ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಧ್ವನ್ಯಾತ್ಮಕ ‘ಚಕ್ರರತ್ನ’

ರಂಗಭೂಮಿ
Last Updated 22 ಮಾರ್ಚ್ 2015, 19:30 IST
ಅಕ್ಷರ ಗಾತ್ರ

ಸಂಸ ಬಯಲು ರಂಗಮಂದಿರದಲ್ಲಿ ಇತ್ತೀಚೆಗೆ ‘ಭಾಗವತರು’ ಆಯೋಜಿಸಿದ ನಾಟಕೋತ್ಸವದಲ್ಲಿ ‘ರೂಪಾಂತರ’ ತಂಡ ಪ್ರದರ್ಶಿಸಿದ ‘ಚಕ್ರರತ್ನ’ ಒಂದು ಉತ್ತಮ ಪ್ರಯೋಗ. ರಚನೆಃ ಕೆ.ವೈ.ನಾರಾ ಯಣಸ್ವಾಮಿ, ನಿರ್ದೇಶನಃ ಕೆಎಸ್‌ಡಿಎಲ್ ಚಂದ್ರು.

ಭರತ-ಬಾಹುಬಲಿಯ ಕಥೆ ಯಾರಿಗೆ  ತಾನೇ ಗೊತ್ತಿಲ್ಲ? ಶ್ರವಣಬೆಳಗೊಳದಲ್ಲಿ ನಿಂತಿರುವ ಗೊಮ್ಮಟಮೂರ್ತಿಯಿಂದ ಈ ಕಥೆ ಜನಜನಿತ. ಆದಿದೇವ ಕೈವಲ್ಯಾಪೇಕ್ಷಿಯಾಗಿ ವನವಾಸ ಸೇರಿದ ನಂತರ, ಅವನ ಹಿರಿಮಗ ಭರತ ಅಧಿಪತ್ಯ ವಹಿಸಿಕೊಳ್ಳುತ್ತಾನೆ. ಆಗ ಅವನ ಆಯುಧಾಗಾರದಲ್ಲಿ ‘ಚಕ್ರರತ್ನ’ವೊಂದು ಕಾಣಿಸಿಕೊಂಡು ಅವನನ್ನು ದಿಗ್ವಿಜಯಕ್ಕೆ ಪ್ರೇರೇಪಿಸಿ, ಅವನು ಎಲ್ಲ ರಾಜ್ಯಗಳನ್ನೂ ಗೆಲ್ಲುತ್ತಾ ಬಂದು, ಕಡೆಗವನ ತಮ್ಮಂದಿರೇ ಶರಣಾಗಿಲ್ಲ ಎಂಬ ಸಂಗತಿ ಅರಿವಾಗಿ ತಮ್ಮ ಬಾಹುಬಲಿಯ ಮೇಲೆ ಯುದ್ಧ ಹೂಡುತ್ತಾನೆ. ದೃಷ್ಟಿ, ಜಲ, ಮತ್ತು ಮಲ್ಲಯುದ್ಧಗಳಲ್ಲಿ ಅಣ್ಣ, ತಮ್ಮನಿಗೆ ಸೋತರೂ, ‘ಚಕ್ರರತ್ನ’ಕ್ಕೆ ಅವನನ್ನು ಕೊಲ್ಲಲು ಆಜ್ಞಾಪಿಸುತ್ತಾನೆ. ಚಕ್ರರತ್ನವನ್ನೂ ಸೋಲಿಸಿದ ಬಾಹುಬಲಿ, ಅಣ್ಣನ ರಾಜ್ಯ,  ಅಧಿಕಾರಗಳ ದಾಹಕ್ಕೆ ಹೇಸಿ, ನಾಡನ್ನು ತೊರೆದು ಕಾಡನ್ನು ಸೇರಿ ತಪಸ್ಸಿಗೆ ನಿಲ್ಲುತ್ತಾನೆ. ಇದು ಮುಖ್ಯ ಕಥಾನಕ.

ಮುಂದೆ ಗೊಮ್ಮಟಮೂರ್ತಿ ನಿರ್ಮಿಸಲು ಚಾವುಂಡರಾಯನಿಂದ ಆದೇಶಿತನಾದ ಶಿಲ್ಪಿ, ಏಕಶಿಲೆಗಾಗಿ ಕಾಡುಮೇಡು ಅಲೆಯುತ್ತ ಚಮ್ಮಾರನೊಬ್ಬನನ್ನು ಭೇಟಿಯಾಗಿ ಅವನ ನಿಷ್ಕಲ್ಮಷ ಸೇವಾ ಕಾಯಕದ ಪರಿ ಕಂಡು ಅವನು ಕೇವಲ ಚಪ್ಪಲಿ ಹೊಲಿಯುವವನಲ್ಲ, ಜಗದ ಗಾಯಗಳ ಹೊಲಿಯುವ ಚಮ್ಮಾರನೆಂಬ ಪಾರಮಾರ್ಥದ ಎಳೆಗಳನ್ನು ಅವನ ವ್ಯಕ್ತಿತ್ವದಲ್ಲಿ ಗುರುತಿಸಿ, ಅವನು ತೋರಿದ ದಾರಿಯಲ್ಲಿ ಬೃಹತ್ ಏಕಶಿಲೆಯನ್ನು ಕಂಡುಕೊಂಡು ಗೊಮ್ಮಟಮೂರ್ತಿ ನಿರ್ಮಿಸುತ್ತಾನೆ.

ಈ ನಾಟಕದ ರಚನೆಗೆ ನಾಟಕಕಾರರು ಪಂಪನ ‘ಆದಿಪುರಾಣ’ ಮತ್ತು ರತ್ನಾಕರವರ್ಣಿಯ ‘ಭರತೇಶ ವೈಭವ’ವನ್ನು ಆಧರಿಸಿದಂತೆ ಕಂಡರೂ ತಮ್ಮದೇ ಆದ ಕಥೆಯನ್ನು ನೇಯ್ದುಕೊಂಡಿದ್ದಾರೆ. ಕೇವಲಿಯದ ಬಾಹುಬಲಿ ‘ಪ್ರತಿಮಾ ವಿಧಾನ’ದನ್ವಯ ಚಮ್ಮಾರನ ರೂಪ ತಳೆಯುವುದು ಮುಂತಾದ ಅವರ ಸ್ವಕಲ್ಪನೆಯ ಹಲವು ಸಂಗತಿಗಳಿಂದ ನಾಟಕ ರೂಪಿತವಾಗಿದೆ.

ಭರತ-ಬಾಹುಬಲಿಯ ಕಥೆಯ ವಿವರಗಳು ಜನರಿಗೆ ಗೊತ್ತಿಲ್ಲವೆಂದೇ ಭಾವಿಸಿ ನಾಟಕಕಾರರು ಕೊಂಚ ಸರಳರೀತಿಯಲ್ಲಿ ಗೊಂದಲವಾಗದಂತೆ(ಕಾಲಘಟ್ಟಗಳು ಎಲ್ಲಿಂದೆಲ್ಲಿಗೋ ನೋಡುಗರ ಗ್ರಹಿಕೆಗೆ ನಿಲುಕದಂತೆ ಜಾರುತ್ತವೆ) ಅಂಕಗಳನ್ನು ನಿರೂಪಿಸಬಹುದಿತ್ತು. ಅನೇಕ ‘ಫ್ಲ್ಯಾಷ್ ಬ್ಯಾಕ್’ಗಳು, ಮತ್ತೆ ಅವುಗಳಲ್ಲಿ ಇನ್ನೊಂದು ಹಿಂದಿನ ದೃಶ್ಯ, ಈ ರೀತಿ ಕಥೆಯ ಅನುಕ್ರಮಣಿಕೆ ಹೊಂದಿಸಲಾರದೆ ಗೊಂದಲ ತುಳುಕಾಡುತ್ತದೆ.

ನಾಟಕದ ತುಂಬ ರೂಪಕಗಳೇ ಮಾತನಾಡುವುದರಿಂದ ಕಾವ್ಯಸ್ಪರ್ಶವಿದೆ. ಅಲ್ಲಲ್ಲಿ ಮೂಲಕವಿಗಳ ಪದ್ಯಗಳಿರುವುದೂ ಇದಕ್ಕೆ ಪುಷ್ಟಿ. ‘ಚಕ್ರರತ್ನ’ ವನ್ನು ಒಂದು ಶಸ್ತ್ರವಾಗಿ ತೋರಿಸದೆ, ಶಕ್ತಿಶಾಲಿಯಾದ ಹೆಣ್ಣೊಬ್ಬಳ ರೂಪಕದಲ್ಲಿ ನಿರೂಪಿಸಿರುವುದರಿಂದ ಹೊಸ ಆಯಾಮ ದೊರೆತಿದೆ. ಹೆಣ್ಣಿನ ರೂಪದ ಈ ಚಕ್ರರತ್ನ ಭರತನ ಮುಂದಿನ ಎಲ್ಲ ವಿಜಯಗಳಿಗೆ ಮುನ್ನುಡಿ ಬರೆಯುವ ಪ್ರೇರಕಶಕ್ತಿಯಾಗಿ ಕೆಲಸಮಾಡುವ ಚೈತನ್ಯದಂತೆ ಪಾತ್ರ ನಿರ್ವಹಿಸಿರುವ ನಟಿ ‘ಸಿತಾರ’ ತಮ್ಮ ವಿನೂತನ ಭಂಗಿಗಳ, ಆಸನ-ಪಟ್ಟುಗಳ ಸಂಕೇತಗಳಲ್ಲಿ ಲವಲವಿಕೆಯ ಆಂಗಿಕಭಾಷೆಯಿಂದ ಮನಸ್ಸನ್ನು ತುಂಬಿಕೊಳ್ಳುತ್ತಾರೆ. ಇಡೀ ನಾಟಕದ ಆಕರ್ಷಣೆ ಈ ‘ಚಕ್ರರತ್ನ’ವೇ. ಚಕ್ರ ಉರುಳಿದಂತೆ ಮುಂದೆ ಸಾಗುವ ಆಕೆಯ ನೃತ್ಯಭಂಗಿ-ಬಾಗುಗಳು ಕಣ್ತುಂಬುತ್ತವೆ. ಭರತನಾಗಿ ಹರೀಶ್ ತಮ್ಮ ವಾಕ್ಪಟುತ್ವದಿಂದ, ಭಾವಾಭಿನಯ-ಆಂಗಿಕಾಭಿನಯಗಳಿಂದ ಪರಾಕ್ರಮಿಯೊಬ್ಬನ ಪ್ರತಿರೂಪವಾಗುತ್ತಾರೆ. ಬಾಹುಬಲಿಯಾಗಿ ರಾಮಚಂದ್ರ ಗಂಭೀರ ಭಾವಾಭಿನಯದಲ್ಲಿ ಸೆಳೆದು ನಿಖರ ಆಂಗಿಕ ಅಭಿನಯ, ‘ಪೋಸ್ಚರ್’ಗಳಿಂದ ಗಮನಾರ್ಹರಾಗುತ್ತಾರೆ. ಇಡೀ ನಾಟಕದ ಕೇಂದ್ರಬಿಂದುಗಳು ಈ ಮೂರು ಪಾತ್ರಗಳು. ಉಳಿದವರು ಪೂರಕವಾಗಿ ನಟಿಸಿದ್ದಾರೆ. ಚಂದ್ರು ಅವರ ನಿರ್ದೇಶನ ಹರಿತವಾಗಿದ್ದು, ಸುಮಾರು 30ಕ್ಕೂ ಹೆಚ್ಚು ಕಲಾವಿದರಿಂದ ಅಭಿನಯವನ್ನು ದುಡಿಸಿಕೊಳ್ಳುವಲ್ಲಿ ಶ್ರಮವಹಿಸಿದ್ದಾರೆ. ಹಾಡುಗಳು  ಇಂಪಾಗಿವೆ. ಹಿನ್ನೆಲೆಯಿಂದ ಮೂಡಿಬರುತ್ತಿದ್ದ ಪಲ್ಲವಿಯ ಶ್ಲೋಕಗಳು ಅರ್ಥಪೂರ್ಣವಾಗಿದ್ದವು. ಸಂಗೀತ ನಿರ್ದೇಶನ: ನಾರಾಯಣ ರಾಯಚೂರು. ಸನ್ನಿವೇಶಗಳಿಗೆ ತಕ್ಕಂಥ ಉತ್ತಮ ಸಂಗೀತ ಸಂಯೋಜನೆಯಿಂದ ನಾಟಕ ಪರಿಣಾಮಕಾರಿಯಾಗಿತ್ತು. ರಂಗಸಜ್ಜಿಕೆ, ವೇಷಭೂಷಣಗಳು ಉತ್ತಮವಾಗಿದ್ದವು. ಕಡೆಯಲ್ಲಿ ಬೃಹತ್‌ಶಿಲೆಯೇ ಎತ್ತರದ ಗೊಮ್ಮಟಮೂರ್ತಿಯಾಗುವ ದೃಶ್ಯ ನಾಟಕಕ್ಕೆ ತಿಲಕವಿಟ್ಟಂತ್ತಿತ್ತು.

ಯುದ್ಧದ ದುಷ್ಪರಿಣಾಮದಿಂದ ವಿನಾಕಾರಣ ದುಖಃ   ಅನುಭವಿಸುವ ಹೆಂಗೆಳೆಯರ ಸ್ಥಿತಿಗತಿಗಳ ಬಗ್ಗೆ ಮಾರ್ಮಿಕ ಸಂಭಾಷಣೆಗಳು ಮನಸ್ಸನ್ನು ತಾಗುತ್ತವೆ.  ಶಾಂತಿ-ಸೌಹಾರ್ದತೆಗಳ ಸಂದೇಶವನ್ನೂ ಸಾರುವ ಧ್ವನಿಯಿಂದ ನಾಟಕದ ಉತ್ತಮಿಕೆ ವಿಸ್ತರಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT