ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇವರ ಸೃಷ್ಟಿಸುತ್ತ...

ಸಾಧಕಿ
Last Updated 29 ಏಪ್ರಿಲ್ 2016, 19:30 IST
ಅಕ್ಷರ ಗಾತ್ರ

ಯಾವಾಗಲೂ ರುಚಿಯಾದ ಅಡುಗೆ ಮಾಡುವುದಲ್ಲದೆ ಹೂವು, ರಂಗೋಲಿಗಳ ಅಲಂಕಾರದಲ್ಲಿ ಮಹಿಳೆಯರದ್ದೇ ಮೇಲುಗೈ. ಆದರೆ ಮೂರ್ತಿ ತಯಾರಿಕೆಯಲ್ಲಿ ಮಾತ್ರ ಸಾಮಾನ್ಯವಾಗಿ ಗಂಡಸರೇ ತೊಡಗಿಕೊಳ್ಳುವುದು ಹೆಚ್ಚು.

ಜೇಡಿ ಮಣ್ಣನ್ನು ತಂದು ಹದಗೊಳಿಸಿ ಅದಕ್ಕೊಂದು ಆಕಾರ ನೀಡಿ ಬಣ್ಣ ಕೊಟ್ಟು ಆಕರ್ಷಿಸುವುದರ ಜೊತೆಗೆ ಒಂದಕ್ಕಿಂತ ಒಂದು ಭಿನ್ನವಾಗಿ ರೂಪುಗೊಳಿಸುವುದು ಕಲಾವಿದನ ಜಾಣ್ಮೆ.

ಅದೆಷ್ಟೋ ಕುಟುಂಬಗಳು ಈ ಮೂರ್ತಿಗಳ ತಯಾರಿಕೆಯಲ್ಲಿ ಸಾಂಪ್ರದಾಯಿಕವಾಗಿ ನಡೆಸಿಕೊಂಡು ಬಂದಿರುತ್ತಾರೆ. ಆದರೆ ಉತ್ತರಕನ್ನಡದ ಕಾರವಾರ ತಾಲೂಕಿನ ದೇವಳಮಕ್ಕಿಯ ಪ್ರಭಾ ಮಂಗೇಶ ಆಚಾರಿ ಎನ್ನುವ ಮಹಿಳೆಯು ಸ್ವತ: ಅನೇಕ ಬಗೆಯ ಮೂರ್ತಿಗಳನ್ನು ತಯಾರಿಸುವ ಮೂಲಕ ಮಹಿಳಾ ಕ್ಷೇತ್ರದಲ್ಲಿ ವಿಶಿಷ್ಟ ಮಹಿಳೆ ಎನಿಸಿದ್ದಾಳೆ.

ಚಿಕ್ಕವರಿರುವಾಗಲೇ ಸಾಂಪ್ರದಾಯಿಕವಾಗಿ ಬೆಳೆದು ಬಂದ ಮೂರ್ತಿ ತಯಾರಿಕೆಯ ವಿಧಾನಗಳನ್ನು ಕರಗತ ಮಾಡಿಕೊಂಡ ಪ್ರಭಾ ಅವರು ಕಳೆದ ನಾಲ್ಕು ದಶಕಗಳಿಂದ ಈ ಹವ್ಯಾಸದಲ್ಲಿ ತೊಡಗಿಕೊಂಡಿದ್ದಾರೆ.

ತಮ್ಮ ಮದುವೆಯ ನಂತರವೂ ತವರು ಮನೆಯಿಂದ ಬಳುವಳಿಯಾಗಿ ಬಂದ ಈ ಕಲೆಯನ್ನು ತಮ್ಮ ಪತಿ ಮಂಗೇಶ ಆಚಾರಿಯವರಿಗೂ ಕಲಿಸುವ ಮೂಲಕ ತಮ್ಮ ಕಲೆಯನ್ನು ಕೌಟುಂಬಿಕವಾಗಿ ಮುಂದುವರೆಸಿಕೊಂಡಿದ್ದಾರೆ.

ಗಂಡನ ಮನೆಯ ಕಮ್ಮಾರಿಕೆಯ ವೃತ್ತಿಯ ಜೊತೆಗೆ ಮೂರ್ತಿ ತಯಾರಿಕೆಯ ಹವ್ಯಾಸವನ್ನು ಬೆಳೆಸಿಕೊಂಡ ಈ ಕುಟುಂಬದಲ್ಲಿ ಈಗ ಇವರ ಮಗ ಮತ್ತು ಮಗಳು ಕೂಡಾ ಜೊತೆಯಾಗಿ ಮೂರ್ತಿ ರಚನೆಯಲ್ಲಿ ನಿಪುಣರಾಗಿದ್ದಾರೆ.

ಪ್ರತಿ ವರ್ಷ ನೂರಾರು ಗಣೇಶ, ಕೃಷ್ಣ, ಸರಸ್ವತಿ, ಗೌರಿ  ಮೂರ್ತಿಗಳನ್ನು ಹಬ್ಬದ ದಿನಗಳಲ್ಲಿ ಸ್ಥಳೀಯರಿಗೆ ನೀಡುವ ಇವರು ಸ್ವತ: ಮನೆಯಲ್ಲಿ ಗಣೇಶ ಮೂರ್ತಿಯನ್ನು ಪೂಜಿಸದೇ ಇದ್ದರೂ ಹಬ್ಬದ ಆಚರಣೆಯಲ್ಲಿ ಸಕ್ರೀಯವಾಗಿರುತ್ತಾರೆ.

ಸಾಂಪ್ರದಾಯಿಕವಾಗಿ ಕೌಟುಂಬಿಕ ಹಿನ್ನೆಲೆಯಲ್ಲೇ ಕಲಾವಿದರು ವಿಭಿನ್ನ ಆಕೃತಿಯಲ್ಲಿ ಗಣೇಶ ಮೂರ್ತಿಗಳನ್ನು ರಚಿಸುವಂತೆ ಇವರೂ ಕೂಡಾ ಬೇರೆ ಬೇರೆ ಆಕೃತಿಗಳ ಮೂರ್ತಿಗಳನ್ನು ತಯಾರಿಸುವಲ್ಲಿ ಸಿದ್ಧಹಸ್ತರು.

ಪ್ರಭಾ ಆಚಾರಿ ಅವರ ಮಾತೃಭಾಷೆ ಕೊಂಕಣಿಯಾಗಿದ್ದು 5ನೇ ತರಗತಿಯವರೆಗೆ ಮರಾಠಿ ಮಾಧ್ಯಮದಲ್ಲಿ ಓದಿರುತ್ತಾರೆ. 60ವರ್ಷದ ಪ್ರಭಾ ಆಚಾರಿ ಅವರು ಇಂದಿಗೂ ಗಣೇಶ ಮೂರ್ತಿಯ ರಚನೆಯಲ್ಲಿ ತೊಡಗಿಕೊಳ್ಳುವುದರ ಜೊತೆಗೆ ಅಂದವಾಗಿ ರಂಗೋಲಿ, ಹೂವಿನ ತೋರಣ ಜೊತೆಗೆ ಹೊಲಿಗೆ ಕಸೂತಿಯಲ್ಲೂ ತಮ್ಮ ಕಲಾಪ್ರತಿಭೆಯನ್ನು ಹೊಂದಿರುತ್ತಾರೆ.

ಸುತ್ತಮುತ್ತಲ ಊರಿನವರಿಗೂ ಪ್ರಭಾ ಆಚಾರಿ ಅವರ ವಿವಿಧ ದೇವರ ಮೂರ್ತಿಗಳು ಬಹಳ ಆಕರ್ಷಕವಾಗಿ ಆರಾಧನೆಗೆ ಪ್ರೇರಕವಾಗಿ ಪ್ರಸಿದ್ಧಿಯಾಗಿದೆ. ತಾನು ಬಾಲ್ಯದಲ್ಲಿ ಕಲಿತ ಈ ಕಲೆಯನ್ನು ಎಲ್ಲರಿಗೂ ಕಲಿಸಿಕೊಡಬೇಕೆನ್ನುವ ಸಂಕಲ್ಪ ಅವರದ್ದು. ಬಿಡುವಿದ್ದಾಗಲೆಲ್ಲ ಆಸಕ್ತರಿಗೆ ಉಚಿತವಾಗಿ ಹೇಳಿಕೊಡುತ್ತಾರೆ.

ಅನೇಕರ ಪಾಲಿಗೆ ಮಾರ್ಗದರ್ಶಿಕೆಯಾಗಿದ್ದಾರೆ. ತಮ್ಮ ಈ ಇಳಿ ವಯಸ್ಸಿನಲ್ಲಿ ಹೃದಯ ಶಸ್ತ್ರಚಿಕಿತ್ಸೆ ಮಾಡಿಕೊಂಡರೂ ಪ್ರಭಾ ಬಿಡುವಿರುವಾಗಲೆಲ್ಲ ಇಂತಹ ಕಲಾಕೃತಿಗಳ ರಚನೆಯಲ್ಲಿ ತೊಡಗಿಕೊಳ್ಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT