ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇವರ ಚಿನ್ನದ ಮೇಲೆ ಸರ್ಕಾರದ ಕಣ್ಣು

ಮೇ ತಿಂಗಳಿಂದ ಹೊಸ ಯೋಜನೆ ಜಾರಿಗೆ ಚಿಂತನೆ
Last Updated 11 ಏಪ್ರಿಲ್ 2015, 12:51 IST
ಅಕ್ಷರ ಗಾತ್ರ

ನವದೆಹಲಿ: ದೇವಸ್ಥಾನಗಳಲ್ಲಿರುವ ಚಿನ್ನವನ್ನು ಬ್ಯಾಂಕ್‌ಗಳಲ್ಲಿಟ್ಟು ಬಡ್ಡಿ ಪಡೆಯುವಂತೆ ಪ್ರೋತ್ಸಾಹಿಸುವ   ಹೊಸ  ಯೋಜನೆಯೊಂದನ್ನು ಕೇಂದ್ರ ಸರ್ಕಾರ ಮೇ ತಿಂಗಳಿನಿಂದ  ಜಾರಿಗೆ ತರಲು ಚಿಂತನೆ ನಡೆಸಿದೆ.

ಸರ್ಕಾರ  ಈ ಚಿನ್ನವನ್ನು ಕರಗಿಸಿ ಗಟ್ಟಿಗಳನ್ನಾಗಿ ಪರಿವರ್ತಿಸಿ ಅದನ್ನು  ಆಭರಣ ವ್ಯಾಪಾರಿಗಳ ಬೇಡಿಕೆಗೆ ತಕ್ಕಂತೆ ಪೂರೈಸುತ್ತದೆ. ಹೊಸದಾಗಿ ಚಿನ್ನವನ್ನು ಆಮದು ಮಾಡಿಕೊಳ್ಳದೆ, ದೇಶದಲ್ಲೇ ಸಂಗ್ರಹವಿರುವ ಚಿನ್ನವನ್ನು ಸದ್ಬಳಕೆ ಮಾಡಿಕೊಳ್ಳುವುದು ಈ ಯೋಜನೆಯ ಪ್ರಮುಖ ಉದ್ದೇಶ. ಇದರಿಂದ ಚಿನ್ನದ ಆಮದು ಪ್ರಮಾಣ ಮತ್ತು ಆಮದಿನಿಂದ ಹೆಚ್ಚುತ್ತಿರುವ ಚಾಲ್ತಿ ಖಾತೆ ಕೊರತೆ (ಸಿಎಡಿ) ಹೊರೆ ಗಣನೀಯವಾಗಿ ತಗ್ಗಲಿದೆ. ಮಾರುಕಟ್ಟೆಯಲ್ಲಿ ಚಿನ್ನದ ಕೊರತೆಯೂ ನೀಗಲಿದೆ.

ದೇವಾಸ್ಥಾನಗಳು ಬ್ಯಾಂಕ್‌ನಲ್ಲಿಟ್ಟ ಚಿನ್ನಕ್ಕೆ ಬೇಡಿಕೆ ಇಟ್ಟಾಗ ಸರ್ಕಾರ ಹೊಸ ಚಿನ್ನವನ್ನು ಆಮದು ಮಾಡಿ ಕೊಡಲಿದೆ.  ಇಲ್ಲದಿದ್ದರೆ  ಪ್ರತಿ ತಿಂಗಳು ಆಕರ್ಷಕ ಬಡ್ಡಿ ಲಭಿಸಲಿದೆ.  1999ರಲ್ಲೇ ಇಂಥದೊಂದು ಯೋಜನೆಯನ್ನು ಪ್ರಕಟಿಸಲಾಗಿತ್ತು. ಆದರೆ, ಬಡ್ಡಿ ದರ ಕಡಿಮೆ ಇದೆ (ಶೇ 1)  ಎಂಬ ಕಾರಣಕ್ಕೆ ಯೋಜನೆಯ ಬಗ್ಗೆ ದೇವಸ್ಥಾನಗಳು ಅಷ್ಟೊಂದು ಆಸಕ್ತಿ ವಹಿಸಿರಲಿಲ್ಲ. ಹೀಗಾಗಿ ಈ ಬಾರಿ ಬಡ್ಡಿ ದರವನ್ನು ಶೇ 5ಕ್ಕೆ  ಹೆಚ್ಚಿಸುವ ಸಾಧ್ಯತೆಗಳಿವೆ. 

ಮುಂಬೈನಲ್ಲಿರುವ ಶ್ರೀ ಸಿದ್ಧಿವಿನಾಯಕ ದೇವಸ್ಥಾನ, ಕೇರಳದ ಅನಂತ ಪದ್ಮನಾಭ ಸ್ವಾಮಿ ದೇಗುಲ,ತಿರುಪತಿ ತಿಮ್ಮಪ್ಪ ದೇವಸ್ಥಾನಗಳು ಚಿನ್ನದ ಸಂಗ್ರಹಕ್ಕೆ ಹೆಸರುವಾಸಿ. ಮುಂಬೈನ ಸಿದ್ಧಿವಿನಾಯಕ ದೇವಸ್ಥಾನ ಒಂದರಲ್ಲೇ  ಒಡವೆ, ನಾಣ್ಯ, ಗಟ್ಟಿಗಳ  ಸ್ವರೂಪದಲ್ಲಿ 158 ಕೆ.ಜಿ ಚಿನ್ನ ಸಂಗ್ರಹವಿದೆ.  ಇದರ ಅಂದಾಜು ಮಾರುಕಟ್ಟೆ ಮೌಲ್ಯ 670 ಕೋಟಿ ಡಾಲರ್‌. ಕೇರಳದ ಅನಂತ ಪದ್ಮನಾಭ ಸ್ವಾಮಿ ದೇವಸ್ಥಾನದಲ್ಲಿ ಪತ್ತೆಯಾದ ಚಿನ್ನಾಭರಣಗಳ ಮಾರುಕಟ್ಟೆ ಮೌಲ್ಯ 200 ಕೋಟಿ ಡಾಲರ್‌.  ಭಾರತದ ಎಲ್ಲ ದೇವಸ್ಥಾನಗಳಲ್ಲಿರುವ ಚಿನ್ನದ ಸಂಗ್ರಹವನ್ನು ಲೆಕ್ಕ ಹಾಕಿದರೆ 3 ಸಾವಿರ ಟನ್‌ ದಾಟಬಹುದು ಎನ್ನುವುದು ಸರ್ಕಾರದ ಅಂದಾಜು.

ಭಾರತವು ಪ್ರತಿ ವರ್ಷ 800ರಿಂದ 1 ಸಾವಿರ ಟನ್‌ಗಳಷ್ಟು ಚಿನ್ನ ಆಮದು ಮಾಡಿಕೊಳ್ಳುತ್ತದೆ. ಆದರೆ, ದೇವಸ್ಥಾನಗಳು ಈ ಯೋಜನೆಯಲ್ಲಿ ಭಾಗವಹಿಸಿದರೆ ಆಮದು ಪ್ರಮಾಣವನ್ನು  ಸುಮಾರು 300 ಟನ್‌ಗಳಷ್ಟು ತಗ್ಗಿಸಬಹುದು ಎನ್ನುತ್ತಾರೆ ಮಾರುಕಟ್ಟೆ ತಜ್ಞರು.

ಆದರೆ, ದೇವಸ್ಥಾನಗಳಲ್ಲಿರುವ ಚಿನ್ನವನ್ನು ಕರಗಿಸಿ ಚಿನ್ನಾಭರಣ ವರ್ತಕರ ಬೇಡಿಕೆ ಪೂರೈಸುವ ಸರ್ಕಾರ ಈ ಯೋಜನೆಗೆ ಕೆಲವರು ವಿರೋಧ ವ್ಯಕ್ತಪಡಿಸಿದ್ದಾರೆ. ದೇವಸ್ಥಾನಗಳಿಗೆ ಚಿನ್ನವನ್ನು ದಾನ ಮಾಡಿದವರ ಅಸಂತೋಷಕ್ಕೂ ಇದು ಕಾರಣವಾಗಿದೆ. ಸಿದ್ಧಿ ವಿನಾಯಕ ದೇವಸ್ಥಾನ ಸೇರಿದಂತೆ ಪ್ರಮುಖ ದೇವಸ್ಥಾನಗಳಿಗೆ ಸುಮಾರು 200 ಕೆ.ಜಿಯಷ್ಟು ಚಿನ್ನ ದಾನ ಮಾಡಿರುವ ಮುಂಬೈ ಮೂಲದ ಚಿನ್ನಾಭರಣ ವ್ಯಾಪಾರಿಯೊಬ್ಬರು ‘ದೇವರ ಚಿನ್ನವನ್ನು ಬ್ಯಾಂಕ್‌ನಲ್ಲಿಟ್ಟು ಬಡ್ಡಿ ಪಡೆಯುವುದು ಪಾಪ ಕೃತ್ಯ’ ಎಂದು ಹೇಳಿದ್ದಾರೆ.

ಆಮದು ಪ್ರಮಾಣವನ್ನು ಕಡಿಮೆಮಾಡಿಕೊಳ್ಳಬಹುದಾಗಿದೆ. ಭಾರತವು 2013  ರ  ವರ್ಷ್ಯಾಂತ್ಯದ   ಮಾರ್ಚ್‌ನಲ್ಲಿ    ಶೇ.28 ರಷ್ಟು  ಚಿನ್ನದ ಕೊರತೆ ಎದುರಿಸಿತ್ತು .

ಈ ಯೋಜನೆಯಲ್ಲಿ  ದೇವಸ್ಥಾನಗಳು ಭಾಗವಹಿಸಿದ್ದೇ ಆದರೆ ಭಾರತದ ವಾರ್ಷಿಕ ಚಿನ್ನದ ಆಮದು ಪ್ರಮಾಣದ 800 ರಿಂದ 1000 ಟನ್‌ನಲ್ಲಿ  ಕಾಲು ಭಾಗದಷ್ಟು ಚಿನ್ನದ ಬೇಡಿಕೆಯನ್ನು ನೀಗಿಸಬಹುದಾಗಿದೆ ಎಂದು ಸರ್ಕಾರ ಮತ್ತು ಕೈಗಾರಿಕಾ ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT