ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೀಪಾವಳಿ ಸಂಭ್ರಮ ಹೆಚ್ಚಿಸಿದ ‘ಸಿರಿಗೌರಿ’

Last Updated 24 ಅಕ್ಟೋಬರ್ 2014, 7:30 IST
ಅಕ್ಷರ ಗಾತ್ರ

ಚಿಂತಾಮಣಿ: ದೀಪಾವಳಿಯನ್ನು ನಗರ ಹಾಗೂ ತಾಲ್ಲೂಕಿನ ಜನತೆ ಸಡಗರ, ಸಂಭ್ರಮ ಹಾಗೂ ಶ್ರದ್ಧಾಭಕ್ತಿಯಿಂದ ಗುರುವಾರ ಆಚರಿಸಿದರು. ಮನೆಗಳಲ್ಲಿ ದೀಪ ಬೆಳಗಿ – ಪಟಾಕಿ ಸಿಡಿಸಿ ಸಂತಸ ಹಂಚಿಕೊಂಡರು.

ಮಹಿಳೆಯರು ಮುಂಜಾನೆಯೇ ಮನೆಗಳ ಮುಂದೆ ಸೆಗಣಿಯಿಂದ ಸಾರಿಸಿ, ರಂಗೋಲಿ ಹಾಕಿ­ದರು. ಕಜ್ಜಾಯಗಳನ್ನು ಮಾಡಿ, ಹೊಸ ಉಡುಗೆ ಮತ್ತು ಆಲಂಕಾರಗಳೊಂದಿಗೆ ತಟ್ಟೆ ಮತ್ತು ಮೊರಗಳಲ್ಲಿ ಬಾಗಿನವನ್ನಿಟ್ಟು ಸಿರಿಗೌರಿಯನ್ನು ಪ್ರತಿಷ್ಠಾಪಿಸಿರುವ ಮನೆಗಳು ಮತ್ತು ದೇಗುಲಗಳಿಗೆ ಭೇಟಿ ನೀಡಿ ಬಾಗಿನ ಅರ್ಪಿಸಿ, ನೋಮು ದಾರಗಳಿಗೆ ಗೌರವ ಅರ್ಪಿಸಿದರು.

ತಾಲ್ಲೂಕಿನ ಕೆಲ ದೇಗುಲಗಳು ಮತ್ತು ಮನೆಗಳಲ್ಲಿ ದೀಪಾವಳಿಯಂದು ಕಳಸ ರೂಪಿ ಸಿರಿಗೌರಿಯನ್ನು ಪ್ರತಿಷ್ಠಾಪಿಸುವ ಸಂಪ್ರ­ದಾಯ­ವಿದೆ. ಸಿರಿಗೌರಿ ಇರುವ ಸ್ಥಳಕ್ಕೆ ಮೊರ ಅಥವಾ ತಟ್ಟೆಗಳಲ್ಲಿ ಬಾಳೆ ಎಲೆ ಹಾಕಿ 21 ಜೋಡಿ ಅಥವಾ 48ಜೋಡಿ, ಕೆಲವರು ರಾಶಿ ಮೂಲಕ ಕಜ್ಜಾಯಗಳನ್ನು ತುಂಬಿಸಿರುತ್ತಾರೆ. ಬಟ್ಟಲಡಿಕೆ, ಜೋಡಿ ಎಲೆ, ಬಾಳೆಹಣ್ಣು, ಆರಿಶಿನ ಕೊಂಬು, ನೋಮು­ದಾರ ಇವುಗಳನ್ನಿಟ್ಟು ಪೂಜೆ ಸಲ್ಲಿಸು­ತ್ತಾರೆ. ಪುರೋಹಿತರು ಹೇಳುವ ಕಥೆ ಕೇಳುತ್ತಾರೆ.

ಮನೆಗೆ ಬಂದು ನೋಮು ದಾರಗಳನ್ನು ಕಟ್ಟಿ­ಕೊಂಡು ನೋಮದ ಕಜ್ಜಾಯ ಮತ್ತು ಬಾಳೆ ಹಣ್ಣನ್ನು ಪ್ರಸಾದವಾಗಿ ಸ್ವೀಕರಿಸುತ್ತಾರೆ. ನಂತರ ಮನೆಯಲ್ಲಿ ವಿಶೇಷ ಪೂಜೆ ಸಲ್ಲಿಸಿ, ಹಬ್ಬದ ವಿಶೇಷ ಅಡಿಗೆಯನ್ನು ಊಟ ಮಾಡುತ್ತಾರೆ. ಸಂಜೆ ಮನೆಯ ಹೊಸ್ತಿಲಿಗೆ ಪೂಜೆ ಮಾಡಿ, ದೀಪ ಬೆಳಗಿಸಿ ಪಟಾಕಿ ಸಿಡಿಸುತ್ತಾರೆ.

‘ಸಂಸಾರದ ಜೋಡಿ ಬಟ್ಟಲಡಿಕೆಯಂತಿರಲಿ, ಜೋಡಿ ಕಜ್ಜಾಯದಂತಿರಲಿ, ಅರಿಶಿನ ಕೊಂಬಿನಂತೆ ಗಟ್ಟಿಯಾಗಿರಲಿ ಎನ್ನುವ ನಿದರ್ಶನವಾಗಿ ಇವು­ಗ­ಳನ್ನು ಪೂಜೆಗೆ ಇಡುವ ಸಂಪ್ರದಾಯವನ್ನು ನಮ್ಮ ಪೂರ್ವಿಕರು ಬೆಳೆಸಿಕೊಂಡು ಬಂದಿದ್ದಾರೆ’ ಎಂದು ಹಿರಿಯರಾದ ರಾಮಸ್ವಾಮಿ ಅಭಿಪ್ರಾಯಪಟ್ಟರು.

ಪಟಾಕಿ ದಾಸ್ತಾನು ವಶ
ಶಿಡ್ಲಘಟ್ಟ:
ಪಟ್ಟಣದ ಕೋಟೆ ವೃತ್ತದ ಬಳಿ ಇರುವ ಅಂಗಡಿಯೊಂದರಲ್ಲಿ ಅನಧಿಕೃತವಾಗಿ ದಾಸ್ತಾನು ಮಾಡಿ, ಮಾರಾಟಕ್ಕೆ ಇಟ್ಟಿದ್ದ ಪಟಾಕಿಗಳನ್ನು ಪೊಲೀಸರು ಬುಧವಾರ ವಶಪಡಿಸಿಕೊಂಡರು.

ಸಾರ್ವಜನಿಕ ಸ್ಥಳದಲ್ಲಿ ಪಟಾಕಿ ಅಂಗಡಿಗಳನ್ನು ತೆರೆದು, ಮಾರಾಟ ಮಾಡು­ತ್ತಿರುವ ಬಗ್ಗೆ ಸಾರ್ವ­ಜನಿಕರಿಂದ ದೂರು ಬಂದ ಹಿನ್ನೆಲೆಯಲ್ಲಿ ಪುರ ಪೊಲೀಸರು ಬುಧವಾರ ದಾಳಿ ನಡೆಸಿ ₨ ೩ ಲಕ್ಷ ಮೌಲ್ಯದ ಪಟಾಕಿಗಳನ್ನು ವಶಪಡಿಸಿ­ಕೊಂಡರು.

ಪಟಾಕಿ ಮಾರಾಟಗಾರ ಬಾಬು ವಿರುದ್ಧ ಮೊಕದ್ದಮೆ ದಾಖಲಿಸಲಾಗಿದೆ. ವಶಪಡಿಸಿಕೊಂಡ ಪಟಾಕಿಗಳನ್ನು ನ್ಯಾಯಾಲಯದ ಅನುಮತಿ ಮೇರೆಗೆ ಗುರುವಾರ ₨ ೪೫ ಸಾವಿರಕ್ಕೆ ಹರಾಜು ಹಾಕಲಾಯಿತು.

ತಾಲ್ಲೂಕಿನಲ್ಲಿ ಒಂಭತ್ತು ಮಂದಿ ಪಟಾಕಿ ಅಂಗಡಿ ತೆರೆಯಲು ಪರವಾನಗಿ ಪಡೆದಿದ್ದಾರೆ. ಪಟ್ಟಣದ ಏಳು ಮಂದಿ, ಜಂಗಮಕೋಟೆ ಮತ್ತು ಎಚ್‌.ಕ್ರಾಸ್‌ನಲ್ಲಿ ತಲಾ ಒಬ್ಬೊಬ್ಬರು ಪರವಾನಗಿ ಪಡೆದು ಪಟಾಕಿ ಮಾರುತ್ತಿದ್ದಾರೆ.

ಪಟ್ಟಣದಲ್ಲಿ ಬಸವೇಶ್ವರ ದೇವಾಲಯದ ಆವರಣದಲ್ಲಿ ಪಟಾಕಿ ಅಂಗಡಿ ತೆರೆಯಲು ಪರವಾನಗಿ ನೀಡಿದ್ದರೂ ಮುಖ್ಯರಸ್ತೆಯಲ್ಲಿರುವ ಅಂಗಡಿಗಳಲ್ಲೇ ಪಟಾಕಿ ಮಾರಲಾಗುತ್ತಿದೆ. ಪೊಲೀಸರು ಇತ್ತ ಗಮನ ಹರಿಸಬೇಕು ಎಂದು ಜನರು ಆಗ್ರಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT