ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೃಶ್ಯಕ್ಕೆ ಬಂದ ಶೃಂಗಾರ ಕವಿ ಉಮರ್ ಖಯ್ಯಾಂ

Last Updated 26 ಮೇ 2016, 19:41 IST
ಅಕ್ಷರ ಗಾತ್ರ

ಕವಿ ಉಮರ್‌ಖಯ್ಯಾಂ ಕುರಿತ ನಾಟಕ ಕನ್ನಡದಲ್ಲಿ ಇದುವರೆಗೆ ಬಂದಿರಲಿಲ್ಲ. ಆ ಕೊರತೆ ತುಂಬುವಂತೆ ಇತ್ತೀಚೆಗೆ ಎಡಿಎ ರಂಗಮಂದಿರದಲ್ಲಿ ದೃಶ್ಯಕಾವ್ಯವೊಂದು ಮೂಡಿಬಂದಿತು.

ಸಂತರ, ಅನುಭಾವಿಗಳ ಹಾಗೂ ಇಂತಹ ಭೋಗ ಕವಿಗಳ ಗುಂಗಿನಲ್ಲಿರುವ ಉದ್ಯಮಿ ಶ್ರೀಹರಿ ಖೋಡೆ ಅವರು ಉಮರ್ ಖಯ್ಯಾಂ ರಂಗದ ಮೇಲೆ ಬರಲು ಕಾರಣರಾದರು.

ವೃತ್ತಿ ರಂಗಭೂಮಿಯ ಹಿರಿಯ ಕಲಾವಿದ, ಗುಬ್ಬಿ ವೀರಣ್ಣ ಪ್ರಶಸ್ತಿ ಪುರಸ್ಕೃತ ಫಕೀರಪ್ಪ ವರವಿ ಅವರು ಕವಿತೆಗಳ ಮಧ್ಯದ ಅಂತರ (ಗ್ಯಾಪ್) ತುಂಬಲು ಸಂಭಾಷಣೆ ರಚಿಸಿ, ನಿರ್ದೇಶಿಸಿದರು.

ಇದನ್ನು ಸಾದರಪಡಿಸಿದವರು ಇಳಕಲ್‌ನ ಸ್ನೇಹರಂಗದ ಕಲಾವಿದರು. ಮಹಾಂತೇಶ ಗಜೇಂದ್ರಗಡ ಅವರ ನೇತೃತ್ವದಲ್ಲಿ ಆ ಭಾಗದ ವೃತ್ತಿ, ಹವ್ಯಾಸಿ ಕಲಾವಿದರು ಹಾಗೂ ವಿದ್ಯಾರ್ಥಿಗಳು ಬೆಂಗಳೂರಿನಲ್ಲಿ ಈ ನಾಟಕದ ಪ್ರಥಮ ಪ್ರದರ್ಶನ ನೀಡಿದರು.

ಉಮರ್ ಖಯ್ಯಾಂನನ್ನು ಮೊದಲು ಕನ್ನಡಿಗರಿಗೆ ಪರಿಚಯಿಸಿದವರು ಡಿ.ವಿ.ಜಿ.
‘ಅಲ್ಲಿ ಮರದಡಿಯಲ್ಲಿ
ನಲ್ಗಾವ್ಯವೊಂದಿರಲು
ಬಟ್ಟಲಲಿ ಮಧು ತುಂಬಿರಲು
ನಲ್ಲೆ ಜತೆಗಿರಲು
ಬೇರೆ ಸ್ವರ್ಗ ಬೇಕೇನಿನ್ನು...'

ಇಂಥ ಹತ್ತಾರು ಶೃಂಗಾರ ಕವಿತೆಗಳು ರಸಿಕರ ನಾಲಿಗೆಯ ಮೇಲೆ ಲಾಲಿ ಹಾಡಲು ಅವರೇ ಕಾರಣ. ಡಿ.ವಿ.ಜಿ.ಯವರ ಅನುವಾದಿತ ಕವಿತೆಗಳ ಜತೆಗೆ ಶ್ರೀಹರಿ ಖೋಡೆಯವರ ರಚನೆಯ ಕವಿತೆಗಳೂ ನಾಟಕದಲ್ಲಿ ಸೇರಿವೆ. ಎಲ್ಲ ಕವಿತೆಗಳಿಗೆ ಸುಂದರವಾದ ರಾಗ ಸಂಯೋಜನೆ ಮಾಡಿದವರು ಮೈಸೂರು ಗೋಪಿ ಮತ್ತು ಸುದರ್ಶನ್.

ಇವನ್ನು ಸೊಗಸಾಗಿ ಹಾಡಿದವರು ರಾಜೇಶ್‌ಕೃಷ್ಣನ್‌ ಹಾಗೂ ಅನುರಾಧಾಭಟ್. ಈ ಹಾಡು, ನೃತ್ಯಗಳ ರೂಪಕ ಧಾರೆ ಮನಸ್ಸಿಗೆ ಮುದ ನೀಡುವಂತೆ ಸಾಗುತ್ತದೆ. ಇದು ನಾಟಕ ಎಂದು ಪ್ರಕಟಿಸಿದ ಫಕೀರಪ್ಪ ಅವರು ಮಧ್ಯೆ ಸಂಭಾಷಣೆ ಹೆಣೆದು ಕತೆ ಬೆಳೆಸುವ ಪ್ರಯತ್ನ ಮಾಡಿದ್ದಾರೆ.

ಉಮರ್‌ಖಯ್ಯಾಂನ ಪ್ರಥಮ ರಾತ್ರಿಯಿಂದ ಶುರುವಾಗುವ ನಾಟಕದಲ್ಲಿ ಸಾಕಷ್ಟು ಘಟನಾವಳಿಗಳಿಲ್ಲ.  ಉಮರ್‌ಖಯ್ಯಾಂ ಇರಾನ್ ದೇಶದ ಸ್ಥಿತಿವಂತ ಕುಟುಂಬದಲ್ಲಿ ಹತ್ತು ಶತಮಾನಗಳ ಹಿಂದೆ ಜನಿಸಿದವನು. ಅವನ ಕವಿತೆಗಳನ್ನು ಹೊರತುಪಡಿಸಿದರೆ, ಅವನ ಬದುಕು ಕಟ್ಟಿಕೊಡುವ ಇತಿಹಾಸದ ಆಕರಗಳು ಹೆಚ್ಚಿಗೆ ಲಭ್ಯವಿಲ್ಲ.

‘ನಾನೊಬ್ಬನೇ ಏಕೆ? ನೀನೂ ಸೆರೆ ಕುಡಿ ಪ್ರಿಯೆ’ ಎಂದು ಪ್ರಥಮರಾತ್ರಿಯಂದೇ ತನ್ನ ಪತ್ನಿ ಗುಲಾಬಿಯನ್ನು ಒತ್ತಾಯಿಸುವುದರೊಂದಿಗೆ ದೃಶ್ಯಕಾವ್ಯ ಬಿಚ್ಚಿಕೊಳ್ಳುತ್ತದೆ.

ಮೊದಮೊದಲು ನಿರಾಕರಿಸಿದರೂ ಗಂಡನ ಆಜ್ಞಾನುವರ್ತಿಯಾದ ಗುಲಾಬಿ ಅವನ ಹೆಜ್ಜೆಯಲ್ಲೇ ನಡೆಯುತ್ತಾಳೆ. ಇದೇ ಗುಂಗಿನಲ್ಲಿ ಉಮರ್ ಪುಂಖಾನುಪುಂಖವಾಗಿ ಕವಿತೆಗಳನ್ನು ರಚಿಸತೊಡಗುತ್ತಾನೆ.


‘ಚೆಲುವೆ
ಈ ನಿನ್ನ ಚೆಲುವು ಎಲ್ಲಿಯದು?
ಪೂರ್ಣ ಚಂದ್ರನನು
ಮೀರಿಸುತಿಹುದು..’
ಎಂದು ಶೃಂಗಾರ ರಸದಲ್ಲಿ ಮುಳುಗೇಳುತ್ತಾನೆ.


ಈ ಮಧ್ಯೆ ಉಮರ್‌ನನ್ನು ಮತ್ತಷ್ಟು ಅರ್ಥೈಸುವಂತೆ ಖೋಡೆಯವರ, ‘ಚಂದ್ರನ ದೃಷ್ಟಿ ತಾಗದೆ ಇರಲಿ, ಕೇಶರಾಶಿಯಲಿ ಮುಖ ಮರೆಸು... ನಲ್ಲನ ಕಣ್ಣು ಬೀಳದೆ ಇರಲಿ, ಬಣ್ಣದ ಸೆರಗಲಿ ಮುಖಮರೆಸು...’ ಮುಂತಾದ ಕವಿತೆಗಳು ಶೃಂಗಾರವನ್ನು ಪೋಷಿಸುತ್ತವೆ.

‘ಕುಡಿತದಲ್ಲೇ ಎಲ್ಲಿವರೆಗೆ ಕಾಲ ಕಳೆಯುವುದು...?’
ಕವಿ ಮನಸ್ಸಿನ ಉಮರ್‌ನಲ್ಲಿ ಪ್ರಶ್ನೆಗಳು ಏಳುತ್ತವೆ. ಜಿಜ್ಞಾಸೆ ಶುರುವಾಗುತ್ತದೆ. ಕೆಲವೊಮ್ಮೆ ನಿರಾಸೆಯನ್ನೂ ಅನುಭವಿಸುತ್ತಾನೆ.
‘ದೇವಾ ನೀನೆನ್ನ
ಸಂತಸದ ಕದವ ಮುಚ್ಚಿರುವೆ...
ನೀ ನನ್ನ ಮಧುಘಟವ ಒಡೆದಿರುವೆ..
ಕುಡಿದವನು ನಾನು
ಮತ್ತೇರಿದಂತಿಹ ನೀನು
ನಾನು ಚಪಲದ ಗುಲಾಮ
ನೇಮದಿಂದಲಿ ನಡೆದರೆ
ನೀ ಸ್ವರ್ಗ ನೀಡುವುದಾದರೆ
ಅದು ವರ್ತಕನ ಮಾತಾಯಿತು...'
ಇಷ್ಟೆಲ್ಲ ಪ್ರಶ್ನೆ, ತರ್ಕಗಳ ನಂತರವೂ ಆ ಸರ್ವಶಕ್ತನದು ಗಾಢಮೌನ.

ದ್ರಾಕ್ಷಾರಸದಿಂದ ಮತ್ತೇರಿದ ಉಮರ್,
‘ದ್ರಾಕ್ಷಿಯು ದೇವರೇ ಬೆಳೆದ ಬೆಳೆಯಲ್ಲವೆ? ವರ್ಜ್ಯ ಎನ್ನುವುದಾದರೆ ತಂದವನಾರು..?’ ಎಂದು ಪ್ರಶ್ನಿಸುತ್ತಾನೆ. ಪ್ರಶ್ನೆಗಳಿಗೆ ನಿಂತುಹೋಗಿದ್ದರೆ ಉಮರ್ ಕವಿಯಾಗಿ ಬೆಳೆಯುತ್ತಿರಲಿಲ್ಲ.
‘ತರ್ಕಯುಕ್ತಿಗಳಿಂದ ತತ್ವಾಧನ ಅರಸುವರು
ಎತ್ತುಗಳ ಹಿಡಿದು ಹಾಲು ಕರೆಯ ಹೊರಟವರು
ದೇಹವೂ ಜೀವವೂ ಬೇರೆ ಎನುವರು
ಬೈತಲೆ ನೋಡಿ ತಲೆ ಎರಡೆಂದೆಣಿಸುವರು...’
ಉಮರ್‌ನ ಅಮೋಘ ಕವಿತ್ವ ಹೀಗೆ ರೂಪಕಗಳಲ್ಲಿ ಬೆಳೆಯುತ್ತ ಹೋಗುತ್ತದೆ.

‘ಸೆರೆಗುಡುಕನೆನ್ನುತಿಹರೆನ್ನ
ನಾನಹುದು
ಸ್ತ್ರೀಲೋಲವೆನ್ನುತಿಹರೆನ್ನ
ನಾನಹುದು
ನನ್ನ ಬಹಿರಂಗದ ಬದುಕು ಎಂತಿದ್ದರೇನು?
ಅಂತರಂಗದೊಳಿಹೆ ನನ್ನಂತೆ ನಾನು..’
ಎಂಬ ಸ್ವಸಮರ್ಥನೆಯ ಕವಿತೆಗಳಿಂದ ಶುರುವಾದರೂ- ಅದು  ಮುಂದೆ ಸಾರ್ವತ್ರಿಕತೆ ಪಡೆದುಕೊಳ್ಳುತ್ತದೆ.

‘ಹಳಿಯದಿರು ಕುಡುಕರನು
ನೀಂ ಕುಡಿಯದಿರ್ದೊಡೆ
ಕುಡಿತಕಿಂ ಕೀಳ್ಗೆಲಸ
ನೂರ ನೀಮಾಳ್ಪೆ...’
ಕವಿತೆ ಅಂಥದ್ದರಲ್ಲಿ ಒಂದು.
ಹಾಗಾದರೆ ಉಮರ್‌ನ ಬದುಕಿನ ಅನುಭವ ಗಾಢವಾದದ್ದಿರಬೇಕು.

ಖಗೋಳಶಾಸ್ತ್ರ, ಜ್ಯೋತಿಷ್ಯಶಾಸ್ತ್ರ ಕಲಿತ ನಂತರ ಕವಿತೆ ರಚನೆಗೆ ತೊಡಗಿದ ಉಮರ್ ವಿದ್ವಾಂಸನೂ ಹೌದು. ಅಧ್ಯಯನ, ಅನುಭವ ಎರಡರಲ್ಲೂ ಪಳಗಿದ ಉಮರ್‌ನ ಖಾಸಗಿ ಬದುಕು ಹಾಗೂ ಆ ಕಾಲವನ್ನು ಕಾಲ್ಪನಿಕ ಆಧಾರದ ಮೇಲೆ ಕಟ್ಟುವುದಾದರೆ ನಾಟಕ ಸಂಕೀರ್ಣವಾಗಿ ಬೆಳೆಯುತ್ತದೆ. ಆದರೆ ಈ ನಾಟಕ ಶೃಂಗಾರಕ್ಕೆ ಹೆಚ್ಚು ಸೀಮಿತವಾಗಿದೆ.

ಉಮರ್‌ನ ಪಾತ್ರದಲ್ಲಿ ವೃತ್ತಿರಂಗಭೂಮಿಯ ಹೆಸರಾಂತ ನಟ ಜಯರಾಜ ಹೊಸಮನಿ, ಗುಲಾಬಿ ಪಾತ್ರದಲ್ಲಿ ಶ್ವೇತಾ ಅಭಿನಯಿಸಿದರು. ಶೃಂಗಾರರಸ ಕಟ್ಟಿಕೊಡಲು ಶಕ್ತಿಮೀರಿ ಶ್ರಮಿಸಿದರು. ಆ ಪಾತ್ರಗಳಿಗೆ ಒಪ್ಪುವ ಮುಖದ ಕಳೆ ಅವರಲ್ಲಿರಲಿಲ್ಲ. ತಾಯಿಯ ಪಾತ್ರದಲ್ಲಿ ಜನಪ್ರಿಯ ವೃತ್ತಿ ನಟಿ ಉಮಾರಾಣಿಗೆ ಹೆಚ್ಚಿನ ಅವಕಾಶ ಇರಲಿಲ್ಲ.

ಕುಮಾರ ಕುಂಬಾರ, ವಿಜಯ ಗುಳೇದ, ಮತ್ತಣ್ಣ ಬೀಳಗಿ ಮುಂತಾದವರು ಚೆನ್ನಾಗಿ ಅಭಿನಯಿಸಬಲ್ಲರು. ಮತ್ತಷ್ಟು ತರಬೇತಿ ಬೇಕಿತ್ತು. ಹಾಗೆ ನೋಡಿದರೆ ನಾಟಕದ ಏಕತಾನತೆಯನ್ನು ಮುರಿದು ಸುಂದರ ದೃಶ್ಯಕಾವ್ಯವಾಗಿಸಿದವರು ಇಳಕಲ್‌ನ ಎಸ್.ಆರ್.ಕಂಠಿ ಶಿಕ್ಷಣ ಮಹಾವಿದ್ಯಾಲಯದ ವಿದ್ಯಾರ್ಥಿನಿಯರು. ಗುಲಾಬಿ ವರ್ಣದ ಆಕರ್ಷಕ ಉಡುಗೆ ತೊಡಿಸಿ ಅವರಿಗೆ ನೃತ್ಯ ಸಂಯೋಜಿಸಿದ ರೇಣುಕಾ ಅಮೀನಗಡ ಅಭಿನಂದನಾರ್ಹರು.

ರಂಗಸಜ್ಜಿಕೆ, ಪ್ರಸಾಧನ ಉತ್ತಮವಾಗಿತ್ತು. ಪೂರ್ಣಚಂದ್ರನನ್ನು ಬೆಳಕಲ್ಲಿ ಮೂಡಿಸಿದ್ದು, ಪ್ರತ್ಯಕ್ಷ ಪಾರಿವಾಳವನ್ನೇ ತಂದದ್ದು ಸರಿಯಿತ್ತು. ರಂಗದ ಮೇಲೆ ಅವುಗಳ ಸದ್ಬಳಕೆ ಆಗಲಿಲ್ಲ. ಮುಕ್ಕಾಲು ಶತಮಾನದ ಅಭಿನಯ, ಸಂಘಟನೆಯ ನಂತರವೂ- ಫಕೀರಪ್ಪ ವರವಿ ಉತ್ಸಾಹ ಕಳೆದುಕೊಳ್ಳದೇ ಇರುವುದರಿಂದ ಅವರಿನ್ನೂ ಪ್ರಸ್ತುತರಾಗಿಯೇ ಇದ್ದಾರೆ.

ವೃತ್ತಿರಂಗಭೂಮಿಯ ಘಟಾನುಘಟಿಗಳೆಲ್ಲ ನೇಪಥ್ಯಕ್ಕೆ ಸರಿದರೂ, ಯುವಜನಾಂಗದ ಜತೆ ಬೆರೆತಿರಬಲ್ಲೆ ಎನ್ನುವ ಛಲದ ಮಾಸ್ಟರ್ ಹಿರಣ್ಣಯ್ಯ, ಪರಮಶಿವನ್, ಏಣಗಿ ಬಾಳಪ್ಪ, ಲೈಕುದ್ದೀನ್ ಆಲ್ದಾಳ ಕವಿ, ಸುಭದ್ರಮ್ಮ ಮನ್ಸೂರು ಮುಂತಾದವರ ಸಾಲಲ್ಲೇ ಫಕೀರಪ್ಪ ನಿಲ್ಲುತ್ತಾರೆ.

ಮಹಾಂತೇಶ ಗಜೇಂದ್ರಗಡ ಸಾರಥ್ಯದಲ್ಲಿ ‘ಮಾಯಾ ಮದಮರ್ದನ ಅಲ್ಲಮಪ್ರಭು’ ನಾಟಕ- ರೂಪಕ ಮಾಡಿಸಿದ್ದ ಫಕೀರಪ್ಪನವರು, ಇದೀಗ ಅಕ್ಬರ್ ಬೀರಬಲ್ ನಾಟಕ ಸಿದ್ಧತೆಯಲ್ಲಿ ತೊಡಗಿದ್ದಾರೆ. ಬೆನ್ನಿಗೆ ಶ್ರೀಹರಿ ಖೋಡೆ ಇದ್ದಾರೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT