ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಧೂಮಪಾನ: ಆರೋಗ್ಯವೋ? ಆನಂದವೋ?

‘ಆನಂದ ನಷ್ಟ’ ಎನ್ನುವುದು ಆರೋಗ್ಯ ವಲಯದ ಹೊಸ ಪರಿಕಲ್ಪನೆ. ತಂಬಾಕು ವಿಷಯದಲ್ಲಿ ಯಾವುದೇ ನಿರ್ಬಂಧ ಜಾರಿ ಮಾಡಲು ಅಮೆರಿಕ ಮುಂದಾಗುವುದಾದರೆ ಮತ್ತೊಮ್ಮೆ ಇದನ್ನು ಪರಾಮರ್ಶಿಸುವುದು ಒಳಿತು ಎಂಬುದು ಕೆಲವು ಆರ್ಥಿಕ ತಜ್ಞರ ಸಲಹೆ

ಸಾರ್ವಜನಿಕರಲ್ಲಿ ಆರೋಗ್ಯ ಮತ್ತು ಆನಂದ ಎಂಬ ಪರಿಕಲ್ಪನೆಗಳು ಸಾಕಷ್ಟು ಬಾರಿ ಮುಖಾಮುಖಿಯಾಗಿವೆ. ಈ ದ್ವಂದ್ವದಲ್ಲಿ ಆರೋಗ್ಯ ಕಾಳಜಿ ಮುಖ್ಯವೋ ಅಥವಾ ಆರೋಗ್ಯಕ್ಕೆ ಹಾನಿಯಾದರೂ ಆನಂದ ನೀಡುವ ವ್ಯಸನಗಳು ಮುಖ್ಯವೋ ಎಂಬ ಜಿಜ್ಞಾಸೆ ಕಾಡುತ್ತಿದೆ. ಈ ಮಧ್ಯೆ, ಅಮೆರಿಕದಲ್ಲಿ  ತಂಬಾಕು ಉತ್ಪನ್ನಗಳ ಮೇಲೆ ಹೊಸ ರೀತಿಯ ನಿರ್ಬಂಧಗಳನ್ನು (ಆರ್ಥಿಕ ಲಾಭದ ಲೆಕ್ಕಾಚಾರ) ಹೇರಲಾಗಿದೆ. ಇದರಲ್ಲಿ ಆನಂದದ ಪಾಲಿಗೂ ಕತ್ತರಿ ಬಿದ್ದಿದೆ.

ಈ ಲೆಕ್ಕಾಚಾರದಂತೆ ಚಟ್ಟಕ್ಕೆ ದಾರಿಯಾಗುವ ಧೂಮಪಾನ ಚಟ ಬಿಡುವುದೇನೋ ಸರಿ, ಆದರೆ, ಈ ದುರ್ವ್ಯಸನವನ್ನು ತ್ಯಜಿಸಿದ ಮೇಲೆ ಈ ವ್ಯಸನಿಗರು ಶೇ 70ರಷ್ಟು ಆನಂದ ಕಳೆದುಕೊಳ್ಳುತ್ತಾರೆ ಎಂಬ ಅಂಶ ವ್ಯಕ್ತವಾಗಿದೆ.

ತಂಬಾಕು ಉತ್ಪನ್ನಗಳ ಬಳಕೆಯನ್ನು ತಡೆಯಲು ಸರ್ಕಾರ ಸಾಕಷ್ಟು ನಿರ್ಬಂಧ, ತೆರಿಗೆ ಹೇರಿದರೆ ಇದ್ದರಿಂದ ಆರ್ಥಿಕವಾಗಿ ಲಾಭ ಆಗಬಹುದು ಎಂಬುದು ಸರ್ಕಾರದ ಲೆಕ್ಕಾಚಾರ. ಆದರೆ, ತಂಬಾಕು ಉತ್ಪನ್ನ ತಯಾರಿಕಾ ಕಂಪೆನಿಗಳು ಸರ್ಕಾರವನ್ನು ನ್ಯಾಯಾಲಯದ ಕಟಕಟೆಗೆ ಎಳೆದು ತರುವುದು ಗ್ಯಾರಂಟಿ. ಇಂತಹ ನಿರ್ಬಂಧಗಳಿಂದ ಅಡ್ಡಪರಿಣಾಮವೂ ಉಂಟಾಗುತ್ತದೆ. ಇದರ ಬದಲು ಧೂಮಪಾನಿಗಳ ಮನವೊಲಿಸಿ ಹಂತ ಹಂತವಾಗಿ ಈ ಚಟವನ್ನು ಕಡಿಮೆ ಮಾಡಿ ಕಡೆಗೆ ಬಿಟ್ಟುಬಿಡುವಂತೆ ಮಾಡುವುದು ಯಶಸ್ವಿ ಮಾರ್ಗೋಪಾಯ ಎನ್ನುವುದು ಆರ್ಥಿಕ ತಜ್ಞರ ಅಭಿಮತ.

ಇತ್ತೀಚೆಗೆ ಆರ್ಥಿಕ ತಜ್ಞರು ಧೂಮಪಾನ, ಆರ್ಥಿಕ ಲಾಭ, ಕಾನೂನಿನ ಸವಾಲು ಮತ್ತು ಆನಂದ ನಷ್ಟ ಕುರಿತು ನಡೆದ ವಿಚಾರ ಸಂಕಿರಣದಲ್ಲಿ ತಮ್ಮ ಅಧ್ಯಯನಗಳನ್ನು ಮುಂದಿಟ್ಟರು.

‘ತಂಬಾಕು ಸೇವನೆಯಿಂದ ಸಿಗುವ ಆನಂದದ ಪ್ರಮಾಣ ಅಮೆರಿಕದಲ್ಲಿ  ತುಸು ಹೆಚ್ಚೇ ಇರುವುದರಿಂದ ತಂಬಾಕು ಉತ್ಪನ್ನಗಳ ಮೇಲೆ ನಿರ್ಬಂಧ ಹೇರಿದರೆ ಇದರ ಬಳಕೆದಾರರಿಗೆ ಆಗುವಂತಹ ಆನಂದದ ನಷ್ಟ ಪ್ರಮಾಣಕ್ಕೆ ಪರ್ಯಾಯ ಏನು ಎಂಬುದನ್ನು ಸರ್ಕಾರ ಮೊದಲು ಸ್ಪಷ್ಟ ಪಡಿಸಬೇಕು’ ಎನ್ನುತ್ತಾರೆ ಇಲಿನಾಯ್ಸ್‌ ವಿಶ್ವವಿದ್ಯಾಲಯದ ಆರ್ಥಿಕ ತಜ್ಞ ಫ್ರಾಂಕ್‌ ಜೆ. ಚಲೌಪ್ಕ.

‘ಆನಂದ ನಷ್ಟ ಎನ್ನುವುದು ಆರೋಗ್ಯ ವಲಯದ ಹೊಸ ಪರಿಕಲ್ಪನೆ. ತಂಬಾಕು ವಿಷಯದಲ್ಲಿ ಸರ್ಕಾರ ಯಾವುದೇ ನಿರ್ಬಂಧ ಜಾರಿ ಮಾಡಲು ಮುಂದಾದರೆ ಅದರಿಂದ 610 ಕೋಟಿ ರೂಪಾಯಿಗಳಿಗೂ ಮೇಲ್ಪಟ್ಟ ಆರ್ಥಿಕತೆ ಒಳಗೊಂಡ ಯಾವುದೇ ನಿರ್ಬಂಧವನ್ನು ಮತ್ತೊಮ್ಮೆ ಪರಾಮರ್ಶೆಗೆ ಒಳಪಡಿಸುವುದು ಒಳಿತು ಎಂಬುದು ಕೆಲವು ಆರ್ಥಿಕ ತಜ್ಞರ ಸಲಹೆ.

‘ತಂಬಾಕು ಉತ್ಪನ್ನಗಳ ಮೇಲಿನ ನಿರ್ಬಂಧದಿಂದಾಗುವ ಲಾಭಕ್ಕಿಂತ ನಷ್ಟವೇ ಹೆಚ್ಚು’ ಎನ್ನುತ್ತಾರೆ ಮೆಸಾಚುಸೆಟ್ಸ್‌ನ ತಂತ್ರಜ್ಞಾನ ಸಂಸ್ಥೆಯ ಆರ್ಥಿಕ ತಜ್ಞ ಜೋನಾಥನ್ ಗ್ರುಬರ್.

ಅಮೆರಿಕದ ಆಹಾರ ಮತ್ತು ಔಷಧ ನಿಯಂತ್ರಣ ಇಲಾಖೆ (ಎಫ್‌ಡಿಎ) ಕಳೆದ ಏಪ್ರಿಲ್‌ನಲ್ಲಿ ತಂಬಾಕು ಉತ್ಪನ್ನಗಳ ಮೇಲೆ ತಾತ್ಕಾಲಿಕವಾಗಿ ಹೇರಿರುವ ನಿರ್ಬಂಧದಿಂದ ಸಿಗರೇಟ್‌, ಸಿಗಾರ್‌ ಮತ್ತಿತರ ತಂಬಾಕು ಉತ್ಪನ್ನ ತಯಾರಿಕಾ ಕಂಪೆನಿಗಳಿಗೆ ಕಠಿಣ ಸವಾಲು ಎದುರಾಗಿದೆ. ಇದರ ಜೊತೆಗೆ ಎಲೆಕ್ಟ್ರಾನಿಕ್ ಸಿಗರೇಟ್‌ ತಯಾರಿಕಾ ಕಂಪೆನಿಗಳ ಮೇಲೂ ಕೆಟ್ಟ ಪರಿಣಾಮ ಬೀರಿದೆ.
ಎಫ್‌ಡಿಐ ತನ್ನ ಹೊಸ ನಿರ್ಬಂಧವನ್ನು ವಿಶದೀಕರಿಸಿದೆ. ಆದರೂ, ಆರ್ಥಿಕ ತಜ್ಞರು ಎತ್ತಿರುವ ಪ್ರಶ್ನೆಗೆ ಖಚಿತ ಉತ್ತರ ನೀಡಿಲ್ಲ.

‘ಹೊಸ ನಿರ್ಬಂಧಗಳ ಕುರಿತ ಗೊಂದಲಗಳು ದೂರವಾಗಿಲ್ಲ. ಇದನ್ನು ದೂರ ಮಾಡಲು ಎಫ್‌ಡಿಎ ಮಾರ್ಗೋಪಾಯಗಳನ್ನು ಹುಡುಕುತ್ತಿದೆ. ಇದರ ಜೊತೆಗೆ ಸಾರ್ವಜನಿಕರಿಂದಲೂ ಟೀಕೆ– ಟಿಪ್ಪಣಿಗಳು ಬರುತ್ತಿವೆ. ಇವೆಲ್ಲವನ್ನು ಪರಿಶೀಲಿಸಿ ಅಂತಿಮ ನೀತಿ ಅನುಷ್ಠಾನಕ್ಕೂ ಮೊದಲು ತಿದ್ದುಪಡಿಗಳನ್ನು ಮಾಡಲಾಗುವುದು’ ಎಂದು ಎಫ್‌ಡಿಎ ವಕ್ತಾರೆ ಜೆನ್ನಿಫರ್‌ ಹಾಲಿಸ್ಕಿ ಹೇಳಿದ್ದಾರೆ.
ಅಂತಿಮ ನೀತಿಯಲ್ಲಿ ಸುಧಾರಣೆ ಆಗದಿದ್ದರೆ ಸರ್ಕಾರಕ್ಕೆ ಅಪಾಯ ಎದುರಾಗುವುದರಲ್ಲಿ ಯಾವುದೇ ಅನುಮಾನ ಇಲ್ಲ ಎಂದು ಆರ್ಥಿಕ ತಜ್ಞರು ಎಚ್ಚರಿಕೆಯ ಗಂಟೆ ಬಾರಿಸಿದ್ದಾರೆ.

‘ಈ ನಿರ್ಬಂಧದ ನೀತಿಗೆ ಕಾಂಗ್ರೆಸ್‌ನಿಂದ (ಸಂಸತ್ತಿನ) ಒಪ್ಪಿಗೆ ಪಡೆದುಕೊಳ್ಳುವುದು ಅಷ್ಟು ಸುಲಭವಲ್ಲ. ಆರ್ಥಿಕ ಲಾಭ ಆಧಾರಿತ ನಿರ್ಬಂಧ ನೀತಿಯಿಂದಾಗುವ ಪರಿಣಾಮ ವಿಸ್ತಾರವಾದುದು. ಇದರಿಂದ ಸಕ್ಕರೆ, ಉಪ್ಪುಗಳಿಂದ ಸಿಗುವ ಆನಂದಕ್ಕೂ ಕುತ್ತು ಬರಬಹುದು’ ಎಂದು ತಂಬಾಕು ಮುಕ್ತ ಮಕ್ಕಳು ಅಭಿಯಾನದ ಅಧ್ಯಕ್ಷ ಮಾಥ್ಯು ಎಲ್‌. ಮೇಯರ್ಸ್‌ ಹೇಳಿದ್ದಾರೆ.

ಸಾರ್ವಜನಿಕರಿಗೆ ಮಾರುಕಟ್ಟೆಯ ಲೆಕ್ಕಾಚಾರಗಳು ಗೊತ್ತಿವೆ. ಆದ್ದರಿಂದ ಅವರು ಮುಂದೆ ಪಶ್ಚಾತಾಪಕ್ಕೆ ಕಾರಣವಾಗುವಂತಹ ಯಾವುದೇ ನಿರ್ಧಾರಗಳನ್ನು ದಿಢೀರ್‌ ತೆಗೆದುಕೊಳ್ಳುವುದಿಲ್ಲ.

ಸಾಮಾನ್ಯವಾಗಿ ಅಮೆರಿಕದಲ್ಲಿ ಮಕ್ಕಳು ಒಳಿತು– ಕೆಡಕುಗಳನ್ನು ಸರಿಯಾಗಿ ಗುರುತಿಸುವುದಕ್ಕೂ ಮೊದಲೇ ಅಂದರೆ, 18 ವರ್ಷ ವಯಸ್ಸಿಗೂ ಮೊದಲೇ ಧೂಮಪಾನಕ್ಕೆ ಅಂಟಿಕೊಳ್ಳುತ್ತಾರೆ. ಆದರೆ, ಅಲ್ಪ ಕಾಲದ ಸುಖಕ್ಕಾಗಿ ದೀರ್ಘಕಾಲ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವ ಈ ದುರ್ವ್ಯಸನವನ್ನು ಬಿಡುವ ಮನಸಸಂತೂ ಬಹುತೇಕರಿಗೆ ಇದೆ. ಧೂಮಪಾನಿಗಳು ವ್ಯಸನ ಬಿಟ್ಟರೆ ಅದರಿಂದ ದೊರೆಯುವ ಆನಂದದಿಂದ ವಂಚಿತರಾಗುತ್ತಾರೆ ಎಂಬುದೇ ಒಂದು ದೊಡ್ಡ ಸಮಸ್ಯೆ ಏನಲ್ಲ. ಏಕೆಂದರೆ, ಈ ಆನಂದ ನಷ್ಟದ ಲೆಕ್ಕಾಚಾರದಲ್ಲಿ ಧೂಮಪಾನಿಗಳಲ್ಲದವರು ಅಥವಾ ಪರೋಕ್ಷ ಧೂಮಪಾನಿಗಳ ಅಭಿಪ್ರಾಯವನ್ನು ಲೆಕ್ಕಕ್ಕೆ ತೆಗೆದುಕೊಂಡಿಲ್ಲ ಎಂಬುದು ಮತ್ತೆ ಕೆಲವು  ಆರ್ಥಿಕ ತಜ್ಞರ ಅಭಿಪ್ರಾಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT