ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಧ್ವನ್ಯಾರ್ಥ ‘ಸಹದೇವ’

ರಂಗಭೂಮಿ
Last Updated 29 ಡಿಸೆಂಬರ್ 2015, 19:30 IST
ಅಕ್ಷರ ಗಾತ್ರ

ಈಗಾಗಲೇ ಮಹಾಭಾರತದ ವಸ್ತು ಇಟ್ಟಕೊಂಡು ರಂಗದ ಮೇಲೆ ಸಾಕಷ್ಟು ಹೊಸ ಪ್ರಯತ್ನಗಳು ನಡೆದಿವೆ. ಇದೀಗ ಹೊಸ ಆಯಾಮದ ಮತ್ತೊಂದು ಪ್ರದರ್ಶನ ‘ಸಹದೇವ’ ನಡೆಯಿತು. ‘ರಂಗನಿರಂತರ’ ತಂಡ ಇತ್ತೀಚೆಗೆ ರವೀಂದ್ರ ಕಲಾಕ್ಷೇತ್ರದಲ್ಲಿ ಪ್ರದರ್ಶಿಸಿದ ಹೊಸ ವಿನ್ಯಾಸದ ಕಥೆಯನ್ನು ಹೆಣೆದವರು ಬಸವರಾಜ ಸೂಳೇರಿಪಾಳ್ಯ. ನಿರ್ದೇಶನ: ಜೋಸೆಫ್ ಜಾನ್.

ನಾಟಕಕಾರ ಬಸವರಾಜರು ಅಶ್ವಿನಿ ದೇವತೆಗಳ ಸಂತಾನವಾದ  ಜೋತಿಷ್ಯಶಾಸ್ತ್ರದಲ್ಲಿ ಪಾರಂಗತನಾದ ಸಹದೇವನ ಪಾತ್ರದ ಮೂಲಕ ಮಹಾಭಾರತದ ಕಥೆಯನ್ನು ಹೊಸ ವಿಶ್ಲೇಷಣೆಯಡಿ ಅರಳಿಸುತ್ತ ಸಾರ್ವಕಾಲಿಕ ಸಂದೇಶವೊಂದನ್ನು ಕಟ್ಟಿಕೊಡಲು ಪ್ರಯತ್ನಿಸಿರುವುದು ಶ್ಲಾಘನೀಯ.

ನಾಟಕದಲ್ಲಿ ನಡೆಯುವ ಎಲ್ಲ ಘಟನೆಗಳಿಗೆ ಧರ್ಮ ಮತ್ತು ದ್ವೇಷಗಳೇ ಕಾರಣ ಎಂಬುದನ್ನು ಅರ್ಥವತ್ತಾಗಿ ನಿರೂಪಿಸಲಾಗಿದೆ. ಕುರುಕುಲದ ನಿರ್ನಾಮಕ್ಕೆ ಶಕುನಿಯ ದ್ವೇಷ ಕಾರಣವಾದರೆ, ಕೃಷ್ಣನಿಗೆ ಧರ್ಮ  ಕಾರಣವಾಗುತ್ತದೆ. ಎಲ್ಲ ಕಾಲಕ್ಕೂ ಈ ಎರಡು ಶಕ್ತಿಗಳೇ ಮೇಲಾಟವಾಡುವ ಪ್ರಸ್ತುತತೆಯ ಧ್ವನಿಯನ್ನು ಮಹಾಭಾರತ ಕಥೆಯ ಮೂಲಕ ಧ್ವನಿಸಲಾಗಿದೆ.

ಯುದ್ಧ ಪ್ರಾರಂಭಿಸಲು ಸುಮುಹೂರ್ತ ನಿಗದಿ ಮಾಡಿಕೊಡಬೇಕಾಗಿ ಸಹದೇವನ ಬಳಿ ಬರುವ ದುರ್ಯೋಧನನನ್ನು ತಪ್ಪುದಾರಿಗೆಳೆಸುವ ಕೃಷ್ಣ, ಉಪಾಯದಿಂದ ಅಮಾವಾಸ್ಯೆಯನ್ನು ಎರಡು ದಿನ ಮುಂಚಿತವಾಗಿಯೇ ಸೃಷ್ಟಿಸುವ ಕೌಟಿಲ್ಯದಿಂದ ಬದಲಾಗುತ್ತದೆ.

ಸಹದೇವ ತನ್ನ ಜೋತಿಷ್ಯಧರ್ಮದಂತೆ ಸತ್ಯವನ್ನೇ ನುಡಿದಿದ್ದರೂ, ಲೆಕ್ಕಾಚಾರವೆಲ್ಲ ತಲೆಕೆಳಗಾಗಿ ದುರ್‍ಯೋಧನ ಅದಕ್ಕೆ ಬಲಿಯಾಗುತ್ತಾನೆ. ಮೂಲ ಮಹಾಭಾರತ ಮತ್ತು ಕುಮಾರವ್ಯಾಸನ ಕೃತಿಯಲ್ಲಿ ಕಂಡುಬರುವ ಕೆಲ ಘಟನೆಗಳು ಇಲ್ಲಿ ಯಥಾವತ್ತಾಗಿದ್ದರೂ ಹೊಸ ಅರ್ಥವಿಸ್ತಾರದೊಂದಿಗೆ ನೂತನ ಆಯಾಮವನ್ನು ಪಡೆದುಕೊಳ್ಳುತ್ತವೆ.

ರಾಜರ ವೈಯಕ್ತಿಕ ದ್ವೇಷದ ಸಾಣೆಗೆ ಜನಸಾಮಾನ್ಯರು ಬಲಿಯಾಗಬೇಕಾದ ವಿಪರ್ಯಾಸ, ಯಾರದೋ ಲಾಭದ ರಾಜಕಾರಣಕ್ಕಾಗಿ ಮುಗ್ಧ ಪ್ರೇಮಿಗಳು ಅಗಲಿಕೆಯ ಶಿಕ್ಷೆ ಅನುಭವಿಸಬೇಕಾದಂಥ ಅಮಾನವೀಯ ಸಂದರ್ಭಗಳಿಗೆ ನಾಟಕ ಸಾಕ್ಷಿಯಾಗುತ್ತದೆ. ಒಟ್ಟಿನಲ್ಲಿ ಕೃಷ್ಣ-ಶಕುನಿ ತಮ್ಮ ಗುರಿಸಾಧನೆಗಾಗಿ ಅಮಾಯಕ ಪ್ರಜೆಗಳ ಬದುಕನ್ನು ಕಸಿದುಕೊಳ್ಳುವ ಅನೇಕ ಕರುಣಾರ್ದ್ರ ದೃಶ್ಯಗಳು ನಾಟಕದಲ್ಲಿ ಹಾಸುಹೊಕ್ಕಾಗಿ ಅಂತಃಕರಣವನ್ನು ಕದಡುತ್ತವೆ. ಕಡೆಗೆ ಗಾಂಧಾರಿಯೂ ತನ್ನೊಡಲ ಕಿಚ್ಚಿಗೆ ಕಾರಣರಾದವರು ನಶಿಸುವಂತೆ ಶಪಿಸುವ ಮಟ್ಟಕ್ಕೆ ಹೋಗುತ್ತಾಳೆ.

ವಾನಪ್ರಸ್ಥಕ್ಕೆ ಹೊರಡುವ ಪಾಂಡವರು ಧರೆಯೊಳಗೆ ನರಕವನ್ನು ಸೃಷ್ಟಿಸಿ ತಾವು ಮಾತ್ರ ಸ್ವರ್ಗವನ್ನರಸಿ ಹೊರಡುವ ವಿಪರ್ಯಾಸಕ್ಕೆ ನಾಟಕ ಕನ್ನಡಿಯಾಗುತ್ತದೆ. ಅಂದಿನಿಂದ ಇಂದಿನವರೆಗೂ ಈ ಪರಿಸ್ಥಿತಿ ಬದಲಾಗದೆ ಧರ್ಮ ಮತ್ತು ದ್ವೇಷಗಳ ಕಾರಣವಾಗಿ ಯುದ್ಧ, ಘರ್ಷಣೆ ನಡೆಯುತ್ತಲೇ ಇವೆ. ರಾಜಕೀಯ ಮಸೆತದಲ್ಲಿ ಜನಸಾಮಾನ್ಯರು ಗೌಣವಾಗುವ ಶುದ್ಧ ಸ್ವಾರ್ಥದ ವಿಜೃಂಭಣೆಯ ಮೇಲೆ ನಾಟಕ ಬೆಳಕು ಚೆಲ್ಲುತ್ತದೆ.

ಉಳಿದವರಲ್ಲೂ ‘ಎಚ್ಚರಪ್ರಜ್ಞೆ’ಯ ಸಹದೇವನಿದ್ದರೂ ಯಾರೊಬ್ಬರೂ ಯುದ್ಧವನ್ನು ನಿಲ್ಲಿಸಲು ಪ್ರಯತ್ನಿಸುವುದಿಲ್ಲವೆಂಬ ಮಲ್ಲಿಗೆಯ ಮಾತುಗಳಲ್ಲಿನ ವ್ಯಂಗ್ಯ ಇಡೀ ನಾಟಕದ ವ್ಯಂಗ್ಯವೇ ಆಗುವುದು ಗಮನಾರ್ಹ.

ಸಹದೇವ, ಸುಯೋಧನನಿಗೆ ನಿಗದಿಪಡಿಸಿಕೊಟ್ಟ ಮುಹೂರ್ತ ಅಮಾವಾಸ್ಯೆಯನ್ನೇ ಬದಲು ಮಾಡಿಬಿಡುವ ಸೂತ್ರಧಾರಿ ಕೃಷ್ಣನ ಆಟದ ಮಜಲುಗಳು ನಾಟಕದಲ್ಲಿ ನಿಗೂಢವಾಗಿ ಚಿತ್ರಿತವಾಗಿವೆ. ರಣಾಂಗಣದಲ್ಲಿ ಬಿದ್ದ ಹೆಣಗಳನ್ನು ತಿನ್ನಲು ಬರುವ ಹದ್ದು ಮತ್ತು ಸೀಳುನಾಯಿಗಳ ನಡುವಿನ ಸಂಭಾಷಣೆ ಸ್ವಾರ್ಥ ರಾಜಕೀಯದ ಕ್ಷುದ್ರತೆಗಳನ್ನು ಸೂಕ್ಷ್ಮವಾಗಿ ತೆರೆದಿಡುತ್ತದೆ. ಅವುಗಳ ಮೂಲಕ ಅರಸರ ಮಹತ್ವಾಕಾಂಕ್ಷೆಯ ಮನೋಧರ್ಮವನ್ನು   ಅನಾವರಣಗೊಳಿಸಿರುವ ಪರಿಕಲ್ಪನೆ ಅನನ್ಯವಾಗಿದೆ.

ಪ್ರಮುಖವಾಗಿ ಇಲ್ಲಿ ಕೃಷ್ಣ-ಶಕುನಿದ್ವಯರ ಗುರಿಸಾಧನೆಯ ಫಲವಾಗಿ ನಿರ್ಮಾಣವಾಗುವ ರಣಾಂಗಣದ ದುರಂತದ ನೆರಳಲ್ಲಿ ಪಸರಿಸುವ ಸಾರ್ವಕಾಲಿಕ ಯುದ್ಧದಾಹವನ್ನು ಸಮರ್ಥವಾಗಿ ಬಿಂಬಿಸಲಾಗಿದೆ.

ವಸ್ತುವಿನ ಹೊಸ ಅಂತಃಸತ್ವವನ್ನು ಪರಿಣಾಮಕಾರಿಯಾಗಿ ಪ್ರಸ್ತುತಿಪಡಿಸಲು ನಿರ್ದೇಶಕರು ಬಳಸಿರುವ ರಣಹದ್ದುಗಳ ಗುಂಪು ಫಾರ್ಮೇಷನ್‌ಗಳು, ಮಹಾಭಾರತ ಕಥೆಯ  ಅವನತಿಯನ್ನು ಸೂಚಿಸುವಂತೆ ಹೊಂದಿಸಲಾದ ಇಳಿಜಾರಿನ ರ್‍ಯಾಂಪ್‌ನ ಬಳಕೆ, ಸೂರ್ಯ-ಚಂದ್ರರನ್ನು ತೋರಿಸುವ ಸಾಂಕೇತಿಕ ಬಗೆ ಇತ್ಯಾದಿ ಗಮನ ಸೆಳೆಯುತ್ತವೆ.

ಗ್ರೀಕ್, ರೋಮನ್ನರ ಉಡುಗೆ ತೊಡುಗೆ, ಷಪರ್ಡ್‌ಗಳ ರೀತಿಯಲ್ಲಿ ಸಂಜಯ ಹಾಗೂ ಧೃತರಾಷ್ಟ್ರರನ್ನು ಕಾಣಿಸಿರುವ ಬಗೆ, ಸ್ಕರ್ಟು-ಬಾಬ್‌ಕಟ್‌ನ ದ್ರೌಪದಿ, ನೀಳಲಂಗದ ಕುಂತಿಯ ವಸ್ತ್ರವಿನ್ಯಾಸ, ಪ್ರಸಾಧನಗಳ ವೈಶಿಷ್ಟ್ಯವೇನೆಂಬುದು ನೋಡುಗರಿಗೆ ಹೊಳೆಯುವುದಿಲ್ಲ. ವಾಸ್ತವವನ್ನು ಕಟ್ಟುವ ಭ್ರಮೆಯಲ್ಲಿ ಅತಿ ಸರಳೀಕರಣದಿಂದ ಪೇಲವಗೊಳಿಸುವುದು ಎಷ್ಟು ಯುಕ್ತ? ಮಿಕ್ಕಂತೆ ಪಾಂಡವರು, ಕರ್ಣ, ಕೃಷ್ಣರ ಸರಳ ಪ್ರಾತಿನಿಧಿಕ ರೂಪುರೇಷೆಗಳು ಮೆಚ್ಚುಗೆಯಾಗುತ್ತವೆ.

ಇಷ್ಟೆಲ್ಲ ಗುಣ ದೋಷಗಳ ಮಧ್ಯೆ ನಾಟಕ ಜಾಳುಜಾಳಾಗಿ ಸಾಗುವುದರಿಂದ, ಮನಸ್ಸು ರಸಾನುಭವದಿಂದ ತುಂಬುವುದಿಲ್ಲ. ಮಹಾಭಾರತದ ಕಥೆ ಗೊತಿಲ್ಲದವರಿಗಂತೂ ಇಲ್ಲಿನ   ಘಟನೆಗಳ ಜೋಡಣೆ ಅರ್ಥವಾಗುವುದಿಲ್ಲ. ಮೂವತ್ತಕ್ಕೂ ಹೊಸ ಕಲಾವಿದರು ಮೊದಲ ಬಾರಿಗೆ ರಂಗವೇರಿರುವ ಬಗ್ಗೆ, ‘ಸಹದೇವ’ನ ಮೊದಲ ಪ್ರದರ್ಶನ ಇದೆಂಬ ಅರಿವು ಪ್ರೇಕ್ಷಕನಿಗಿದ್ದು, ಮೃದುಧೋರಣೆ ಜಿನುಗಿದರೂ ನುರಿತ ನಿರ್ದೇಶಕರು ನಟರನ್ನು ಸಮರ್ಥವಾಗಿ ದುಡಿಸಿಕೊಳ್ಳುವಲ್ಲಿ ವಿಫಲರಾಗಿದ್ದಾರೆ ಎನಿಸದೇ ಇರದು.

ನಾಟಕ ಉತ್ತಮ ಕಥಾಹಂದರ,   ಮಾರ್ಮಿಕ ಸಂಭಾಷಣೆ, ಹೊಸ ರಂಗತಂತ್ರ, ಪರಿಣಾಮಕಾರಿ ಸಂಗೀತ (ಪ್ರಸಾದ್ ಪೊನ್ನಾಣೆ) ಮುಂತಾದ ಅನೇಕ ಧನಾತ್ಮಕ ಅಂಶಗಳನ್ನೊಳಗೊಂಡಿದ್ದರೂ, ಒಂದು ಪ್ರಯೋಗ ಅಂತ್ಯದಲ್ಲಿ ನೋಡುಗನಿಗೆ ಮನಮುಟ್ಟಿದ ತೃಪ್ತಿಕರ ಅನುಭವ ನೀಡುವುದೇ ನಿರ್ಣಾಯಕ ಅಂಶವಾಗುತ್ತದೆ. ಆದರಿಲ್ಲಿ ಅವ್ಯಕ್ತ ಕೊರತೆಯೊಂದು ಕಾಡುವುದಂತೂ ದಿಟ.

ನಟರಿಗೆ ಇನ್ನಷ್ಟು ತಾಲೀಮು, ಸ್ಫುಟವಾಗಿ ಮಾತನಾಡುವ ಛಾತಿ, ಆತ್ಮವಿಶ್ವಾಸ ಅಗತ್ಯವೆನಿಸಿದರೂ ಕೆಲ ನಟರು ಗಮನ ಸೆಳೆಯುತ್ತಾರೆ. ಕರ್ಣನಾಗಿ ಆರ್.ವೆಂಕಟರಾಜು ಪಾತ್ರದ ಒಳಹೊಕ್ಕು ಉತ್ತಮವಾಗಿ ಅಭಿನಯಿಸಿದರು. ಗಾಂಧಾರಿಯಾಗಿ ಉಮಾ ನುರಿತ ನಟನೆ ನೀಡಿದರು. ಮಲ್ಲಿಗೆಯಾಗಿ ಕೆ.ಜೆ.ಬೃಂದಾ ಭಾವಪೂರ್ಣವಾಗಿ ಅಭಿನಯಿಸಿದರು. ಕೃಷ್ಣ  (ಜಿ.ಚೇತನ್), ದುರ್ಯೋಧನ(ರಾಜ್ ಆರ್‍ಯನ್), ಅರ್ಜುನ (ಭರತ್‌ರಾಜ್), ಸಹದೇವ(ಶಿವರಾಂ), ಕುಂತಿ(ಸುಮಿತಾ ರಾಮಚಾರಿ), ಸಂಜಯ(ತ್ಯಾಗರಾಜ್), ಧೃತರಾಷ್ಟ್ರ (ಗೋಪಿ ಕೆರೂರು) ಹದವಾಗಿ ನಟಿಸಿದರು.

ಕೆಲವೇ ಜನರು (ಫ್ರಿಂಜ್ ಎಲಿಮೆಂಟ್ಸ್), ಬಹುಸಂಖ್ಯಾತರನ್ನು (ಸೈಲೆಂಟ್ ಮೆಜಾರಿಟಿ) ನಿರ್ಲಕ್ಷಿಸಿ ತಮ್ಮ ಅಭಿಪ್ರಾಯ, ನಿರ್ಣಯಗಳನ್ನೇ ಹೇರುವ ಸರ್ವಾಧಿಕಾರದ ಧೋರಣೆ  ತೋರುವುದು ಸಾಮಾನ್ಯ. ಮಹಾಭಾರತದಲ್ಲಿ ಆದದ್ದೂ ಅದೇ. ಯುದ್ಧ ಇಂಥ ಬಲಿಷ್ಠರ ಅಪೇಕ್ಷೆಯಷ್ಟೇ. ಹೀಗಾಗಿ ‘ಎಚ್ಚರಪ್ರಜ್ಞೆ’ಯಿದ್ದೂ ಈ ಸಹದೇವ ಅಸಹಾಯಕನಾದಂತೆ ಉಳಿದವರಲ್ಲೂ ‘ಸಹದೇವ’ನಿದ್ದಾನೆಂಬ ರೂಪಕದ ಮಹತ್ವಾರ್ಥದಿಂದ ನಾಟಕದ ಶೀರ್ಷಿಕೆ ಅನ್ವರ್ಥವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT