ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಸರಾಗೆ ಸರಳ ಮುನ್ನುಡಿ

Last Updated 4 ಸೆಪ್ಟೆಂಬರ್ 2015, 19:41 IST
ಅಕ್ಷರ ಗಾತ್ರ

ಮೈಸೂರು: ಪ್ರತಿ ವರ್ಷ ನಡೆಯುತ್ತಿದ್ದ ಅದ್ದೂರಿ ಗಜಪಯಣ ಈ ಬಾರಿ ನಡೆಯಲಿಲ್ಲ. ಕೇವಲ ಅರಣ್ಯ ಇಲಾಖೆಯ ಸಿಬ್ಬಂದಿಯಷ್ಟೇ ಇಲ್ಲಿನ ಅರಣ್ಯ ಭವನದಲ್ಲಿ ದಸರೆಯಲ್ಲಿ ಪಾಲ್ಗೊಳ್ಳುವ ಆನೆಗಳಿಗೆ ಸಾಂಪ್ರದಾಯಿಕ ಸ್ವಾಗತ ಕೋರುವ ಮೂಲಕ ಅತ್ಯಂತ ಸರಳವಾಗಿ ಆನೆಗಳನ್ನು ಶುಕ್ರವಾರ ಬರಮಾಡಿಕೊಂಡರು.

ಪ್ರತಿ ವರ್ಷ ಜಿಲ್ಲಾಡಳಿತದ ವತಿಯಿಂದ ಹುಣಸೂರು ತಾಲ್ಲೂಕಿನ ವೀರನಹೊಸಹಳ್ಳಿಯಲ್ಲಿ ಗಜಪಡೆಯನ್ನು ವಿಜೃಂಭಣೆಯಿಂದ ಸ್ವಾಗತಿಸುತ್ತಿದ್ದರು. ಸರಳ ದಸರೆ ಆಚರಣೆಗೆ ಸರ್ಕಾರ ನಿರ್ಧರಿಸಿದ್ದರಿಂದ ಈ ಬಾರಿ ಅದು ರದ್ದಾಯಿತು. ಈ ಮೂಲಕ ನಾಡಹಬ್ಬ ದಸರೆಗೆ ಸರಳ ಮುನ್ನುಡಿ ಬರೆಯಲಾಯಿತು.

ಯಾವ ಯಾವ ಆನೆ? ಮೊದಲ ಹಂತದಲ್ಲಿ ಬಲರಾಮ (57), ಅರ್ಜುನ (55), ಅಭಿಮನ್ಯು (49), ವಿಕ್ರಮ (42), ಕಾವೇರಿ (37) ಹಾಗೂ ಚೈತ್ರಾ (44) ಆನೆಗಳು ಇಲ್ಲಿಗೆ ಬಂದಿಳಿದಿವೆ. ಸೆ. 5ರಂದು ಬೆಳಿಗ್ಗೆ 11ಕ್ಕೆ ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳು ಆನೆಗಳಿಗೆ ಪೂಜೆ ಸಲ್ಲಿಸಲಿದ್ದಾರೆ. ಸೆ. 7ರಂದು ಅರಮನೆಯನ್ನು ಪ್ರವೇಶ ಮಾಡುವ ಈ ಆನೆಗಳಿಗೆ ಬೆಳಿಗ್ಗೆ 9.30ಕ್ಕೆ ಸಾಂಪ್ರದಾಯಿಕ ಪೂಜೆ ಸಲ್ಲಿಸಲಾಗುತ್ತದೆ ಎಂದು ಉಪ ಅರಣ್ಯ ಸಂರಕ್ಷಣಾಧಿಕಾರಿ (ವನ್ಯಜೀವಿ) ಕಮಲಾ ಸುದ್ದಿಗಾರರಿಗೆ ತಿಳಿಸಿದರು.

ಆನೆಗಳ ದಾರಿಯೂ ಬದಲು: ಪ್ರತಿ ಬಾರಿಯೂ ವಿವಿಧ ಶಿಬಿರಗಳಿಂದ ಆನೆಗಳು ವೀರನಹೊಸಹಳ್ಳಿ ತಲುಪಿ ಅಲ್ಲಿಂದ ಮೈಸೂರಿಗೆ ಬರುತ್ತಿದ್ದವು. ಆದರೆ, ಈ ಬಾರಿ ನೇರವಾಗಿ ಶಿಬಿರಗಳಿಂದ ಆನೆಗಳು ಇಲ್ಲಿಗೆ ಬಂದವು. ತಿತಿಮತಿ ಶಿಬಿರದಿಂದ ಬಲರಾಮ, ಅಭಿಮನ್ಯು, ದುಬಾರೆ ಶಿಬಿರದಿಂದ ವಿಕ್ರಮ, ಕಾವೇರಿ, ಬಳ್ಳೆ ಶಿಬಿರದಿಂದ ಅರ್ಜುನ ಹಾಗೂ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಿಂದ ಚೈತ್ರ ಆನೆಗಳು ಬಂದಿವೆ. ಮತ್ತೊಂದು ಗಜಪಡೆಯ ಕುರಿತು ತೀರ್ಮಾನವಾಗಿಲ್ಲ: ಎರಡನೇ ಹಂತದಲ್ಲಿ ಬರುವ ಗಜಪಡೆಯಲ್ಲಿ ಯಾವ ಯಾವ ಆನೆಗಳನ್ನು ಕರೆತರಬೇಕು ಎಂಬ ಕುರಿತು ಈವರೆಗೂ ಯಾವುದೇ ನಿರ್ಧಾರವಾಗಿಲ್ಲ. ಈ ತಿಂಗಳ ಮೂರು ಅಥವಾ ನಾಲ್ಕನೇ ವಾರದಲ್ಲಿ ಮತ್ತೆ 6ರಿಂದ 8 ಆನೆಗಳನ್ನು ಕರೆತರಲಾಗುವುದು ಎಂದು  ಉತ್ತರಿಸಿದರು.

ಆನೆಗಳಿಗೆ ವಿಮೆ: ದಸರೆಯಲ್ಲಿ ಭಾಗವಹಿಸುವ 12 ಆನೆಗಳಿಗೂ ಇಲಾಖೆ ವತಿಯಿಂದ ವಿಮೆ ಮಾಡಿಸಲಾಗಿದೆ. ಅವು ಇಲ್ಲಿಂದ ತಮ್ಮ ತಮ್ಮ ಶಿಬಿರಗಳಿಗೆ ತೆರಳುವವರೆಗೂ ವಿಮೆ ಚಾಲ್ತಿಯಲ್ಲಿರುತ್ತದೆ. ಆನೆಗಳಿಗೆ ₹ 35 ಲಕ್ಷ, ಆಸ್ತಿ ನಾಶಕ್ಕೆ ₹ 30 ಲಕ್ಷ ಹಾಗೂ ಮಾವುತ, ಕಾವಡಿಗಳಿಗೆ ₹ 24 ಲಕ್ಷ ಇದರಡಿ ಒಳಪಡುತ್ತಾರೆ. ಇದಕ್ಕೆ ₹ 55 ಸಾವಿರ ಪ್ರೀಮಿಯಂ ಇರಲಿದೆ ಎಂದು ಅವರು ತಿಳಿಸಿದರು.

ಆನೆಗಳ ಊಟದ ಮೆನು: ಸದ್ಯ, ಅರಣ್ಯ ಭವನದಲ್ಲಿ ಬೀಡುಬಿಟ್ಟಿರುವ ಆನೆಗಳಿಗೆ ಕಬ್ಬು, ಬೆಲ್ಲ, ಭತ್ತ, ತೆಂಗಿನಕಾಯಿ, ಭತ್ತದ ಒಣ ಹುಲ್ಲು ನೀಡಲಾಗುತ್ತಿದೆ. ಅರಮನೆಯಲ್ಲಿ ಇವುಗಳಿಗೆ ವಿಶೇಷ ಆಹಾರ ನೀಡಲಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT