ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಗರ ಸಮಸ್ಯೆ ಇತ್ಯರ್ಥಕ್ಕೆ ಪ್ರಬಲ ಪ್ರಾದೇಶಿಕ ಪಕ್ಷ ಅಗತ್ಯ: ಆಳ್ವ

Last Updated 15 ಏಪ್ರಿಲ್ 2014, 19:41 IST
ಅಕ್ಷರ ಗಾತ್ರ

ಬೆಂಗಳೂರು: ‘ಬೆಂಗಳೂರಿನ ಜನ ಒಂದು ಕಡೆ ಸೇರುವುದು ಕ್ರಿಕೆಟ್‌ ಮ್ಯಾಚ್‌ ನಡೆದಾಗ ಮಾತ್ರ. ನಗರದ ಸಮಸ್ಯೆ­ಗಳನ್ನು ಬಗೆಹರಿಸಲು ಸಂಘಟಿತ­ರಾ­ಗು­ತ್ತಿಲ್ಲ, ಜಾಗೃತಿ ಮೂಡಿಸುತ್ತಿಲ್ಲ. ಹೀಗಾಗಿ ನಮಗೆ ಪ್ರಬಲ ಪ್ರಾದೇಶಿಕ ಪಕ್ಷದ ಅನಿ­ವಾರ್ಯತೆ ಇದೆ’ ಎಂದು ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದ ಜೆಡಿಎಸ್‌ ಅಭ್ಯರ್ಥಿ ನಂದಿನಿ ಆಳ್ವ  ಪ್ರತಿಪಾದಿಸಿದರು.

ಪ್ರೆಸ್‌ ಕ್ಲಬ್‌ ಹಾಗೂ ಬೆಂಗಳೂರು ವರದಿಗಾರರ ಕೂಟದ ಆಶ್ರಯದಲ್ಲಿ ನಗರದ ಪ್ರೆಸ್‌ ಕ್ಲಬ್‌ನಲ್ಲಿ ಮಂಗಳವಾರ ಆಯೋಜಿಸಿದ್ದ ಮಾಧ್ಯಮ ಸಂವಾದ­ದಲ್ಲಿ ಅವರು ಮಾತನಾಡಿದರು.

‘ಅರವಿಂದ ಕೇಜ್ರಿವಾಲ್‌ ಪ್ರಾದೇಶಿಕ ಪಕ್ಷ ಹುಟ್ಟು ಹಾಕುವ ಮೂಲಕ ರಾಜ­ಕೀಯ ಚಳವಳಿ ಆರಂಭಿಸಿದ್ದಾರೆ. ಆದರೆ, ನಾವೇನೂ ಮಾಡಿಲ್ಲ. ವ್ಯವಸ್ಥೆ ಸರಿ ಇಲ್ಲ ಎಂದು ಮನೆಯಲ್ಲಿ ಕುಳಿತು ಮಾತನಾ­ಡುತ್ತಿದ್ದೇವೆ’ ಎಂದು ಅವರು ಬೇಸರ ವ್ಯಕ್ತಪಡಿಸಿದರು.

‘ನಾಲ್ಕೈದು ವರ್ಷಗಳಲ್ಲಿ ಆದ ರಾಜ­ಕೀಯ ಬೆಳವಣಿಗೆಗಳನ್ನು ಗಮನಿಸಿ ಮನಸ್ಸಿಗೆ ತುಂಬಾ ಬೇಸರ ಉಂಟಾ­ಯಿತು. ವ್ಯವಸ್ಥೆಯ ಹೊರಗೆ ಕುಳಿತು ಟೀಕೆ ಮಾಡುವುದು ಸರಿ ಅಲ್ಲ ಅನಿಸಿತು. ಹೀಗಾಗಿ ವ್ಯವಸ್ಥೆಯಲ್ಲಿ ಬದಲಾವಣೆ ತರಲು ರಾಜಕೀಯ ಪ್ರವೇಶಿಸಲು ತೀರ್ಮಾ­ನಿಸಿದೆ’ ಎಂದು ಅವರು ರಾಜ­ಕೀಯ ಪ್ರವೇಶದ ಹಿನ್ನೆಲೆಯನ್ನು ವಿವರಿಸಿದರು. 

‘ಬೆಂಗಳೂರು ನಗರ ಬೇಕಾಬಿಟ್ಟಿ­ಯಲ್ಲಿ ಬೆಳೆಯುತ್ತಿದೆ. ಹೆಸರಿಗೆ ಬೃಹತ್‌ ಬೆಂಗಳೂರು ಆಗಿದೆ. ನಗರ ಆರ್ಥಿಕ ಹಾಗೂ ಭೌತಿಕವಾಗಿ ಪ್ರಗತಿ ಸಾಧಿಸ­ಬೇಕು. ಆದರೆ, ಇಂದು ಬೆಡ್‌ರೂಂ ಹಾಗೂ ಮೋರಿ ನಡುವೆ ಐದು ಅಡಿ ಅಂತರ ಇಲ್ಲ. ಮಹಿಳೆಯರಿಗೆ ಸುರಕ್ಷತೆ ಇಲ್ಲ. ಮಕ್ಕಳ ಬಗ್ಗೆ ಕಾಳಜಿ ವಹಿಸುತ್ತಿಲ್ಲ’ ಎಂದು ಅವರು ಕಿಡಿಕಾರಿದರು.

‘ನಗರ ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಎರಡು ವರ್ಷಗಳ ಕಾಲ ಅಧ್ಯಯನ ನಡೆಸಿ ವರದಿ ಸಿದ್ಧಪಡಿ­ಸಿದ್ದೇನೆ. ಆಡಳಿತ ನಡೆಸುವವರು ನಗರವನ್ನು ಸಂಪೂರ್ಣ­ವಾಗಿ ನಿರ್ಲಕ್ಷ್ಯ ಮಾಡಿದ್ದಾರೆ. ಹೀಗಾಗಿ ಆಡಳಿತದಲ್ಲಿ ಬದಲಾವಣೆ ಬೇಕಿದೆ. ಸಾಂಸ್ಕೃತಿಕ ಹಾಗೂ ಉದ್ಯಮದ ನಾಯಕತ್ವ ವಹಿ­ಸು­ವುದು ಸುಲಭ. ಆದರೆ, ರಾಜಕೀಯ ನಾಯಕತ್ವ ಕಷ್ಟ. ಈ ಸವಾಲನ್ನು ಎದುರಿಸಲು ಅಣಿಯಾಗಿ ಬಂದಿದ್ದೇನೆ’ ಎಂದು ಅವರು ಹೇಳಿದರು.

‘ರಾಜಕೀಯದಲ್ಲಿ ಮಹಿಳೆಯರಿಗೆ ಸಮಾನ ಪ್ರಾತಿನಿಧ್ಯ ಕೇವಲ ಹೇಳಿಕೆಗೆ ಮಾತ್ರ ಸೀಮಿತವಾಗಿದೆ. ಜನಪ್ರತಿನಿ­ಧಿಯ ಪತ್ನಿ ಅಥವಾ ಸಹೋದರಿಯರು ರಾಜಕೀಯ ಪ್ರವೇಶಿಸುವ ಸ್ಥಿತಿ ಇದೆ. ಬೆರಳೆಣಿಕೆಯ ಮಂದಿ ಮಾತ್ರ ಸ್ವಂತ ಶಕ್ತಿ­ಯಿಂದ ರಾಜಕೀಯದಲ್ಲಿ ಸಾಧನೆ ತೋರು­ತ್ತಿ­ದ್ದಾರೆ. ಇಂತಹ ಪರಿಸ್ಥಿತಿ ಬದಲಾಗಬೇಕು’ ಎಂದರು.

‘ನನ್ನ ಪತಿ ಜೀವರಾಜ ಆಳ್ವ ಅವರು ಶುದ್ಧ ಚಾರಿತ್ರ್ಯಕ್ಕೆ ಹೆಸರಾದವರು. ಮುಚ್ಚು­ಮರೆ ಇಲ್ಲದೆ ರಾಜಕೀಯ ನಡೆಸಿದವರು. ಅವರು ನನ್ನ ರಾಜಕೀಯ ಗುರು­ಗಳು. ಅವರ ಗರಡಿಯಲ್ಲಿ ತರ­ಬೇತಿ ಪಡೆದು ಈಗ ಪಳಗಿದ್ದೇನೆ. ಜನ­ರಲ್ಲಿ ಪರಿವರ್ತನೆಯ ಆಕಾಂಕ್ಷೆ ಮೂಡಿದೆ. ಹೀಗಾಗಿ ಪ್ರಬಲ ಸ್ಪರ್ಧೆ ನೀಡುತ್ತೇನೆ ಎಂಬ ವಿಶ್ವಾಸ ಮೂಡಿದೆ’ ಎಂದರು.

‘ಜನರನ್ನು ಹಣಕ್ಕೆ ಮತ ಮಾರಿ-­ಕೊಳ್ಳಬಾರದು. ಮನೆಯ ಎದುರು ರಾಶಿ ಬಿದ್ದಿರುವ ಕಸದ ರಾಶಿಯನ್ನು ನೆನಪಿಸಿಕೊಂಡು ಅರ್ಹರಿಗೆ ಮತ ಚಲಾಯಿಸಬೇಕು. ಇಲ್ಲದಿದ್ದರೆ ಐದು ವರ್ಷಕ್ಕೊಮ್ಮೆ ಮತ ಕೇಳಲು ಮನೆ ಮುಂದೆ ಬರುವ ಸಂಸದರನ್ನೇ ನಾವು ಮತ್ತೆ ನೋಡಬೇಕಾಗುತ್ತದೆ’ ಎಂದರು.

‘ಜೆಡಿಎಸ್‌, ಜೆಡಿಯು ಒಂದಾಗಬೇಕು’
‘ದೇಶದ ಪ್ರತಿ ನಾಗರಿಕ ಯಾವುದಾದರೊಂದು ರಾಜಕೀಯ ಪಕ್ಷದ ಸದಸ್ಯನಾಗಬೇಕು. ಇದರಿಂದ ಅನ್ಯಾಯ ತಡೆಗಟ್ಟಲು ಸಾಧ್ಯ. ಆಗ ದೇಶಕ್ಕೆ ರಾಜಕೀಯ ಪ್ರಬುದ್ಧತೆ ಬರುತ್ತದೆ’ ಎಂದು ನಂದಿನಿ ಆಳ್ವ ಅಭಿಪ್ರಾಯಪಟ್ಟರು.

‘ಜೆಡಿಎಸ್‌ ಹಾಗೂ ಜೆಡಿಯು ಒಂದಾಗಬೇಕು. ಇದಕ್ಕಾಗಿ ಐದು ವರ್ಷಗಳಿಂದ ಪ್ರಯತ್ನ ಪಡುತ್ತಿದ್ದೇನೆ. ಬಿಹಾರದಲ್ಲಿ ಜೆಡಿಯು ಪ್ರಬಲವಾಗಿದೆ. ಇಲ್ಲಿ ಎರಡು ಪಕ್ಷಗಳು ವಿಲೀನವಾದರೆ ಪ್ರಬಲವಾಗಲು ಸಾಧ್ಯ. ರಾಜಕೀಯ ಪ್ರಬುದ್ಧತೆ ತೋರುತ್ತಿರುವ ದೇವೇಗೌಡ ಅವರ ನಾಯಕತ್ವ ರಾಜ್ಯಕ್ಕೆ ಅಗತ್ಯ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT