ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನನಗೆ ನವ್ಯ ಕನ್ನಡ ಪರಿಚಯಿಸಿದ್ದ ಯುಆರ್: ರಾಜೀವ ತಾರಾನಾಥ್‌

ಹಲವರ ಕಣ್ಣಲ್ಲಿ ಅನಂತಮೂರ್ತಿ...
Last Updated 23 ಆಗಸ್ಟ್ 2014, 8:59 IST
ಅಕ್ಷರ ಗಾತ್ರ

ಮೈಸೂರು: ‘ನನಗೆ ನವ್ಯ ಕನ್ನಡವನ್ನು ಪರಿಚಯಿಸಿದ ವ್ಯಕ್ತಿ ಯು.ಆರ್. ಅನಂತಮೂರ್ತಿ. ನಮ್ಮಿಬ್ಬರ ವಿಚಾರಧಾರೆ ಒಂದೇ ಆಗಿತ್ತು. ಆದರೆ, ಮಾತಿನ ಧಾಟಿ ಬೇರೆ’– ಅಂತರರಾಷ್ಟ್ರೀಯ ಸರೋದ್ ವಾದಕ ಪಂಡಿತ್ ರಾಜೀವ ತಾರಾನಾಥ್ ಅವರು ತಮ್ಮ ಹಾಗೂ ಅನಂತಮೂರ್ತಿಯವರ ಒಡನಾಟದ ನೆನಪುಗಳನ್ನು ಬಿಚ್ಚಿಟ್ಟರು.

‘ಒಂದೇ ದಿನ ನೌಕರಿಗೆ ಒಂದೇ ಕಾಲೇಜಿನಲ್ಲಿ ಸೇರಿದವರು ನಾವು. ನಾನು ಬೇಗನೇ ನೌಕರಿ ಬಿಟ್ಟು ಹೋದೆ. ಮತ್ತೆ ಕೆಲವು ವರ್ಷಗಳ ನಂತರ ಮರಳಿ ಬಂದಾಗ, ಮತ್ತೆ ಅನಂತಮೂರ್ತಿ ಸಿಕ್ಕಿದ್ದರು. ಆಗ ನಮ್ಮ ಸ್ನೇಹ ಮತ್ತಷ್ಟು ಬಲವಾಯಿತು. ನಾನು, ಅನಂತಮೂರ್ತಿ, ಗಿರೀಶ ಕಾರ್ನಾಡ ಎಲ್ಲ ಒಂದೇ ಆಗಿದ್ದೆವು. ನಮ್ಮಿಬ್ಬರ ನಡುವೆ ಪ್ರತಿದಿನ ಬೆಳಿಗ್ಗೆ, ಸಂಜೆ ವಿಚಾರಗಳು, ಸಾಹಿತ್ಯ, ಬರೆವಣಿಗೆಗಳ ಕುರಿತು ಚರ್ಚೆಗಳು ಆಗುತ್ತಿದ್ದವು’ ಎಂದು ಸ್ಮರಿಸಿಕೊಂಡರು.

‘ನಮ್ಮ ವಿಚಾರಧಾರೆಗಳು ಒಂದೇ ಆಗಿದ್ದವು. ನಾವಿಬ್ಬರೂ ಓದಿದ ಪುಸ್ತಕಗಳೂ ಒಂದೇ. ನಾವಿಬ್ಬರೂ ಇಂಗ್ಲಿಷ್‌ ಸಾಹಿತ್ಯದಿಂದ ಪ್ರಭಾವಿತರಾದವರು. ಆದರೆ, ಮೂರ್ತಿ ನವಿರು ಮಾತುಗಾರ, ನಾನು ನವಿರಲ್ಲ. ಅವರು ಇಂಗ್ಲಿಷ್‌ ಸಾಹಿತ್ಯವನ್ನು ಓದಿ ಅರಗಿಸಿಕೊಂಡು, ಅದರ ಸಾರ, ಶಕ್ತಿಯನ್ನು ಕನ್ನಡಕ್ಕೆ ಇಳಿಸಿದರು. ಕನ್ನಡ ಭಾಷೆಯನ್ನು ಬೆಳೆಸಿದರು’ ಎಂದು ಹೇಳಿದರು.

‘ಈ ದೇಶದಲ್ಲಿ ಅವರಿಗೆ ಸಿಗಬೇಕಾದಷ್ಟು ಗೌರವವನ್ನು ನಾವು ಕೊಡಲಿಲ್ಲ. ಯಾರೋ ಗೆದ್ದರೆ ದೇಶ ಬಿಟ್ಟು ಹೋಗುತ್ತೇನೆ ಎಂದು ಅವರು ದುಃಖದಲ್ಲಿ ಹೇಳಿದ್ದನ್ನು ಲೇವಡಿ ಮಾಡಲಾಯಿತು. ಟಿಕೆಟ್‌ ಕಳುಹಿಸಿಕೊಟ್ಟು ದೇಶ ಬಿಟ್ಟು ಹೋಗು ಎಂದು ಹೇಳುವ ಸಣ್ಣತನ ತೋರಿಸಿದರು. ಅವರಿಂದ ಸಮಾಜಕ್ಕೆ ಇನ್ನಷ್ಟು ಪಡೆಯಲು ಸಾಧ್ಯವಿತ್ತು. ಆದರೆ, ಈಗ ಅವರನ್ನು ಕಳೆದುಕೊಂಡಿದ್ದೇವೆ’ ಎಂದು ದುಃಖಿಸಿದರು.

ಕನ್ನಡ ಪರ ವ್ಯಕ್ತಿ
ಅನಂತಮೂರ್ತಿ ಅವರನ್ನು ಮೈಸೂರು ವಿಶ್ವವಿದ್ಯಾಲಯಕ್ಕೆ ನಾನು ಕರೆತಂದೆ. ಕನ್ನಡಕ್ಕಾಗಿ ಶ್ರಮಿಸಿದ ಇಂಗ್ಲಿಷ್‌ ಪ್ರಾಧ್ಯಾಪಕ ಅವರು. ಇಂಗ್ಲಿಷ್‌ ಬಿಟ್ಟು ಕನ್ನಡಕ್ಕೆ ಬಂದು ಜ್ಞಾನಪೀಠ ತಂದುಕೊಟ್ಟರು. ಕನ್ನಡದ ಗೌರವವನ್ನು ಹೆಚ್ಚಿಸಿದರು. ಎಲ್ಲ ವಿಷಯದಲ್ಲೂ ಕನ್ನಡದ ಪರವಾಗಿದ್ದರು.
– ಡಾ.ದೇ. ಜವರೇಗೌಡ, ಹಿರಿಯ ಸಾಹಿತಿ

ಶ್ರೇಷ್ಠ ಅಧ್ಯಾಪಕ– ಮಹತ್ವದ ಲೇಖಕ
ಅನಂತಮೂರ್ತಿ ಅವರು ಶಿವಮೊಗ್ಗದ ಇಂಟರ್‌ ಮಿಡಿಯೇಟ್‌ ಕಾಲೇಜಿನಲ್ಲಿ ಎರಡು ವರ್ಷ ನನಗೆ ಅಧ್ಯಾಪಕರಾಗಿದ್ದರು. ಅವರೊಬ್ಬ ಶ್ರೇಷ್ಠ ಅಧ್ಯಾಪಕ ಮತ್ತು ಮಹತ್ವದ ಲೇಖಕ. ನವ್ಯ ಸಾಹಿತ್ಯಕ್ಕೆ ಅಪಾರ ಕೊಡುಗೆ ನೀಡಿದ್ದಾರೆ. ಅಂದಮಾತ್ರಕ್ಕೆ ನವ್ಯಸಾಹಿತ್ಯಕ್ಕೆ ಮಾತ್ರ ಅವರನ್ನು ಸೀಮಿತಗೊಳಿಸಲು ಆಗುವುದಿಲ್ಲ. ಸಾಹಿತ್ಯದ ಎಲ್ಲ ಪ್ರಕಾರಗಳಲ್ಲಿ ಕೃಷಿ ಮಾಡಿದ್ದಾರೆ.
– ಡಾ.ಸಿ.ಪಿ. ಕೃಷ್ಣಕುಮಾರ್‌, ಹಿರಿಯ ಸಾಹಿತಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT