ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಾನಕಿಂತ ದೊಡ್ಡದಿಲ್ಲ

Last Updated 2 ಜುಲೈ 2015, 19:30 IST
ಅಕ್ಷರ ಗಾತ್ರ

ರಂಜಾನ್ ವೇಳೆ ನಮಾಜ್ ಹಾಗೂ ಉಪವಾಸ ಹೇಗೆ ಕಡ್ಡಾಯವೋ ಅದೇ ರೀತಿ ‘ಝಕಾತ್’ ನೀಡುವುದು ಕಡ್ಡಾಯ ಎಂದು ಭಾವಿಸಿದ ಅಸಂಖ್ಯಾತ ಜನರು ನಮ್ಮ ನಡುವೆ ಇದ್ದಾರೆ. ಇಸ್ಲಾಂನ ಪವಿತ್ರ ಗ್ರಂಥ ‘ಕುರಾನ್’ನಲ್ಲಿ ಕೂಡ ‘ಝಕಾತ್‌’ನ ಮಹತ್ವವನ್ನು ತಿಳಿಸಲಾಗಿದೆ.

‘ಝಕಾತ್’ ಎಂದರೆ ದಾನ ಕೊಡುವುದು ಅಥವಾ ಸಹಾಯಹಸ್ತ ನೀಡುವುದು ಎಂದರ್ಥ. ಆರ್ಥಿಕವಾಗಿ ಸಬಲರಾದವರು ಬಡವರಿಗೆ ವರ್ಷಕ್ಕೊಮ್ಮೆ ಝಕಾತ್ ರೂಪದಲ್ಲಿ ರಂಜಾನ್ ಉಡುಗೊರೆ ನೀಡುತ್ತಾರೆ. ಆರ್ಥಿಕರಾಗಿ ಸಬಲರಾದವರೆಂದರೆ ಅವರ ವಾರ್ಷಿಕ ಆದಾಯ ಒಂದು ಲಕ್ಷ ಹಾಗೂ ಅದಕ್ಕಿಂತ ಹೆಚ್ಚಾಗಿರಬೇಕು.  70 ಗ್ರಾಂ ಚಿನ್ನ  ಹಾಗೂ ಅದಕ್ಕಿಂತ ಹೆಚ್ಚು ಇರುವವರು ಝಕಾತ್ ನೀಡಲೇಬೇಕು ಎಂದು ನಂಬಿದವರು ಅನೇಕರು. ಇಂತಹವರು ತಮ್ಮ ಆದಾಯದಲ್ಲಿ ಶೇ ಎರಡೂವರೆಯಷ್ಟನ್ನು ಬಡವರಿಗೆ ದಾನದ ರೂಪದಲ್ಲಿ ಕೊಡಬೇಕು ಎಂಬ ನಂಬುಗೆ ಇದೆ.

ಉದಾಹರಣೆಗೆ ಒಂದು ಲಕ್ಷ ರೂಪಾಯಿ ಆದಾಯ ಪಡೆಯುವ ವ್ಯಕ್ತಿ ಝಕಾತ್ ಎಂದು ಎರಡೂವರೆ ಸಾವಿರ ರೂಪಾಯಿ ನೀಡುವುದು ಕಡ್ಡಾಯ. ಹೀಗೆ ನೀಡುವ ದಾನಕ್ಕೆ ‘ಝಕಾತ್’ ಕೊಡುವುದು ಎನ್ನುತ್ತಾರೆ. ಇದು ದೇವರಿಗೆ ಒಂದು ರೀತಿ ತೆರಿಗೆ ಕಟ್ಟಿದಂತೆ ಎನ್ನಬಹುದು. ಆದರೆ ‘ಝಕಾತ್’ ಕೊಡಲು ಅರ್ಹರಾದವರು ಯಾವುದೇ ಕಾರಣಕ್ಕೂ ಝಕಾತ್ ಪಡೆಯುವಂತಿಲ್ಲ.

ವರ್ಷಕ್ಕೊಮ್ಮೆ ಬರುವ ರಂಜಾನ್ ಹಬ್ಬದಲ್ಲಿ ಬಡವ-ಧನಿಕ ಎಂಬ ಭೇದವಿಲ್ಲದೆ ಎಲ್ಲರೂ ಖುಷಿಯಿಂದ ಹಬ್ಬದಲ್ಲಿ ಪಾಲ್ಗೊಳ್ಳಬೇಕು ಎಂಬ ಉದ್ದೇಶದಿಂದಲೇ ‘ಝಕಾತ್’ ಅನ್ನು ಕುರಾನ್‌ನಲ್ಲಿ ಕಡ್ಡಾಯಗೊಳಿಸಲಾಗಿದೆ. ಝಕಾತ್ ನೀಡುವುದು ಕಡ್ಡಾಯ ಎಂದು ಇಸ್ಲಾಂ ದೈವ ಅಲ್ಲಾಹ ಹೇಳಿದ್ದರೆ, ಇಂತಿಷ್ಟೇ ಕೊಡಬೇಕು ಎಂದು ಹೇಳಿದವರು ಪ್ರೊಫೆಟ್ ಮಹಮ್ಮದ್ ಪೈಗಂಬರ್ ಎಂದು ನಂಬಿದ್ದಾರೆ.

ಬಡವರೂ ಹಬ್ಬ ಆಚರಿಸಬೇಕು
‘ನಮ್ಮ ಸಂಬಂಧಿಗಳಲ್ಲಿ ಬಡವರಿದ್ದರೆ ಅವರಿಗೆ ನಾವು ಮೊದಲ ಆದ್ಯತೆ ನೀಡಿ ಝಕಾತ್ ಕೊಡಬೇಕಾಗುತ್ತದೆ, ಇಲ್ಲವಾದಲ್ಲಿ ಅಕ್ಕಪಕ್ಕದವರಿಗೆ ನೀಡಬೇಕು. ಅವರೂ ಸಬಲರಾಗಿದ್ದರೆ ಇತರ ಬಡವರಿಗೆ ಝಕಾತ್ ನೀಡಬೇಕು. ಇಂತಹ ಜಾತಿಯವರಿಗೆ, ಇಂತಹ ಧರ್ಮದವರಿಗೇ ಕೊಡಬೇಕು ಎಂಬ ನಿಬಂಧನೆ ಇಲ್ಲ. ಸಿರಿವಂತರು ಬಡವರ ಮೇಲೆ ಕರುಣೆ ತೋರಿಸಿದರೆ ಎಲ್ಲರೂ ಸಮಾನರಾಗಿ ಬಾಳಬಹುದು.

ಹಣ, ಬಟ್ಟೆ, ಮಕ್ಕಳನ್ನು ಓದಿಸುವುದು, ಬಡವರ ಮಕ್ಕಳ ಮದುವೆ ಮಾಡುವುದು, ಬಡವರ ಆಸ್ಪತ್ರೆ ಖರ್ಚಿಗೆ ನೆರವಾಗುವುದು ಹೀಗೆ ಹಣವಿಲ್ಲದ ವರ್ಗದವರಿಗೆ ದೇವರನ್ನು ನೆನೆಯುತ್ತಾ ದಾನ ಮಾಡಿದರೆ ಝಕಾತ್ ನೀಡುವವರ ಕುಟುಂಬಕ್ಕೂ ಒಳ್ಳೆಯದಾಗುತ್ತದೆ. ಹೀಗೆ ಝಕಾತ್ ನೀಡುವುದರಿಂದ ಬಡವರೂ ಆರ್ಥಿಕವಾಗಿ ಸಬಲರಾಗಿ ಅವರೂ ಇತರರಿಗೆ ದಾನ ಮಾಡುತ್ತಾರೆ. ಎಲ್ಲರೂ ಈ ನಿಯಮವನ್ನು ಪಾಲಿಸಿದರೆ ಲೋಕದಲ್ಲಿ ಯಾವೊಬ್ಬರೂ ಬಡವರನ್ನು ನಾವು ಕಾಣುವುದಿಲ್ಲ’ ಎಂದು ತಮ್ಮ ಧರ್ಮದ ಬಗ್ಗೆ ವಿವರಿಸುತ್ತಾರೆ ಹರಿನಗರ ಬಡಾವಣೆಯಲ್ಲಿರುವ ಮದುನಾ ಮಸೀದಿಯ ಹಫೀಜ್ ಅಸ್ಘರ್ ಅಹಮ್ಮದ್.

ಶಿಕ್ಷೆ ಅನುಭವಿಸಲೇಬೇಕು
‘ಒಂದು ವೇಳೆ ತಮ್ಮ ಬಳಿ ದುಡ್ಡಿದ್ದರೂ  ಝಕಾತ್ ಕೊಡದಿದ್ದ ಪಕ್ಷದಲ್ಲಿ ದೇವರು ಅವರನ್ನು ನೋಡಿಕೊಳ್ಳುತ್ತಾನೆ. ಅವರು ಕೊಡಬೇಕಾದ ಝಕಾತ್ ದುಡ್ಡಿಗಿಂತಾ ಹೆಚ್ಚು ನಷ್ಟವನ್ನು ಅನುಭವಿಸುತ್ತಾರೆ. ಅಲ್ಲಾಹ ಎಲ್ಲವನ್ನೂ ಅವರಿಂದ ವಾಪಸ್ ತೆಗೆದುಕೊಂಡುಬಿಡುತ್ತಾನೆ. ಹಾಗಾಗಿ ಎಲ್ಲರೂ ಶ್ರದ್ಧೆ ಭಕ್ತಿಯಿಂದ ವರ್ಷದ ಝಕಾತ್ ತೆಗೆದಿಟ್ಟು ಬಿಡುತ್ತಾರೆ. ಕೈಲಾಗದವರೂ ಹೇಗೋ ಹೊಂದಿಸಿ ಐನೂರು, ಸಾವಿರ ರೂಪಾಯಿಗಳನ್ನು ಬಡವರಿಗೆ ದಾನ ಮಾಡುವ ಪವಿತ್ರ ಮಾಸವಿದು’ ಎನ್ನುತ್ತಾರೆ ಇವರು.

ಮಸೀದಿಯಲ್ಲಿ ದಾನ
‘ರಂಜಾನ್ ವೇಳೆ ನಾವು ಮಸೀದಿಯಲ್ಲಿಯೂ ದಾನ ಮಾಡುತ್ತೇವೆ. ಆದರೆ ಇದಕ್ಕೂ ಝಕಾತ್‌ಗೂ ತುಂಬಾ ವ್ಯತ್ಯಾಸವಿದೆ. ಝಕಾತ್

ಮಾಡುವುದು ಒಂದು ದಿನ ಮಾತ್ರ. ಈ ದಾನ ರಂಜಾನ್‌ ಮಾಸದ ಮೂವತ್ತೂ ದಿನ ನಮ್ಮ ಮಸೀದಿಯಲ್ಲಿ ನಡೆಯುತ್ತದೆ. ಇಫ್ತಾರ್ ಸಮಯದಲ್ಲಿ ನಮಾಜ್ ಆದ ನಂತರ  ಖರ್ಜೂರ, ಹಣ್ಣುಗಳು ಹಾಗೂ ಆಶ್ (ಪಾಯಸ) ಎಂಬ ಗಂಜಿಯನ್ನು  ಕೊಡುತ್ತೇವೆ. ಉಪವಾಸ ಇರುವ ಭಕ್ತರಿಗೆ ಮಾತ್ರ ಮಸೀದಿಗಳಲ್ಲಿ ಈ ರೀತಿಯ ಆಹಾರ ಪದಾರ್ಥಗಳನ್ನು ಕೊಡಲಾಗುತ್ತದೆ.

ಇದಕ್ಕೂ ದಾನಿಗಳು ಮುಂದೆ ಬರುತ್ತಾರೆ. ಉಪವಾಸ ಇರುವವರಿಗೆ ಸಿಗುವಷ್ಟು ಪುಣ್ಯ ದಾನಿಗಳಿಗೂ ಸಿಗುತ್ತದೆ ಎಂದು ಮಹಮ್ಮದ್ ಪೈಗಂಬರ್ ಹೇಳಿದ್ದಾರೆ. ರಂಜಾನ್‌ನ ಮೂವತ್ತು ದಿನಗಳಲ್ಲಿ ನಾವು ಒಂದು ಸಣ್ಣ ಒಳ್ಳೆಯ ಕೆಲಸ ಮಾಡಿದರೆ ಅದರ ಎಪ್ಪತ್ತರಷ್ಟು ಪುಣ್ಯವನ್ನು ನಮಗೆ ಅಲ್ಲಾಹ ಕೊಡುತ್ತಾನೆ. ಈ ಸಮಯದಲ್ಲಿ ನಾವು ಒಂದು ಬಾರಿ ಮಾಡುವ ನಮಾಜ್ ಎಪ್ಪತ್ತು ಬಾರಿ ಮಾಡಿದಂತೆ’ ಎನ್ನುತ್ತಾರೆ ಹಫೀಜ್.

ಪಂಚ ಪದ್ಧತಿಗಳ ಪಾಲನೆ
‘ಕಲಿಮಾ (ಇದನ್ನು ಓದಿದರೆ ಮಾತ್ರ ಮುಸ್ಲಿಂ ಧರ್ಮದವರಾಗುವುದು), ನಮಾಜ್ (ಮುಸ್ಲಿಂ ಧರ್ಮಕ್ಕೆ ಸೇರಿದವರಿಗೆ ಪ್ರತಿನಿತ್ಯ ಐದು ಬಾರಿ ನಮಾಜ್ ಮಾಡುವುದು ಕಡ್ಡಾಯ), ರೋಜಾ (ವೃದ್ಧರು, ಎಳೆಯ ಮಕ್ಕಳು, ಆರೋಗ್ಯ ಸ್ಥಿತಿ ಸರಿಯಿಲ್ಲದವರನ್ನು ಹೊರತುಪಡಿಸಿ ಇತರ ಮುಸಲ್ಮಾನರು ರಂಜಾನ್ ಸಮಯದಲ್ಲಿ ಉಪವಾಸ ಮಾಡುವುದು ಕಡ್ಡಾಯ), ಹಜ್ (ಮೆಕ್ಕಾಗೆ ಹೋಗಿ ಬರುವಷ್ಟು ಹಣ ಇದ್ದವರು ಮೆಕ್ಕಾಗೆ ಹೋಗಿ ಬರಬೇಕು) ಮತ್ತು ಝಕಾತ್ (ಆರ್ಥಿಕವಾಗಿ ಸಬಲರಾದವರಿಗೆ ಮಾತ್ರ ದಾನ ಮಾಡುವುದು ಕಡ್ಡಾಯ)- ಈ ಐದನ್ನೂ ಇಸ್ಲಾಂ ಧರ್ಮಕ್ಕೆ ಸೇರಿದ ಪ್ರತಿಯೊಬ್ಬರೂ ಪಾಲಿಸಲೇಬೇಕು ಎಂದು ಕುರಾನ್ ಹೇಳುತ್ತದೆ.

ಝಕಾತ್‌ನಿಂದ ನೆಮ್ಮದಿ
ನೊಂದ ಮನಗಳಿಗೆ ದಾನ ಕೊಟ್ಟಾಗ ಸಿಗುವ ನೆಮ್ಮದಿ ಸ್ವರ್ಗಕ್ಕೆ ಸಮ. ನಾವು ಪ್ರತಿವರ್ಷ ರಂಜಾನ್ ತಿಂಗಳಲ್ಲಿ ಝಕಾತ್ ನೀಡುತ್ತೇವೆ. ಇತ್ತೀಚೆಗೆ ಚಿನ್ನಾಭರಣ ಹಾಗೂ ಭೂಮಿಯ ಬೆಲೆ ಕೊಂಚ ಹೆಚ್ಚಿರುವುದರಿಂದ ನನ್ನ ದಾನದ ಮೊತ್ತ ಅರವತ್ತರಿಂದ ಎಪ್ಪತ್ತು ಸಾವಿರ ರೂಪಾಯಿ ಆಗಿದೆ. ನಮ್ಮ ಸಂಬಂಧಿಕರಲ್ಲಿರುವ ಬಡವರಿಗೆ ಮೊದಲು ದಾನ ನೀಡುತ್ತೇನೆ. ಅವರಿಗೆ ಬೇಕಾದ ವಸ್ತುಗಳು, ಬಟ್ಟೆಗಳು, ಹಣ, ಊಟ ಹೀಗೆ ಎಲ್ಲವನ್ನೂ ಈ ಝಕಾತ್ ದುಡ್ಡಿನಲ್ಲಿ ಕೊಡಿಸುತ್ತೇನೆ. ಕೆಲವೊಮ್ಮೆ ಮನಃಶಾಂತಿಗೆ ಶೇ 2.5ಕ್ಕೂ ಹೆಚ್ಚು ಮೊತ್ತವನ್ನೂ ಝಕಾತ್ ಕೊಡಬಹುದು.
ನಜೀದಾ ಖಾನಂ, ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಜಯನಗರ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT