ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಾಖಲೆಪತ್ರಗಳಿಲ್ಲದ ಚಿನ್ನದ ಗಟ್ಟಿ, ಹಣ ಜಪ್ತಿ

ಹೈಗ್ರೌಂಡ್ಸ್‌ ಪೊಲೀಸರ ಕಾರ್ಯಾಚರಣೆ
Last Updated 21 ಆಗಸ್ಟ್ 2014, 19:56 IST
ಅಕ್ಷರ ಗಾತ್ರ

ಬೆಂಗಳೂರು: ಸೂಕ್ತ ದಾಖಲೆಪತ್ರಗಳಿಲ್ಲದೆ ಚಿನ್ನದ ಗಟ್ಟಿ ಮತ್ತು ಹಣ ಸಾಗಿಸುತ್ತಿದ್ದ ಆರೋಪದ ಮೇಲೆ ಮೂರು ಮಂದಿಯನ್ನು ಬಂಧಿಸಿರುವ ನಗರದ ಹೈಗ್ರೌಂಡ್ಸ್‌ ಪೊಲೀಸರು ಸುಮಾರು 3 ಕೆ.ಜಿ ಚಿನ್ನದ ಗಟ್ಟಿಗಳು ಹಾಗೂ ರೂ. 41 ಲಕ್ಷ ವಶಪಡಿಸಿಕೊಂಡಿದ್ದಾರೆ.

ತಮಿಳುನಾಡು ಮೂಲದ ನಟರಾಜ್‌ (40), ಬಾಲಸುಬ್ರಮಣಿಯನ್‌ (38) ಮತ್ತು ರಾಮ್‌ಕುಮಾರ್‌ (40) ಬಂಧಿತರು.
ಆರೋಪಿಗಳು ಬುಧವಾರ ರಾತ್ರಿ ಆಟೊದಲ್ಲಿ ಅವೆನ್ಯೂ ರಸ್ತೆಯಿಂದ ದಂಡು ರೈಲು ನಿಲ್ದಾಣಕ್ಕೆ ಹೋಗುತ್ತಿದ್ದರು. ಈ ವೇಳೆ ರೇಸ್‌ಕೋರ್ಸ್‌ ರಸ್ತೆಯ ಆನಂದರಾವ್‌ ವೃತ್ತದ ಬಳಿ ನಾಕಾಬಂದಿ ಹಾಕಿಕೊಂಡು ವಾಹನಗಳನ್ನು ತಪಾಸಣೆ ಮಾಡುತ್ತಿದ್ದ ಹೈಗ್ರೌಂಡ್ಸ್‌ ಠಾಣೆ ಸಿಬ್ಬಂದಿ, ಆರೋಪಿಗಳ ಆಟೊವನ್ನು ತಡೆದು ಪರಿಶೀಲಿಸಿದಾಗ ಸೂಟ್‌ಕೇಸ್‌ನಲ್ಲಿ ಹಣ ಹಾಗೂ ಚಿನ್ನದ ಗಟ್ಟಿಗಳು ಇರುವುದು ಗೊತ್ತಾಗಿದೆ ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.

ಆ ಹಣ ಮತ್ತು ಚಿನ್ನದ ಗಟ್ಟಿಗಳಿಗೆ ಸಂಬಂಧಿಸಿದಂತೆ ಆರೋಪಿಗಳ ಬಳಿ ಯಾವುದೇ ದಾಖಲೆಪತ್ರಗಳು ಇರಲಿಲ್ಲ. ಇದರಿಂದಾಗಿ ಸಿಬ್ಬಂದಿ ಅವರನ್ನು ಠಾಣೆಗೆ ಕರೆದುಕೊಂಡು ಬಂದು ವಿಚಾರಣೆ ನಡೆಸಿದಾಗ ಆರೋಪಿಗಳು ಚಿನ್ನಾಭರಣ ವ್ಯಾಪಾರಿಗಳೆಂದು ಹೇಳಿಕೆ ಕೊಟ್ಟಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಅವೆನ್ಯೂ ರಸ್ತೆಯ ಚಿನ್ನಾಭರಣ ಮಳಿಗೆಯಿಂದ ಚಿನ್ನದ ಗಟ್ಟಿಗಳನ್ನು ಖರೀದಿ­ಸಿಕೊಂಡು ಕೊಯಮತ್ತೂರಿಗೆ ಹೋಗಲು ಆಟೊದಲ್ಲಿ ರೈಲು ನಿಲ್ದಾಣಕ್ಕೆ ಬರುತ್ತಿದ್ದಾಗಿ ಬಂಧಿತರು ಹೇಳಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

‘ಪ್ರಕರಣ ಸಂಬಂಧ ಕೊಯಮತ್ತೂರು ಪೊಲೀಸರಿಗೆ ಮಾಹಿತಿ ನೀಡಿ, ಬಂಧಿತರ ಪೂರ್ವಾಪರದ ಬಗ್ಗೆ ಪರಿಶೀಲನೆ ನಡೆಸುವಂತೆ ತಿಳಿಸಲಾಗಿದೆ. ಬಂಧಿ­ತ­ರನ್ನು ಹೆಚ್ಚಿನ ತನಿಖೆಗಾಗಿ ಪೊಲೀಸ್‌ ಕಸ್ಟಡಿಗೆ ತೆಗೆದುಕೊಳ್ಳಲಾ­ಗುತ್ತದೆ’ ಎಂದು ಕೇಂದ್ರ ವಿಭಾಗದ ಡಿಸಿಪಿ ಸಂದೀಪ್‌ ಪಾಟೀಲ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT