ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇಶದ ಚಿತ್ತ ಸ್ಥಳೀಯ ಮಾರುಕಟ್ಟೆಯತ್ತ

ಆಧುನಿಕ ಸೇನಾ ಶಸ್ತ್ರಾಸ್ತ್ರ

ಜಗತ್ತಿನಲ್ಲೇ ಅತೀ ಹೆಚ್ಚು ಶಸ್ತ್ರಾಸ್ತ್ರ ಆಮದು ಮಾಡಿಕೊಳ್ಳುವ ರಾಷ್ಟ್ರವಾಗಿರುವ ಭಾರತದಲ್ಲಿ ಕಳೆದ ತಿಂಗಳು ಶಸ್ತ್ರಾಸ್ತ್ರಗಳ ಪ್ರದರ್ಶನ ಆಯೋಜಿಸಲಾಗಿತ್ತು. ಇದರಲ್ಲಿ ವಿಶ್ವದ 30 ರಾಷ್ಟ್ರಗಳು ಪಾಲ್ಗೊಂಡಿದ್ದವು. ರಷ್ಯಾ ತನ್ನ ಟ್ಯಾಂಕ್‌ ಮತ್ತು ಬಂದೂಕುಗಳನ್ನು ಆಕರ್ಷಕವಾಗಿ ಪ್ರದರ್ಶನಕ್ಕೆ ಇಟ್ಟಿತ್ತು. ಸುದೀರ್ಘ ಕಾಲದಿಂದ ರಷ್ಯಾ ಭಾರತದ ಸೇನಾ ಅಗತ್ಯತೆಗೆ ಅನುಗುಣವಾಗಿ ಶಸ್ತ್ರಾಸ್ತ್ರಗಳನ್ನು ಪೂರೈಸುತ್ತ ಬಂದಿರುವ ಪ್ರಮುಖ ರಾಷ್ಟ್ರ ಎಂಬುದನ್ನು ತೋರಿಸಿತ್ತು. ಆದರೆ, ಸ್ವಂತ ಶಕ್ತಿಯ ಮೇಲೆ ಶಸ್ತ್ರಾಸ್ತ್ರ ಗಳನ್ನು ನಿರ್ಮಿಸುವ ಭಾರತದ ದಶಕಗಳ ಕನಸು ಇದೀಗ ಕೈಗೂಡುವ ಹಂತಕ್ಕೆ ತಲುಪಿದೆ. ಇದಕ್ಕೆ ಸಾಕ್ಷಿಯೆಂಬಂತೆ ಪ್ರದರ್ಶನದಲ್ಲಿ ಭಾರತ ತನ್ನ ಯುದ್ಧ ವಿಮಾನ, ಟ್ಯಾಂಕ್ ಮತ್ತು  ಫಿರಂಗಿಗಳ ಜತೆ ಸ್ಥಳೀಯವಾಗಿ ತಯಾರಿಸಿದ್ದ ಹಡಗುಗಳನ್ನು ಇಟ್ಟಿತ್ತು.

ಒಂದು ವೇಳೆ ಭಾರತ ಇದೇ ರೀತಿ ಮುಂದುವರಿದರೆ, ರಷ್ಯಾ ಸಮಸ್ಯೆಗೆ ಒಳಗಾಗುವುದು ದೂರವಿಲ್ಲ. ಭಾರತವು ರಷ್ಯಾಕ್ಕೆ ಸರಿಸುಮಾರು 39 ಶತ ಕೋಟಿ ಡಾಲರ್‌ ಮೊತ್ತದ ಶಸ್ತ್ರಾಸ್ತ್ರಗಳಿಗೆ ಬೇಡಿಕೆ ಸಲ್ಲಿಸಿದೆ. ಇದು ರಷ್ಯಾದ ಒಟ್ಟು ಶಸ್ತ್ರಾಸ್ತ್ರ ರಫ್ತಿನ ಪೈಕಿ 1/3ರಷ್ಟು. ಈ ದಿನಗಳು ಇತಿಹಾಸದ ಗರ್ಭವನ್ನು ಸೇರಲಿವೆ.  ವಿದೇಶಿ ಶಸ್ತ್ರಾಸ್ತ್ರ ತಯಾರಕರ ಮೇಲಿನ ಭಾರತದ ಅವಲಂಬನೆ ಸಂಪೂರ್ಣವಾಗಿ ಕೊನೆಗೊಳ್ಳಲಿದೆ ಎಂದು ಶಸ್ತ್ರಾಸ್ತ್ರ ಪ್ರದರ್ಶನದ ಸಂದರ್ಭದಲ್ಲಿ ರಕ್ಷಣಾ ಸಚಿವ ಎ.ಕೆ. ಆಂಟನಿ ಹೇಳಿದ್ದರು.

‘ವೇಗವಾಗಿ ಬೆಳೆಯುತ್ತಿರುವ ಭಾರತ, ತನ್ನ ರಕ್ಷಣಾ ಉದ್ದೇಶದ ಹೆಚ್ಚಿನ ಶಸ್ತ್ರಾಸ್ತ್ರಗಳಿಗೆ ಇನ್ನೂ ವಿದೇಶದ ಕಂಪೆನಿಗಳನ್ನು ಅವಲಂಬಿಸಿರುವುದು ಸಮಾಧಾನಕರ ವಿಷಯವೇನೂ ಅಲ್ಲ’ ಎಂದೂ ತಿಳಿಸಿದ್ದರು.

ಹೀಗಾದರೆ ಭಾರತ ಶಸ್ತ್ರಾಸ್ತ್ರ ಆಮದನ್ನು ನಿಲ್ಲಿಸಲಿದೆಯೇ ಎಂಬ ಪ್ರಶ್ನೆ ಎದುರಾಗುವುದು ಸಹಜ. ಆದರೆ, ಇದಕ್ಕೆ ಅನೇಕ ಶಸ್ತ್ರಾಸ್ತ್ರ ತಜ್ಞರು ಸಂದೇಹ ವ್ಯಕ್ತಪಡಿಸುತ್ತಾರೆ. ದೇಶಿಯ ಶಸ್ತ್ರಾಸ್ತ್ರ ಉತ್ಪಾದನೆ ವಲಯ ಸ್ಥಾಪನೆಗೆ ಸರ್ಕಾರ ದಶಕಗಳಿಂದ ಪ್ರಯತ್ನಿಸುತ್ತಿದೆ. 
‘ಶಸ್ತ್ರಾಸ್ತ್ರಗಳನ್ನು ತಯಾರಿಸಬೇಕೆಂದು ಕಠಿಣ ಶ್ರಮ ವಹಿಸುತ್ತಿರುವ ಮತ್ತು ಅದರಲ್ಲಿ ವೈಫಲ್ಯವನ್ನೇ ಕಾಣುತ್ತ ಬಂದಿರುವ ಜಗತ್ತಿನ ರಾಷ್ಟ್ರಗಳಲ್ಲಿ ಭಾರತ ಹೊರತುಪಡಿಸಿದರೆ ಮತ್ತೊಂದು ರಾಷ್ಟ್ರವಿಲ್ಲ’ ಎಂದು ಜಾಗತಿಕ ಭದ್ರತೆ ಕುರಿತು ಅಧ್ಯಯನ ನಡೆಸುತ್ತಿರುವ ಸ್ಟಾಕ್‌ಹೋಮ್‌ ಇಂಟರ್‌ನ್ಯಾಷನಲ್‌ ಪೀಸ್‌ ರಿಸರ್ಚ್‌ ಇನ್ಸ್‌ಟಿಟ್ಯೂಟ್‌ನ ಹಿರಿಯ ಸಂಶೋಧಕ ಪೀಟರ್‌ ಡಿ. ವೆಜೆಮ್ಯಾನ್‌ ಅಭಿಪ್ರಾಯಪಟ್ಟಿದ್ದಾರೆ.

‘ಭಾರತ ತಯಾರಿಸಿದ ಹೊಸ ಶಸ್ತ್ರಾಸ್ತ್ರಗಳಿಂದ ಇತಿಹಾಸ ಬದಲಾಗಲಿದೆ ಎಂದು ನಾನು ಭಾವಿಸಿಲ್ಲ. ಭಾರತದ ಯುದ್ಧ ವಿಮಾನಗಳು, ಟ್ಯಾಂಕರ್‌ಗಳು ಮತ್ತು ಗನ್‌ಗಳ ಗುಣಮಟ್ಟ ಪ್ರಶ್ನಾರ್ಹವಾಗಿರುವುದೇ ಇದಕ್ಕೆ ಕಾರಣ’ ಎನ್ನುತ್ತಾರೆ ಅವರು.

ರಕ್ಷಣಾ ಉದ್ದೇಶಕ್ಕೆ ಅತಿ ಹೆಚ್ಚು ವೆಚ್ಚ ಮಾಡುವ ಜಗತ್ತಿನ ಎಂಟನೇ ರಾಷ್ಟ್ರ ಭಾರತ. ಶಸ್ತ್ರಾಸ್ತ್ರಗಳನ್ನು ಖರೀದಿಸುವ ವಿಶ್ವದ ಮೊದಲ ಹತ್ತು ರಾಷ್ಟ್ರಗಳ ಪಟ್ಟಿಯಲ್ಲಿರುವ ಸೌದಿ ಅರೇಬಿಯಾ ಮಾತ್ರ ಸ್ಥಳೀಯ ಮಟ್ಟದಲ್ಲಿ ಅತಿ ಕಡಿಮೆ ಶಸ್ತ್ರಾಸ್ತ್ರ ತಯಾರಿಸುತ್ತಿದೆ. ಆದರೆ, ಇದಕ್ಕೆ ತದ್ವಿರುದ್ಧವಾಗಿ ಚೀನಾ, ಉನ್ನತ ತಂತ್ರಜ್ಞಾನದ ಶಸ್ತ್ರಾಸ್ತ್ರಗಳನ್ನು ಅತ್ಯಂತ ಪರಿಣಾಮಕಾರಿಯಾಗಿ ರಫ್ತು ಮಾಡಲು ಪ್ರಾರಂಭಿಸಿದೆ.

‘ಶಸ್ತ್ರಾಸ್ತ್ರ ತಯಾರಿಕೆಗೆ ಸಂಬಂಧಿಸಿ ಭಾರತದ ಪ್ರಮುಖ ಸಮಸ್ಯೆಯೆಂದರೆ ಭ್ರಷ್ಟಾಚಾರ ಮತ್ತು ಅದಕ್ಷ ಸರ್ಕಾರ. ಇವೆರಡರ ಕಾರಣದಿಂದ ಪರಿಣತರಿಗೆ ಉನ್ನತ ತಂತ್ರಜ್ಞಾನ ಮತ್ತು ಹೇರಳವಾಗಿ ಶಸ್ತ್ರಾಸ್ತ್ರ ಅಭಿವೃದ್ಧಿ ಪಡಿಸಲು ಸಾಧ್ಯವಾಗುತ್ತಿಲ್ಲ’ ಎನ್ನುತ್ತಾರೆ ನವದೆಹಲಿಯ (ನೀತಿ ರೂಪಿಸುವ)  ರಿಸರ್ಚ್‌ ಫೌಂಡೇಶನ್‌ ಸಮೂಹದ ಸಂಶೋ ಧಕರಲ್ಲಿ ಒಬ್ಬರಾದ ಮನೋಜ್‌ ಜೋಶಿ.

ಇದಕ್ಕೆ ಅವರು ಒಂದು ಉದಾಹರಣೆ ಕೂಡ ನೀಡಿದ್ದಾರೆ. ಭಾರತವು ರಷ್ಯಾದಿಂದ ಸುಖೋಯ್‌ ಯುದ್ಧ ವಿಮಾನವನ್ನು
55 ದಶಲಕ್ಷ ಡಾಲರ್ ನೀಡಿ ಖರೀದಿಸಬಹುದು. ಆದರೆ, ಭಾರತವು ವಿಮಾನದ ಬಿಡಿ ಭಾಗಗಳನ್ನು ತರಿಸಿಕೊಂಡು ಸರ್ಕಾರಿ ಒಡೆತನದ ಹಿಂದೂಸ್ತಾನ್‌ ಏರೊನಾಟಿಕ್ಸ್‌ ಲಿಮಿಟೆಡ್‌ನಲ್ಲಿ ಮರು ಜೋಡಣೆ ಮಾಡುತ್ತಿದೆ. ಇದಕ್ಕಾಗಿ ಅದು 68 ದಶಲಕ್ಷ ಡಾಲರ್ ಖರ್ಚು ಮಾಡುತ್ತಿದೆ. ಅಂದರೆ ಒಂದು ವಿಮಾನಕ್ಕಾಗಿ ಶೇ 25ರಷ್ಟು ಹೆಚ್ಚುವರಿ ವೆಚ್ಚ ಮಾಡುತ್ತಿದೆ. ಇನ್ನೊಂದು ಉದಾಹರಣೆ ತೆಗೆದುಕೊಳ್ಳುವುದಾದರೆ, ವಿಮಾನದ ಎಂಜಿನ್‌ ಅಭಿವೃದ್ಧಿಪಡಿಸುವ ಪ್ರಯತ್ನದಲ್ಲಿ ಸರ್ಕಾರಿ ಪ್ರಯೋಗಾಲಯಗಳು ಕೋಟ್ಯಂತರ ರೂಪಾಯಿ ಖರ್ಚು ಮಾಡುತ್ತಿವೆ. ಆದರೆ, ಅದು ಇನ್ನು ಕೂಡ ಪ್ರಯತ್ನದ ಹಂತದಲ್ಲೆ ಉಳಿದಿದೆ. ಹೀಗಾಗಿ ಜನರಲ್ ಎಲೆಕ್ಟ್ರಿಕ್‌ ಉದ್ಯಮದಿಂದ ಎಂಜಿನ್‌ ಖರೀದಿಸಿದೆ. ಈಚೆಗೆ ಇದನ್ನೇ ತೇಜಸ್‌ ಯುದ್ಧ ವಿಮಾನದಲ್ಲಿ ಅಳವಡಿಸಲಾಗಿತ್ತು.

‘ಸುಖೋಯ್‌ ಯುದ್ಧ ವಿಮಾನದ ಸೂಕ್ಷ್ಮ ಬಿಡಿ ಭಾಗಗಳನ್ನು ಮತ್ತೆ ಜೋಡಿಸುವುದು ಅಷ್ಟು ಸುಲಭದ ವಿಷಯವಲ್ಲ. ಅದರ ಭಾಗಗಳು ಬಹಳ ಸೂಕ್ಷ್ಮವಾಗಿರುವುದು ಇದಕ್ಕೆ ಕಾರಣ’ ಎನ್ನುತ್ತಾರೆ ಸ್ಟಾಕ್‌ಹೋಮ್‌ ಇನ್‌ಸ್ಟಿಟ್ಯೂಟ್‌ನ ನಿರ್ದೇಶಕ ಸ್ಯಾಮುಯೆಲ್‌ ಪರ್ಲೊ ಫ್ರಿಮನ್‌.

‘ಸ್ವಂತ ಶಕ್ತಿ ಮೇಲೆ ಹೊಸ ಶಸ್ತ್ರಾಸ್ತ್ರಗಳನ್ನು ಅಭಿವೃದ್ಧಿಪಡಿಸುವ ವಿಷಯದಲ್ಲಿ ಇನ್ನು ಭಾರತ ಬಹಳ ದೂರ ಉಳಿದಿದೆ’ ಎಂದೂ ಅವರು ಅಭಿಪ್ರಾಯಪಟ್ಟಿದ್ದಾರೆ.

ದೇಶದಲ್ಲಿ ಶಸ್ತ್ರಾಸ್ತ್ರ ತಯಾರಿಕೆಗೆ ಖಾಸಗಿ ಕಂಪೆನಿಗಳನ್ನು ಪ್ರೋತ್ಸಾಹಿಸಲು ಭಾರತ ಪ್ರಯತ್ನಿಸುತ್ತಿದೆ. ಸರ್ಕಾರದ ಸಹಭಾಗಿತ್ವ ಮತ್ತು ಖಾಸಗಿ ಪ್ರಯತ್ನ ಎರಡೂ ಇದರಲ್ಲಿ ಸೇರಿದ್ದು, ಅದರ ಕೆಲ ಪ್ರಯತ್ನಗಳು ಕೈಗೂಡಿವೆ. ಬಹುತೇಕ ದೇಶಿಯ ಶಸ್ತ್ರಾಸ್ತ್ರಗಳನ್ನು ಅಭಿವೃದ್ಧಿಪಡಿಸಿರುವ ಭಾರತದಲ್ಲಿ 50 ಸರ್ಕಾರಿ ಪ್ರಯೋಗಾಲಯಗಳು, ಎಂಟು ಬೃಹತ್‌ ಸರ್ಕಾರಿ ಶಸ್ತ್ರಾಸ್ತ್ರ ತಯಾರಿಕೆ ಕೇಂದ್ರಗಳು ಮತ್ತು 40 ಸರ್ಕಾರಿ ಶಸ್ತ್ರಾಸ್ತ್ರ ಕಾರ್ಖಾನೆಗಳಿವೆ.

ಸರ್ಕಾರದ ಕಠಿಣ ನಿಲುವು
ಸರ್ಕಾರದೊಂದಿಗೆ ಕೆಲಸ ನಿರ್ವಹಿಸಲು ಅನೇಕ ಕಂಪೆನಿಗಳು ಹಿಂದೇಟು ಹಾಕುತ್ತಿವೆ. ಇದಕ್ಕೆ ಕಾರಣ ಭಾರತದ ಕಾರ್ಖಾನೆಗಳಲ್ಲಿ ವಿದೇಶದ ಕಂಪೆನಿಗಳು ಶೇ 26ಕ್ಕಿಂತ ಹೆಚ್ಚಿನ ಷೇರು ಹೊಂದಲು ಸರ್ಕಾರ ಅವಕಾಶ ಕಲ್ಪಿಸದಿರುವುದು. ಅದರ ಮಿತಿ ಶೇ 49ಕ್ಕೆ ಹೆಚ್ಚಿಸಲು ಸರ್ಕಾರ ಒಪ್ಪಿಕೊಂಡಿತ್ತು. ಆದರೆ ಈ ಷರತ್ತನ್ನು ಯಾವುದೇ ಕಂಪೆನಿ ಒಪ್ಪಿಕೊಂಡು ಮುಂದೆ ಬರಲಿಲ್ಲ. ಶಸ್ತ್ರಾಸ್ತ್ರ ತಯಾರಿಕೆಯನ್ನು ಭಾರತ ತಡೆ ಹಿಡಿದಿದೆ ಎಂಬ ಟೀಕೆಗಳನ್ನು ಆಂಟನಿ ಅಲ್ಲಗಳೆದಿದ್ದರು.

‘ಭಾರತದ ವಿಜ್ಞಾನಿಗಳು ಮತ್ತು ಇಲ್ಲಿನ ಉದ್ಯಮರಂಗ ಬಹಳ ಸಮರ್ಥವಾಗಿದೆ. ಸರ್ಕಾರ ಅವರನ್ನು ಪ್ರೋತ್ಸಾಹಿಸಲಿದೆ’ ಎಂದು ತಿಳಿಸಿದ್ದರು. ಆದರೆ, ಮನೋಜ್‌ ಜೋಶಿ ಬೇರೆಯದೇ ಹೇಳುತ್ತಾರೆ. ‘ಶಸ್ತ್ರಾಸ್ತ್ರ ತಯಾರಿಕೆ ಕ್ಷೇತ್ರದಿಂದ ಸರ್ಕಾರ ಹೊರಬರುವ ಅಗತ್ಯವಿದೆ. ನಮ್ಮ ರಕ್ಷಣಾ ಉದ್ಯಮದ ತಳಹದಿ ಬಹಳ ಹಳತಾಗಿದೆ. ಖಾಸಗಿ ವಲಯದ ಕೈಗೆ ಶಸ್ತ್ರಾಸ್ತ್ರ ತಯಾರಿಕೆ ಒಪ್ಪಿಸಬೇಕು’ ಎನ್ನುತ್ತಾರೆ ಅವರು.

ಸರ್ಕಾರದ ನೀತಿಗಳಿಂದಾಗಿ ರಷ್ಯಾದಂತಹ ರಾಷ್ಟ್ರಗಳಿಗೆ ಭಾರತದ ಬಾಗಿಲು ಸದಾ ತೆರೆದುಕೊಂಡಿರುತ್ತದೆ. 2012ನೇ ಸಾಲಿನಲ್ಲಿ ರಷ್ಯಾ ದಾಖಲೆ ಪ್ರಮಾಣದಲ್ಲಿ ಭಾರತಕ್ಕೆ ಶಸ್ತ್ರಾಸ್ತ್ರಗಳನ್ನು ರಫ್ತು ಮಾಡಿತ್ತು. ಇತ್ತೀಚಿನ ಅಂಕಿ ಅಂಶಗಳನ್ನು ನೋಡಿ ಹೇಳುವುದಾದರೆ 2011ರಿಂದ ಶೇ 50ರಷ್ಟು ಅದರ ರಫ್ತು ಹೆಚ್ಚಾಗಿದೆ. ಕಳೆದ ಐದು ವರ್ಷಗಳಲ್ಲಿ ಭಾರತವು ಜಗತ್ತಿನಲ್ಲೇ ಶೇ 12ರಷ್ಟು ಶಸ್ತ್ರಾಸ್ತ್ರಗಳನ್ನು ಆಮದು ಮಾಡಿಕೊಂಡಿದೆ. ರಷ್ಯಾ ಒಂದೇ ಶೇ 79ರಷ್ಟು ಶಸ್ತ್ರಾಸ್ತ್ರಗಳನ್ನು ಭಾರತಕ್ಕೆ ಪೂರೈಸಿದೆ ಎಂದು ಸ್ಟಾಕ್‌ಹೋಮ್‌ ಇನ್‌ಸ್ಟಿಟ್ಯೂಟ್‌ ವಿವರಿಸುತ್ತದೆ.

ಸಾರಿಗೆ ವಾಹನ ಮತ್ತು ಯುದ್ಧ ವಿಮಾನ ವಾಹಕ ನೌಕೆಗಳಿಗೆ ಸಂಬಂಧಿಸಿದಂತೆ ಭಾರತ ಇತ್ತೀಚೆಗೆ ಅಮೆರಿಕಕ್ಕೆ ಬೇಡಿಕೆ ಸಲ್ಲಿಸಿದೆ.  ಆದರೂ ಭಾರತಕ್ಕೆ ಶಸ್ತ್ರಾಸ್ತ್ರಗಳನ್ನು ಪೂರೈಸುವ ರಾಷ್ಟ್ರಗಳಲ್ಲಿ ರಷ್ಯಾ ಇನ್ನು ಮುಂಚೂಣಿ ಸ್ಥಾನದಲ್ಲಿದೆ. ರಷ್ಯಾ 2012ರಲ್ಲಿ ಭಾರತಕ್ಕೆ ಜಲಾಂತರ್ಗಾಮಿಯನ್ನು ಹಸ್ತಾಂತರಿಸಿದೆ.

ಭಾರತಕ್ಕೆ ಶಸ್ತ್ರಾಸ್ತ್ರ ಪೂರೈಸುವುದರಲ್ಲಿ ವಿಳಂಬ ಮಾಡಲಾಗುತ್ತಿದೆ ಎಂಬ ವರದಿಗಳನ್ನು ಭಾರತದಲ್ಲಿನ ರಷ್ಯಾದ ರಾಯಭಾರಿ ಅಲೆಕ್ಸಾಂಡರ್‌ ಕಡಕಿನ್‌ ಅಲ್ಲಗಳೆದಿದ್ದಾರೆ. ‘ಭಾರತದ ಶಸ್ತ್ರಾಸ್ತ್ರ ಮಾರುಕಟ್ಟೆಯಲ್ಲಿ ರಷ್ಯಾಕ್ಕೆ ಇರುವ ಮುಂಚೂಣಿ ಸ್ಥಾನ ಕಳೆದುಕೊಳ್ಳುತ್ತಿದೆ ಎಂದು ಹೇಳುವುದರಲ್ಲಿ ಹುರುಳಿಲ್ಲ’ ಎಂದಿದ್ದಾರೆ.

ಅಮೆರಿಕದ ಕಾಂಗ್ಲೊಮೆರೆಟ್‌ ಯುನೈಟೆಡ್‌ ಟೆಕ್ನಾಲಜೀಸ್‌ನ ಭಾಗವಾಗಿರುವ ಸಿಕೊರ್ಸ್‌ಕಿ ವಿಮಾನ ಕಂಪೆನಿ 2010ರಲ್ಲಿ ಹೈದರಾಬಾದ್‌ನಲ್ಲಿ ಘಟಕ ತೆರೆದಿದೆ. ಟಾಟಾ ಅಡ್ವಾನ್ಸಡ್‌ ಸಿಸ್ಟಮ್ಸ್‌ ಜೊತೆಗೂಡಿ ಇದು ಕೆಲಸ ನಿರ್ವಹಿಸುತ್ತಿದೆ. ಈ ಘಟಕದಲ್ಲಿ ಎಸ್–92 ಮಾದರಿಯ ಮಧ್ಯಮ ಗಾತ್ರದ ಹೆಲಿಕಾಪ್ಟರ್‌ ಕ್ಯಾಬಿನ್‌ ತಯಾರಿಸಲಾಗುತ್ತಿದೆ. ಈ ಹಿಂದೆ ಈ ಹೆಲಿಕಾಪ್ಟರ್‌ನ ಕ್ಯಾಬಿನ್‌ನನ್ನು ಜಪಾನ್‌ ಮೂಲದ ಕಂಪೆನಿಯೊಂದು ತಯಾರಿಸುತ್ತಿತ್ತು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT