ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಗರದ 29 ಸಾವಿರ ಕಟ್ಟಡಗಳಲ್ಲಿ ಮಾತ್ರ ಮಳೆ ನೀರು ಸಂಗ್ರಹ!

ಅಳವಡಿಸದ ಮನೆಗಳಿಗೆ ಈ ತಿಂಗಳಿನಿಂದ ಹೆಚ್ಚುವರಿ ಶುಲ್ಕ
Last Updated 30 ಜೂನ್ 2016, 19:53 IST
ಅಕ್ಷರ ಗಾತ್ರ

ಬೆಂಗಳೂರು: ನಗರದ 29 ಸಾವಿರ ಕಟ್ಟಡಗಳಲ್ಲಿ ಮಾತ್ರ ಮಳೆ ನೀರು ಸಂಗ್ರಹ ವ್ಯವಸ್ಥೆ ಅಳವಡಿಸಿಕೊಂಡಿರುವುದು ಜಲಮಂಡಳಿ ನಡೆಸಿದ ಸಮೀಕ್ಷೆಯಿಂದ ಬೆಳಕಿಗೆ ಬಂದಿದೆ.

2011ರ ಡಿಸೆಂಬರ್‌ ಬಳಿಕ ನಿರ್ಮಾಣವಾದ 1,200 ಚದರ ಅಡಿ ಹಾಗೂ ಅಧಿಕ ವಿಸ್ತೀರ್ಣದ ಕಟ್ಟಡಗಳಲ್ಲಿ  2016ರ ಮೇ ತಿಂಗಳೊಳಗೆ ಮಳೆ ನೀರು ಸಂಗ್ರಹ ವ್ಯವಸ್ಥೆ ಅಳವಡಿಸಿಕೊಳ್ಳಬೇಕು ಎಂದು ಜಲಮಂಡಳಿ ನಿರ್ದೇಶನ ನೀಡಿತ್ತು. ಅಲ್ಲದೆ ಈ ಸಂಬಂಧ ಮಳೆ ನೀರು ಸಂಗ್ರಹ ವ್ಯವಸ್ಥೆಯ ಕಾಯ್ದೆಗೆ ತಿದ್ದುಪಡಿ ತಂದಿತ್ತು.

ಈ ಅವಧಿಯಲ್ಲಿ ಮಳೆ ನೀರು ಸಂಗ್ರಹ ವ್ಯವಸ್ಥೆ ಅಳವಡಿಕೆಗೆ 1.37 ಲಕ್ಷ ಕುಟುಂಬಗಳನ್ನು ಗುರುತಿಸಿತ್ತು. ಇನ್ನೂ 1.08 ಲಕ್ಷ ಕುಟುಂಬಗಳು ವ್ಯವಸ್ಥೆ ಅಳವಡಿಸಿಕೊಳ್ಳಬೇಕಿದೆ. ನಗರದಲ್ಲಿ 57 ಸಾವಿರ ಕುಟುಂಬಗಳು ವ್ಯವಸ್ಥೆ ಅಳವಡಿಸಿಕೊಂಡಿವೆ ಎಂದು ಜಲಮಂಡಳಿ ಈ ಹಿಂದೆ ಪ್ರಕಟಿಸಿತ್ತು.

ಮಂಡಳಿ ನೀಡಿರುವ ಗಡುವು ಮೇ ತಿಂಗಳಿಗೆ ಮುಗಿದಿದೆ. ಒಂದು ವೇಳೆ ವಸತಿ ಕಟ್ಟಡಗಳು ಅಳವಡಿಸಿಕೊಳ್ಳದಿದ್ದರೆ ಜುಲೈ ತಿಂಗಳಿಂದ ಮೂರು ತಿಂಗಳು ಪ್ರತಿ ತಿಂಗಳೂ   ಬಿಲ್ಲಿನಲ್ಲಿ ನೀರು ಮತ್ತು ಒಳಚರಂಡಿ ಶುಲ್ಕದ ಶೇ 25 ರಷ್ಟು ಹೆಚ್ಚುವರಿ ಶುಲ್ಕ ವಿಧಿಸಲಾಗುತ್ತದೆ. ಆನಂತರವೂ ಅಳವಡಿಸಿಕೊಳ್ಳದೇ ಇದ್ದಲ್ಲಿ ಅಳವಡಿಸಿಕೊಳ್ಳುವವರೆಗೆ ಪ್ರತಿ ತಿಂಗಳೂ ನೀರು ಮತ್ತ ಒಳಚರಂಡಿ ಶುಲ್ಕದ ಶೇ 50 ರಷ್ಟು ಹೆಚ್ಚಿನ ಶುಲ್ಕ ವಿಧಿಸಲಾಗುತ್ತದೆ.

ಗೃಹೇತರ ಕಟ್ಟಡಗಳಾದರೆ ಮೊದಲ ಮೂರು ತಿಂಗಳು ನೀರು ಮತ್ತು ಒಳಚರಂಡಿ ಶುಲ್ಕದ ಶೇ 50 ರಷ್ಟು ಹೆಚ್ಚುವರಿ ಶುಲ್ಕ ವಿಧಿಸಲಾಗುತ್ತದೆ.  ಆನಂತರವೂ ಅಳವಡಿಸಿಕೊಳ್ಳದೇ ಇದ್ದಲ್ಲಿ ಅಳವಡಿಸಿಕೊಳ್ಳುವವರೆಗೆ ಶೇ 100 ರಷ್ಟು ಹೆಚ್ಚುವರಿ ಶುಲ್ಕ ವಿಧಿಸಲಾಗುತ್ತದೆ.

ಈ ವ್ಯವಸ್ಥೆಯನ್ನು ಅಳವಡಿಸಿಕೊಂಡಿರುವವರು ತಮ್ಮ ನೀರಿನ ಸಂಪರ್ಕದ ಆರ್‌.ಆರ್‌.ಸಂಖ್ಯೆ, ವಿಳಾಸ, ಅಳವಡಿಕೆ ಮಾಡಿರುವ ಕುರಿತ ವಿವರಗಳನ್ನು ಸಂಬಂಧಿಸಿದ ಉಪವಿಭಾಗ ಕಚೇರಿಗೆ ಸಲ್ಲಿಸಿ ತಮ್ಮ ಆರ್.ಆರ್‌. ಸಂಖ್ಯೆಯಲ್ಲಿ ಅಳವಡಿಸಿಕೊಳ್ಳಬೇಕು.

ಇದನ್ನು ಅಳವಡಿಸಿಕೊಳ್ಳಲು ನೀಡಿರುವ ಕಾಲಮಿತಿಯ ಬಗ್ಗೆ ಏಪ್ರಿಲ್‌ ತಿಂಗಳಲ್ಲಿ ಜನರಿಗೆ ಜಾಗೃತಿ ಮೂಡಿಸಲಾಗಿತ್ತು ಹಾಗೂ ಸಂಬಂಧಪಟ್ಟ ಗ್ರಾಹಕರಿಗೆ ನೋಟಿಸ್‌ ನೀಡಿ ಕಾಲಾವಕಾಶ ನೀಡಲಾಗಿತ್ತು ಎಂದು  ಜಲಮಂಡಳಿಯು ಸ್ಪಷ್ಟಪಡಿಸಿದೆ.

ನೀರಿನ ಅಭಾವ ನೀಗಿಸಲು ಹಾಗೂ ಅಂತರ್ಜಲ ಮಟ್ಟ ಹೆಚ್ಚಿಸಲು ಪ್ರತಿ ಮನೆ ಹಾಗೂ ಕಟ್ಟಡಗಳಲ್ಲಿ ಮಳೆ ನೀರು ಕಡ್ಡಾಯವಾಗಿ ಸಂಗ್ರಹಿಸಬೇಕು ಎಂದು ರಾಜ್ಯ ಸರ್ಕಾರ ಕಾನೂನು ರೂಪಿಸಿದೆ. ಭವಿಷ್ಯದಲ್ಲಿ ಉಂಟಾಗುವ ನೀರಿನ ಕೊರತೆಯನ್ನು ತಕ್ಕ ಮಟ್ಟಿಗೆ ನೀಗಿಸುವ ಉದ್ದೇಶದಿಂದ ಜಲಮಂಡಳಿ 2009ರಿಂದ ಮಳೆ ನೀರು ಸಂಗ್ರಹ ವ್ಯವಸ್ಥೆ  ಕಡ್ಡಾಯ ಮಾಡಿದೆ.

2,400 ಚದರ ಅಡಿಯ ನಿವೇಶನದ ಹಳೆಯ ಕಟ್ಟಡಗಳಿಗೆ ಹಾಗೂ ಹೊಸದಾಗಿ 1,200 ಚದರ ಅಡಿ ಮತ್ತು ಅದಕ್ಕಿಂತ ಹೆಚ್ಚಿನ ವಿಸ್ತೀರ್ಣದ ಕಟ್ಟಡಗಳಲ್ಲಿ ಮಳೆ ನೀರು ವ್ಯವಸ್ಥೆಯನ್ನು ಕಡ್ಡಾಯವಾಗಿ ಅಳವಡಿಸಿಕೊಳ್ಳಬೇಕು ಎಂದು ಮಂಡಳಿ ಸೂಚಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT