ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಮ್ಮ ಕಾಯಕೆ ಹೋಲಿಕೆ ಏಕೆ?

Last Updated 19 ಡಿಸೆಂಬರ್ 2014, 19:30 IST
ಅಕ್ಷರ ಗಾತ್ರ

ನಮ್ಮ ರಾಜಕಾರಣಿಗಳಿಗೆ ಅದೇಕೋ ರಸ್ತೆಗಳನ್ನು ಪ್ರಸಿದ್ಧ ನಟಿಯರ ಗಲ್ಲಗಳಿಗೆ, ಕೆನ್ನೆಗಳಿಗೆ ಹೋಲಿಸುವುದು ಎಂದರೆ ಇನ್ನಿಲ್ಲದ ಹುರುಪು, ಆಸಕ್ತಿ. ಆರ್‌ಜೆಡಿ ಪಕ್ಷದ ವರಿಷ್ಠ ಲಾಲು ಪ್ರಸಾದ್‌ ಯಾದವ್ 2005ರಲ್ಲಿ ಬಿಹಾರದ ರಸ್ತೆಗಳನ್ನು ಹೇಮಾಮಾಲಿನಿಯ ಕೆನ್ನೆಗಳಷ್ಟು ನುಣುಪಾಗಿ ಮಾಡುವುದಾಗಿ ಭರವಸೆ ನೀಡಿದ್ದರು. ಇದು ಮಾಧ್ಯಮಗಳಲ್ಲಿ ಬಹಳಷ್ಟು ಸುದ್ದಿ ಮಾಡಿ, ಹೇಮಾಮಾಲಿನಿ ಈ ಬಗ್ಗೆ ಸುಮ್ಮನುಳಿದು, ಅಂತೂ ತಣ್ಣಗಾಗಿತ್ತು. ಹಾಗೆ ಹೇಮಾಮಾಲಿನಿ ಗುಲಾಬಿ ಕೆನ್ನೆಗಳನ್ನು ರಸ್ತೆಗೆ ಹೋಲಿಸಿದವರಲ್ಲಿ ಲಾಲು ಮೊದಲನೆಯವರೂ ಅಲ್ಲ, ಕೊನೆಯವರೂ ಅಲ್ಲ.

ತಮ್ಮ ಮೇಲೆ ವೃಥಾ ಆರೋಪ ಹೊರೆಸಲಾಗಿದೆಯೆಂದೂ, ಹೇಮಾಳ ಕೆನ್ನೆಗಳನ್ನು ಹೀಗೆ ಮಾತಿನಲ್ಲಿಯೇ ನೇವರಿಸಿದ್ದು ಮೊದಲು ತಾವಲ್ಲವೆಂದೂ, ಅವಿವಾಹಿತರಾಗಿಯೇ ಉಳಿದ ವಾಜಪೇಯಿವರೆಂದೂ ಲಾಲೂ ಅಲವತ್ತು ಕೊಂಡಿದ್ದರು. ಅದೇನೆ ಇರಲಿ, ನಾಲ್ಕು ವರ್ಷದ ಹಿಂದೆ ಮಧ್ಯ ಪ್ರದೇಶದ ರಾಜ್ಯಸರ್ಕಾರವು ರಸ್ತೆ ಅಭಿವೃದ್ಧಿಗೆ ಕೇಂದ್ರದ ಯುಪಿಎ ನೀಡಿದ ಅನುದಾನದ ಹಣವನ್ನು ಸದುಪಯೋಗಪಡಿಸಿಕೊಂಡಿಲ್ಲ ಎಂದು ಆರೋಪಿಸುತ್ತ ಮಧ್ಯಪ್ರದೇಶದ ಕಾಂಗ್ರೆಸ್‌ ಅಧ್ಯಕ್ಷ ಭುರಿಯಾ ‘ಹಣವನ್ನು ಸರಿಯಾಗಿ ಬಳಸಿಕೊಂಡಿದ್ದರೆ ರಾಜ್ಯದ ರಸ್ತೆಗಳನ್ನು ಹೇಮಾಮಾಲಿನಿ ಕೆನ್ನೆಗಳಷ್ಟು ನುಣುಪಾಗಿ ಮಾಡಬಹುದಿತ್ತು’ ಎಂದಿದ್ದರು.

ಕಳೆದ ವರ್ಷ ಛತ್ತೀಸ್‌ಗಢದ ಲೋಕೋಪಯೋಗಿ ಇಲಾಖೆಯ ಮಂತ್ರಿ ಅಗರವಾಲ್‌ ಕೂಡ ತಮ್ಮ ರಾಜ್ಯದ ರಸ್ತೆಗಳನ್ನು ಹೇಮಾಮಾಲಿನಿಯ ಕೆನ್ನೆಗಳಷ್ಟು ನಯವಾಗಿವೆ ಎಂದು ಜಾಹೀರಾತುಗಳಲ್ಲಿ ಪ್ರಕಟಿಸಿದ್ದರು. ಹೀಗೆ ರಸ್ತೆಗಳನ್ನು ಹೇಮಾಮಾಲಿನಿ ಮತ್ತು ಮಾಧುರಿ ದೀಕ್ಷಿತ್‌ರ ಕೆನ್ನೆಗಳಿಗೆ ಹೋಲಿಸಿ, 2013ರಲ್ಲಿ ಮಂತ್ರಿಪಟ್ಟ ಕಳೆದುಕೊಂಡವರು ಎಂದರೆ ಉತ್ತರ ಪ್ರದೇಶದ ರಾಜಾರಾಮ್ ಪಾಂಡೆ.

ಈಗ ಹೇಮಾಮಾಲಿನಿಗೆ ವಯಸ್ಸಾಯಿತು, ಹೀಗಾಗಿ ರಾಜಕಾರಣಿಗಳು ಯುವ ನಟಿಯರತ್ತ ಕಣ್ಣು ಹಾಯಿಸುವುದು ಸಹಜ.
ಇತ್ತೀಚೆಗೆ ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೆನ್‌ ಅವರ ತಮ್ಮ ಬಸಂತ್‌ ತಮ್ಮಣ್ಣನ ರಾಜ್ಯಭಾರದಲ್ಲಿ ರಸ್ತೆಗಳ ಅಭಿವೃದ್ದಿ ಕುರಿತು ಹೇಳುತ್ತ, ‘ಪ್ರಸ್ತುತ ಜಾರ್ಖಂಡ್‌ನ ರಸ್ತೆಗಳು  ಕತ್ರಿನಾ ಕೈಫ್‌ ಅವರ ಗಲ್ಲದಂತೆ ಇವೆ’ ಎಂದಿದ್ದು ಮಾಧ್ಯಮಗಳಲ್ಲಿ ಸುದ್ದಿಯಾಯಿತು.

ಇದು ಮೇಲ್ನೋಟಕ್ಕೆ ನಟಿಯರ ನುಣುಪಾದಗಲ್ಲ, ಕೆನ್ನೆಗಳನ್ನು ಹೊಂಡಗುಂಡಿಗಳಿಲ್ಲದ, ಸಪಾಟಾದ ರಸ್ತೆಗೆ ಹೋಲಿಸಿದಂತೆ ಅನ್ನಿಸಬಹುದು, ಅಷ್ಟು ನುಣುಪಾದ ಗಲ್ಲ, ಕೆನ್ನೆಗಳ ಒಡತಿ ತಾವೆಂದು ನಟಿಯರು ಹೆಮ್ಮೆ  ಪಡಲೂಬಹುದು. ಆದರೆ ಈ ಹೋಲಿಕೆ ಮೇಲ್ನೋಟಕ್ಕೆ ಕಾಣುವಷ್ಟು ಸರಳವಿಲ್ಲ. ಹೀಗೆ ಹೋಲಿಸಿದ ಎಲ್ಲರ ಮನೆಗಳಲ್ಲಿ ಹೆಣ್ಣುಮಕ್ಕಳಿದ್ದಾರೆ, ಆ ಹೆಣ್ಣುಮಕ್ಕಳ ಗಲ್ಲವೂ ನಟಿಯರ ಗಲ್ಲದಷ್ಟು ಅಲ್ಲದಿದ್ದರೂ, ರಸ್ತೆಗೆ ಹೋಲಿಸಿದರೆ ನುಣುಪಾಗಿಯೇ ಇರುತ್ತದೆ.

ಆದರೆ ಇವರು ಯಾರೂ ತಮ್ಮ ಮನೆಯ ಹೆಣ್ಣುಮಕ್ಕಳ ಗಲ್ಲವನ್ನು ಹೀಗೆ ಹೋಲಿಸುವುದಿಲ್ಲ, ಅಷ್ಟೇಕೆ ಬೇರೆಯವರು ಹೋಲಿಸಿದರೆ ಸುಮ್ಮನೆ ಬಿಟ್ಟಾರೆಯೇ? ಹಾಗಿದ್ದರೆ ನಟಿ ಎಂದಾಕ್ಷಣ ಅವಳ ಗಲ್ಲ, ಕೆನ್ನೆ, ಇತ್ಯಾದಿ ಭಾಗಗಳನ್ನು ತಮಗಿಚ್ಛೆ ಬಂದಂತೆ ಯಾವುದಕ್ಕೋ ಹೋಲಿಸುವ ಈ ಧೈರ್ಯವೇಕೆ? ನಟಿ ಎಂದಾಕ್ಷಣ, ಬೆಳ್ಳಿತೆರೆಯ ಮೇಲೆ ನಟಿಸುತ್ತಾರೆ ಎಂದಾಕ್ಷಣ, ಅವರ ಕೆನ್ನೆ, ಗಲ್ಲಗಳು ಹೀಗೆ ಯಾರೇ ಆದರೂ ಮಾತಿನಲ್ಲಿಯೇ ‘ಮುಟ್ಟಿಬಿಡಬಹುದಾದ’, ‘ಸವರಿ ಬಿಡಬಹುದಾದ’ ದೇಹದ ಭಾಗ ಎಂದು ಈ ರಾಜಕಾರಣಿಗಳು ಭಾವಿಸಿದ್ದಾರೆಯೇ?  ಹೇಮಾಮಾಲಿನಿಯ ಅಥವಾ ಕತ್ರಿನಾಳ ಅಥವಾ ಇನ್ನಾವುದೋ ನಟಿಯ ಕೆನ್ನೆ ಸವರಬೇಕೆಂಬ ಆಳದ ‘ಗೀಳನ್ನು’ ಮಾತಿನ ಮೂಲಕ ತೀರಿಸಿಕೊಳ್ಳುತ್ತಾರೆಯೇ? ಸೂಕ್ಷ್ಮಜ್ಞರೆನ್ನಿಸಿಕೊಂಡವರಿಗೆ ಈ ಎಲ್ಲ ಪ್ರಶ್ನೆಗಳು ಮೇಲ್ನೋಟದ ‘ಹೋಲಿಕೆ’ಯೊಳಗೆ ಹುದುಗಿರುವಂತೆ ಅನ್ನಿಸುತ್ತದೆ. ಮತ್ತೆ ಇವರು ಕೆನ್ನೆ, ಗಲ್ಲವನ್ನು ಹೋಲಿಸುವುದಾದರೂ ಯಾವುದಕ್ಕೆ... ಎಲ್ಲರೂ ಓಡಾಡುವ ರಸ್ತೆಗೆ, ಅಂದರೆ ನಟಿಯರ ಕೆನ್ನೆ, ಗಲ್ಲಗಳು ಅಷ್ಟರಮಟ್ಟಿಗೆ ಸಾರ್ವಜನಿಕ, ಅದು ಆ ನಟಿಗೆ ಸಂಬಂಧಿಸಿದ ‘ಖಾಸಗಿ’ ಸಂಗತಿಯಲ್ಲ, ಬದಲಿಗೆ ಯಾರೇ ಆದರೂ (ಮಾತಿನಲ್ಲಿಯೇ ಇರಬಹುದು) ‘ಮುಟ್ಟಬಹುದಾದ’, ಸಲೀಸಾಗಿ ಹೋಲಿಕೆಗಳಿಗೆ ಬಳಸಬಹುದಾದ ಒಂದು ದೇಹ ಭಾಗ.

ರಾಜಕಾರಣಿಗಳೇನೋ ಜನರನ್ನು ಓಲೈಸಲು, ಮತಗಳಿಸಲು ರಂಜನೀಯವಾಗಿ ಮಾತನಾಡುವ, ಮನಬಂದಂತೆ ಹರಿಯಬಿಡುವ ಮನಸುಖರಾಯರು, ಸೂಕ್ಷ್ಮತೆಯಿಲ್ಲದವರು ಎಂದು ತುಸುಮಟ್ಟಿಗೆ ತಳ್ಳಿ ಹಾಕಿಬಿಡಬಹುದು. ಆದರೆ ಸಂವೇದನಾಶೀಲರೆಂದು, ಸೂಕ್ಷ್ಮಜ್ಞರೆಂದು ತಮ್ಮನ್ನು ತಾವು ಬಿಂಬಿಸಿಕೊಳ್ಳುವ ಸಾಹಿತಿಗಳು ಕೂಡ ಹೆಣ್ಣಿನ ದೇಹವೆಂದರೆ ತಾವು ಹೇಗೆ ಬೇಕಾದರೂ ವ್ಯಾಖ್ಯಾನಿಸಬಹುದಾದ ಸಂಗತಿ ಎಂಬಂತೆ ಬರೆಯುವುದನ್ನು ಓದಿದಾಗ ಖೇದವೆನ್ನಿಸುತ್ತದೆ. ಇತ್ತೀಚೆಗೆ ಬರಹಗಾರರೊಬ್ಬರು ಭೂಮಿ ಚಪ್ಪಟೆಯಾಗಿದೆ ಎಂಬ ತಮ್ಮ ಬಾಲ್ಯದ ನಂಬಿಕೆಯ ಕುರಿತು ಹೇಳುತ್ತ, ‘ಚಪ್ಪಟೆಯಾಗಿದ್ದಿ ಎಂದರೆ ಸಿನಿಮಾತಾರೆಯಂತೆ ನಮ್ಮ ಭೂತಾಯಿ ಏನೂ ಬೇಸರ ಪಟ್ಟುಕೊಳ್ಳುವುದಿಲ್ಲ!’ ಎಂದು ಬರೆದಿದ್ದರು.

ಹೌದು, ಸಿನಿಮಾತಾರೆಗೆ ಬೇಸರವಾಗುವುದು ಸಹಜವೇ. ಏಕೆಂದರೆ ಸಿನಿಮಾತಾರೆ ಎಂದರೆ ಸ್ತನಗಳ ಅಳತೆ ಇಷ್ಟಿರಬೇಕು, ಸೊಂಟದ ಸುತ್ತಳತೆ ಇಷ್ಟಿರಬೇಕು ಎಂಬ ಅಲಿಖಿತ ನಿಯಮವೊಂದು ಬಹುಶಃ ಸಿನಿಮಾಗಳ ಹುಟ್ಟಿನೊಂದಿಗೇ ರೂಪುಗೊಂಡು, ನಟಿಯರ ಮತ್ತು ಪ್ರೇಕ್ಷಕರ ‘ಜೀನ್’ಗಳಲ್ಲಿಯೇ ಸೇರಿಹೋಗಿದೆ. ಆ ಅಳತೆಗಳಿಗೆ ಅನುರೂಪವಾಗಿದೇ, ಬರೀ ಅಭಿನಯ ಮಾತ್ರದಿಂದ ನಟಿಯರು ನಿಜದ ಅರ್ಥದಲ್ಲಿ ನಟಿಯಾಗುವುದು ಸಾಧ್ಯವೇ ಇಲ್ಲದ ಸ್ಥಿತಿ ನಮ್ಮಲ್ಲಿ ಇದೆಯಲ್ಲ, ಅದಕ್ಕೇನು ಮಾಡುವುದು? ನೋಡಿ, ನಮ್ಮ ಬರಹಗಾರರಿಗೆ ಭೂಮಿಚಪ್ಪಟೆ ಎಂಬ ಹೋಲಿಕೆಗೆ ಸಿಗುವುದೂ ‘ಚಪ್ಪಟೆಯಾಗಿರುವ’ ಮಹಿಳೆಯರೇ.

ನಟಿ ಮಾತ್ರವಲ್ಲ, ಯಾವ ಮಹಿಳೆಗಾದರೂ ಚಪ್ಪಟೆಯಾಗಿದ್ದಿ ಎಂದರೆ ಬೇಸರವಾಗುವುದು ಸಹಜವೇ. ಏಕೆಂದರೆ ‘ಚಪ್ಪಟೆ’ಯಾಗಿರುವುದಾಗಲೀ ಅಥವಾ ಸಿನಿಮಾಗಳಲ್ಲಿ, ಇನ್ನಿತರ ಸಾಹಿತ್ಯಗಳಲ್ಲಿ ವರ್ಣಿಸುವಂತೆ ರಸಪೂರಿ ಮಾವಿನ ಹಣ್ಣೋ ಅಥವಾ ಇನ್ನೇನೋ ಆಗಿರುವುದು ಅವರ ಆಯ್ಕೆಯಲ್ಲ, ಅದೊಂದು ಜೈವಿಕ ಸಂಗತಿ. ಒಂದು ನಿರ್ದಿಷ್ಟ ಲೈಂಗಿಕ ಮತ್ತು ಸಂತಾನೋತ್ಪತ್ತಿ ಉದ್ದೇಶದಿಂದ ರೂಪುಗೊಂಡಿರುವ ಸ್ತನಗಳ ಆಕಾರವೇ ಮುಖ್ಯವಾಗಿ, ಮಹಿಳೆಯೊಬ್ಬಳ ಇಡೀ ವ್ಯಕ್ತಿತ್ವವೇ ನಗಣ್ಯವೆಂಬಂತೆ ಸೂಕ್ಷ್ಮಜ್ಞರಾದ ಸಾಹಿತಿಗಳೂ ಆಲೋಚಿಸುತ್ತಾರೆ ಎಂದರೆ ಅವರ ಸಂವೇದನಾಶೀಲತೆಯ ಬಗ್ಗೆ ಇನ್ನೇನು ಹೇಳೋಣ?

ಹೆಣ್ಣು ಎಂದರೆ ತಾವು ಎಲ್ಲ ಬಗೆಯಲ್ಲಿ ವ್ಯಾಖ್ಯಾನಿಸಬಹುದಾದ ಒಂದು ಪ್ರಾಣಿ, ಹೆಣ್ಣಿನ ದೇಹವೆಂದರೆ ಇಂತಿಂಥ ಸೌಂದರ್ಯ ಮಾಪಕಗಳಿಗೆ ಅನುಗುಣವಾಗಿರುವ, ಯಾವುದಕ್ಕಾದರೂ ಹೋಲಿಸಬಲ್ಲ ಅಂಗಾಂಗಗಳು ಎನ್ನುವುದು ಈಗ ಮಾತ್ರವಲ್ಲ, ಪ್ರಾಯಃ ಪುರುಷ ವರ್ಗ ಕಲೆ, ಸಾಹಿತ್ಯ ಇನ್ನಿತರ ರೀತಿಯ ಅಭಿವ್ಯಕ್ತಿ ಮಾಧ್ಯಮವನ್ನು ಕಂಡುಕೊಂಡಾಗಿನಿಂದಲೂ ಅಭಿವ್ಯಕ್ತಿಸಿಕೊಂಡೇ ಬಂದಿದೆ. ಹೀಗೆಲ್ಲ ಹೋಲಿಸುವ ರಾಜಕಾರಣಿಗಳ ಅಥವಾ ಲೇಖಕರ ಬಕ್ಕತಲೆಯನ್ನು ಖಾಲಿ ಮೈದಾನಕ್ಕೋ, ಬರಡು ಭೂಮಿಗೋ ಹೋಲಿಸಿ, ಹಾಗೆಂದು ಹೇಳಿದರೆ ಅವರಿಗೆ ಬೇಸರವಾಗುವುದಿಲ್ಲವೇ? ಅವರ ದೇಹದ ಇನ್ನಾವುದೋ ಅಂಗಗಳನ್ನು ದೊಡ್ಡದೆಂದು ಅಥವಾ ಚಿಕ್ಕದೆಂದು ಯಾವುದೋ ವಸ್ತುಗಳಿಗೆ ಹೋಲಿಸಿದರೆ ಅವರಿಗೆ ನೋವಾಗುವುದಿಲ್ಲವೇ?

ಯಾರದೇ ದೈಹಿಕ ಆಕಾರ, ಅಂಗಾಂಗಗಳ ಅಳತೆಗಳು ವಂಶವಾಹಿಗಳು, ಬೆಳೆಯುವ ಪರಿಸರ, ಆಹಾರಕ್ರಮ ಇತ್ಯಾದಿ ಹಲವು ಅಂಶಗಳನ್ನು ಅವಲಂಬಿಸಿವೆ. ಹೆಚ್ಚಿನ ವೇಳೆ ಮಗು (ಹುಡುಗ ಅಥವಾ ಹುಡುಗಿ) ಬೆಳೆಯುತ್ತ, ವಯಸ್ಕ ವ್ಯಕ್ತಿಯಾಗಿ ರೂಪುಗೊಳ್ಳುವ ಹಂತದಲ್ಲಿ ದೊರೆಯುವ ಆಹಾರ ಮತ್ತು ಪರಿಸರವನ್ನು ಕೂಡ ಇದು ಅವಲಂಬಿಸಿದೆ. ಈ ಅಂಶಗಳ ಮೇಲೆ ಮಗುವಿನ ನಿಯಂತ್ರಣ ತೀರಾ ಕಡಿಮೆ ಇರುತ್ತದೆ, ಹೀಗಾಗಿ ವಯಸ್ಕ ವ್ಯಕ್ತಿ (ಪುರುಷ ಇರಲಿ ಅಥವಾ ಮಹಿಳೆ ಇರಲಿ)  ಸೌಂದರ್ಯ ಮಾಪಕಗಳಿಗೆ ಅನುಗುಣವಾದ ಶರೀರ ಹೊಂದಿದ್ದರೆ ಅದರಲ್ಲಿ ಆ ವ್ಯಕ್ತಿಯ ಹೆಚ್ಚುಗಾರಿಕೆಯೇನೂ ಇರುವುದಿಲ್ಲ ಅಥವಾ ಸೌಂದರ್ಯ ಮಾಪಕಗಳಿಗೆ ಅನುಗುಣವಾದ ದೇಹವಿರಲಿಲ್ಲ ಎಂದಾದರೆ ಅದರಲ್ಲಿ ಅವರ ತಪ್ಪೇನೂ ಇಲ್ಲ. ಹೀಗಿರುವಾಗ ಚಪ್ಪಟೆಯಾಗಿರುವುದರಲ್ಲಿ ಅವರ ತಪ್ಪೇನೂ ಇಲ್ಲದ, ಅವರ ಆಯ್ಕೆಯನ್ನು ಮೀರಿದ ಸಂಗತಿಗೆ ‘ಚಪ್ಪಟೆಯಾಗಿದ್ದಿ’ ಎಂದು ಹೀಯಾಳಿಸುವುದು ಅಮಾನವೀಯವೆನ್ನಿಸುವುದಿಲ್ಲವೇ? ಬಕ್ಕತಲೆ ಗಂಡಸರಿಗೆ ಖಾಲಿಮೈದಾನ ಎಂದು ಹೀಯಾಳಿಸಿದರೆ ಅದರಲ್ಲಿ ಅವರ ತಪ್ಪೇನೂ ಇಲ್ಲದ್ದರಿಂದ, ಅವರಿಗೆ ನೋವಾಗುವುದಿಲ್ಲವೇ?

ಹೆಣ್ಣು ಎಂದರೆ ತಾವು ಕಂಡಂತೆ, ತಮ್ಮ ಅನುಭವಕ್ಕೆ ದಕ್ಕಿದಂತೆ ವ್ಯಾಖ್ಯಾನಿಸಬಹುದಾದ ಸಂಗತಿ, ಹೆಣ್ಣಿನ ದೇಹವೆಂದರೆ ಇಂತಿಂಥ ಅಂಗ ಇಷ್ಟಿಷ್ಟು ‘ಅಳತೆ’ಯಲ್ಲಿರಬೇಕು ಎಂದು ಪುರುಷವರ್ಗ ಎಂದಿನಿಂದಲೋ ನಿರ್ಧರಿಸಿ, ಅದೇ ನಿರ್ಧಾರವನ್ನು ಮಹಿಳೆಯರ ಮೇಲೆ ಹೇರಿ, ಹೇರಿ, ಅದು ಅವರ ವಂಶವಾಹಿಯಲ್ಲಿಯೇ ಸೇರಿಹೋಗುವಂತೆ ಮಾಡಿದ್ದರಿಂದ ಇನ್ನಾದರೂ ಹೊರಬರಬೇಕಿದೆ. ವ್ಯಕ್ತಿತ್ವ ಎನ್ನುವುದು ಈ ಎಲ್ಲ ಅಳತೆಗಳನ್ನು ಮೀರಿದ್ದು ಮತ್ತು ಅದು ಹೆಣ್ಣು, ಗಂಡು ಇಬ್ಬರಿಗೂ ಸಮಾನ ಎನ್ನುವ ಆಲೋಚನೆಗೆ ತೆರೆದುಕೊಳ್ಳಬೇಕಿದೆ. ‘ನಮ್ಮ ದೇಹ ನಮ್ಮದು, ಅದನ್ನು ನೀವು ಮನಸೋಇಚ್ಛೆ, ನಿಮ್ಮ ಕಣ್ಣಂಚಿಗೆ ದಕ್ಕಿದಂತೆ ವ್ಯಾಖ್ಯಾನಿಸುವುದು, ಹೋಲಿಸುವುದು ಬೇಡ, ಆ ಹಕ್ಕು ನಿಮಗೆ ಇಲ್ಲ.’ ಇದೀಗ ಎಲ್ಲ ಮಹಿಳೆಯರ ಧ್ವನಿಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT