ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಬಾರ್ಡ್‌: ಕೃಷಿ ಸಾಲ ಶೇ 26ರಷ್ಟು ಏರಿಕೆ ಸಂಭವ

Last Updated 27 ಜನವರಿ 2015, 19:38 IST
ಅಕ್ಷರ ಗಾತ್ರ

ಬೆಂಗಳೂರು: ಮುಂದಿನ ಆರ್ಥಿಕ ವರ್ಷ­ದಲ್ಲಿ ರಾಜ್ಯದ ಕೃಷಿ ಕ್ಷೇತ್ರಕ್ಕೆ ಬ್ಯಾಂಕು­ಗಳು ನೀಡಲಿರುವ ಸಾಲದ ಪ್ರಮಾಣ­ದಲ್ಲಿ ಶೇ 26ರಷ್ಟು ಹೆಚ್ಚಳ­ವಾಗುವ ಸಂಭವ ಇದೆ ಎಂದು ರಾಷ್ಟ್ರೀಯ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್‌ (ನಬಾರ್ಡ್‌) ಹೇಳಿದೆ.

ಬ್ಯಾಂಕ್‌ ಸಿದ್ಧಪಡಿಸಿರುವ 2015–16ನೇ ಸಾಲಿನ ‘ರಾಜ್ಯ ಆದ್ಯತಾ ವರದಿ’ಯಲ್ಲಿ ಈ ವಿಷಯ­ ಉಲ್ಲೇಖಿಸ­ಲಾಗಿದೆ. ವಿಧಾನಸೌಧದಲ್ಲಿ ಮಂಗಳವಾರ ‘ನಬಾರ್ಡ್‌’ ಆಯೋಜಿ­ಸಿದ್ದ ‘ರಾಜ್ಯ ಸಾಲ’ ಕುರಿತ ವಿಚಾರ ಸಂಕಿರಣದಲ್ಲಿ ತೋಟಗಾರಿಕಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ರಾಜೀವ್‌ ಚಾವ್ಲಾ  ಅವರು ವರದಿ ಬಿಡುಗಡೆ ಮಾಡಿದರು.

ಮುಂದಿನ ವರ್ಷ ಕೃಷಿ ಹಾಗೂ ಅದಕ್ಕೆ ಸಂಬಂಧಿಸಿದ ಇತರ ಉದ್ದೇಶ­ಗಳಿಗಾಗಿ ಸಾಲ ನೀಡಲು ₨1.08 ಲಕ್ಷ ಕೋಟಿ  ಬೇಕಾಗ­ಬಹುದು. ಕಳೆದ ವರ್ಷದ ಅಂದಾಜಿಗೆ ಹೋಲಿಸಿ­ದರೆ ಈ ವರ್ಷದ ಅಂದಾಜಿನಲ್ಲಿ ಶೇ 26ರಷ್ಟು ಹೆಚ್ಚಳವಾಗಿದೆ ಎಂದು ವರದಿ ಹೇಳಿದೆ.
ಈ ಮೊತ್ತದ ಪೈಕಿ, ಶೇ 64.58­­ರಷ್ಟು ಹಣ ಕೃಷಿ ಹಾಗೂ ಅದಕ್ಕೆ ಸಂಬಂಧಿಸಿದ ಉದ್ದೇಶಗಳಿಗೆ ಸಾಲ ನೀಡಲು ಬೇಕಾಗ­ಬಹುದು. ಶೇ 12.29ರಷ್ಟು  ಮೊತ್ತ ಕೃಷಿಗೆ ಸಂಬಂಧಿಸಿದ ಮಧ್ಯಮ ಗಾತ್ರದ ಉದ್ದಿಮೆಗಳಿಗೆ (ಎಂಎಸ್‌ಇ) ಮತ್ತು ಶೇ 23.13 ರಷ್ಟು ಹಣ ಇತರ ಆದ್ಯತಾ ವಲಯಗಳಿಗೆ ಅಗತ್ಯ­ವಿದೆ ಎಂದು ಊಹಿಸಲಾಗಿದೆ.

ಹತ್ತು ವರ್ಷಗಳ ಅವಧಿಯಲ್ಲಿ ದೇಶದ ಒಟ್ಟು ಆಂತರಿಕ ಉತ್ಪನ್ನಕ್ಕೆ (ಜಿಡಿಪಿ) ಕೃಷಿ ಕ್ಷೇತ್ರದ ಕೊಡುಗೆಯಲ್ಲಿ ಇಳಿಮುಖವಾಗಿದೆ. 2004–05 ರಲ್ಲಿ ಕೃಷಿ ಕ್ಷೇತ್ರವು ಜಿಡಿಪಿಗೆ ಶೇ 18.70ರಷ್ಟು ಕೊಡುಗೆ ನೀಡಿದ್ದರೆ, 2013–14ರಲ್ಲಿ ಈ ಪ್ರಮಾಣ ಶೇ 13.2ಕ್ಕೆ ಕುಸಿದಿದೆ. ಆದರೂ, ರಾಜ್ಯದ ಅರ್ಧದಷ್ಟು ಜನ ಜೀವನ ನಿರ್ವಹಣೆಗಾಗಿ ಕೃಷಿಯನ್ನೇ ನಂಬಿದ್ದಾರೆ ಎಂದು ವರದಿ ಹೇಳಿದೆ.

ಇದಕ್ಕೂ ಮುನ್ನ ವರದಿ ಕುರಿತಂತೆ ಪ್ರಾಸ್ತಾವಿಕ­ವಾಗಿ ಮಾತ­ನಾಡಿದ ‘ನಬಾರ್ಡ್‌’ನ ಮುಖ್ಯ ಜನ­ರಲ್‌ ಮ್ಯಾನೇಜರ್‌ ಜಿ.ಆರ್‌. ಚಿಂತಾಲ, ‘ದಕ್ಷಿಣ ಭಾರತದ ರಾಜ್ಯಗಳ ಪೈಕಿ ಕರ್ನಾಟಕದ ಗ್ರಾಮೀಣ ಭಾಗಗಳಲ್ಲಿ ವಿವಿಧ ಬ್ಯಾಂಕುಗಳ ಶಾಖೆಗಳು ಹೆಚ್ಚಿನ ಸಂಖ್ಯೆಯಲ್ಲಿವೆ. ಆದರೆ, ಅದಕ್ಕೆ ತಕ್ಕಂತೆ ಕೃಷಿ ಸಾಲ­ಗ­ಳನ್ನು ನೀಡಲಾಗುತ್ತಿಲ್ಲ. ನೆರೆಯ ರಾಜ್ಯಕ್ಕೆ ಹೋಲಿಸಿ­ದರೆ ಕರ್ನಾಟಕದಲ್ಲಿ ಸಾಲ ನೀಡಿಕೆ ಪ್ರಮಾಣ
ಶೇ 40ರಷ್ಟು ಮಾತ್ರ ಇದೆ’ ಎಂದರು.

‘ರಾಜ್ಯದಲ್ಲಿ ಸಾಲ ಮತ್ತು ಠೇವಣಿ ಅನುಪಾತವೂ ಕಡಿಮೆ ಇದೆ. 2014ರ ಮಾರ್ಚ್‌ ಅಂತ್ಯದ ವೇಳೆಗೆ ಈ ಅನುಪಾತ ಶೇ 75.24 ಮತ್ತು ಶೇ 74.15ರಷ್ಟಿತ್ತು. ದೀರ್ಘಾವಧಿ, ಅಲ್ಪಾವಧಿಗಳ ಸಾಲ ನೀಡಿಕೆ ಪ್ರಮಾಣ ಉತ್ತಮವಾಗಿದ್ದರೂ, ನಿರೀಕ್ಷೆಯ ಮಟ್ಟದಲ್ಲಿಲ್ಲ’ ಎಂದು ವಿವರಿಸಿದರು.

ಭಾರತೀಯ ರಿಸರ್ವ್‌ ಬ್ಯಾಂಕ್‌ನ ಪ್ರಧಾನ ವ್ಯವಸ್ಥಾಪಕ ವಿವೇಕ್‌ ದೀಪ್‌, ಕಾರ್ಪೊರೇಷನ್‌ ಬ್ಯಾಂಕ್‌ನ ಕಾರ್ಯಕಾರಿ ನಿರ್ದೇಶಕ ಬಿ.ಕೆ. ಶ್ರೀವಾತ್ಸವ, ಕೆನರಾ ಬ್ಯಾಂಕ್‌ನ ಕಾರ್ಯಕಾರಿ ನಿರ್ದೇಶಕ ಪಿ.ಎಸ್‌. ರಾವತ್‌,  ಸ್ಟೇಟ್‌ ಬ್ಯಾಂಕ್‌ ಆಫ್‌ ಮೈಸೂರಿನ ಮುಖ್ಯ ಪ್ರಧಾನ ವ್ಯವಸ್ಥಾಪಕ ಸಜೀವ್‌ ಕೃಷ್ಣನ್‌ ಇದ್ದರು.

‘ಸಾಲ ನೀಡುವ ಪ್ರಕ್ರಿಯೆ ಸರಳಗೊಳಿಸಿ’
ತೋಟಗಾರಿಕೆ ಇಲಾಖೆ ಪ್ರಧಾನ ಕಾರ್ಯದರ್ಶಿ ರಾಜೀವ್‌ ಚಾವ್ಲಾ ಮಾತನಾಡಿ, ‘ರಾಜ್ಯದಲ್ಲಿ ಕೃಷಿ ಸಾಲ ನೀಡಿಕೆ ಪ್ರಮಾಣ ಕಡಿಮೆಯಾಗಲು ಸಾಲ ನೀಡುವ ವ್ಯವಸ್ಥೆಯಲ್ಲಿನ ಸಂಕೀರ್ಣತೆ ಕಾರಣವಾಗಿರಬಹುದು. ಇಂತಹ ವ್ಯವಸ್ಥೆಯಿಂದ ಸಾಲ ನೀಡುವಲ್ಲಿ ವಿಳಂಬವಾಗುತ್ತದೆ. ಬ್ಯಾಂಕು­ಗಳು ಈ ವ್ಯವಸ್ಥೆಯನ್ನು ಸರಳ­ಗೊಳಿಸ­ಬೇಕು’ ಎಂದು ಸಲಹೆ ನೀಡಿದರು. ‘ತೋಟಗಾರಿಕಾ ಇಲಾಖೆಯಲ್ಲಿ ರೈತರ ಬಗ್ಗೆ ಅಧಿಕೃತವಾದ ಮಾಹಿತಿ­ಗಳಿಲ್ಲ.  ಹಾಗಾಗಿ  ಇಲಾಖೆಯ ಅಡಿ­ಯಲ್ಲಿ ಬರುವ ರೈತರ ಸಮೀಕ್ಷೆಯನ್ನು ನಡೆಸುತ್ತಿದೆ’ ಎಂದರು.

ನೀರಾ ಸಂಸ್ಕರಣೆಗೆ ನೆರವು ಅಗತ್ಯ: ತೆಂಗಿನಿಂದ ತೆಗೆಯುವ ‘ನೀರಾ’ ಅತ್ಯುತ್ತಮ ಪಾನೀಯ. ಆದರೆ, ಅದು ಕೆಡದಂತೆ ಸಂಸ್ಕರಿಸುವ ತಂತ್ರಜ್ಞಾನ ಹಾಗೂ ಅದಕ್ಕೆ ಪೂರಕವಾದ ಯಂತ್ರಗಳು ರಾಜ್ಯದಲ್ಲಿಲ್ಲ.  ‘ನೀರಾ’ ತೆಗೆಯುವ ಕಾರ್ಯದಲ್ಲಿ ನಿರತ­ರಾಗಿರುವವರಿಗೆ ಅಗತ್ಯ ಸಾಲ ನೀಡಲು ಬ್ಯಾಂಕುಗಳು ಮುಂದೆ ಬರಬೇಕು  ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT