ್‌ ಬಿರಿಯಾನಿ, ಮಟನ್‌ ಗ್ರೇವಿ, ಫಿಶ್‌ ಥಾಯ್‌ ಗ್ರೀನ್‌ ಕರಿ, ಕ್ರ್ತಾಬ್ಸ್‌ ಚಿಲ್ಲಿ ಗಾರ್ಲಿಕ್‌ ಸಾಸ್‌, ಥಾಯ್‌ ಶೈಲಿಯ ನೂಡಲ್ಸ್‌, ಪನ್ನೀರ್‌ ಟಿಕ್ಕಾ ಮಖಾನ್‌ ಪಾಲಕ್‌, ಆಲೂ ಗೋಬಿ ಮೇಥಿ, ಯೆಲ್ಲೋ ಥಾಯ್‌ ಕರಿ, ಆಲೂ ಬುಕಾರ ಬಿರಿಯಾನಿ ಲಭ್ಯ ಇವೆ. ಇವುಗಳ ಜೊತೆಗೆ ರೋಟಿ, ಕುಲ್ಚಾ, ನಾನ್‌, ಬಟರ್‌ನಾನ್‌ ಉತ್ತಮ ಕಾಂಬಿನೇಷನ್‌. ಊಟ ಮುಗಿಸಿದ ನಂತರ ಸಿಹಿ ಸವಿಯುವ ಮನಸ್ಸಿದ್ದವರಿಗೆ ಹತ್ತು ಬಗೆಯ ಡೆಸರ್ಟ್ಸ್‌ ಇರುತ್ತವೆ. ಇಲ್ಲಿಗೆ ಹೋದವರು ಬಾರ್ಬೆಕ್ಯೂ ನೇಷನ್‌ನ ಸಿಗ್ನೇಚರ್‌ ಡೆಸರ್ಟ್‌ ಎನಿಸಿಕೊಂಡಿರುವ ವೈವಿಧ್ಯಮಯ ಕುಲ್ಫಿಗಳನ್ನು ಮರೆಯದೇ ತಿನ್ನಬೇಕು.

‘ಥಾಯ್‌ ಆಹಾರೋತ್ಸವಕ್ಕೆ ನಾವು ಸಿದ್ಧಪಡಿಸಿರುವ ಮೆನುವಿನಲ್ಲಿ ಜನಪ್ರಿಯ ಥಾಯ್‌ ಫುಡ್‌ಗಳು ಸ್ಥಾನ ಪಡೆದಿವೆ. ಭಾರತೀಯರ ಖಾದ್ಯಗಳಿಗೂ ಥಾಯ್‌ ಖಾದ್ಯಗಳಿಗೂ ಹೆಚ್ಚಿನ ಸಾಮ್ಯವಿದೆ. ನಾವು ಬಳಸುವ ಮಸಾಲಾ ಪದಾರ್ಥಗಳನ್ನೇ ಅವರು ಬಳಕೆ ಮಾಡುತ್ತಾರೆ. ಆದರೆ, ಅವರು ತಯಾರಿಸುವ ಖಾದ್ಯಗಳ ರುಚಿಯಲ್ಲಿ ಭಿನ್ನತೆ ಇರುತ್ತದೆ. ಸ್ವಾದವೂ ಬೇರೆಯಾಗಿರುತ್ತದೆ.

ಈ ಉತ್ಸವದಲ್ಲಿನ ಥಾಯ್‌ ಖಾದ್ಯಗಳನ್ನು ಸವಿದವರಿಗೆ ಅಪ್ಪಟ ಶೈಲಿಯ ಥಾಯ್‌ ತಿನಿಸುಗಳನ್ನು ತಿಂದುಂಡ ಅನುಭವ ಸಿಗುತ್ತದೆ’ ಎನ್ನುತ್ತಾರೆ ಇಲ್ಲಿನ ಮುಖ್ಯ ಬಾಣಸಿಗ ವಿಜಯ್‌ ಬಕ್ಷಿ. ಬಿಸಿಬಿಸಿಯಾದ, ಬಾಯಲ್ಲಿ ನೀರೂರಿಸುವ ಉಪ್ಪು, ಹುಳಿ, ಖಾರ ಹದವಾಗಿ ಹಾಕಿ ತಯಾರಿಸಿದ ಥಾಯ್‌ ಖಾದ್ಯಗಳು ತಿನ್ನುವಾಗ ಮಜಾ ನೀಡುವುದಷ್ಟೇ ಅಲ್ಲದೇ ಒಂದೊಳ್ಳೆ ಊಟ ಸವಿದ ಅನುಭವವನ್ನೂ ಒದಗಿಸಿಕೊಡುತ್ತವೆ.  

*
ರೆಸ್ಟೋರೆಂಟ್‌: ಬಾರ್ಬೆಕ್ಯು ನೇಷನ್‌
ಮುಖ್ಯ ಬಾಣಸಿಗ:
ವಿಜಯ್‌ ಬಕ್ಷಿ
ಆಹಾರೋತ್ಸವದ ಹೆಸರು: ಥಾಯ್‌ ಫುಡ್‌ ಫೆಸ್ಟಿವಲ್‌
ಸಿಗ್ನೇಚರ್‌ ತಿನಿಸುಗಳು: ಟಾಮ್‌ ಯಮ್‌ ಕಾಯ್‌, ಚಮಚುರಿ ಪ್ರಾನ್ಸ್, ಪಟ್ಟಾಯ ಸೀಫುಡ್‌ ಕೇಕ್ಸ್‌.
ಸಮಯ: ಮಧ್ಯಾಹ್ನ ಮತ್ತು ರಾತ್ರಿ ಊಟಕ್ಕೆ ಲಭ್ಯವಿದೆ.
ಆಹಾರೋತ್ಸವ ಕೊನೆಗೊಳ್ಳುವ ದಿನಾಂಕ: ಆಗಸ್ಟ್‌ 30.
ಟೇಬಲ್‌ ಕಾಯ್ದಿರಿಸಲು: 080– 6060 0000.
ಇಬ್ಬರಿಗೆ ತಗಲುವ ವೆಚ್ಚ: ₹1600

ಸ್ಥಳ: ನಗರದಲ್ಲಿರುವ ಏಳು ಬಾರ್ಬೆಕ್ಯು ನೇಷನ್‌ ರೆಸ್ಟೋರೆಂಟ್‌ನಲ್ಲಿ ಈ ಉತ್ಸವ ನಡೆಯುತ್ತಿದ್ದು, ಗ್ರಾಹಕರು ತಮಗೆ ಹತ್ತಿರವಿರುವ ಔಟ್‌ಲೆಟ್‌ ಆಯ್ದುಕೊಳ್ಳಬಹುದು. (ಇಂದಿರಾ ನಗರ, ಕೋರಮಂಗಲ, ಜೆ.ಪಿ.ನಗರ, ಲಿಡೊ ಮಾಲ್‌ (ಎಂ.ಜಿ.ರಸ್ತೆ), ವೈಟ್‌ಫೀಲ್ಡ್‌ ರಸ್ತೆ, ಎಲೆಕ್ಟ್ರಾನಿಕ್‌ ಸಿಟಿ ಮತ್ತು ಕಮ್ಮನಹಳ್ಳಿ)
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT