ತನ್ನ ಪಾಡಿಗೆ ತಾನು ಹರಿದುಹೋಗುವ ಕಾಡ ತೊರೆಯಂತೆ ಕನ್ನಡ ಸಾಹಿತ್ಯ ಲೋಕದಲ್ಲಿ ನಾ. ಡಿಸೋಜ ಅವರ ಪಯಣವಿದೆ. ಯಾವ ಪಂಥಕ್ಕೂ ಸೇರದೆ ತನ್ನ ಪಾಡಿಗೆ ತಾನು ಬರೆದುಕೊಂಡಿರುವ ಈ ಹಿರಿಯ ಲೇಖಕರಿಗೆ, ಜನವರಿ 7ರಿಂದ ಮೂರು ದಿನಗಳ ಕಾಲ ಮಡಿಕೇರಿಯಲ್ಲಿ ನಡೆಯುವ ಎಂಬತ್ತನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಯ ಮನ್ನಣೆ. ಸಮ್ಮೇಳನದ ನೆಪದಲ್ಲಿ ಜನರ ನಡುವೆ ನಿಂತಿರುವ ಡಿಸೋಜ– ‘ಮುಳುಗಡೆ’ಯಿಂದ ಮಡಿಕೇರಿವರೆಗೆ ಸಾಗಿಬಂದ ದಾರಿಯನ್ನು ನೆನಪಿಸಿಕೊಂಡರೆ ಅದು ಗಿರಿಶಿಖರ ಕಣಿವೆಗಳಲ್ಲಿ ಹರಿದುಬರುವ ನದಿಗಿಂತ ಭಿನ್ನವೇನೂ ಅಲ್ಲ.

ನಾ. ಡಿಸೋಜ ಅವರು ಮಡಿಕೇರಿಯಲ್ಲಿ ನಡೆಯುವ ೮೦ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಅಧ್ಯಕ್ಷರಾದ ಸುದ್ದಿ ಕರ್ನಾಟಕದ ಮೂಲೆ ಮೂಲೆಯಲ್ಲಿರುವ ಕನ್ನಡಿಗರಿಗೆ ಅನಿರೀಕ್ಷಿತವಾಗಲಿ, ಆಶ್ಚರ್ಯವಾಗಲಿ ಆಗಲಿಲ್ಲ. ಎಲ್ಲರ ಮಾತು ಒಂದೇ, ‘ಸಲ್ಲಬೇಕಾದವರಿಗೆ ಸಂದಿದೆ’. ಡಿಸೋಜ ಅವರಿಗೆ ಮನ್ನಣೆಯ ಸುದ್ದಿ ತಿಳಿದ ತಕ್ಷಣ ಸಾಗರ ಊರಿಗೆ ಊರೇ ಒಮ್ಮೆಲೆ ಸಂತೋಷದಲ್ಲಿ ಮಿಂದು ಎದ್ದಿದೆ. ಈ ಜನ ಪತ್ರಿಕೆಗಳಲ್ಲಿ ಹೇಳಿಕೆ, ಮೆಚ್ಚಿಕೆ, ಅಭಿಪ್ರಾಯಗಳನ್ನು ಕೊಡದೆ ಇರಬಹುದು, ಆದರೆ ಅವರ ಮನಸ್ಸುಗಳಲ್ಲಿ ಮಡಿಕೇರಿಯ ಸೊಬಗು ತುಂಬಿದೆ. ಈ ಕಾಲಮಾನದಲ್ಲಿ ಯಾವ ಲಾಬಿಗುಲಾಬಿಗಳು ಇಲ್ಲದೆ ಪ್ರಶಸ್ತಿ ಸ್ಥಾನಮಾನಗಳು ದೊರಕಲಾರವು ಎಂದು ತಿಳಿಯಲು ಯಾವ ವಿಶೇಷ ಅಧ್ಯಯನವೂ ಬೇಡ. ಡಿಸೋಜ ಇದಕ್ಕೊಂದು ಅಪವಾದ.

ಡಿಸೋಜ ಮತ್ತು ನಾನು ಕಳೆದ ೩೪ ವರ್ಷಗಳಿಂದ ‘ನೆರೆಹೊರೆಯವರು’. ಇವತ್ತಿನ ಸಾಮಾಜಿಕ, ಸ್ಥಿತಿಗತಿಗಳಲ್ಲಿ ಪಕ್ಕದ ಮನೆಯವನೊಬ್ಬ ತನ್ನ ನೆರೆಯವನ ಬಗ್ಗೆ ಒಳ್ಳೆಯ ಮಾತನ್ನು ಆಡಿದರೆ ಅದನ್ನು ನಂಬಲೇಬೇಕಾದ ಸಂದರ್ಭವಿದೆ. ಡಿಸೋಜ ಅವರನ್ನು ಪ್ರತಿದಿನ ನೋಡಿದಾಗಲೆಲ್ಲಾ ಅವರ ಬದುಕಿನ ಫ್ರೆಶ್ನೆಸ್ ಅನ್ನು ನೋಡಿ ಸಂತೋಷಪಡುತ್ತಿರುವೆ. ಅವರು ನನ್ನ ಪಾಲಿಗೆ ಮಾತ್ರವಲ್ಲ, ಎಲ್ಲರ ಪಾಲಿಗೆ ಎಂದೂ ಹಳಸದ ವ್ಯಕ್ತಿ. ಅಷ್ಟೊಂದು ಕ್ರಿಯೇಟೀವ್, ಅಷ್ಟೊಂದು ಫ್ರೆಶ್.

ಗುಡ್ಡವನ್ನು ಚೆನ್ನಾಗಿ ಕಡೆದಿಟ್ಟು ನಿರ್ಮಿಸಿದ ಸುಂದರ ಮೂರ್ತಿ ಇವರಲ್ಲ. ಲಾಗಾಯ್ತಿನಿಂದ ಸೇರಿಕೊಳ್ಳುತ್ತಾ ಬಂದಿರುವ ಚಿಕ್ಕ ಪುಟ್ಟ ಹಳ್ಳ, ಹನಿ, ಹಕ್ಕಿ, ಚಿಗುರು, ಕಲ್ಲು ಮಣ್ಣು, ಹರಳು, ಜಲ್ಲಿ ಮರಳು, ನೀರು ಕಣ್ಣೀರು– ಇವೆಲ್ಲಾ ತಾವಾಗಿಯೇ ಸೇರಿಕೊಂಡು ಸಹಜ ಪ್ರಕ್ರಿಯೆಯಲ್ಲಿ ಅರಿವಿಲ್ಲದೆ ರೂಪಗೊಂಡಂತಹ ಮೂರ್ತಿ ಇದು. ಸಾಹಿತ್ಯದಲ್ಲಿ ಇವರದು ಒಂದು ರೀತಿಯ ದಿನಗೂಲಿ ವ್ಯಕ್ತಿತ್ವ. ಪ್ರತಿದಿನ ಹೊಸ ಹೊಸ ಕನಸುಗಳನ್ನು ಕಾಣದೆ, ಓದದೆ, ಚಿಂತಿಸದೆ, ಬರೆಯದೆ ಊಟ ಮಾಡುವ ವ್ಯಕ್ತಿಯಲ್ಲ. ಕುತೂಹಲವೆಂದರೆ, ಮೊಟ್ಟ ಮೊದಲಿಗೆ ‘ಪ್ರಜಾವಾಣಿ’ ಪತ್ರಿಕೆಯ ವಾಚಕರವಾಣಿಗೆ ‘ಇಗರ್ಜಿಯ ಬಾವಿ’ ಎಂಬ ಪುಟ್ಟ ಪತ್ರ ಬರೆಯುವುದರ ಮೂಲಕ ಅವರು ಸಾಹಿತ್ಯ ಪ್ರವೇಶ ಮಾಡಿದರು. ಆ ಪತ್ರದ ವಿಷಯವು ಸಹ ಪ್ರತಿಭಟನೆ ಹಾಗೂ ಕಳಕಳಿಯ ಒಂದು ಪುಟ್ಟ ಮೊಳಕೆ. ಆಗೊಮ್ಮೆ, ಸಾಗರದಲ್ಲಿರುವ ಎಲ್ಲಾ ಬಾವಿಗಳಲ್ಲಿ ನೀರು ಕಡಿಮೆಯಾಗಿ ಕ್ರಮೇಣ ಬತ್ತಿ ಊರಿಗೆಲ್ಲಾ ಸಮಸ್ಯೆಯಾಗಿತ್ತು. ಚರ್ಚ್ ಕಾಂಪೌಂಡಿನಲ್ಲಿದ್ದ ಬಾವಿಯಲ್ಲಿದ್ದ ನೀರು ಮಾತ್ರ ಸ್ವಲ್ಪವೂ ಬತ್ತಿರಲಿಲ್ಲ. ಸುತ್ತಮುತ್ತಲಿನ ಜನ ನೀರಿಗಾಗಿ ಆ ಬಾವಿಗೆ ಬರಲು ತೊಡಗಿದರು. ಇದನ್ನು ನೋಡಿ ಆ ಪಾದ್ರಿಯ ಬಟ್ಲರ್ ಬಾವಿಯ ಗಡಗಡೆ ತೆಗೆದಿಟ್ಟ, ಆಗಿನ್ನೂ ಚರ್ಚಿನ ವಲಯದಲ್ಲಿಯೇ ಇದ್ದ ಡಿಸೋಜ ಆ ಬಟ್ಲರ್ನ ನಿಲುವನ್ನು ಪ್ರತಿಭಟಿಸಿ ‘ವಾಚಕರ ವಾಣಿ’ಗೆ ಬರೆದರು. ಅದನ್ನು ಓದಿದ ಚರ್ಚಿನ ಫಾದರ್, ಕೂಡಲೇ ಗಡಗಡೆಯನ್ನು ಮತ್ತೆ ಹಾಕಿಸಿದರು. ಕೊಡಪಾನಗಳು ಮತ್ತೆ ಮತ್ತೆ ಬರತೊಡಗಿದವು. ಇದೇನು ಚಿಕ್ಕ ಸಂಗತಿಯಲ್ಲ!

ಸಾಹಿತ್ಯ ಕ್ಷೇತ್ರದಲ್ಲಿ ಒಂದು ಹಳೇ ಮಾತಿದೆ, ‘ಟ್ರಸ್ಟ್ ದಿ ಟೇಲ್ ನಾಟ್ ದಿ ಟೆಲ್ಲರ್’- ಕಥೆಗಾರನಿಗಿಂತ ಕಥೆಯನ್ನೇ ನಂಬು. ಮತ್ತೊಂದು ವ್ಯತಿರಿಕ್ತ ಮಾತು ಸಹ ಇದೆ. ಕಥೆಗಾರನ ಬದುಕೇ ಮುಖ್ಯ, ಕಥೆ ನಂತರ. ಇವರೆಡಕ್ಕೂ ಸಾಹಿತ್ಯ ಲೋಕದಲ್ಲಿ ಸಾವಿರಾರು ಉದಾಹರಣೆಗಳಿವೆ. ಆದರೆ ಮೊದಲೆರಡು ವಾದಗಳ ಸಂಗಡ ಮೂರನೆಯದೊಂದು ಅನನ್ಯ ಸೂತ್ರವಿದೆ. ಕಥೆ ಮತ್ತು ಕಥೆಗಾರ– ಇವರಿಬ್ಬರೂ ಪ್ರಾಮಾಣಿಕರಾಗಿರಬೇಕು ಅಂತ. ಇಲ್ಲಿ ಡಿಸೋಜ ಬಹಳ ದೊಡ್ಡವರು. ಕುತೂಹಲವೆಂದರೆ ಜನ ಕಲಾವಿದರ ಬದುಕಿಗಿಂತ ಸಾಹಿತಿಯೊಬ್ಬನ ಬದುಕನ್ನು ಸದಾ ಸ್ಕ್ಯಾನಿಂಗ್ ಮಾಡುತ್ತಿರುತ್ತಾರೆ. ಅದ್ಯಾಕೋ ಏನೋ ಕಲಾವಿದರಿಗೆ ಸ್ವಲ್ಪ ರಿಯಾಯ್ತಿ.

ಡಿಸೋಜ ಸಾಹಿತ್ಯದಲ್ಲಿ ಒಬ್ಬಂಟಿಗ. ಒಬ್ಬಂಟಿಗನಾಗಿ ನಡೆಯುವುದು ಎಲ್ಲರಿಂದ ಸಾಧ್ಯವಿಲ್ಲ. ಇವರು ಸಂತೆ, ಗುಂಪಿನಲ್ಲಿಯೂ ಒಬ್ಬಂಟಿಗನಾಗಿರಬಲ್ಲರು. ಒಬ್ಬ ಸೃಜನಶೀಲ ವ್ಯಕ್ತಿ ಒಬ್ಬಂಟಿಗನಾಗಿ ನಡೆಯುವುದು ತುಂಬ ಅಪೇಕ್ಷಣೀಯ. ಹಾಗಂತ, ಜನಬಳಕೆ ಕಡಿಮೆ ಅಂತ ಅರ್ಥವಲ್ಲ. ಸಂಘ ಸಂಸ್ಥೆಯ ಕಾರ್ಯಚಟುವಟಿಕೆ, ಸಾರ್ವಜನಿಕ ಹೋರಾಟದಲ್ಲಿ ಮುಂಚೂಣಿಯಲ್ಲಿರುತ್ತಾರೆ. ಕೆಲಸ ಮುಗಿದೊಡನೆ ಮತ್ತೆ ತನ್ನ ಚಿಂತನೆಯ ಗೂಡಿಗೆ ವಾಪಸ್. ಸಾಗರದ ‘ಒಡನಾಟ’ ಸಾಂಸ್ಕೃತಿಕ ಸಂಸ್ಥೆಯ ಅಧ್ಯಕ್ಷರಾಗಿ ಕಳೆದ ೨೨ ವರ್ಷಗಳಿಂದ ಮುಂಚೂಣಿಯಲ್ಲಿದ್ದು ನಡೆಸುತ್ತಿದ್ದಾರೆ. ‘ಒಡನಾಟ’ ಸೇರಿದಂತೆ ಊರಿನ ಎಲ್ಲಾ ಸಾಂಸ್ಕೃತಿಕ ಹಾಗೂ ಸಾಮಾಜಿಕ ಹೋರಾಟಗಳಲ್ಲಿ ಡಿಸೋಜರ ನಾಮಬಲ ಮತ್ತು ಧ್ವನಿ ಇದ್ದೇ ಇದೆ.

ಡಿಸೋಜರು ತಮ್ಮ ಯಾವೊಂದು ಕೃತಿಗೂ ಮುನ್ನುಡಿ, ಬೆನ್ನುಡಿ ಬರೆಸಿಕೊಂಡಿಲ್ಲವೆಂಬುದು ಚಿಕ್ಕ ಸಂಗತಿಯಲ್ಲ. ಅವರ ಸಮಗ್ರ ಮೂರು ಕಥಾಸಂಪುಟ ಹಾಗು ಮಕ್ಕಳ ಮಿನಿಕಾದಂಬರಿಗಳ ಸಮಗ್ರ ‘ಹಾರುವ ಹಕ್ಕಿಗ ಹಸಿರು ತೋರಣ’ ಹೊರಗೆ ಬರುವಾಗ – ಇಂತಹ ಸುಂದರ ಸಮಗ್ರ ಕೃತಿಗಳಿಗಾದರೂ ಒಂದು ಅಧ್ಯಯನ ಪೂರ್ಣ ಪ್ರಸ್ತಾವನೆ ಬರೆಸಿ ಎಂದಾಗ ಅವರ ಬಿಳಿ ಮೀಸೆಗಳು ಮುಗುಳು ನಕ್ಕಿದ್ದು ನನಗೆ ನೆನಪಿದೆ. ಡಿಸೋಜರ ಓದು ಬರಹಗಳ ವೇಗದ ಬಗ್ಗೆ ನನಗೆ ಯಾವತ್ತೂ ಆಶ್ಚರ್ಯ.

ನೆರೆಮನೆ ವ್ಯಕ್ತಿಯ ಕಣ್ಣಲ್ಲಿ
ಇವರಿಗೆ ಅಭಿಮಾನಿಗಳಿಂದ ಬರುವ ಪತ್ರಗಳ ಸಂಖ್ಯೆ ಹಾಗು ಇವರು ತನ್ನ ಅಭಿಮಾನಿಗಳಿಗೆ ತಕ್ಷಣ ಬರೆಯುವ ಪತ್ರಗಳ ಸಂಖ್ಯೆಯನ್ನು ಅಂಚೆಯವರಿಂದಲೇ ಕೇಳಬೇಕು. ಅವರೇ ಒಮ್ಮೆ ಹೇಳಿದ ಹಾಗೆ– ‘ನನಗೆ ಯೋಚಿಸಲು ತುಂಬ ಸಮಯ ಬೇಕು, ಬರೆಯಲು ಬೇಡ’. ಅಂದಿನ ಕೆಲಸ ಅಂದೇ, ಅದು ಸಾಹಿತ್ಯವಾಗಿರಲಿ, ಕಚೇರಿಯ ಕೆಲವೇ ಆಗಿರಲಿ.

ಸಾಗರದ ಮನಸ್ಸೇ ಹಾಗಿದೆಯೋ ಅಥವಾ ಡಿಸೋಜರ ಮನಸ್ಸು ಹಾಗಿದೆಯೋ ಎಂದು ತಿಳಿಯುವುದು ಕಷ್ಟ. ಅಬ್ರಹಾಂ ಲಿಂಕನ್ನ ಒಂದು ಮಾತು ಹೀಗಿದೆ– I believe a man should be proud of the city in which lives and that he should so live that city will be proud that he lives in it. ನಾನಿಂಥ ಊರಿನವನು ಎಂಬ ಹೆಮ್ಮೆ ವ್ಯಕ್ತಿಯದು; ನನ್ನ ಮಡಿಲಲ್ಲಿ ಅಂಥವನು ಬದುಕಿದ್ದಾನಲ್ಲ ಎಂಬ ಹಿಗ್ಗು ಆ ಊರಿನದು. ಲಿಂಕನ್ಗೆ ತನ್ನ ಹುಟ್ಟೂರು ಕೆಂಟಕಿ ಬಗ್ಗೆ ಎಲ್ಲಿಲ್ಲದ ಪ್ರೀತಿ, ಕೆಂಟಕಿ ಊರಿನವರಿಗೆಲ್ಲಾ ಲಿಂಕನ್ ಮೇಲೆ ಬಹು ಹೆಮ್ಮೆ. ಕುವೆಂಪು– -ಕುಪ್ಪಳ್ಳಿ, ಸುಬ್ಬಣ್ಣ-– ಹೆಗ್ಗೋಡು, ಬೇಂದ್ರೆ-–ಧಾರವಾಡ ಇದ್ದ ಹಾಗೆ ಡಿಸೋಜ-– ಸಾಗರ. ಸಾಹಿತ್ಯ ಸಮ್ಮೇಳನದ ಅಧ್ಯಕ್ಷರು ಅಂತ ತಿಳಿದಂದಿನಿಂದ ನಾಡಿನ ಬಹಳಷ್ಟು ರಸ್ತೆಗಳು ಸಾಗರದ ನೆಹರು ನಗರ ಎರಡನೇ ತಿರುವಿಗೆ ಸೇರುತ್ತಿವೆ. ನಿಜ ಅರ್ಥದಲ್ಲಿ ಇವರು ಜನಪ್ರಿಯ ಸಾಹಿತಿ ಅಂದರೆ ಜನರ ಪ್ರಿಯ ಸಾಹಿತಿ.

ಬಹಳ ಕಾಲ, ಡಿಸೋಜ ಅವರಿಗೆ ಧರ್ಮದ ಸ್ಥಾವರಗಳ ಅನಿಷ್ಟಗಳಿಂದಾಗಿ ದೇವರ ಮೇಲೆ ನಂಬಿಕೆಯಿಲ್ಲವೇನೋ ಅಂತ ತಿಳಿದಿದ್ದೆ. ಆದರೆ ಕ್ರಮೇಣ ನನಗೆ ತಿಳಿದ ಸತ್ಯ– ಅವರಿಗೆ ಯಾವ ದೇವರ ಮೇಲೆಯೂ, ಪ್ರಾರ್ಥನೆ ಪೂಜೆಗಳ ಮೇಲೂ ನಂಬಿಕೆ ಇಲ್ಲವೆನ್ನುವುದು. ‘ಒಂದು ವೇಳೆ ಹಿಂದೂವಾಗಿಯೋ, ಮುಸ್ಲಿಂ ಆಗಿಯೋ ಹುಟ್ಟಿದ್ದರೂ ದೇವರನ್ನು ನಂಬುತ್ತಿರಲಿಲ್ಲ’ ಎನ್ನುವುದು ಅವರದೇ ಮಾತು. ದೇವರ ಮೇಲಿನ ನಂಬಿಕೆ ಇಲ್ಲವೆನ್ನುವುದರಲ್ಲಿಯೂ ಅವರದು ಒಂದು ರೀತಿಯ ಸೌಜನ್ಯ. ಎಲ್ಲಾ ಧರ್ಮಗ್ರಂಥಗಳ ಪರಿಜ್ಞಾನವಿದೆ, ಎಲ್ಲಾ ಧರ್ಮೀಯರ ಒಡನಾಟವಿದೆ, ದೇವರ ಬಗ್ಗೆ ಭಕ್ತರಿಗಿಂತ ನಾಸ್ತಿಕ ಹೆಚ್ಚು ಯೋಚನೆ ಮಾಡುತ್ತಾನಂತೆ. ಡಿಸೋಜರ ಚಿಂತನೆ ಕೂಡ ಹೀಗೆಯೇ. ಬದುಕಲು ಆತ್ಮವಿಶ್ವಾಸ, ಬದುಕನ್ನು ಎದುರಿಸುವ ಧೈರ್ಯವಿದ್ದರೆ ಸಾಕು ಅನ್ನುತ್ತಾರೆ. ಇದು ನಿಜವಾದ
ನಾ. ಡಿಸೋಜ.

ಡಿಸೋಜ ಬರವಣಿಗೆಯಲ್ಲಿ ಬಹು ಶಿಸ್ತುಗಾರ. ಬರೆದರೆ ಅದು ಒಂದೇ ಒಂದು ಪ್ರತಿ. ತಿಕ್ಕಿ, ತಿಣಿಕಿ, ತೀಡಿ ಮರುಪ್ರತಿಗಳನ್ನು ಸಿದ್ಧ ಮಾಡುವ ಪ್ರಶ್ನೆಯೇ ಇಲ್ಲ. ಒಮ್ಮೆ ಬರೆದ ವಾಕ್ಯಗಳ ಬದಲಾವಣೆಗಳೂ ಇಲ್ಲ. ಬರೆದ ಕೂಡಲೆ ಸಂಪಾದಕರಿಗೋ ಪ್ರಕಾಶಕರಿಗೋ ರವಾನೆ.

ಡಿಸೋಜರ ಸಾಹಿತ್ಯಿಕ ಮೂಲ ಶಕ್ತಿ ಇರುವುದು ಒಬ್ಬ ಕಥೆಗಾರನಾಗಿ. ತಮ್ಮ ಕಥೆಗಳನ್ನು ಬಹು ಆಪ್ತದನಿಯಲ್ಲಿ, ಮಿತ್ರರೊಡನೆ ಹಂಚಿಕೊಳ್ಳುವಂತೆ ಕಟ್ಟುತ್ತಾ ಹೋಗುತ್ತಾರೆ. ತಮ್ಮ ವೈಯಕ್ತಿಕ ಧೋರಣೆಯನ್ನಾಗಲಿ, ನೀತಿ ನಿಲುವುಗಳನ್ನಾಗಲಿ ಓದುಗನ ಮೇಲೆ ಹೇರುವುದಿಲ್ಲ. ಕಥೆಗಳೇ ಹೊರಹೊಮ್ಮಿ ಅನಾವರಣಗೊಳ್ಳಬೇಕೆಂಬುದು ಇವರ ಆಶಯ. ಇದು ಎಲ್ಲಾ ಶ್ರೇಷ್ಠಕಥೆಗಾರರ ಕನಸು ಕೂಡ ಹೌದು. ಬದುಕಿನ ಅರ್ಥವನ್ನು ಹುಡುಕುವ ಕೆಲಸ ಕಥೆಯದೇ ಹೊರತು ಕಥೆಗಾರನದಲ್ಲ ಎಂಬ ಅರಿವನ್ನು ಇವರ ಕಥೆಗಳು ಮೂಡಿಸುತ್ತವೆ. ಅಗ್ರಹಾರ ಮತ್ತು ಮೊಹಲ್ಲಾಗಳ ಮೇಲೆ ಒಬ್ಬ ಲೇಖಕ ಎಷ್ಟೊಂದು ಬರೆಯಬಹುದೋ ಅದಕ್ಕಿಂತ ಜಾಸ್ತಿ ಇವರು ಚರ್ಚಿನಂಗಳದ ಬಗ್ಗೆ ಬರೆದಿದ್ದಾರೆ. ಮನುಷ್ಯನ ಬದುಕಿನ ಸುತ್ತಲೂ ಸುತ್ತುತ್ತಲೇ ಇರುತ್ತಾರೆ. ಒಮ್ಮೆ ಹೋದಲ್ಲೇ ಮತ್ತೆ ಮತ್ತೆ ಹೋಗುವ ಸ್ವಭಾವ ಇವರದು. ಪ್ರತಿ ಸಲ ಹೋದಾಗ ಮತ್ತೇನನ್ನೋ ಹುಡುಕುವ ಪ್ರವೃತ್ತಿ. ಮುಳುಗಡೆ, ದೀವರು ಮತ್ತು ಹಸಲರು, ಶರಾವತಿ ನದಿ – ಇವುಗಳ ಬಳಿಗೆ ಮತ್ತೆ ಮತ್ತೆ ಹೋಗುತ್ತಾರೆ. ಈ ಎಲ್ಲಾ ಕ್ಷೇತ್ರಗಳು ಇವರಿಗೆ ದಕ್ಕಿದ್ದು ಹುಟ್ಟಿನಿಂದ, ವೃತ್ತಿಯಿಂದ ಮತ್ತು ಆಸಕ್ತಿಯಿಂದ. ಮರ, ಗಿಡ, ಬಳ್ಳಿ, ಹಕ್ಕಿಹಳ್ಳಗಳಾಗಲಿ, ಮುಳುಗಡೆಯಾಗಲಿ – ಇಲ್ಲಿ ಡಿಸೋಜರು ಹುಡುಕುವುದು ಬರಿ ಕಾಡು, ಜೆಲ್ಲಿ ಸಿಮೆಂಟು ಹಾಗೂ ಶಿಲುಬೆಯನ್ನಲ್ಲ. ಇಲ್ಲೆಲ್ಲಾ ಹರಿಯುವ ಮನುಷ್ಯ ಬದುಕಿನ ದೀರ್ಘಕಾಲಿಕ ಮೌಲ್ಯಗಳ ಹುಡುಕಾಟವೇ ಇವರ ಪ್ರಯತ್ನ.

ನಮ್ಮ ಕೆಳದಿ ಅರಸರು, ಅರಣ್ಯವನ್ನು ಜೋಪಾನವಾಗಿ ಕಾಪಾಡಿಕೊಂಡಿದ್ದರು. ಹೊನ್ನಾವರದಲ್ಲಿದ್ದ ಪೋರ್ಚುಗೀಸರು ತಮ್ಮ ಹಡಗುಗಳನ್ನು ಕಟ್ಟುವುದಕ್ಕೋಸ್ಕರ ಮರವನ್ನು ಕಡಿಯಲು ಅನುಮತಿ ಕೇಳಲು ಬಂದಾಗ, ಕೆಳದಿ ಅರಸರು ಸ್ಪಷ್ಟವಾಗಿ ನಿರಾಕರಿಸಿದರು. ಹಡಗುಗಳನ್ನು ಕಟ್ಟಲು ಬೇಕಾಗುವ ಮರಗಳ ಪ್ರಮಾಣ ಅರಸರಿಗೆ ಚೆನ್ನಾಗಿಯೇ ಗೊತ್ತಿತ್ತು. ಕೆಳದಿ ಅರಸರ ಬಗ್ಗೆ ತುಂಬ ಬರೆದಿರುವ, ಈಗ ಮತ್ತೆ ಬರೆಯುತ್ತಿರುವ ಡಿಸೋಜರಿಗೆ ಆ ಅರಸರ ಕಾಡಿನ ಕಾಳಜಿಯ ಜೀವಜಲ ನಿರಂತರವಾಗಿ ಇವರ ಸಾಹಿತ್ಯದಲ್ಲಿ ಹರಿದುಕೊಂಡು ಬಂದಿದೆ.

ಮುಳುಗಡೆ ಎನ್ನುವುದು ಡಿಸೋಜರ ಪಾಲಿಗೆ ಎಂದೂ ಮುಗಿಯದ ಕಥೆ. ಇಂದಿಗೂ ಮುಳುಗಡೆಯ ಬದುಕುಗಳು ಹೊರಹಣಕ್ಕುತ್ತಿರುತ್ತವೆ. ಅಷ್ಟರಮಟ್ಟಿಗೆ ಮುಳುಗಡೆಯಿಂದ ತತ್ತರಿಸಿದೆ ಡಿಸೋಜರ ಜೀವ. ಬಹುಶಃ ಈ ಗಾಢತೆಯಿಂದ ಹೊರಬರುವುದು ಅವರಿಗೆ ಎಲ್ಲಿಲ್ಲದ ಕಷ್ಟ. ಕನ್ನಡದ ಸಂದರ್ಭದಲ್ಲಿ ಡಿಸೋಜರ ಹಾಗೆ ಮುಳುಗಡೆಯಂತಹ ವಸ್ತುವನ್ನು ಸೃಜನಶೀಲತೆಗೆ ಮತ್ಯಾರೂ ಒಡ್ಡಿಲ್ಲ. ಜಲವಿದ್ಯುತ್ ಯೋಜನೆಗಳು ಕೊಟ್ಟ ಬೆಳಕಿನ ಹಿಂದೆ ಇರುವ ಗಾಢ ಕತ್ತಲೆಯ ಮೇಲೆ ಡಿಸೋಜ ಚೆಲ್ಲಿರುವ ಕಲಾತ್ಮಕ ಬೆಳಕು ಬಹು ಅನನ್ಯ. ಇಡೀ ಭಾರತದ ಸಂದರ್ಭದಲ್ಲಿಯೇ ಇದು ಮೊದಲೆನ್ನುವುದು ಬಹು ಮುಖ್ಯ. ಧರ್ಮದ ಆಧಾರದ ಮೇಲಿನ (ಭಾರತದ ವಿಭಜನೆ ಹೊತ್ತಿನಲ್ಲಿ) ಘೋರ ಸ್ಥಳಾಂತರಕ್ಕಿಂತ ಏಳು ಪಟ್ಟು ಜನರು ಅಭಿವೃದ್ಧಿಯ ಹೆಸರಿನ ಯೋಜನೆಗಳಿಂದಾಗಿ ನೆಲೆ ಮತ್ತು ನೆಲೆಯನ್ನು ಕಳೆದುಕೊಂಡಿದ್ದಾರೆಂದು ಖ್ಯಾತ ಸಮಾಜಶಾಸ್ತ್ರಜ್ಞ ಆಶೀಶ್ನಂದಿ ಹೇಳಿದ್ದಾರೆ. ಇದನ್ನು ಬಹಳ ಹಿಂದೆಯೇ ಡಿಸೋಜ ಗ್ರಹಿಸಿದ್ದರು. ಜನರ ಈ ದುರಂತಮಯ ಸ್ಥಳಾಂತರಕ್ಕೆ ಕಾರಣವಾಗಿರುವ ಅಭಿವೃದ್ಧಿ ಯೋಜನೆಗಳಿಂದ ಹುಟ್ಟಿರುವ ಬಹುರೂಪಿ ಸಂಕಟಗಳು ಡಿಸೋಜರಿಗೆ ಬಹಳವಾಗಿ ಕಾಡಿದೆ. ಇಂದಿಗೂ ಆ ನೋವು ಬತ್ತಿಲ್ಲ. ಇಂದಿಗೂ ಮುಳುಗಡೆಯಾದ ನೂರಾರು ಕುಟುಂಬಗಳ ಮಕ್ಕಳು, ಮೊಮ್ಮಕ್ಕಳು, ಮರಿಮಕ್ಕಳು– ಡಿಸೋಜರ ಬಳಿಗೆ ಬಂದು ಮುಳುಗಡೆಯ ಬಗ್ಗೆ ಮಾತಾಡಿ ತಮ್ಮ ಮನಸ್ಸುಗಳನ್ನು ಹಗುರ ಮಾಡಿಕೊಂಡು ಹೋಗುತ್ತಾರೆ.

ಹಳ್ಳ ಕೊಳ್ಳ ನೀರು ನದಿ ಕೇವಲ ಸಾಹಿತಿ ಕಲಾವಿದರ ಬದುಕಿಗೆ ಷಟ್ಪದಿಯೇ ವಿನಹ ರಾಜಕಾರಣಿಗಳಿಗೆ ಹಾಗೂ ಧಾರ್ಮಿಕ ನಾಯಕರಿಗೆ ತಟ್ಟಿಯೇ ಇಲ್ಲ. ಇಂಡಿಯಾದ ಜೀವನಮಾರ್ಗ ಒಂದಲ್ಲಾ ಒಂದು ನದಿಯ ಜೊತೆ ಸಂಬಂಧ ಜೋಡಿಸಿಕೊಂಡಿದೆ. ಆದರೆ, ರಾಜಕಾರಣಿಗಳಿಗೆ ರಾಮನ ಅಯೋಧ್ಯೆ ಮುಖ್ಯವಾಗುತ್ತದೆಯೇ ವಿನಾ, ಅಲ್ಲಿನ ಸರಯೂ ನದಿ ಮುಖ್ಯವಾಗಿರುವುದಿಲ್ಲ. ನದಿಗಳ ಜಲಪಾನವನ್ನು ಮಾಡುತ್ತೇವೆ, ಪೂಜೆ ಮಾಡುತ್ತೇವೆ. ಮುಂಜಾನೆ ನೆನೆಸಿಕೊಳ್ಳುತ್ತೇವೆ. ಆದರೆ ನದಿಗಳ ಇಂದಿನ ಬದುಕನ್ನು ನೋಡಿದರೆ ಗಂಗೆಯಲ್ಲಿ ತೇಲುವ ಅರೆಬೆಂದ ಹೆಣಗಳ ನೆನಪಾಗುತ್ತದೆ. ಇಂತಹ ಎಲ್ಲಾ ನೀರು ಡಿಸೋಜರಿಗೆ ತುಂಬಾ ಕಾಡುತ್ತಿರುತ್ತದೆ. ಕರ್ನಾಟಕದ ಶರಾವತಿ ಮತ್ತು ವರದಾ ನದಿಗಳ ಸುತ್ತಮುತ್ತಲಿನ ಬದುಕೇ ಇವರ ಕಥೆಗಳಿಗೆ ಮುಖ್ಯ ವಸ್ತು. ನಿಜ ಅರ್ಥದಲ್ಲಿ ಇವರೊಬ್ಬ ‘ನದಿಯೊಂದರ ಕಥೆಗಾರ’.

ಡಿಸೋಜ ಮೂಲತಃ ಕುಟುಂಬ, ಕೇರಿ ಮತ್ತು ಊರಿನ ಮನುಷ್ಯ. ಇಲ್ಲೆಲ್ಲಾ ಅವರು ಸದಾ ಎಲ್ಲರಿಗೂ ಸಲ್ಲುತ್ತಾರೆ. ಸಾಗರದಿಂದ ಮಡಿಕೇರಿಗೆ ಮತ್ತೆ ಅಲ್ಲಿಂದ ದೆಹಲಿಗೆ ಹೋದರೂ ಈ ಮನುಷ್ಯ ಬದಲಾಗುವುದಿಲ್ಲ. ಇದು ಬದಲಾಗುವ ಮೆಟಿರಿಯಲ್ ಅಲ್ಲ. ಸರಳತೆಯೇ ಇವರ ಗಟ್ಟಿತನ. ಡಿಸೋಜರ ಬದುಕಿನಲ್ಲಿ ಇಡೀ ಸಾಹಿತ್ಯ ಕ್ಷೇತ್ರವನ್ನು ಹೊರತುಪಡಿಸಿದರೆ ಕುಟುಂಬದ ಮತ್ತೆಲ್ಲಾ ಜವಾಬ್ದಾರಿಗಳು ಅವರ ಮಡದಿ ಫಿಲೋಮಿನಾ ಡಿಸೋಜ ಅವರದು ಎಂಬುದು ಬಹು ಮುಖ್ಯ. ಸಾಧಕರಾದವರಿಗೆ ಈ ಶಕ್ತಿ ಬಹು ಮುಖ್ಯ ಅಂತ ಮತ್ತೆ ಹೇಳಬೇಕಾಗಿಲ್ಲ.

೧೯೩೬, ಆಗಸ್ಟ್ ೧೮ರಂದು ‘ನಾಡಿ’ ಅವರ ತಂದೆ ಎಸ್.ಪಿ. ಡಿಸೋಜ (ಹೆಡ್ಮಾಸ್ಟರ್, ಚಾಮರಾಜಪೇಟೆ ಪ್ರೈಮರಿ ಸ್ಕೂಲ್, ಸಾಗರ) ಅವರು ಆಗಿನ ಮಹಾರಾಜ ನಾಲ್ವಡಿ ಕೃಷ್ಣರಾಜ ಒಡೆಯರವರು ಸಾಗರಕ್ಕೆ ಬಂದಾಗ ಪ್ರಭುಗಳಿಗೆ ಬಹು ಸುಂದರವಾದ ಕೈಬರಹದ ಅಭಿನಂದನಾ ಪತ್ರವನ್ನು ಬರೆದು ಅರ್ಪಿಸಿದರು. ಆ ಅಭಿನಂದನಾ ಪತ್ರದ ಕೊನೆಯಲ್ಲಿ ಒಂದು ಮಾತಿದೆ– ಮಹಾಸ್ವಾಮಿ ಅವರನ್ನು ಇದೇ ಸಂಭ್ರಮದಿಂದ ಮತ್ತೆ ಮತ್ತೆ ಅಭಿನಂದಿಸುವ ಸುಯೋಗವು ಪ್ರಜೆಗಳಾದ ನಮ್ಮದಾಗಿರಲಿ’. ಬದಲಾದ ಹೊಸ ಕಾಲಮಾನ ಸ್ಥಿತಿಗತಿ ಸಂದರ್ಭಗಳ ಹಿನ್ನೆಲೆಯಲ್ಲಿ ಈ ನಮ್ಮ ನುಡಿಗಾರನಿಗೆ ಸಮಸ್ತ ಕನ್ನಡಿಗರ ಇದೇ ಶುಭ ಹಾರೈಕೆ ಸಲ್ಲಲಿ.

ಚಿತ್ರಗಳು: ಹ.ಸ. ಬ್ಯಾಕೋಡ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.