ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಗರಕ್ಕೆ ‘ಆರಿಗಾಮಿ’ ಪ್ಯೂಸೆ

Last Updated 19 ಸೆಪ್ಟೆಂಬರ್ 2014, 19:30 IST
ಅಕ್ಷರ ಗಾತ್ರ

ಕಾಗದದ ತುಂಡೊಂದಕ್ಕೆ ತಾವು ಬಯಸಿದ ಆಕಾರವನ್ನು ಕೊಡಬಲ್ಲ ನಿಪುಣೆ ಈ ಕಲಾವಿದೆ. ಇವರ ಕೈಗೆ ಬಣ್ಣದ ಕಾಗದ ಸಿಕ್ಕರೆ ಸಾಕು, ಅವರ ಮನಸ್ಸಿನಲ್ಲಿ ಮೂಡಿರುವ ಕಲ್ಪನೆ ಕಾಗದದ ಮೂಲಕ ಮೂರ್ತರೂಪ ಪಡೆದುಕೊಳ್ಳುತ್ತದೆ. ನಿಜದ ಹೂಗಳನ್ನು ನಾಚಿಸುವ ರೀತಿಯಲ್ಲಿ ಅರಳುವ ಹೂಗಳು, ಮುಖವಾಡಗಳು, ಸ್ಪೈರಲ್‌ಗಳನ್ನು ಕಾಗದದಲ್ಲಿ ಸೃಷ್ಟಿಸಬಲ್ಲ ಈಕೆಯ ಹೆಸರು ಟೊಮೊಕೊ ಪ್ಯೂಸೆ.

ಜಪಾನಿನ ಜನಪ್ರಿಯ ಕಾಗದ ಕಲೆ ಆರಿಗಾಮಿ (ಕಾಗದವನ್ನು ಮಡಚಿ ಬೇಕಾದ ರೂಪ ಕೊಡುವ ಕಲೆ) ಈಕೆಗೆ ಕರತಲಾಮಲಕ.
ಜಪಾನ್‌ನ ಟೊಮೊಕೊ ಪ್ಯೂಸೆ ಅಂತರರಾಷ್ಟ್ರೀಯ ಖ್ಯಾತಿಯ ಆರಿಗಾಮಿ ಕಲಾವಿದೆ. ಈಕೆ ಇಂದಿಗೂ ವಿಶ್ವದ ಹಲವಾರು ಆರಿಗಾಮಿ ಸಂಘ ಸಂಸ್ಥೆಗಳೊಂದಿಗೆ ಸಂಪರ್ಕದಲ್ಲಿದ್ದಾರೆ. ಆರಿಗಾಮಿ ಕಲೆ ಕುರಿತಂತೆ ಪ್ಯೂಸೆ ಈವರೆಗೆ ಸಾಕಷ್ಟು ಪುಸ್ತಕಗಳನ್ನು ಬರೆದಿದ್ದು, ಅವೆಲ್ಲವೂ ಬೆಸ್ಟ್‌ ಸೆಲ್ಲಿಂಗ್‌ ಪಟ್ಟಿಯಲ್ಲಿ ಸ್ಥಾನ ಪಡೆದಿವೆ.

ಚಿಕ್ಕಂದಿನಲ್ಲೇ ಈ ಕಲೆಯತ್ತ ಆಕರ್ಷಿತರಾದ ಟೊಮೊಕೊ ಪ್ಯೂಸೆ ಆರಿಗಾಮಿಯಲ್ಲಿ ಮೊದಲ ವಿನ್ಯಾಸ ಮಾಡಿದ್ದು ಏಳು ವರ್ಷದವರಿದ್ದಾಗ. ಪ್ಯೂಸೆ 19ನೇ ವಯಸ್ಸಿಗೆ ಕಾಲಿಟ್ಟಾಗ ಆರಿಗಾಮಿ ಕಲೆಯನ್ನು ಅಭ್ಯಾಸ ಮಾಡಲು ಎರಡೂವರೆ ವರ್ಷ ಸಮಯ ಮೀಸಲಿಟ್ಟಿದ್ದರು. ಇವರು ತಮ್ಮ ಪ್ರಥಮ ಆರಿಗಾಮಿ ಕಲೆ ಕುರಿತ ಪುಸ್ತಕವನ್ನು 1981ರಲ್ಲಿ ಪ್ರಕಟಿಸಿದರು. 2006ರ ವೇಳೆಗೆ 60ಕ್ಕೂ ಅಧಿಕ ಪುಸ್ತಕಗಳನ್ನು ಪ್ರಕಟಿಸಿದರು. ಇಂಗ್ಲಿಷ್‌, ಜರ್ಮನ್‌, ಇಟಾಲಿಯನ್‌ ಹಾಗೂ ಇತರೆ ಭಾಷೆಗಳು ಸೇರಿದಂತೆ ಟೊಮೊಕೊ ಈವರೆಗೆ 90ಕ್ಕೂ ಅಧಿಕ ಪುಸ್ತಕಗಳನ್ನು ಪ್ರಕಟಿಸಿದ್ದಾರೆ. 

ಟೊಮೊಕೊ ಆರಿಗಾಮಿ ಕಲೆಯಲ್ಲಿ ಸಿದ್ಧಹಸ್ತರು. ಆರಿಗಾಮಿಯಲ್ಲಿ ಸಾಕಷ್ಟು ವಿನ್ಯಾಸಗಳನ್ನು ಸೃಷ್ಟಿಸಿದ್ದಾರೆ. ಬಾಕ್ಸ್‌ಗಳು, ಬೊಂಬೆಗಳು, ಮುಖವಾಡಗಳು, ಮೂರು ಆಯಾಮದ ಕಲಾಕೃತಿಗಳನ್ನು ತಯಾರಿಸುವುದರಲ್ಲಿ ಇವರನ್ನು ಮೀರಿಸುವವರು ಯಾರೂ ಇಲ್ಲ ಎಂಬುದು ಇವರ ಕಲೆಯನ್ನು ಬಲ್ಲವರ ಅಂಬೋಣ. ಪ್ಯೂಸೆ ಆರಿಗಾಮಿಯಲ್ಲಿ ತಯಾರಿಸುವ ಸ್ಪೈರಲ್‌ ವಿನ್ಯಾಸ ತುಂಬ ಆಸಕ್ತಿಕರವಾದದ್ದು. ಹೀಗೆ ನಾನಾ ವಸ್ತುವಿಷಯಗಳನ್ನಿರಿಸಿಕೊಂಡು ಪ್ಯೂಸೆ ಸಾಕಷ್ಟು ಬಗೆಯ ಆರಿಗಾಮಿ ವಿನ್ಯಾಸ ಮಾಡಿದ್ದಾರೆ.

63 ವರ್ಷ ವಯಸ್ಸಿನ ಟೊಮೊಕೊ  ವಿಶ್ವದ ಹಲವು ಭಾಗಗಳಿಗೆ ಭೇಟಿ ನೀಡಿ ಆರಿಗಾಮಿಯಲ್ಲಿ ಆಸಕ್ತಿ ಇರುವವರಿಗೆ ಈ ಕಲೆಯನ್ನು ದಾಟಿಸುವ ಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಇದೇ ಸೆಪ್ಟೆಂಬರ್‌ 21ರಂದು (ಬುಧವಾರ) ಅವರು ಬೆಂಗಳೂರಿಗೆ ಬರುತ್ತಿದ್ದು, ಇಲ್ಲಿನವರಿಗೆ ಆರಿಗಾಮಿ ಕಲೆ ಕುರಿತಂತೆ ಉಪನ್ಯಾಸ, ಪ್ರಾತ್ಯಕ್ಷಿಕೆ ಮತ್ತು ಕಾರ್ಯಾಗಾರ ನಡೆಸಿಕೊಡಲಿದ್ದಾರೆ. ಆಸಕ್ತರು ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಬಹುದು.

ಸ್ಥಳ: ಆಡಿಯೊ ವಿಷುವಲ್‌ ಹಾಲ್‌, ಲಿಂಬರ್‌ಲಿಂಕ್‌ ಟೆಕ್ನಾಲಜಿಸ್‌ ಪ್ರೈವೇಟ್‌ ಲಿಮಿಟೆಡ್‌, ನಂ.139, ಸೆಂಚುರಿ ಕ್ವಾಡ್ರಾ (ಮೂರನೇ ಮಹಡಿ), 8ನೇ ಮುಖ್ಯರಸ್ತೆ, ಮಲ್ಲೇಶ್ವರ.  
ಮಾಹಿತಿಗಾಗಿ: 9483 -867 868

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT