ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಡುರಸ್ತೆಯಲ್ಲೇ ಯುವತಿಗೆ ಲೈಂಗಿಕ ದೌರ್ಜನ್ಯ

Last Updated 2 ಮೇ 2016, 19:54 IST
ಅಕ್ಷರ ಗಾತ್ರ

ಬೆಂಗಳೂರು: ಕೆಲಸ ಮುಗಿಸಿಕೊಂಡು ರಾತ್ರಿ ಪೇಯಿಂಗ್‌ ಗೆಸ್ಟ್‌ ಕಟ್ಟಡಕ್ಕೆ ಮರಳುತ್ತಿದ್ದ ಮಣಿಪುರ ಮೂಲದ 22 ವರ್ಷದ ಯುವತಿಯನ್ನು ದುಷ್ಕರ್ಮಿಯೊಬ್ಬ ನಡುರಸ್ತೆಯಿಂದ ಎತ್ತಿಕೊಂಡು ಹೋಗಿ ಲೈಂಗಿಕ ದೌರ್ಜನ್ಯವೆಸಗಿ ಹಲ್ಲೆ ನಡೆಸಿರುವ ಘಟನೆ ಕತ್ರಿಗುಪ್ಪೆಯಲ್ಲಿ ನಡೆದಿದ್ದು, ಅದಕ್ಕೆ ಸಂಬಂಧಪಟ್ಟಂತೆ ಆರೋಪಿ ಅಕ್ಷಯ್‌ (24) ಎಂಬಾತನನ್ನು ಸೋಮವಾರ ರಾತ್ರಿ ಬಂಧಿಸಲಾಗಿದೆ.

‘ಬಂಧಿತ ಅಕ್ಷಯ್‌ ಕ್ಯಾಬ್‌ ಚಾಲಕನಾಗಿದ್ದು, ಕನಕಪುರ ರಸ್ತೆಯಲ್ಲಿ ವಾಸವಿದ್ದಾನೆ. ಸ್ಥಳೀಯರು ನೀಡಿದ ಮಾಹಿತಿ ಆಧರಿಸಿ ಆರೋಪಿಯನ್ನು ಬಂಧಿಸಲಾಗಿದೆ. ಆರೋಪಿಯನ್ನು ನ್ಯಾಯಾಧೀಶರ ಮುಂದೆ ಹಾಜರುಪಡಿಸಿ ಹೆಚ್ಚಿನ ವಿಚಾರಣೆಗೆ ವಶಕ್ಕೆ ನೀಡುವಂತೆ ಮನವಿ ಮಾಡಲಾಗುವುದು’ ಎಂದು ದಕ್ಷಿಣ ವಿಭಾಗದ ಡಿಸಿಪಿ ಬಿ.ಎಸ್.ಲೋಕೇಶ್‌ಕುಮಾರ್ ‘ಪ್ರಜಾವಾಣಿ’ಗೆ ತಿಳಿಸಿದರು.

ಘಟನೆ ಹಿನ್ನೆಲೆ:  ಕತ್ರಿಗುಪ್ಪೆಯ ಖಾಸಗಿ ಕಂಪೆನಿಯಲ್ಲಿ ಉದ್ಯೋಗಿಯಾಗಿರುವ ಯುವತಿ ಅಲ್ಲಿನ ಪೇಯಿಂಗ್ ಗೆಸ್ಟ್ ಕಟ್ಟಡ(ಪಿಜಿ) ದಲ್ಲಿ   ವಾಸವಿದ್ದರು.
ಏಪ್ರಿಲ್‌ 23ರಂದು ಕೆಲಸ ಮುಗಿದ ನಂತರ ರಾತ್ರಿ 9.50ರ ಸುಮಾರಿಗೆ ಸ್ನೇಹಿತರೊಬ್ಬರ ಬೈಕ್‌ನಲ್ಲಿ ಪಿ.ಜಿ ಕಟ್ಟಡದ ಸಮೀಪ ಬಂದ ಯುವತಿ, ದೂರದಲ್ಲಿ ಇಳಿದು ನಡೆದುಕೊಂಡು  ಕಟ್ಟಡದತ್ತ ಬಂದರು. ಬಳಿಕ ಪಿ.ಜಿ ಕಟ್ಟಡದ ಎದುರು ನಿಂತು ಮೊಬೈಲ್‌ನಲ್ಲಿ ಮಾತನಾಡುತ್ತಿದ್ದರು.

ಈ ವೇಳೆ ಸ್ಥಳಕ್ಕೆ ಬಂದ ದುಷ್ಕರ್ಮಿಯೊಬ್ಬ ಯುವತಿಯನ್ನು ಎತ್ತಿಕೊಂಡು ಸಮೀಪದ ನಿರ್ಮಾಣ ಹಂತದ ಕಟ್ಟಡದ ಬಳಿ ಹೋಗಿದ್ದ. ಯುವತಿ ಕಿರುಚಿಕೊಂಡಿದ್ದರಿಂದ ತಳ್ಳಿ ಅಲ್ಲಿಂದ ಪರಾರಿಯಾಗಿದ್ದ. ಅದರಿಂದ ಯುವತಿಯ ಕೈಗೆ ಗಾಯವಾಗಿದೆ ಎಂದು ಪೊಲೀಸರು ತಿಳಿಸಿದರು.

ಬಳಿಕ ಪಿ.ಜಿ ಕಟ್ಟಡಕ್ಕೆ ಹೋದ ಯುವತಿ, ಪಿ.ಜಿ ಕಟ್ಟಡ ಮಾಲೀಕ ಮಂಜುನಾಥ್ ಅವರಿಗೆ ಘಟನೆ ಮಾಹಿತಿ ನೀಡಿದ್ದರು. ಅದೇ ಆಧಾರದಲ್ಲಿ ಮಂಜುನಾಥ್ ಚನ್ನಮ್ಮನಕೆರೆ ಅಚ್ಚುಕಟ್ಟು ಠಾಣೆಗೆ ಕರೆ ಮಾಡಿ ಘಟನೆ ಕುರಿತು ವಿವರಿಸಿದ್ದರು ಎಂದರು.

‘ಘಟನೆಯ ಮರುದಿನ ಪಿ.ಜಿ ಕಟ್ಟಡದಲ್ಲಿದ್ದ ಯುವತಿ ಆರೋಗ್ಯ ವಿಚಾರಿಸಿ, ಠಾಣೆಗೆ ದೂರು ನೀಡುವಂತೆ ಹೇಳಿದ್ದೆ. ಸ್ನೇಹಿತನ ಜತೆ ಚರ್ಚಿಸಿ ದೂರು ನೀಡುವುದಾಗಿ ಅವರು ಹೇಳಿದ್ದರು. ಅದಾದ ಮರುದಿನ ಯುವತಿ ಪಿ.ಜಿ ಕಟ್ಟಡದಲ್ಲಿ ಇರಲಿಲ್ಲ. ಯುವತಿಯೇ ದೂರು ನೀಡಿರಬಹುದು ಎಂದು ಸುಮ್ಮನಾಗಿದ್ದೆ’ ಎಂದು ಪಿ.ಜಿ. ಕಟ್ಟಡದ ಮಾಲೀಕ ಮಂಜುನಾಥ್ ತಿಳಿಸಿದ್ದಾರೆ.

‘ಸೋಮವಾರ (ಮೇ 2) ಮಾಧ್ಯಮದಲ್ಲಿ ಸುದ್ದಿ ಪ್ರಸಾರವಾದ ನಂತರ ಯುವತಿ ದೂರು ಕೊಟ್ಟಿಲ್ಲ ಎಂಬ ವಿಷಯ ಗೊತ್ತಾಯಿತು. ಹೀಗಾಗಿ ನಾನೇ ದೂರು ದಾಖಲಿಸಿದ್ದೇನೆ’ ಎಂದು ಅವರು ತಿಳಿಸಿದರು.

ಮಂಜುನಾಥ್ ಅವರ ದೂರು ಆಧರಿಸಿ ಮಹಿಳೆ ಗೌರವಕ್ಕೆ ಧಕ್ಕೆ ಉಂಟು ಮಾಡಿದ ಆರೋಪ (ಐಪಿಸಿ 354), ಹಲ್ಲೆ (ಐಪಿಸಿ 323), ಅಕ್ರಮ ಬಂಧನ (ಐಪಿಸಿ 341), ಅಪಹರಣ (ಐಪಿಸಿ 365) ಆರೋಪದಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಚನ್ನಮ್ಮನಕೆರೆ ಅಚ್ಚುಕಟ್ಟು ಪೊಲೀಸರು ಹೇಳಿದರು.

ಕ್ರಮಕ್ಕೆ ಸೂಚನೆ
‘ಘಟನೆಗೆ ಸಂಬಂಧಪಟ್ಟಂತೆ ಪೊಲೀಸರು ಪ್ರಕರಣ ದಾಖಲಿಸಿಕೊಳ್ಳದೆ ವಿಳಂಬ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಅದು ಸಾಬೀತಾದರೆ ಸಂಬಂಧಪಟ್ಟ ಪೊಲೀಸರ ವಿರುದ್ಧ ಕ್ರಮ ಕೈಗೊಳ್ಳುವಂತೆ ಹಿರಿಯ ಅಧಿಕಾರಿಗಳಿಗೆ ಸೂಚಿಸಿದ್ದೇನೆ’ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದ್ದಾರೆ.

ಘಟನೆ ಬಗ್ಗೆ ಯುವತಿ ದೂರು ನೀಡಿಲ್ಲ
ಘಟನೆ ಬಳಿಕ ಸಂಬಂಧಪಟ್ಟ ಠಾಣೆಯ ಸಿಬ್ಬಂದಿ ಸಂತ್ರಸ್ತ ಯುವತಿ ಮತ್ತು ಪಿ.ಜಿ ಕಟ್ಟಡದ ಮಾಲೀಕರಿಂದ ಮಾಹಿತಿ ಪಡೆದಿದ್ದಾರೆ. ಘಟನೆ ಬಗ್ಗೆ ಯುವತಿ ದೂರು ನೀಡಿಲ್ಲ. ಯುವತಿಯೇ ಸೂಕ್ತ ಮಾಹಿತಿ ನೀಡಿ ತನಿಖೆಗೆ ಸಹಕರಿಸಿದರೆ ಸಾಕ್ಷ್ಯಗಳನ್ನು ಸಂಗ್ರಹಿಸಲು ಅನುಕೂಲವಾಗುತ್ತದೆ ಎಂದು ನಗರ ಪೊಲೀಸ್ ಕಮಿಷನರ್ ಎನ್.ಎಸ್.ಮೇಘರಿಕ್ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT