ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಷ್ಟಪುಷ್ಟ ಕುರಿಗೆ...

ಎಣಿಕೆ ಗಳಿಕೆ-11
Last Updated 4 ಜುಲೈ 2016, 19:30 IST
ಅಕ್ಷರ ಗಾತ್ರ

ವರ್ಷದಲ್ಲಿ ಎರಡು ಬಾರಿ, ಅಂದರೆ ಆರು ತಿಂಗಳಿಗೊಮ್ಮೆ ಉಣ್ಣೆ ಕತ್ತರಿಸಬೇಕು. ಜೂನ್ ಮತ್ತು ಡಿಸೆಂಬರ್ ತಿಂಗಳಿಗೆ ಎರಡು ಬಾರಿ ಉಣ್ಣೆಯನ್ನು ಕತ್ತರಿಸಬೇಕು. ಹೀಗೆ ಮಾಡುವುದರಿಂದ ಮಳೆಗಾಲದ ಸಮಯದಲ್ಲಿ ನೀರು ಹೆಚ್ಚಾಗಿ ಕುರಿಗಳಿಗೆ ಹಿಡಿಯುವುದಿಲ್ಲ. ಯಾವುದೇ ಸಂದರ್ಭದಲ್ಲಿ ಕುರಿಯ ಕಿವಿಯೊಳಗೆ ನೀರು ಹೋದರೆ ಆ ಕುರಿಯು ಬದುಕುವುದು ಕಷ್ಟ.

ಹುಟ್ಟಿದ ಮೇಲೆ 7-14 ತಿಂಗಳೊಳಗೆ ಕುರಿ ಬೆದೆಗೆ ಬರಲು ಪ್ರಾರಂಭಿಸಿ, 7 ವರ್ಷಗಳವರೆಗೂ ಗರ್ಭ ಧರಿಸಬಲ್ಲುದು. ಉತ್ಕಷ್ಟವಾದ ಫಲ ಪಡೆಯಲು ಎರಡು ವರ್ಷದ, ಅಂದರೆ ನಾಲ್ಕು ಹಲ್ಲಿಕ್ಕಿದ ಕುರಿಯನ್ನು ಆರಿಸಬೇಕು. ಕ್ಷಾಮಪೀಡಿತ ಪ್ರದೇಶಗಳಲ್ಲಿ 3-4 ಮರಿಗಳನ್ನು ಹಾಕಿದ ಮೇಲೆ ಕುರಿಗಳು ಪುನರ್‌ ಗರ್ಭಧಾರಣೆಗೆ ಯೋಗ್ಯವಲ್ಲ.

ಉಣ್ಣೆಗಾಗಿ ಉಪಯೋಗಿಸುವ ಕುರಿಗಳನ್ನು ಉಣ್ಣೆಗೆ ಪ್ರಸಿದ್ಧಿಯಾದ ತಳಿಗಳಿಂದಲೇ ಆಯ್ಕೆ ಮಾಡಬೇಕು. ಬೆದೆಗೆ ಬರುವುದಕ್ಕೆ ಎರಡು ವಾರ ಮೊದಲೇ ಕಾಳು ಮುಂತಾದ ಧಾನ್ಯಗಳಿಂದ ಪೋಷಿಸಬೇಕು. ಗರ್ಭಧರಿಸಿದ ಕುರಿಗಳಿಗೆ ಪೌಷ್ಟಿಕಾಹಾರವನ್ನು ಕೊಟ್ಟರೆ, ಊನ ಹಾಗು ದುರ್ಬಲವಾದ ಮರಿಗಳು ಕಡಿಮೆಯಾಗಿ ರೋಗರುಜಿನಗಳಿಲ್ಲದೆ ಉತ್ತಮವಾದ ಮರಿಗಳ ಸಂಖ್ಯೆ ಹೆಚ್ಚುತ್ತದೆ. ಶ್ರೇಷ್ಠದರ್ಜೆಯ ಉಣ್ಣೆಯು ಹೆಚ್ಚುತ್ತದೆ.

ಈನುವ ಕಾಲ ಬಂದಾಗ ಕುರಿಗಳನ್ನು ವಾತಾವರಣ  ವೈಪರೀತ್ಯದಿಂದ ರಕ್ಷಿಸಿದ ಕುರಿ ಹಟ್ಟಿಗಳಲ್ಲಿಡಬೇಕು. ಬಾಣಂತಿ ಕುರಿಗಳನ್ನು ಕೆಲವು ದಿನಗಳವರೆಗೆ ಬಹು ಎಚ್ಚರಿಕೆಯಿಂದ ನೋಡಿಕೊಳ್ಳಬೇಕು. ಅಂತೆಯೇ ಮೊದಲ  48 ಗಂಟೆಗಳ ಕಾಲ ಅಥವಾ ತಾವೇ ಹಾಲುಣ್ಣಲು ಪ್ರಯತ್ನಿಸುವ ತನಕ ಮರಿಗಳಿಗೆ ಆರೈಕೆ ಮಾಡುವುದು ಉತ್ತಮ. ಹುಟ್ಟಿದ  7-14 ದಿವಸಗಳ ಅವಧಿಯ ಮರಿಗಳಿಗೆ ಹಿಡ ಮಾಡಲು ಯೋಗ್ಯವಾದ ಕಾಲ.

ಈ ಅವಧಿಯಲ್ಲೇ ಚಾಕು ಅಥವಾ ಕಾದ ಕಬ್ಬಿಣದಿಂದ ಬಾಲವನ್ನು ಕತ್ತರಿಸಬಹುದು(ಡಾಕಿಂಗ್). ಇದರಿಂದ ಮಲ ಶೇಖರಣೆಯಿಂದ ಉದ್ಭವಿಸುವ ಕೀಟವ್ಯಾಧಿಗಳಿಂದ ಕುರಿಗಳನ್ನು ರಕ್ಷಿಸಬಹುದು. ಕೂಡಿಟ್ಟು ಸಾಕುವ ಕುರಿಗಳಿಗೆ ಕುರಿಹಟ್ಟಿಗಳಲ್ಲಿ ಚರಣೆಗೆ ಮತ್ತು ತೊಟ್ಟಿ ಮುಂತಾದ ಸೌಲಭ್ಯಗಳಿರಬೇಕು. ಸಾಮಾನ್ಯವಾಗಿ ತೇವಾಂಶವಿಲ್ಲದ ಎಳಸಾದ ಹುಲ್ಲು, ಗರಿಕೆ, ಚಿಗುರು, ದ್ವಿದಳ ಧಾನ್ಯ, ತವುಡು, ಹಿಂಡಿ ಮುಂತಾದ ವಸ್ತುಗಳನ್ನು ಕೊಡಬೇಕು.

ದ್ವಿದಳ ಸಸ್ಯಗಳಾದ ಅಲಸಂದೆ, ಹುರುಳಿ, ಹೆಸರು, ಉದ್ದು, ಕುದುರೆ ಮಸಾಲೆಸೊಪ್ಪು, ಮುಂತಾದ ಗಿಡಗಳ ಎಲೆಗಳನ್ನೂ ಅಗಸೆ ಮತ್ತು ಗೊಬ್ಬಳಿಯ ಕಾಯಿ ಮತ್ತು ಎಲೆಗಳೆರಡನ್ನೂ ಕಂಡರೆ ಕುರಿಗಳಿಗೆ ಬಲು ಪ್ರೀತಿ. ಗೆಣಸಿನ ಬಳ್ಳಿಗಳು ಕುರಿಮರಿಗಳಿಗೆ ಬಲು ಅಚ್ಚುಮೆಚ್ಚಿನ ಆಹಾರ. ಗರ್ಭ ಧರಿಸಿದ ಕುರಿಗೆ ಮೊದಲು ಕೊಡುತ್ತಿದ್ದ ಆಹಾರದ ಜೊತೆಗೆ, 110 ಗ್ರಾಂನಿಂದ ಕ್ರಮೇಣ 225 ಗ್ರಾಂ ಗಳಷ್ಟು ಹೆಚ್ಚುವರಿ ಧಾನ್ಯ ಕೊಡಬೇಕು. ಮಾಂಸಕ್ಕಾಗಿಯೇ ಬೆಳೆಸುವ ಪ್ರತಿ ಕುರಿಮರಿಗೆ ದಿನಕ್ಕೆ 110-450 ಗ್ರಾಂಗಳಷ್ಟು ಮಿಶ್ರಾಹಾರವನ್ನು ( 1 ಭಾಗ ತವುಡು + 2 ಭಾಗ ಧಾನ್ಯ+ 3 ಭಾಗ ಹಿಂಡಿಯ ಮಿಶ್ರಣ) ಕೊಡುವುದು ಉತ್ತಮ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT