ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದರ್ಶನ್‌, ನಿರ್ಮಲಾ ಅತ್ಯುತ್ತಮ ನಟ,ನಟಿ

2012ನೇ ಸಾಲಿನ ಚಲನಚಿತ್ರ ಪ್ರಶಸ್ತಿ
Last Updated 26 ಆಗಸ್ಟ್ 2014, 18:11 IST
ಅಕ್ಷರ ಗಾತ್ರ

ಬೆಂಗಳೂರು: 2012ನೇ ಸಾಲಿನ ಚಲನ­ಚಿತ್ರ ಪ್ರಶಸ್ತಿಗಳು ಪ್ರಕಟಗೊಂಡಿದ್ದು, ಎನ್‌. ಸುದರ್ಶನ್‌ ನಿರ್ದೇಶನದ ‘ತಲ್ಲಣ' ಪ್ರಥಮ ಅತ್ಯುತ್ತಮ ಚಿತ್ರ ಪ್ರಶಸ್ತಿ ಪಡೆದುಕೊಂಡಿದೆ. ಪಿ. ಶೇಷಾದ್ರಿ ನಿರ್ದೇ­ಶನದ ‘ಭಾರತ್‌ ಸ್ಟೋರ್ಸ್‌’ ಎರ­ಡನೆಯ ಹಾಗೂ ಸುಮನಾ ಕಿತ್ತೂರು ನಿರ್ದೇ­ಶನದ ‘ಎದೆಗಾರಿಕೆ’ ಮೂರನೆಯ ಅತ್ಯು­ತ್ತಮ ಚಿತ್ರ ಪ್ರಶಸ್ತಿಗೆ ಪಾತ್ರವಾಗಿವೆ.

ಪ್ರಥಮ ಬಹುಮಾನವು ₨ 1 ಲಕ್ಷ ನಗದು, 50 ಗ್ರಾಂ ಚಿನ್ನದ ಪದಕ, ದ್ವಿತೀಯ ಬಹುಮಾನ ₨ 75 ಸಾವಿರ ನಗದು, 100 ಗ್ರಾಂ ಬೆಳ್ಳಿ ಪದಕ, ತೃತೀಯ ಬಹು­ಮಾನ ₨ 50 ಸಾವಿರ ನಗದು ಮತ್ತು 100 ಗ್ರಾಂ ಬೆಳ್ಳಿ ಪದಕ ಒಳಗೊಂಡಿದೆ.

‘ಕ್ರಾಂತಿ­ವೀರ ಸಂಗೊಳ್ಳಿ ರಾಯಣ್ಣ ಚಿತ್ರದ ನಟನೆಗಾಗಿ ದರ್ಶನ್‌ ಅವ­­ರಿಗೆ ಅತ್ಯುತ್ತಮ ನಟ, ತಲ್ಲಣ ಚಿತ್ರ­ದಲ್ಲಿನ ನಟನೆಗೆ ನಿರ್ಮಲಾ ಚೆನ್ನಪ್ಪ ಅವರಿಗೆ ಅತ್ಯುತ್ತಮ ನಟಿ ಪ್ರಶಸ್ತಿ ಘೋಷಿ­ಸ­­ಲಾ­ಗಿದೆ’ ಎಂದು ಆಯ್ಕೆ ಸಮಿತಿ ಅಧ್ಯಕ್ಷ ಕೆ.ಸಿ.ಎನ್‌. ಚಂದ್ರ­ಶೇಖರ್‌ ಹೇಳಿದರು. ಈ ಪ್ರಶಸ್ತಿ­ಗಳು ತಲಾ ₨ 20 ಸಾವಿರ ನಗದು ಮತ್ತು ಬೆಳ್ಳಿ ಪದಕ ಒಳಗೊಂಡಿವೆ.

ಕನ್ನಡ ಚಿತ್ರರಂಗದ ಸಮಗ್ರ ಬೆಳವಣಿಗೆಗೆ ಕೊಡುಗೆ ನೀಡಿದವರಿಗೆ ಕೊಡುವ ಡಾ. ರಾಜ್‌ಕುಮಾರ್‌ ಪ್ರಶಸ್ತಿಗೆ ಎಂ. ಭಕ್ತವತ್ಸಲ, ಚಿತ್ರರಂಗಕ್ಕೆ ಅಪೂರ್ವ ಕೊಡುಗೆ ನೀಡಿದವರಿಗೆ ಕೊಡುವ ಪುಟ್ಟಣ್ಣ ಕಣಗಾಲ್‌ ಪ್ರಶಸ್ತಿಗೆ ಚಿ. ದತ್ತರಾಜ್‌, ಚಿತ್ರರಂಗದ ವಿವಿಧ ಕ್ಷೇತ್ರಗಳಲ್ಲಿ ಅಪೂರ್ವ ಸೇವೆ ಸಲ್ಲಿಸಿದ ಹಿರಿಯರಿಗೆ ನೀಡುವ ಡಾ. ವಿಷ್ಣುವರ್ಧನ್‌ ಪ್ರಶಸ್ತಿಗೆ ರಾಜೇಶ್‌ ಅವರು ಆಯ್ಕೆಯಾಗಿದ್ದಾರೆ. ಈ ಪ್ರಶಸ್ತಿಗಳು ತಲಾ ₨ 2 ಲಕ್ಷ ನಗದು ಮತ್ತು ಚಿನ್ನದ ಪದಕ ಒಳಗೊಂಡಿವೆ. ಈ ಮೂರೂ ಪ್ರಶಸ್ತಿಗಳನ್ನು ಜೀವಮಾನದ ಸಾಧನೆಗೆ ನೀಡಲಾಗುತ್ತದೆ.

ನಿರ್ಮಾಪಕರಿಗೆ ಅರ್ಪಣೆ
‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ಚಿತ್ರದ ನಿಜವಾದ ನಾಯಕರು ನಿರ್ಮಾಪಕ ಆನಂದ್ ಅಪ್ಪುಗೋಳ. ಈ ಪ್ರಶಸ್ತಿ­ಯನ್ನು ಅವರಿಗೆ ಅರ್ಪಿಸುವೆ. ಟ್ರೆಂಡ್ ಇಲ್ಲದ ಸಮ­ಯ­ದಲ್ಲಿ ದೊಡ್ಡ ಮೊತ್ತ ಹೂಡಿಕೆ ಮಾಡಿ ಸಿನಿಮಾ ನಿರ್ಮಿಸಿದರು. ಈ ಚಿತ್ರದ ಯಶಸ್ಸು ಮತ್ತು ಪ್ರಶಸ್ತಿ ಅವರಿಗೆ ಸಲ್ಲುತ್ತದೆ.
– ದರ್ಶನ್, ನಟ

‘ಕಾದಿದ್ದಕ್ಕೂ ಸಾರ್ಥಕ’


ಒಳ್ಳೆಯ ಚಿತ್ರದಲ್ಲಿ ನಟಿಸಬೇಕು ಎಂದುಕೊಂಡಿದ್ದೆ. ‘ತಲ್ಲಣ’ ಚಿತ್ರದಲ್ಲಿ ಅವಕಾಶ ದೊರೆಯಿತು. ಕೆಲವು ವರ್ಷ ಕಾದಿದ್ದಕ್ಕೆ ಒಳ್ಳೆಯ ಪಾತ್ರ ಮತ್ತು ಕಥೆ ಸಿಕ್ಕ ಸಾರ್ಥಕ್ಯ ನನಗಿದೆ. ಚಿಕ್ಕವಳಾದ ನನ್ನನ್ನು ಗುರುತಿಸಿ ದೊಡ್ಡ ಪ್ರಶಸ್ತಿ ಕೊಟ್ಟಿದ್ದಕ್ಕೆ ಸಂತಸವಾಗುತ್ತಿದೆ. ಮೊದಲ ಸಿನಿಮಾದಲ್ಲಿಯೇ ಒಳ್ಳೆಯ ಪಾತ್ರ ಕೊಟ್ಟ ನಿರ್ದೇಶಕರಿಗೆ ಕೃತಜ್ಞತೆ ಸಲ್ಲಿಸುವೆ
– ನಿರ್ಮಲಾ ಚೆನ್ನಪ್ಪ, ನಟಿ

ಪ್ರಶಸ್ತಿ ಬೇಡ
ನಾನು ನಿರ್ದೇಶಿಸಿದ ‘ಅಂಗೂಲಿಮಾಲಾ’ ಚಲನಚಿತ್ರದ ಕಥೆಗೆ ಘೋಷಿಸಿರುವ ಪ್ರಶಸ್ತಿಯನ್ನು ವಿನಯಪೂರ್ವಕಾಗಿ ನಿರಾಕರಿಸುತ್ತೇನೆ. ಕಥೆಯ ಮೂಲ ಹಂದರ ನನ್ನದಲ್ಲ. ಐತಿಹ್ಯ ಮತ್ತು ಚರಿತ್ರೆ ಆಧರಿಸಿ ನಾನು ಪುನರ್‌­ಸಂಯೋಜನೆ ಮತ್ತು ಪುನರ್‌ವ್ಯಾಖ್ಯಾನ ಮಾಡಿದ್ದೇನೆ. ಮೂಲ ಕಥಾ ಹಂದ­ರವು ವಿವಿಧ ಆಕರಗಳಿಂದ ಬಂದಿದ್ದು. ಆದ್ದರಿಂದ ಈ ಕಥೆಗೆ ನಾನು ಪ್ರಶಸ್ತಿ ಪಡೆ­ಯುವುದು ನೈತಿಕವಾಗಿ ಸರಿಯಲ್ಲ. ಈ ಕಥೆ ಐತಿಹ್ಯ ಮತ್ತು ಚರಿತ್ರೆ ಆಧರಿಸಿದ ಸೃಷ್ಟಿ ಎಂದು ನಮೂದಿಸಿದ್ದ ನೆನಪು ನನಗಿದೆ. ಇಷ್ಟಾದರೂ ಕಥಾ ವಿಭಾಗಕ್ಕೆ ನನ್ನನ್ನು ಪರಿಗಣಿಸಿ ‘ಸಮಾಧಾನಕರ ಬಹುಮಾನ’ ನೀಡಿದ ತೀರ್ಪುಗಾರರಿಗೆ ವಂದಿಸುವುದು ಸಹ ನನ್ನ ನೈತಿಕ ಜವಾಬ್ದಾರಿ ಎಂದು ಭಾವಿಸುತ್ತೇನೆ.
 – ಪ್ರೊ. ಬರಗೂರು ರಾಮಚಂದ್ರಪ್ಪ

ನಿರೀಕ್ಷೆ ಇರಲಿಲ್ಲ
ಸುದ್ದಿ ತಿಳಿದು ಖುಷಿಯಾಯಿತು. ದೊಡ್ಡ ಪ್ರಶಸ್ತಿಯ ನಿರೀಕ್ಷೆ ಇರಲಿಲ್ಲ. ಡಾ. ರಾಜ್‌ಕುಮಾರ್ ಪ್ರಶಸ್ತಿಗಾಗಿ ನನ್ನನ್ನು ಆಯ್ಕೆ ಮಾಡಿದ ಸಮಿತಿಗೆ ಹೃದಯತುಂಬಿದ ಕೃತಜ್ಞತೆ ಸಲ್ಲಿಸುತ್ತೇನೆ.
– ಎಂ. ಭಕ್ತವತ್ಸಲ

ರಾಜ್‌ ಸ್ಮರಣೆ
ಪುಟ್ಟಣ್ಣ ಕಣಗಾಲ್ ಅವರಂಥ ಮಹನೀಯರ ಹೆಸರಿನ ಪ್ರಶಸ್ತಿಯನ್ನು ಸರ್ಕಾರ ಕೊಟ್ಟಿದ್ದು ಖುಷಿ ತಂದಿದೆ. ಪುಟ್ಟಣ್ಣ ಅವರನ್ನು ಸ್ಮರಿಸಿಯೇ ಈ ಪ್ರಶಸ್ತಿ ಸ್ವೀಕರಿಸುವೆ. ಡಾ. ರಾಜ್‌ಕುಮಾರ್ ಅವರ ಆಶೀರ್ವಾದದಿಂದ ಬೆಳೆದವನು ನಾನು. ನನಗೆ ನಿರ್ದೇಶಕ ಎಂಬ ‘ಬೋರ್ಡ್‌’ ಹಾಕಿದವರು ಅವರೇ. ಇದರಲ್ಲಿ ನನ್ನದೇನೂ ಇಲ್ಲ.
– ಚಿ. ದತ್ತರಾಜ್

ಪುಟ್ಟಣ್ಣ ಕಣಗಾಲ್ ಅವರಂಥ ಮಹನೀಯರ ಹೆಸರಿನ ಪ್ರಶಸ್ತಿಯನ್ನು ಸರ್ಕಾರ ಕೊಟ್ಟಿದ್ದು ಖುಷಿ ತಂದಿದೆ. ಪುಟ್ಟಣ್ಣ ಅವರನ್ನು ಸ್ಮರಿಸಿಯೇ ಈ ಪ್ರಶಸ್ತಿ ಸ್ವೀಕರಿಸುವೆ. ಡಾ. ರಾಜ್‌ಕುಮಾರ್ ಅವರ ಆಶೀರ್ವಾದದಿಂದ ಬೆಳೆದವನು ನಾನು. ನನಗೆ ನಿರ್ದೇಶಕ ಎಂಬ ‘ಬೋರ್ಡ್‌’ ಹಾಕಿದವರು ಅವರೇ. ಇದರಲ್ಲಿ ನನ್ನದೇನೂ ಇಲ್ಲ. – ಚಿ. ದತ್ತರಾಜ್





 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT