ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಗರಕ್ಕೆ ಭಾರಿ ವಾಹನಗಳ ಪ್ರವೇಶ ನಿರ್ಬಂಧ

ಹೊಸ ಆದೇಶ ಹೊರಡಿಸಿದ ಪೊಲೀಸ್ ಕಮಿಷನರ್
Last Updated 22 ಡಿಸೆಂಬರ್ 2014, 19:52 IST
ಅಕ್ಷರ ಗಾತ್ರ

ಬೆಂಗಳೂರು: ಸಂಚಾರ ಸಮಸ್ಯೆಯನ್ನು ಪರಿಹರಿ­ಸುವ ಉದ್ದೇಶದಿಂದ ಹಗಲು ವೇಳೆ ಕಮಿಷನರೇಟ್ ವ್ಯಾಪ್ತಿ­ಯಲ್ಲಿ ಭಾರಿ ವಾಹನಗಳ ಪ್ರವೇಶ ನಿರ್ಬಂ­ಧಿಸಿ ನಗರ  ಪೊಲೀಸ್ ಕಮಿಷನರ್‌ ಎಂ.ಎನ್‌.ರೆಡ್ಡಿ ಅವರು ಸೋಮವಾರ ಆದೇಶ ಹೊರಡಿಸಿದ್ದಾರೆ.

‘ಮೂರು ಟನ್‌ಗಿಂತಲೂ ಅಧಿಕ ಭಾರ ಹೊರುವ ವಾಹನಗಳಿಗೆ ಬೆಳಿಗ್ಗೆ 6 ರಿಂದ ರಾತ್ರಿ 10 ಗಂಟೆ­­ವರೆಗೆ ಪ್ರವೇಶ ನಿರ್ಬಂಧಿಸಲಾಗಿದೆ. ಈ ವಾಹನ­­­ಗಳು ರಾತ್ರಿ ಸಮಯದಲ್ಲಿ ಮಾತ್ರ ನಗರ­ದಲ್ಲಿ ಸಂಚರಿಸಬಹುದು. ಅದೇ ರೀತಿ ಹಾಲು, ಔಷಧ, ಅಡುಗೆ ಅನಿಲದ ಸಿಲಿಂಡರ್ ಸೇರಿದಂತೆ ಮತ್ತಿ­ತರ ವಾಹನಗಳ ಸಂಚಾರಕ್ಕೆ ನಿರ್ದಿಷ್ಟ ಸಮಯ ನಿಗದಿಪಡಿಸಲಾಗಿದೆ’ ಎಂದು ಎಂ.ಎನ್‌.ರೆಡ್ಡಿ ಹೇಳಿದರು.

‘ನಿಗದಿತ ಅವಧಿ ಬಳಿಕವೂ ನಗರದಲ್ಲಿ ಈ ವಾಹನಗಳು ಸಂಚರಿಸುವುದಾದರೆ ಪೊಲೀಸರ ಅನು­­ಮತಿ ಪಡೆಯಬೇಕು. ಇದಕ್ಕಾಗಿ ಸಂಚಾರ ವಿಭಾ­­ಗದ ಹೆಚ್ಚುವರಿ ಪೊಲೀಸ್ ಕಮಿಷನರ್ ಬಿ.ದಯಾನಂದ ಅವರ ನೇತೃತ್ವದಲ್ಲಿ ಏಕ ಗವಾಕ್ಷಿ ಸಮಿತಿ ರಚಿಸಲಾಗಿದೆ. ಈ ಸಮಿತಿಗೆ ಪೂರ್ವ ಮತ್ತು ಪಶ್ಚಿಮ ವಿಭಾಗದ (ಸಂಚಾರ) ಡಿಸಿಪಿಗಳು ಸದಸ್ಯ­ರಾ­ಗಿ­­ರುತ್ತಾರೆ. ಯೋಜನಾ ವಿಭಾಗದ ಎಸಿಪಿ ಅವ­ರನ್ನು ಕಾರ್ಯದರ್ಶಿಯನ್ನಾಗಿ ನೇಮಕ ಮಾಡ­ಲಾ­ಗಿದೆ. ವಾಹನಗಳ ಮಾಲೀಕರು ಇಲ್ಲಿ ಮನವಿ ಸಲ್ಲಿಸಿ, ಅನುಮತಿ ಪಡೆಯಬೇಕಾಗುತ್ತದೆ’ ಎಂದರು.

‘ಸರಕು ವಾಹನಗಳಿಂದ ನಗರದಲ್ಲಿ ಹೆಚ್ಚಿನ ದಟ್ಟಣೆ ಉಂಟಾಗುತ್ತಿದೆ. ಅಲ್ಲದೆ ರಸ್ತೆ ಅಪಘಾತ­ಗಳು, ವಾಯು ಹಾಗೂ ಶಬ್ದ ಮಾಲಿನ್ಯಕ್ಕೂ ಈ ವಾಹನ­ಗಳ ಓಡಾಟವೇ ಕಾರಣ’ ಎಂದು ಸಂಚಾರ ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಈ ಎಲ್ಲ ಸಮಸ್ಯೆ­ಗಳಿಗೆ ಕಡಿವಾಣ ಹಾಕುವ ನಿಟ್ಟಿ­ನಲ್ಲಿ ಹೊಸ ಆದೇಶ­ವನ್ನು ಜಾರಿಗೆ ತರ­ಲಾಗಿದೆ. ಈ ಆದೇಶ ಇಂದಿ­ನಿಂದಲೇ ಜಾರಿ­ಯಾಗಿದ್ದು,  ಭಾರಿ ವಾಹನಗಳು ಹಗಲು ವೇಳೆ ನಗರದಲ್ಲಿ  ಸಂಚರಿಸುವಂತಿಲ್ಲ’ ಎಂದು ಹಿರಿಯ ಅಧಿಕಾರಿಗಳು ಹೇಳಿದರು.

‘ನಿಗದಿತ ಸಮಯ ಹೊರತುಪಡಿಸಿ ನಗರ ಪ್ರವೇ­ಶಿಸುವ ಸರಕು ಸಾಗಣೆ ವಾಹನಗಳನ್ನು ಜಪ್ತಿ ಮಾಡ­ಲಾಗುವುದು. ಜತೆಗೆ ಚಾಲಕನ ವಿರುದ್ಧ ಪ್ರಕರಣ ದಾಖಲಿಸಿ, ದಂಡವನ್ನೂ ವಿಧಿಸಲಾಗು­ವುದು’ ಎಂದು ಸಂಚಾರ ವಿಭಾಗದ ಹೆಚ್ಚುವರಿ
ಪೊಲೀಸ್ ಕಮಿಷನರ್ ಬಿ.ದಯಾನಂದ್ ಎಚ್ಚರಿಕೆ ನೀಡಿದರು.

*ಹೊಸೂರು ರಸ್ತೆ–ನೈಸ್ ರಸ್ತೆ, ಬೇಗೂರು ರಸ್ತೆ, ಕೌಂಟಿ ರಸ್ತೆ, ಹರಳೂರು ರಸ್ತೆ, ಕಸದನಹಳ್ಳಿ ರಸ್ತೆ, ಚಿಕ್ಕನಾಗಮಂಗಲ, ಗೆಟ್ಟಿಹಳ್ಳಿ ರಸ್ತೆ, ವೀರಸಂದ್ರ ಜಂಕ್ಷನ್
*ಬನ್ನೇರುಘಟ್ಟ ರಸ್ತೆ–ಹೊಸೂರು ರಸ್ತೆ, ತುಮಕೂರು ರಸ್ತೆ–ಬನ್ನೇರುಘಟ್ಟ ರಸ್ತೆ (ನೈಸ್ ರಸ್ತೆ) ಕೋಳಿಫಾರಂ ಗೇಟ್, ಬೇಗೂರು–ಕೊಪ್ಪ ರಸ್ತೆ, ಕನಕಪುರ ರಸ್ತೆ–ಕೊತ್ತನೂರು ದಿಣ್ಣೆ

*ಕನಕಪುರ ರಸ್ತೆ–ನೈಸ್ ರಸ್ತೆ, ತಲಘಟ್ಟಪುರ ರಸ್ತೆ, ಕೆಂಗೇರಿ–ಉತ್ತರಹಳ್ಳಿ ರಸ್ತೆ, ಕೊತ್ತನೂರು ರಸ್ತೆ, ವಡ್ಡರಪಾಳ್ಯ ರಸ್ತೆ, ಅಂಜನಾಪುರ ರಸ್ತೆ, ಕೆಂಬತ್ತಹಳ್ಳಿ, ಹೊಸಕೆರೆಹಳ್ಳಿ, ನೈಸ್‌ರಸ್ತೆ ಜಂಕ್ಷನ್.
*ಮೈಸೂರು ರಸ್ತೆ–ಕೆಂಗೇರಿ ಚೆಕ್‌ಪೋಸ್ಟ್, ದೊಡ್ಡಬೆಲೆ ಕ್ರಾಸ್, ತಲಘಟ್ಟಪುರ–ಕೋಡಿಪಾಳ್ಯ, ಉತ್ತರಹಳ್ಳಿ ರಸ್ತೆ, ಕೊಮ್ಮಘಟ್ಟ, ಗಾಣಕಲ್ಲು ರಸ್ತೆ
*ಮಾಗಡಿ ರಸ್ತೆ–ಸುಂಕದಕಟ್ಟೆ, ಅನ್ನಪೂರ್ಣೇಶ್ವರಿನಗರ ರಸ್ತೆ, ಕೆಬ್ಬೇನಹಳ್ಳಿ, ಮುದ್ದಿನಪಾಳ್ಯ, ಉಲ್ಲಾಳರಸ್ತೆ
*ತುಮಕೂರು ರಸ್ತೆ–ವಿಡಿಯಾ ಫ್ಯಾಕ್ಟರಿ, ಅಂಚೆಪಾಳ್ಯ, ಅಂದರಹಳ್ಳಿ ಮುಖ್ಯರಸ್ತೆ–ಪೀಣ್ಯ ಎರಡನೇ ಹಂತ
*ಹೆಸರಘಟ್ಟ ರಸ್ತೆ–ಸಿಡೇದಹಳ್ಳಿ, ತಮ್ಮೇನಹಳ್ಳಿ, ತೊರೆನಾಗಸಂದ್ರ ಮೂಲಕ ಹೆಸರಘಟ್ಟ ಸಾಗುವ ಮುಖ್ಯರಸ್ತೆ, ಹಾಗೂ ಗೊಲ್ಲಹಳ್ಳಿ–ಹೆಸರಘಟ್ಟ ಮುಖ್ಯರಸ್ತೆ
*ಬಳ್ಳಾರಿ ರಸ್ತೆ–ದೊಡ್ಡಬಳ್ಳಾಪುರ ರಸ್ತೆಯಿಂದ ಬಿಎಂಎಸ್‌ಐಟಿ ಕಾಲೇಜು, ದೊಡ್ಡಬಳ್ಳಾಪುರ ಕ್ರಾಸ್, ಐವಿಸಿ ರಸ್ತೆ, ಬೂದಿಗೆರೆ ಕ್ರಾಸ್, ಬಾಗಲೂರು, ಸಾದಹಳ್ಳಿ, ರಾಜನಕುಂಟೆ
*ಹಳೇ ಮದ್ರಾಸ್ ರಸ್ತೆ– ಮೇಡಹಳ್ಳಿ, ಆವಲಹಳ್ಳಿ–ರಾಂಪುರ, ರಾಮಮೂರ್ತಿನಗರ ಮತ್ತು ಹೊರಮಾವು
*ಸರ್ಜಾಪುರ ರಸ್ತೆ–ಗುಂಜೂರು, ಕೊಡತಿಗೇಟ್, ಹೊಸಕೋಟೆ ರಸ್ತೆ, ಕನ್ನಮಂಗಲ, ಚಿಕ್ಕತಿರುಪತಿ ರಸ್ತೆ, ಚನ್ನಸಂದ್ರ, ಕಾಟನ್‌ ಮಲ್ಲೂರ್ ಅಡ್ಡರಸ್ತೆ, ಕಾಡುಗೋಡಿ ರಸ್ತೆ.

ಈ ವಾಹನಗಳಿಗೆ ನಿರ್ಬಂಧವಿಲ್ಲ
ನೀರು, ಪೊಲೀಸ್,  ಶವ ಹಾಗೂ ಕಸ  ಸಾಗಣೆ ವಾಹನ ಹಾಗೂ ಸೇನಾ ವಾಹನಗಳ ಓಡಾಟಕ್ಕೆ ಸಮಯದ ನಿರ್ಬಂಧವಿಲ್ಲ.

ಈ ವಾಹನಗಳಿಗೆ ಸಮಯ ಮಿತಿ
ಹಾಲು, ಹಾಲಿನ ಉತ್ಪನ್ನಗಳು, ಔಷಧ, ಅಡುಗೆ ಅನಿಲದ ಸಿಲಿಂಡರ್‌, ಪೆಟ್ರೋಲ್, ಡೀಸೆಲ್, ಸೀಮೆಎಣ್ಣೆ ಟ್ಯಾಂಕರ್‌ಗಳು, ರಕ್ಷಣಾ ಇಲಾಖೆಯ ಭಾರಿ ಸರಕು ಸಾಗಣೆ ವಾಹನ­ಗಳು (ಸಿಎಸ್‌ಡಿ), ಬಿಸಿಯೂಟ ಸರಬರಾಜು, ಅಂಚೆ, ಕಾಂಕ್ರೀಟ್‌ ಮಿಕ್ಸರ್‌ ಲಾರಿಗಳು ಹಾಗೂ ಕಟ್ಟಡ ಸಾಮಗ್ರಿ ವಾಹನಗಳು ಬೆಳಿಗ್ಗೆ 8 ರಿಂದ 11 ಹಾಗೂ ಸಂಜೆ 4ರಿಂದ 8 ಗಂಟೆ­ವರೆಗೆ ನಗರದ ರಸ್ತೆಗಳಲ್ಲಿ ಸಂಚರಿಸುವಂತಿಲ್ಲ. ಈ ಸಮಯ ಹೊರತುಪಡಿಸಿ ಉಳಿದ ಯಾವುದೇ ಸಮಯದಲ್ಲಿ ಓಡಾಟ ನಡೆಸ­ಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT