ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಾವಣಗೆರೆಯ ಕ್ರೀಡಾ ಹಾಸ್ಟೆಲ್‌ ನಿರ್ವಹಣೆಯದೇ ಕೊರತೆ

Last Updated 1 ಫೆಬ್ರುವರಿ 2015, 19:30 IST
ಅಕ್ಷರ ಗಾತ್ರ

ಒಂದಂತಸ್ತಿನ ಕಟ್ಟಡ. ಕೆಲವರಿಗೆ ಉತ್ತಮ ಬೆಡ್‌, ಇನ್ನು ಹಲವರಿಗೆ ಹರಿದ ಬೆಡ್‌, ಕಟ್ಟಡದ ಎದುರು ಸುಂದರ ಉದ್ಯಾನ. ವಾಕಿಂಗ್‌ ಪಾಥ್‌, ಇಳಿಸಂಜೆಯ ವಿಶ್ರಾಂತಿಗೆ ನಾಲ್ಕು ಬೆಂಚ್‌. ಕಟ್ಟಡದ ಮಧ್ಯಭಾಗದಲ್ಲೂ ಪುಟ್ಟ ಉದ್ಯಾನ. ಇತ್ತೀಚೆಗೆ ನವೀಕರಿಸಿದ ಸುಂದರ ಅಡುಗೆ ಕೋಣೆ, ಕೆಲವು ಕೊಠಡಿಗಳಿಗೆ ಟೈಲ್ಸ್‌, ಮತ್ತೆ ಕೆಲವಕ್ಕೆ ಸಿಮೆಂಟೇ ಗತಿ... ಇದು ದಾವಣಗೆರೆಯ ಕ್ರೀಡಾ ಶಾಲೆ/ ಕ್ರೀಡಾ ವಸತಿ ನಿಲಯದ ಚಿತ್ರಣ.

ಕೆಲವು ಸೌಲಭ್ಯಗಳ ನಡುವೆಯೂ ಕೊರತೆಗಳು ಇಣುಕುತ್ತಿದ್ದು, ಎಲ್ಲವನ್ನೂ ಮರೆತು ಕ್ರೀಡಾ ಪಟುಗಳು ರಾಷ್ಟ್ರಮಟ್ಟದಲ್ಲಿ ಉತ್ತಮ ಸಾಧನೆ ತೋರಲು ಶ್ರಮಿಸುತ್ತಿದ್ದಾರೆ. ಕ್ರೀಡಾಶಾಲೆಯಲ್ಲಿ 5ರಿಂದ 7ನೇ ತರಗತಿಯ 42 ಮಕ್ಕಳು, ಕ್ರೀಡಾ ವಸತಿ ನಿಲಯದಲ್ಲಿ ಜಿಲ್ಲಾ ಪಂಚಾಯಿತಿ ಅನುದಾನದ ಅಡಿ 30 ಹಾಗೂ ಸೀನಿಯರ್‌ ವಿಭಾಗದಲ್ಲಿ 40 ಮಂದಿ ಕ್ರೀಡಾ­ಪಟುಗಳು ಇದ್ದಾರೆ. 24 ಕೊಠಡಿಗಳಿದ್ದು, ಒಟ್ಟು 112 ವಿದ್ಯಾರ್ಥಿಗಳು ಇಲ್ಲಿ ಉಳಿದುಕೊಂಡಿದ್ದಾರೆ.

ಎರಡು ವರ್ಷಗಳ ಹಿಂದೆ ಸುಣ್ಣಬಣ್ಣ ಕಂಡ ಕಾರಣಕ್ಕೆ ಗೋಡೆಗಳು ತೀರಾ ಮಾಸಲಾಗಿಲ್ಲ. ಕಾರಿಡಾರ್‌ನಲ್ಲಿ ಅಲ್ಲಲ್ಲಿ ಗುಟ್ಕಾ ತಿಂದು ಉಗಿದ ದೃಶ್ಯಗಳೂ ಕಾಣಿಸುತ್ತವೆ. ನೆಲಅಂತಸ್ತಿನಲ್ಲಿ ಜೂನಿಯರ್‌ ವಿದ್ಯಾರ್ಥಿಗಳಿಗೆ, ಮೊದಲ ಅಂತಸ್ತಿನಲ್ಲಿ ಹಿರಿಯ ವಿದ್ಯಾರ್ಥಿಗಳಿಗೆ ಅವಕಾಶ ನೀಡಲಾಗಿದೆ. ಎರಡೂ ವರ್ಗದವರಿಗೂ ಪ್ರತ್ಯೇಕ ಶೌಚಾಲಯ, ಸ್ನಾನದ ಗೃಹ ನಿರ್ಮಿಸಲಾಗಿದ್ದರೂ ಅವುಗಳ ನಿರ್ವಹಣೆ ಸಮರ್ಪಕವಾಗಿಲ್ಲ. ಕೆಲವು ಕೊಠಡಿಗಳ ಗಾಜು ಒಡೆದಿವೆ.

ಎರಡು ಸೋಲಾರ್‌ಗಳಿದ್ದು, ಕಡಿಮೆ ಪ್ರಮಾಣದ ಬಿಸಿನೀರು ಕ್ರೀಡಾಪಟುಗಳಿಗೆ ಲಭ್ಯವಾಗುತ್ತಿದೆ. ಮೊದಲು ಸ್ನಾನಕ್ಕೆ ತೆರಳಿದ 15ರಿಂದ 20 ಮಂದಿಗೆ ಮಾತ್ರ ಬಿಸಿನೀರು ಸಿಗುತ್ತಿದ್ದು, ಉಳಿದವರಿಗೆ ಚಳಿ, ಮಳೆ­ಗಾಲದಲ್ಲಿ ತಣ್ಣೀರೇ ಗತಿ! ಇದ್ದ ಒಂದು ಜನ ರೇಟರ್‌ ದುರಸ್ತಿಗೆ ಬಂದಿದೆ. ಕರೆಂಟ್‌ ಕೈಕೊಟ್ಟರೆ ಕತ್ತಲೆ ಯಲ್ಲೇ ಕಾಲಕಳೆಯುವ ಸ್ಥಿತಿಯಿದೆ.

ಮಧ್ಯಕರ್ನಾಟಕದ ದಾವಣ ಗೆರೆ ಕುಸ್ತಿಪಟುಗಳ ಸ್ವರ್ಗ. ಇಲ್ಲಿನ ಕುಸ್ತಿಪಟುಗಳು ರಾಷ್ಟ್ರ, ಅಂತರರಾಷ್ಟ್ರೀಯ ಮಟ್ಟದಲ್ಲಿ ಮಿಂಚು ಹರಿಸಿದ್ದಾರೆ. ಅದು ಇಂದಿಗೂ ಮುಂದುವರಿದಿದೆ. ನಿಲಯದಲ್ಲಿ 8ನೇ ತರಗತಿಯಿಂದ ಪಿಯು ಹಂತದವರೆಗೆ ವಿವಿಧ ತರಗತಿಗಳಲ್ಲಿ ಓದುತ್ತಿರುವ 40 ಮಂದಿ ಕುಸ್ತಿಪಟುಗಳಿದ್ದಾರೆ.  ಜೂನಿಯರ್‌ ಕುಸ್ತಿಪಟುಗಳಿಗೆ ಮಲ್ಟಿಜಿಮ್‌ ವ್ಯವಸ್ಥೆ ಇಲ್ಲ. ಇದರಿಂದ ಉದಯೋನ್ಮುಖ ಕುಸ್ತಿಪಟುಗಳಿಗೆ ದೇಹದ ಸದೃಢತೆ ಕಾಪಾಡಿಕೊಳ್ಳುವುದು ಕಷ್ಟವಾಗುತ್ತಿದೆ.

ಈ ಬಗ್ಗೆ ಕೆಲವು ವಿದ್ಯಾರ್ಥಿಗಳು ಅಳಲು ತೋಡಿಕೊಳ್ಳುತ್ತಾರೆ. ಎಲ್ಲರಿಗೂ ಆಂಜನೇಯ ಬಡಾವಣೆಯ ವ್ಯಾಯಾಮ ಶಾಲೆಯೇ ಕುಸ್ತಿಯ ಪಟ್ಟು ಕಲಿಯುವ ಅಖಾಡ. ನಿಲಯದಲ್ಲಿರುವ 112 ಮಂದಿಗೆ ಇದುವರೆಗೂ ಸ್ಪೋರ್ಟ್ಸ್‌ ಕಿಟ್‌ ನೀಡಿಲ್ಲ. ವರ್ಷದ ಆರಂಭದಲ್ಲಿಯೇ ಕಿಟ್‌ ನೀಡಬೇಕು. ಆದರೆ, ಇದುವರೆಗೂ ನೀಡಿಲ್ಲ ಎಂದು ಕೆಲವು ಕ್ರೀಡಾಪಟುಗಳು ಬೇಸರ ವ್ಯಕ್ತಪಡಿಸುತ್ತಾರೆ. ಕಳೆದ ವರ್ಷ ನೀಡಿದ್ದ ಕಿಟ್‌ನಲ್ಲಿ ಟ್ರ್ಯಾಕ್‌ ಷೂ, ಕ್ರೀಡಾ ಸಮವಸ್ತ್ರದ ಗುಣಮಟ್ಟ ಕಳಪೆಯಾಗಿತ್ತು ಎಂದು ಕೆಲವರು ಆರೋಪಿಸುತ್ತಾರೆ.

ಹತ್ತು ವರ್ಷಗಳ ಹಿಂದೆ ಕಬಡ್ಡಿ, ಕೊಕ್ಕೊ, ಕುಸ್ತಿ, ಅಥ್ಲೆಟಿಕ್ಸ್‌ಗೆ ಒಟ್ಟು 12 ಮಂದಿ ತರಬೇತುದಾರರು ಇದ್ದರು. ಈಗ ಇರುವುದು ಮೂವರು ಮಾತ್ರ. ಮುಖ್ಯ ತರಬೇತುದಾರರ ಕೊರತೆಯಿದೆ. ಇನ್ನು ವಸತಿ ನಿಲಯಕ್ಕೆ ಕಾಯಂ ವಾರ್ಡನ್‌ ಇಲ್ಲ. ಪ್ರಭಾರ ವಾರ್ಡನ್‌ ಮೇಲೆಯೇ ಹೆಚ್ಚಿನ ಹೊರೆಯಿದೆ. ಕಚೇರಿ ನಿರ್ವಹಣೆಗೆ ಗುಮಾಸ್ತರೂ ಇಲ್ಲ.

ಕೊರತೆಗಳ ನಡುವೆಯೂ ನಿಲಯ ಕ್ರೀಡಾಪಟುಗಳು ಇದೇ ವರ್ಷ ಹಲವು ಸಾಧನೆ ಮಾಡಿದ್ದಾರೆ. ಕಾರ್ತಿಕ್‌ ಕಾಟೆ ‘ದಸರಾ ಕೇಸರಿ’ ಪ್ರಶಸ್ತಿ ಪಡೆದಿದ್ದಾರೆ. ಜೊತೆಗೆ, ಅಖಿಲ ಭಾರತ ಅಂತರ ವಿಶ್ವವಿದ್ಯಾಲಯ ಕುಸ್ತಿ ಪಂದ್ಯಾವಳಿ ಯಲ್ಲೂ ಕಂಚು ಗಳಿಸಿದ್ದಾರೆ. ಮಲ್ಲಪ್ಪ ಪಾಟೀಲ್‌ ‘ದಸರಾ ಕಂಠೀರವ’ ಪ್ರಶಸ್ತಿಗೆ ಭಾಜನರಾಗಿದ್ದರು. ಕುಸ್ತಿಯಲ್ಲಿ ಶಿವಾನಂದ ಹಾಗೂ ಚಂದ್ರಶೇಖರ್‌ ಸಹ ಹಿಂದೆಬಿದ್ದಿಲ್ಲ.

ಪುಣೆಯಲ್ಲಿ ನಡೆದ ರಾಜೀವ್‌ ಗಾಂಧಿ ಖೇಲ್‌ ಅಭಿಯಾನದ ಗ್ರಾಮೀಣ ಕ್ರೀಡಾಕೂಟದಲ್ಲಿ ನಿಲಯದ ಸೈಯದ್‌ ನಾಸೀರ್‌ ಅಲಿ, ನರಸಿಂಹ ರಾಜ್ಯ ತಂಡವನ್ನು ಪ್ರತಿನಿಧಿಸಿದ್ದರು. ಕೊಕ್ಕೊ ತಂಡ ಪ್ರತಿನಿಧಿಸಿದ್ದ ಬಾಹುಬಲಿ, ಅರ್ಜುನ್‌ ಅವರು ಬೆಳ್ಳಿ ಪದಕ ಕೊರಳಿಗೇರಿಸಿಕೊಂಡು ಬಂದಿದ್ದಾರೆ. ದೇಶದ ಯಾವ ಮೂಲೆಯಲ್ಲಿ ಕುಸ್ತಿ ಪಂದ್ಯ ನಡೆದರೂ ದಾವಣಗೆರೆಯ ಕುಸ್ತಿಪಟುಗಳು ಅಲ್ಲಿರುತ್ತಾರೆ ಎಂಬುದು ಪ್ರಚಲಿತದಲ್ಲಿರುವ ಮಾತು.

ಸುಂದರ ಅಡುಗೆ ಕೋಣೆ...
1996ರಲ್ಲಿ ಕ್ರೀಡಾ ವಸತಿ ನಿಲಯ ಸ್ಥಾಪನೆ ಆಗಿತ್ತು. 2007ರಲ್ಲಿ ಅದೇ ಕಟ್ಟಡದಲ್ಲಿ ಕ್ರೀಡಾಶಾಲೆ ಕೂಡ ಆರಂಭಗೊಂಡಿತ್ತು. ಕಳೆದ ಎರಡು ವರ್ಷಗಳ ಹಿಂದೆ ಕಟ್ಟಡ ನವೀಕರಿಸಿದ ಕಾರಣ ಕಟ್ಟಡವೂ ಸುಸಜ್ಜಿತವಾಗಿದೆ. ಅಡುಗೆ ಕೊಠಡಿಯೊಳಗೆ ಟೈಲ್ಸ್‌ ಹಾಕಿ ಸುಂದರಗೊಳಿಸಲಾಗಿದೆ. ಸ್ವಚ್ಛತೆಗೆ ಆದ್ಯತೆ ನೀಡಲಾಗಿದೆ. ಧಾನ್ಯಗಳ ದಾಸ್ತಾನಿಗೆ ಪ್ರತ್ಯೇಕ ಕೊಠಡಿಗಳು ಇವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT