ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇಗುಲ ಪ್ರವೇಶವೇ ಆದ್ಯತೆಯೇ?

ಸಿಗರನಹಳ್ಳಿ ಪ್ರಕರಣ ದಲಿತರ ವಾಸ್ತವ ಬದುಕಿಗೆ ಸಂಬಂಧಿಸಿದ ಪ್ರಶ್ನೆಗಳನ್ನು ಹುಟ್ಟುಹಾಕಿದೆ
Last Updated 25 ಏಪ್ರಿಲ್ 2016, 19:46 IST
ಅಕ್ಷರ ಗಾತ್ರ

ಹಾಸನ ಜಿಲ್ಲೆಯ ಹೊಳೆನರಸೀಪುರ ತಾಲ್ಲೂಕಿನ ಸಿಗರನಹಳ್ಳಿ ಗ್ರಾಮದ ಬಸವೇಶ್ವರ ದೇಗುಲ ಪ್ರವೇಶ ಪ್ರಕರಣ ಕಡೆಗೂ ಸುಖಾಂತ್ಯ ಕಂಡಿದೆ. ದಲಿತರನ್ನೂ ಒಳಗೊಂಡಂತೆ ಸರ್ವರಿಗೂ ಅದು ಮುಕ್ತವಾಗಿದೆ. ಪ್ರಶ್ನೆಯೇನೆಂದರೆ, ಇದನ್ನು ದಲಿತರು ತಮಗೆ ದಕ್ಕಿದ ಗೆಲುವು ಎಂದು ಭಾವಿಸಬೇಕೇ ಅಥವಾ ದೇಗುಲ ಪ್ರವೇಶವೇ ದಲಿತರ ಆದ್ಯತೆಯ ವಿಷಯವಾಗಬೇಕೇ ಅಥವಾ ದಲಿತರ ಮಾನವ ಹಕ್ಕುಗಳಿಗಾಗಿ ಜೀವ ತೇಯ್ದ ಬಾಬಾಸಾಹೇಬ್ ಅಂಬೇಡ್ಕರರ ಬಯಕೆ ಕೂಡ ಇದೇ ಆಗಿತ್ತೇ? ಖಂಡಿತ, ಅಂಬೇಡ್ಕರರ ಆದ್ಯತೆ ಇದಲ್ಲ ಎಂಬ ಉತ್ತರ ದೊರೆಯುತ್ತದೆ.

ಕಾರಣವಿಷ್ಟೆ, ದಲಿತರ ಬದುಕು ಇಂದು ಆಘಾತಕಾರಿ ಸ್ಥಿತಿ ತಲುಪಿದೆ. ಸಮೀಕ್ಷೆಯೊಂದರ ಪ್ರಕಾರ ಶೇ 93ರಷ್ಟು ದಲಿತರು ಬಡತನ ರೇಖೆಗಿಂತ ಕೆಳಗಿರುವವರು. ಹಳ್ಳಿಗಳಲ್ಲಿನ ಮತ್ತು ನಗರಗಳ ಕೊಳೆಗೇರಿಗಳಲ್ಲಿನ ದಲಿತರ ಮನೆಗಳನ್ನು ನೋಡಿದರೆ ಎಂಥವರಿಗಾದರೂ ಆಘಾತವಾಗದಿರದು. ಗಾಳಿ ಬೆಳಕಿನ, ಸೂಕ್ತ ಕೊಠಡಿಗಳ ವ್ಯವಸ್ಥೆ ಇರುವ ಪಕ್ಕಾ ಮನೆಗಳೂ ದಲಿತರಿಗಿಲ್ಲ. ಹಳ್ಳಿಗಳಲ್ಲಿ ಇರುವ ಮನೆಗಳು ತಾತ, ಮುತ್ತಾತಂದಿರು ಕಟ್ಟಿರುವ ಹೆಂಚಿನ ಮನೆಗಳು.

ಆಶ್ರಯ, ಅಂಬೇಡ್ಕರ್, ಇಂದಿರಾ ಆವಾಸ್ ಹೀಗೆ ವಸತಿ ಯೋಜನೆಗಳು ಬಂದಿವೆಯಾದರೂ ಅವುಗಳ ಅನುಷ್ಠಾನ ಸೂಕ್ತ ಪ್ರಮಾಣದಲ್ಲಿ ಆಗುತ್ತಿಲ್ಲ. ಹಾಗೆ ಆ ಮನೆಗಳು ಕೂಡ ಅಷ್ಟೆ, ದಲಿತರ ದಾರುಣ ಬದುಕನ್ನು ಬಿಂಬಿಸುವ ಸಂಕೇತಗಳೇ ಆಗಿವೆ. ಇನ್ನು ಉದ್ಯೋಗ ಸಮಸ್ಯೆ. ಬಹುತೇಕ ನೂರಕ್ಕೆ ನೂರು ದಲಿತರು ತಮಗೆ ಇಷ್ಟ ಬಂದ ಉದ್ಯೋಗ ಹುಡುಕಿಕೊಳ್ಳುವಲ್ಲಿ ವಿಫಲರಾಗುತ್ತಿದ್ದಾರೆ ಅಥವಾ ವ್ಯವಸ್ಥೆ ಅವರನ್ನು ವಿಫಲಗೊಳಿಸುತ್ತಿದೆ.

ತಮ್ಮ ಈ ಅಸಹಾಯಕತೆಯ ಕಾರಣಕ್ಕಾಗಿ ಸರ್ಕಾರಿ ಉದ್ಯೋಗಗಳತ್ತ ದಲಿತ ವಿದ್ಯಾವಂತರು ಕಣ್ಣೆತ್ತಿ ನೋಡುತ್ತಾರಾದರೂ ಸರ್ಕಾರಿ ಹುದ್ದೆಗಳ ಭರ್ತಿ ತಳಮಟ್ಟಕ್ಕೆ ಕುಸಿದು ಅವರ ಸರ್ಕಾರಿ ಉದ್ಯೋಗ ಕ್ಷೇತ್ರ ಕೂಡ ಇಂದು ಅವರನ್ನು ಕೈಹಿಡಿಯದಾಗಿದೆ. ಇನ್ನು ವ್ಯಾಪಾರ, ವ್ಯವಹಾರಗಳಲ್ಲಿ ದಲಿತರು ತೊಡಗಿಸಿಕೊಳ್ಳಬಲರೆಂದರೆ ವರ್ಣಾಶ್ರಮ ಧರ್ಮ ವ್ಯವಸ್ಥೆಯನ್ನು ಇನ್ನೂ ಬಿಗಿದಪ್ಪಿಕೊಂಡಿರುವ ವ್ಯವಸ್ಥೆ ದಲಿತರಲ್ಲಿ ವ್ಯಾಪಾರ, ವ್ಯವಹಾರ, ಕೈಗಾರಿಕೆ, ವಾಣಿಜ್ಯ ಕ್ಷೇತ್ರಗಳಲ್ಲಿ ತೊಡಗಿಸಿಕೊಳ್ಳುವ ಅಂತಹ ಆಸೆಯೇ ಹುಟ್ಟದಂತೆ ಮಾಡುತ್ತಿದೆ.

ತನ್ಮೂಲಕ ಆರ್ಥಿಕ ವ್ಯವಹಾರಗಳ ಯಾವುದೇ ಕ್ಷೇತ್ರಗಳಲ್ಲಿ ದಲಿತರು ಪಾಲ್ಗೊಳ್ಳದಂತಹ ಆಘಾತಕಾರಿ ವ್ಯವಸ್ಥೆ ಅಘೋಷಿತವಾಗಿ ಜಾರಿಯಲ್ಲಿದೆ. ಪರಿಣಾಮವಾಗಿ ಉಳಿದಿರುವುದೇ ದಲಿತರಿಗೆ ಶೌಚಾಲಯ ಶುಚಿಗೊಳಿಸುವ, ಚರಂಡಿ ಶುಚಿಗೊಳಿಸುವ, ಬೀದಿ ಕಸ ಗುಡಿಸುವ, ಚಪ್ಪಲಿ ಹೊಲಿಯುವ ಕೆಳದರ್ಜೆಯ ಕೆಲಸಗಳು ಮತ್ತು ಇದಕ್ಕಿಂತ ಉತ್ತಮ ಕೆಲಸಗಳೆಂದರೆ ಎಲ್ಲ ಕ್ಷೇತ್ರಗಳಲ್ಲೂ ಕೂಲಿಗಳಾಗಿ ದುಡಿಯುವುದು!

ಅಂದಹಾಗೆ ಇಂತಹ ಕೂಲಿ ಕೆಲಸ, ಪೌರಕಾರ್ಮಿಕ ಕೆಲಸ ಮತ್ತು ಅದರಿಂದ ಬರುವ ಸಂಪಾದನೆ ದಲಿತರು ಮನೆ ಕಟ್ಟಿಕೊಳ್ಳಲು, ಉತ್ತಮ ಬದುಕು ಪಡೆಯಲು, ಉನ್ನತ ಗುಣಮಟ್ಟದ ಶಿಕ್ಷಣ ಪಡೆಯಲು ನೆರವಾಗುತ್ತದೆಯೇ? ಖಂಡಿತ ಸಾಧ್ಯವಾಗದು. ಇನ್ನು ದಲಿತರ ಆರೋಗ್ಯ ಸ್ಥಿತಿಯಂತೂ ದಯನೀಯವಾದುದು. ಸದಾ ಅಪಾಯಕಾರಿ ಬ್ಯಾಕ್ಟೀರಿಯಾ ವೈರಸ್‌ಗಳಂತಹ ರೋಗಾಣುಗಳು ದಾಳಿ ಮಾಡುವ ಕೆಲಸಗಳಲ್ಲೇ ತೊಡಗಿಸಿಕೊಳ್ಳುವ ದಲಿತರಿಗೆ ನಿರಂತರ ಅನಾರೋಗ್ಯ ಕಟ್ಟಿಟ್ಟ ಬುತ್ತಿ. ಈ ನಡುವೆ  ದಲಿತರ ಕೇರಿಗಳಲ್ಲೆ ಅಥವಾ ಅವರ ಕೇರಿಗಳ ಪಕ್ಕದಲ್ಲೆ ಸುಲಭವಾಗಿ ದಕ್ಕುವ ಅಗ್ಗದ ಮದ್ಯಗಳು.


ಪರಿಣಾಮ ದಲಿತರ ಆರೋಗ್ಯ ಸೂಚ್ಯಂಕ ತೀವ್ರವಾಗಿ ಕುಸಿಯುತ್ತಿದೆ.  ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯದಂಥ ದಾರುಣ ಸ್ಥಿತಿ ಅವರಿಗಿದೆ. ಅಂದಹಾಗೆ ಶೌಚಾಲಯ ವ್ಯವಸ್ಥೆ, 100ಕ್ಕೆ 90ರಷ್ಟು ದಲಿತರ ಮನೆಗಳಲ್ಲಿ ಶೌಚಾಲಯಗಳಿಲ್ಲ! ಇದರ ತಾಜಾ ಉದಾಹರಣೆಗೆ ಯಾರಾದರೂ ಹಳ್ಳಿಗಳಿಗೆ, ಅದರಲ್ಲೂ ದಲಿತರು ಹೆಚ್ಚಿನ ಸಂಖ್ಯೆಯಲ್ಲಿರುವ ಹಳ್ಳಿಗಳಿಗೆ ಬೆಳಿಗ್ಗೆ 9 ಗಂಟೆಯ ನಂತರ ಭೇಟಿ ಕೊಟ್ಟರೆ ರಸ್ತೆಯ ಇಕ್ಕೆಲಗಳಲ್ಲಿ ಕಾಣಸಿಗುವ ಬಯಲು ಶೌಚಾಲಯದ ನಗ್ನದರ್ಶನ ಮಾನವೀಯತೆಯುಳ್ಳ ಎಂಥವರನ್ನೂ ಅರೆಕ್ಷಣ ಖಿನ್ನರನ್ನಾಗಿಸದಿರದು.

ಅಲ್ಲಲ್ಲಿ ಬಿದ್ದಿರುವ ಮಲದ ರಾಶಿ, ಅದನ್ನೆ ತುಳಿದಿರಬಹುದಾದ ಮಕ್ಕಳ, ವ್ಯಕ್ತಿಗಳ ಕಲ್ಪನೆ,  ಅವರಿಗೆ ಅಂಟಬಹುದಾದ ಸಾಂಕ್ರಾಮಿಕ  ರೋಗಗಳು... ಖಂಡಿತ ದಲಿತರ ಆದ್ಯತೆ ವಾಸ್ತವ ಜಗತ್ತಲ್ಲದ ದೇವಾಲಯವಾಗಬೇಕೋ ವಾಸ್ತವದ ಜಗತ್ತಾದ ಶೌಚಾಲಯವಾಗಬೇಕೋ ಚಿಂತಿಸಬೇಕಾದ ವಿಷಯವಾಗುತ್ತದೆ. ಈ ಎಲ್ಲದರ ನಡುವೆ ದಲಿತರಿಗೆ ಅಸ್ಪೃಶ್ಯತೆ ಆಚರಣೆಯಂತೂ ಇದ್ದೇ ಇರುತ್ತದೆ. ಅದು ಯಾವ್ಯಾವ ಗಳಿಗೆಯಲ್ಲಿ ಯಾವ್ಯಾವ ರೂಪ ತಾಳಬಹುದು, ಅದು ಸಂದರ್ಭಾನುಸಾರ ಇರುತ್ತದೆ.

ದೇವಾಲಯ ಪ್ರವೇಶ ಕೂಡ ಅದರಲ್ಲೊಂದು. ನಿಜ, ಅದು ಸ್ವಾಭಿಮಾನ ಕೆಣಕುವ ವಿಷಯ. ಆ ಕಾರಣಕ್ಕಾಗಿ ಪ್ರವೇಶ ಪಡೆದೇ ತೀರುವ ಛಲ ದಲಿತರಲ್ಲಿ ಸಹಜವಾಗಿ ಮೂಡಿಯೇ ಮೂಡುತ್ತದೆ. ಆದರೆ ಇದಕ್ಕಿಂತಲೂ ಮುಖ್ಯವಾಗಿ ಮೇಲ್ಕಾಣಿಸಿದ ದಾರುಣ ಬದುಕು? ಈ ನಿಟ್ಟಿನಲ್ಲಿ ಉತ್ತಮ ಮನೆ ಕಟ್ಟಿಕೊಳ್ಳುವುದು, ವ್ಯಾಪಾರ, ವ್ಯವಹಾರಗಳಲ್ಲಿ ತೊಡಗಿಕೊಳ್ಳುವುದು, ಕಡೇಪಕ್ಷ ಸ್ವಂತ ಶೌಚಾಲಯವನ್ನಾದರೂ ಹೊಂದುವುದು ದಲಿತರ ಆದ್ಯತೆಯಾಗಬೇಕೋ ಅಥವಾ ದೇವಸ್ಥಾನ ಪ್ರವೇಶ ಆದ್ಯತೆಯಾಗಬೇಕೋ?

ಸಿಗರನಹಳ್ಳಿಯ ಈ ಪ್ರಕರಣ ಹುಟ್ಟು ಹಾಕಿರುವುದೇ ಇಂತಹ ವಾಸ್ತವ ಬದುಕಿಗೆ ಸಂಬಂಧಿಸಿದ ಪ್ರಶ್ನೆಗಳನ್ನು. ಈ ಸಂಬಂಧ ಅಂಬೇಡ್ಕರರ ಮಾತುಗಳನ್ನು ಇಲ್ಲಿ ದಾಖಲಿಸುವುದಾದರೆ, ಅಂಬೇಡ್ಕರ್ ಹೇಳುತ್ತಾರೆ ‘ದೇವಸ್ಥಾನದ ಬಾಗಿಲುಗಳನ್ನು ತೆಗೆಯಬೇಕೋ ಬೇಡವೋ ಅದು ನಿಮಗೆ (ಹಿಂದೂಗಳಿಗೆ) ಬಿಟ್ಟ ವಿಷಯ. ಅದಕ್ಕೋಸ್ಕರ ನಾನು ಹೋರಾಟ ಮಾಡುವ ಅಗತ್ಯ ಕಾಣುತ್ತಿಲ್ಲ. ಮನುಷ್ಯನ ವ್ಯಕ್ತಿತ್ವವನ್ನು ಗೌರವಿಸುವುದು ಶ್ರೇಷ್ಠವೆಂಬುದು ನಿಮಗೆ ಕಂಡುಬಂದರೆ ನೀವು ನಿಮ್ಮ ದೇವಸ್ಥಾನಗಳನ್ನು ತೆರೆಯಿರಿ ಮತ್ತು ಸಜ್ಜನರೆನಿಸಿಕೊಳ್ಳಿ.

ಅದು ಬಿಟ್ಟು ನೀವು ಸಜ್ಜನರೆನಿಸಿಕೊಳ್ಳುವುದಕ್ಕಿಂತ ಹಿಂದೂಗಳೆನಿಸಿಕೊಳ್ಳುವುದರಲ್ಲಿಯೇ ನಿಮಗೆ ಖುಷಿ ಇದೆ ಎನ್ನುವುದಾದರೆ ನಿಮ್ಮ ದೇವಸ್ಥಾನದ ಬಾಗಿಲುಗಳನ್ನು ಮುಚ್ಚಿಕೊಳ್ಳಿ. ಹಾಗೆ ಆ ನಿಮ್ಮ ಅಸಹ್ಯಕರ ಮನಸ್ಸುಗಳನ್ನು ಕೂಡ. ಖಂಡಿತ, ಆ ನಿಮ್ಮ ದೇವಸ್ಥಾನಗಳ ದಿಕ್ಕಿನಲ್ಲಿ ನಾನು ತಲೆ ಇಟ್ಟು ಕೂಡ ಮಲಗುವುದಿಲ್ಲ’. ಹೀಗೆ ಆಕ್ರೋಶ ವ್ಯಕ್ತಪಡಿಸುತ್ತ ಅಂಬೇಡ್ಕರರು ‘ದಲಿತರ ನೈಜ ವಿಮೋಚನೆಯ ಮಾರ್ಗ ಶಿಕ್ಷಣ, ಉನ್ನತ ಉದ್ಯೋಗ ಮತ್ತು ಉತ್ತಮವಾದ ಬದುಕನ್ನು ಪಡೆಯುವುದರಲ್ಲಿದೆ.

ಒಮ್ಮೆ ಅವರು ಉನ್ನತ ಸ್ಥಾನ ತಲುಪಿದರೆ ಸಂಪ್ರದಾಯವಾದಿ ಹಿಂದೂಗಳು ದಲಿತರ ಬಗೆಗಿನ ನಿಲುವನ್ನು ಖಂಡಿತ ಬದಲಿಸಿಕೊಳ್ಳುತ್ತಾರೆ’ ಎಂಬ ಆಶಾಭಾವ ವ್ಯಕ್ತಪಡಿಸುತ್ತಾರೆ. ಒಟ್ಟಾರೆ ಅಂಬೇಡ್ಕರರ ಆಶಯದಂತೆ ದಲಿತರ ವಿಮೋಚನೆ ಇರುವುದು ಅವರು ಉತ್ತಮ ಶಿಕ್ಷಣ, ಉತ್ತಮ ಉದ್ಯೋಗ ಮತ್ತು ಉತ್ತಮ ಬದುಕು ಪಡೆಯುವುದರಲ್ಲಿದೆ. ದೇಗುಲ ಪ್ರವೇಶ ಅಂಬೇಡ್ಕರರ ಆದ್ಯತೆಯಾಗಿರಲಿಲ್ಲ, ದಲಿತರ ಆದ್ಯತೆ ಕೂಡ ಅದು ಆಗಬಾರದು ಎಂಬುದಿಲ್ಲಿ ಸ್ಪಷ್ಟ, ಸುಸ್ಪಷ್ಟ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT