ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದುಡ್ಡಿನ ಪಾಠ

Last Updated 25 ಆಗಸ್ಟ್ 2014, 19:30 IST
ಅಕ್ಷರ ಗಾತ್ರ

ಅದೊಂದು ದಿನ 6ನೇ ತರಗತಿ ಓದುತ್ತಿರುವ ಪವಿತ್ರಾಳ ತಾಯಿಗೆ ಇದ್ದಕ್ಕಿದ್ದಂತೆ ಆರೋಗ್ಯ ಹದಗೆಟ್ಟಿತು. ವ್ಯೆದ್ಯರಲ್ಲಿಗೆ ಹೋಗಲು ಬಿಡಿಗಾಸೂ ಇರಲಿಲ್ಲ. ಥಟ್ಟನೆ ಆಕೆಗೆ ನೆನಪಾದದ್ದು ತಾನು ಶಾಲೆಯ ಚಿಣ್ಣರ ಬ್ಯಾಂಕಿನಲ್ಲಿ ಉಳಿತಾಯ ಮಾಡಿದ್ದ 300 ರೂಪಾಯಿ.
ತಡಮಾಡದೇ ರಾಮಣ್ಣ ಮೇಷ್ಟ್ರ ಹತ್ತಿರ ಹೋಗಿ ಪರಿಸ್ಥಿತಿಯನ್ನು ವಿವರಿಸಿ ಹಣ ಬಿಡಿಸಿ ತಂದು ತಾಯಿಯನ್ನು ವ್ಯೆದ್ಯರಿಗೆ ತೋರಿಸಿ ನಿಟ್ಟುಸಿರು ಬಿಟ್ಟಳು. ಇದು ನಡೆದದ್ದು ಬಳ್ಳಾರಿ ಜಿಲ್ಲೆಯಲ್ಲಿನ ಹಗರಿಬೊಮ್ಮನಹಳ್ಳಿ ತಾಲ್ಲೂಕಿನ ಹಗರಿಕ್ಯಾದಿಗಿಹಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ.

ಈ ಬ್ಯಾಂಕ್, ಶಿಕ್ಷಕ ಕೆ. ರಾಮಣ್ಣ ಅವರ ಕಲ್ಪನೆ. ಊಟದ ವಿರಾಮದ ಸಮಯದಲ್ಲಿ ವಿದ್ಯಾರ್ಥಿಗಳು ಅಂಗಡಿಯಿಂದ ತಿಂಡಿಗಳನ್ನು ಖರೀದಿಸಿ ತರಗತಿಗಳಲ್ಲಿ ತಿನ್ನುವುದಲ್ಲದೇ ಎಲ್ಲೆಂದರಲ್ಲಿ ಬಿಸಾಡುತ್ತಿದ್ದುದನ್ನು ಕಂಡರು. ಈ ಚಟ ಬಿಡಿಸಲು, ವಿದ್ಯಾರ್ಥಿಗಳು ತರುವ ಹಣವನ್ನು ತಮಗೆ ಕೊಡಲು ತಿಳಿಸಿ, ಬೇಕಾದಾಗ ಕೊಡುವುದಾಗಿ ಅವರ ಮನವೊಲಿಸಿದರು. ವಿದ್ಯಾರ್ಥಿಗಳು ಹಣ ಶಿಕ್ಷಕರಿಗೆ ಕೊಡುತ್ತಾ ಹೋದರು. ಆದರೆ ವಾಪಾಸು ಪಡೆಯುವುದು  ಕ್ರಮೇಣ ಕಡಿಮೆಯಾಯಿತು.

ಬ್ಯಾಂಕ್‌ ಯೋಚನೆ
ಮಕ್ಕಳ ಹಣದ ಲೆಕ್ಕ ಇಟ್ಟುಕೊಳ್ಳುವುದೇ ಒಂದು ಕೆಲಸವಾದಾಗ ಇದಕ್ಕೊಂದು ಬ್ಯಾಂಕ್ ರೂಪವನ್ನೇಕೆ ಕೊಡಬಾರದೆಂದು ಯೋಚಿಸಿ, ವಿದ್ಯಾರ್ಥಿಗಳಿಂದ ಹಣ ತೆಗೆದುಕೊಳ್ಳಲು ತರಗತಿಗೊಬ್ಬ ಲೀಡರ್‌ ನೇಮಿಸಿದರು. ಅವರಿಂದ ಸಂಗ್ರಹವಾದ ಹಣದ ನಿರ್ವಹಣೆಗಾಗಿ ವಿದ್ಯಾರ್ಥಿಗಳನ್ನೇ ವ್ಯವಸ್ಥಾಪಕ ಮತ್ತು ಸಹಾಯಕ ವ್ಯವಸ್ಥಾಪಕರನ್ನಾಗಿ ಮಾಡಿದರು.

ಸುಲಭ ನಿರ್ವಹಣೆ
ಬ್ಯಾಂಕಿಗೆ ಒಂದು ರೂಪ ಬಂದಮೇಲೆ ತರಗತಿಗೊಂದು ಪಿಗ್ಮಿ ಪುಸ್ತಕ, ಶಾಲೆಗೊಂದು ಲೆಡ್ಜರ್ ಪುಸ್ತಕ ತೆರೆಯಲಾಯಿತು. ಪ್ರತಿದಿನ ಶಾಲಾ ಪ್ರಾರ್ಥನೆ ಮುಗಿದು ತರಗತಿಗಳಿಗೆ ಹೋದ ಕೂಡಲೇ ತರಗತಿಯ ಲೀಡರ್ ವಿದ್ಯಾರ್ಥಿಗಳು ನೀಡುವ ಹಣವನ್ನು ಪಡೆದು ಪಿಗ್ಮಿ ಪುಸ್ತಕಕ್ಕೆ ನಮೂದಿಸಿಕೊಳ್ಳಬೇಕು. ಅಂತಿಮವಾಗಿ ಪ್ರತಿ ತರಗತಿಯಿಂದ ಸಂಗ್ರಹವಾದ ಹಣವನ್ನು ವ್ಯವಸ್ಥಾಪಕ ಪಡೆದು ಲೆಡ್ಜರ್ ಪುಸ್ತಕದಲ್ಲಿ ನಮೂದಿಸಿ ಬೀರುವಿನಲ್ಲಿ ಹಣ ಮತ್ತು ಲೆಕ್ಕದ ಪುಸ್ತಕ ಭದ್ರವಾಗಿಟ್ಟು ಬೀಗ ಹಾಕಿ ಬೀಗದ ಕೈಯನ್ನು ಶಿಕ್ಷಕರಿಗೆ ನೀಡಿ ತರಗತಿಗೆ ತೆರಳಬೇಕು. ಇದು ದಿನನಿತ್ಯದ ಕಾರ್ಯ. ಇಷ್ಟೆಲ್ಲಾ ಪ್ರಕ್ರಿಯೆ ಶಿಕ್ಷಕರು ಹಾಜರಾತಿ ತೆಗೆದುಕೊಳ್ಳಲು ತರಗತಿ ಕೋಣೆಗೆ ಬರುವ ಮುನ್ನವೇ ಮುಗಿದು ಹೋಗುವುದು ವಿಶೇಷ.

ಬಾಲಕಿಯರೇ ಮುಂದು
ಈಗ ಶಾಲೆಯಲ್ಲಿ ದಿನವೊಂದಕ್ಕೆ ₨ 200 ರಿಂದ 800ರವರೆಗೆ ಉಳಿತಾಯ ಸಾಧ್ಯವಾಗಿದೆ! ಹಣ ಉಳಿತಾಯದಲ್ಲಿ ಬಾಲಕಿಯರೇ ಮೇಲುಗೈ ಸಾಧಿಸಿರುವುದೂ ವಿಶೇಷ. ಚಿಣ್ಣರ ಬ್ಯಾಂಕಿನಲ್ಲಿ ಹಣ ಉಳಿತಾಯ ಮಾಡಲು ವಿದ್ಯಾರ್ಥಿಗಳಲ್ಲಿ ಸ್ಪರ್ಧೆ ಏರ್ಪಟ್ಟಿದೆ. ಕೆಲವೊಂದು ಬಾರಿ ಶನಿವಾರ, ಭಾನುವಾರ ಪಾಲಕರೊಂದಿಗೆ ಹೊಲಗದ್ದೆಗಳಲ್ಲಿ ದುಡಿದ ಹಣ, ಊರಿಗೆ ಹೋದಾಗ ನೆಂಟರಿಷ್ಟರು ಕೊಡುವ ಹಣವೂ ಚಿಣ್ಣರ ಬ್ಯಾಂಕ್ ಸೇರುತ್ತಿದೆ.

ಷರತ್ತುಗಳು
ಹಣ ಉಳಿತಾಯ ಅಗತ್ಯವಾದರೂ, ಅದಕ್ಕೆ ಶಿಕ್ಷಕರು ವಿದ್ಯಾರ್ಥಿಗಳಿಗೆ ಕೆಲವು ಷರತ್ತುಗಳನ್ನೂ ವಿಧಿಸಿದ್ದಾರೆ. ಅವುಗಳೆಂದರೆ ಉಳಿತಾಯ ಮಾಡಬೇಕು ಎಂಬ ಕಾರಣಕ್ಕೆ ಪಾಲಕರನ್ನು ಪೀಡಿಸುವಂತಿಲ್ಲ. 50 ರೂಪಾಯಿಗಿಂತ ಹೆಚ್ಚಿನ ಹಣ ಕಟ್ಟುವಾಗ ಅಥವಾ ಪಡೆಯುವಾಗ ಶಿಕ್ಷಕರ ಗಮನಕ್ಕೆ ತರಬೇಕು, ಪಾಲಕರನ್ನು ಶಾಲೆಗೆ ಕರೆಸಿ ವಿಚಾರಿಸಿದ ನಂತರ ಸಕಾರಣವಿದ್ದಲ್ಲಿ ಮಾತ್ರ ನೂರು ರೂಪಾಯಿ ಕೊಡುವುದು ತೆಗೆದುಕೊಳ್ಳುವ ಪ್ರಕ್ರಿಯೆ ನಡೆಯುತ್ತದೆ.

ಸಮವಸ್ತ್ರ ಹೊಲಿದ ಕೂಲಿ, ಶಾಲಾ ಶುಲ್ಕ ಪಾವತಿ, ಶಾಲಾ ಪ್ರವಾಸದ ಸಂದರ್ಭದಲ್ಲಿನ ವೆಚ್ಚಕ್ಕೆ ಈ ಹಣವನ್ನೇ ವಿದ್ಯಾರ್ಥಿಗಳು ಬಳಸಿಕೊಳ್ಳುತ್ತಿದ್ದಾರೆ. ಶಾಲೆಯಿಂದ ಹೊರಹೋಗುವ ಎಂಟನೇ ತರಗತಿಯ ವಿದ್ಯಾರ್ಥಿಗಳ ಉಳಿತಾಯದ ಮೊತ್ತವನ್ನು, ವರ್ಗಾವಣೆ ಪ್ರಮಾಣ ಪತ್ರದ ಜೊತೆಗೆ ನೀಡಲಾಗುತ್ತದೆ. ಈ ಹಣದಿಂದಲೇ ಎಲ್.ಐ.ಸಿ. ಪಾಲಿಸಿ ಮಾಡಿಸಿರುವ ವಿದ್ಯಾರ್ಥಿಗಳ ನಿದರ್ಶನಗಳೂ ಇಲ್ಲಿವೆ. ಈ ವ್ಯವಸ್ಥೆ ಪ್ರಾರಂಭಗೊಂಡ ನಾಲ್ಕು ವರ್ಷಗಳಿಂದ ವಿದ್ಯಾರ್ಥಿಗಳು ನೀಡುವ ಒಂದು, ಎರಡು ರೂಪಾಯಿಗಳಿಂದಲೇ ಇಲ್ಲಿಯವರೆಗೆ ಸುಮಾರು 10ಸಾವಿರ ರೂಪಾಯಿ ಸಂಗ್ರಹವಾಗಿದೆ!

ಪಾರದರ್ಶಕತೆ
ಮಕ್ಕಳಿಂದ ಪಡೆವ ಈ ಹಣದ ವಿಷಯದಲ್ಲಿ ಪಾರದರ್ಶಕತೆ ಇಲ್ಲದಿದ್ದರೆ ಹೇಗೆ? ಅದಕ್ಕೆಂದೇ ಪ್ರತಿವರ್ಷ ವಿನಾಯಕ ಮೂರ್ತಿಯ ವಿಸರ್ಜನೆಯಂದು ಗ್ರಾಮದ ಎಲ್ಲರ ಸಮ್ಮುಖದಲ್ಲಿ ವರ್ಷದ ವಹಿವಾಟಿನ ವಿವರವನ್ನು ಒಪ್ಪಿಸುವ ಪಾರದರ್ಶಕತೆಯನ್ನು ಕಾಯ್ದುಕೊಂಡಿರುವುದ ರಿಂದ ಎಸ್.ಡಿ.ಎಂ.ಸಿ. ಅಥವಾ ಗ್ರಾಮದ ಜನರಿಗಾಗಲಿ ಶಾಲೆಯ ಚಿಣ್ಣರ ಬ್ಯಾಂಕಿಂಗ್ ವ್ಯವಹಾರದ ಮೇಲೆ ತುಂಬಾ ವಿಶ್ವಾಸ. ‘ವಿದ್ಯಾರ್ಥಿಗಳಿಗೆ ಸಾಕಷ್ಟು ಬ್ಯಾಂಕಿಂಗ್ ಜ್ಞಾನ ಬಂದಿದೆ, ಈ ಹಂತದಲ್ಲಿ ಉಳಿತಾಯದ ಮನೋಭಾವ ಮೂಡುತ್ತಿರುವುದು ನಮಗೆ ಖುಷಿ ತಂದಿದೆ, ನಮ್ಮ ಶಿಕ್ಷಕರ ಈ ಪ್ರಯತ್ನ ಪ್ರಶಂಸನೀಯ’ ಎನ್ನುತ್ತಾರೆ ಮುಖ್ಯಶಿಕ್ಷಕ ದೇವಪ್ಪ.

‘ನಮ್ಮೂರಿನ ಮಕ್ಕಳಲ್ಲೀಗ ರೊಕ್ಕ ಉಳಿತಾಯ ಮಾಡೋದ್ರಾಗ ನಾಮೇಲು ನೀಮೇಲು ಅನ್ನೋದು ಬೆಳೆದೈತಿ, ಮಕ್ಳು ಸುಮ್‌ಸುಮ್ನೆ ಅಂಗ್ಡಿಗೋಗಿ ತಿನ್ನೋ ಬಾಯಿಚಟ ಹೋಗೇತಿ’ ಎನ್ನುತ್ತಾರೆ ಗ್ರಾಮ ಪಂಚಾಯಿತಿ ಸದಸ್ಯ ದೇವೇಂದ್ರಗೌಡ ಪಾಟೀಲ್. ದಿನದಿನಕ್ಕೂ ವಿದ್ಯಾರ್ಥಿಗಳ ಉಳಿತಾಯದ ಹಣ ಹೆಚ್ಚು ಕೂಡುತ್ತಿರುವುದರಿಂದ ಈ ಹಣಕ್ಕೆ ಕಡಿಮೆ ಮಟ್ಟದ ಬಡ್ಡಿ ರೂಪದಲ್ಲಿ ಲಾಭಾಂಶ ಕೊಡುವ ಸಲುವಾಗಿ ಸ್ವಲ್ಪ ಮೊತ್ತವನ್ನು ಯಾವುದಾದರೂ ರಾಷ್ಟ್ರೀಕೃತ ಬ್ಯಾಂಕಿನಲ್ಲಿ ಠೇವಣಿಯಾಗಿ ಇಡುವ ಯೋಚನೆ ಇವರ ಮುಂದಿದೆ.

ಈ ಹಣಕ್ಕೆ ಸ್ಪಷ್ಟ ರೂಪ ನೀಡಿ ಶಾಲೆಯಿಂದ ಹೊರಹೋಗುವ ಪ್ರತಿ ವಿದ್ಯಾರ್ಥಿಯು ಇದೇ ರೀತಿಯ ಉಳಿತಾಯದ ಮನೋವೃತ್ತಿ ಮುಂದುವರಿಸುವ ನಿಟ್ಟಿನಲ್ಲಿ ಪ್ರಯತ್ನ ಸಾಗಬೇಕಿದೆ ಎನ್ನುತ್ತಾರೆ ರಾಮಣ್ಣ ಮೇಷ್ಟ್ರು. ತಮ್ಮ ಶಾಲೆಯ ಮುಖ್ಯೋಪಾಧ್ಯಾಯರು ಮತ್ತು ಎಲ್ಲಾ ಶಿಕ್ಷಕರ ಸಹಕಾರದಿಂದ ಇದು ಸಾಧ್ಯವಾಗಿದೆ ಎಂದು ಹೇಳುವುದನ್ನು ಮರೆಯುವುದಿಲ್ಲ.

ಇತ್ತೀಚಿಗೆ ಆರ್.ಬಿ.ಐ 10 ವರ್ಷಕ್ಕೂ ಮೇಲ್ಪಟ್ಟ ಮಕ್ಕಳಿಗೆ ಸ್ವತಂತ್ರ ಖಾತೆ ತೆರೆಯಲು ಹೊಸ ಮಾರ್ಗಸೂಚಿ ನೀಡಿದೆ. 2001 ಜನಗಣತಿ ಪ್ರಕಾರ ಭಾರತದಲ್ಲಿರುವ ಮಕ್ಕಳ ಸಂಖ್ಯೆ 15.88 ಕೋಟಿ. ಇವರ ಪೈಕಿ ಶಾಲೆಗೆ ಹೋಗುವ ಮಕ್ಕಳಿಗಾಗಿ ಶಾಲಾ ಬ್ಯಾಂಕುಗಳು ಕಾರ್ಯನಿರ್ವಹಿಸುವಂತಾದರೆ ಉಳಿತಾಯದ ಮೊತ್ತ ಎಷ್ಟಾಗಬಹುದು? ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಲ್ಲಿ ಉಳಿತಾಯ ಪ್ರವೃತ್ತಿ ಬೆಳೆಸುತ್ತಾ ಅವರಿಗೆ ಹಣದ ಮಹತ್ವ, ಬ್ಯಾಂಕಿಂಗ್ ವ್ಯವಸ್ಥೆ ಬಗ್ಗೆ ತಿಳಿಸಿಕೊಡುವ ನಿಟ್ಟಿನಲ್ಲಿ ಶಾಲೆ ಮುಂದುವರೆದಿದೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT