ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಮ್ಮ ಪಾಪಪ್ರಜ್ಞೆ ಮತ್ತು ಗಾಂಧೀಜಿ

ಗಾಂಧಿ ಪ್ರತಿಪಾದಿಸಿದ ಮಾನವೀಯ ಮೌಲ್ಯಗಳನ್ನು ಕೊಂಚ ಮಟ್ಟಿಗಾದರೂ ರೂಢಿಸಿಕೊಳ್ಳೋಣ...
Last Updated 30 ಸೆಪ್ಟೆಂಬರ್ 2015, 19:30 IST
ಅಕ್ಷರ ಗಾತ್ರ

ಬ್ರಿಟಿಷರ ಸಂಕೋಲೆಗಳಿಂದ ಮುಕ್ತಗೊಳಿಸಿ, ಅಹಿಂಸಾ ತತ್ವದ ಮೂಲಕ ಹಿಮಾಲಯದ ಎತ್ತರಕ್ಕೇರಿದ ಮಹಾತ್ಮ ಗಾಂಧಿ ಸಂಸತ್‌್ ಸದಸ್ಯರಾಗಿರಲಿಲ್ಲ. ಆದರೆ ಅನೇಕ ಸಂಸತ್‌ ಸದಸ್ಯರ ಸೃಷ್ಟಿಗೆ ಕಾರಣರಾಗಿದ್ದ ಅಪರೂಪದ ವ್ಯಕ್ತಿಯಾಗಿದ್ದರು. ಪ್ರಪಂಚಕ್ಕೇ ನೀತಿ ಪಾಠ ಹೇಳಿಕೊಟ್ಟ ಮಹಾತ್ಮನ ದೇಶದಲ್ಲಿ ಅಂದಿನಿಂದ ಇಂದಿನವರೆಗೂ ಅವರ ನೈತಿಕ ಮೌಲ್ಯಗಳನ್ನು ಅಲಕ್ಷಿಸಿ ಪಕ್ಕಕ್ಕೆ ಇರಿಸುತ್ತಲೇ ಬಂದಿದ್ದೇವೆ.

ಆಧುನಿಕತೆಯ ನಾಗಾಲೋಟದಲ್ಲಿ ಬಹು ಮುಂದೆ ಸಾಗಿರುವ ಈ ದಿನಗಳಲ್ಲಿ, ಗಾಂಧಿ ಹುಟ್ಟಿದ ನಾಡಿನಲ್ಲಿಯೇ ಗಾಂಧಿ ಚಿಂತನೆಗಳಿಗೆ ಹಿನ್ನಡೆಯಾಗಿದೆ. ಅವರು  ಪ್ರತಿಪಾದಿಸಿದ ಹಲವು ಮಹತ್ವದ ಚಿಂತನೆಗಳು ಇಂದಿಗೂ ನಮ್ಮ ಸಂವಿಧಾನದ ರಾಜ್ಯ ನಿರ್ದೇಶಕ ತತ್ವಗಳ ಭಾಗವಾಗಿಯೇ ಚರ್ಚೆಗೊಳಗಾಗುತ್ತಿವೆ ಹೊರತು ಕಾನೂನುಗಳಾಗಿಲ್ಲ.

ಗಾಂಧಿ ಅವರನ್ನು ಈಗ ನಾವು ಕೆಲವು ರೂಪಕಗಳಿಗೆ ಸೀಮಿತ ಮಾಡಿಬಿಟ್ಟಿದ್ದೇವೆ. ಅಂದರೆ ಖಾದಿ, ಚರಕ, ಸತ್ಯ, ಅಹಿಂಸೆ, ಬಡವರ ಉದ್ಧಾರ ಇತ್ಯಾದಿಗಳ ಜತೆ ಸಮೀಕರಿಸುತ್ತಿದ್ದೇವೆ.  ಅವರು ಹೆಚ್ಚು ಮಹತ್ವ ಕೊಡುತ್ತಿದ್ದುದೇ ನೈತಿಕತೆಗೆ. ಯಾವುದೇ ಕೆಲಸ ಮಾಡಿದರೂ ಅದರಲ್ಲಿ ನೈತಿಕತೆ ಇರಬೇಕು ಎನ್ನುತ್ತಿದ್ದರು. ಅದನ್ನೀಗ ನಾವು  ಗಾಳಿಗೆ ತೂರಿದ್ದೇವೆ. 

ಕೊಳ್ಳುಬಾಕ ಸಂಸ್ಕೃತಿಯನ್ನು ಅಪ್ಪಿಕೊಂಡಿದ್ದೇವೆ. ನಮಗೆ ಬೇಕಿರಲಿ ಬೇಡವಾಗಿರಲಿ ಎಲ್ಲವನ್ನೂ ಖರೀದಿಸಿ ಮನೆಗೆ ಹೊತ್ತು ತಂದು ಹಾಕುವ ಪ್ರವೃತ್ತಿ  ಎಲ್ಲೆಡೆಯೂ ವ್ಯಾಪಿಸಿದೆ. ಆದರೆ ಅಂದೇ ಗಾಂಧೀಜಿ ಅದಕ್ಕೆ ವಿರುದ್ಧವಾದ ನಡೆಯನ್ನು ನಮಗೆ ತೋರಿಸಿಕೊಟ್ಟಿದ್ದರು. ತೀರಾ ಅಗತ್ಯವಾಗಿ ಬೇಕೆನಿಸಿದ ವಸ್ತುವನ್ನು ಮಾತ್ರ ಪಡೆದುಕೊಳ್ಳಬೇಕೆಂಬುದು ಅವರ ನಿಲುವಾಗಿತ್ತು. ಇಂದಿನ ನಮ್ಮ ಜಂಜಡಗಳಲ್ಲಿ ಗಾಂಧಿ ಯಾವುದೋ ಒಂದು ಶಕ್ತಿಯಾಗಿ ಅಷ್ಟೆ ನೆನಪಾಗುತ್ತಾರೆ.

ಗಾಂಧಿ ತಮ್ಮ ಬದುಕಿನ ಕೊನೆ ಕ್ಷಣದವರೆಗೂ ಹೋರಾಡುತ್ತಲೇ ಸಾಗಿದರು. ದೇಶಕ್ಕೆ ಸ್ವಾತಂತ್ರ್ಯ ಬಂದ ಸಂಭ್ರಮದ ಆಚರಣೆಯಲ್ಲಿ ಕೆಲವರು ದೇಶವನ್ನು ಆಳುವ ಕನಸು ಹೆಣೆಯುತ್ತಾ ರಾಜ ಗತ್ತಿನಲ್ಲಿ ಓಡಾಡುತ್ತಿದ್ದಾಗ,  ಗಾಂಧಿ ಕಲ್ಕತ್ತಾದಲ್ಲಿ ಸಂಭವಿಸಿದ ಕೋಮು ಗಲಭೆಗಳನ್ನು ನಿಲ್ಲಿಸಲು ತಮ್ಮ ಊರುಗೋಲಿನ ಜೊತೆ ಏಕಾಂಗಿಯಾಗಿ ಸಾಗಿ ಜನರ ಮಧ್ಯೆ ಇದ್ದು ಅವರನ್ನು ಸಂತೈಸಿದರು.

ಅವರ ಆಶಯದಂತೆ ನಾವು ದೇಶದ ಆರ್ಥಿಕ ನೀತಿಯನ್ನು ರೂಪಿಸಿದ್ದರೆ ಇಂದು ರೂಪಾಯಿ ಮೌಲ್ಯ ಡಾಲರ್ ಎದುರು ಇಷ್ಟೊಂದು ಕುಸಿತ ಕಾಣುತ್ತಿರಲಿಲ್ಲವೇನೊ.  ಅಷ್ಟೇ ಏಕೆ, ದೇಶದಲ್ಲಿ ಹಸಿವಿನಿಂದ ಬಳಲುವ ಶೇ 27ರಷ್ಟು ಜನರಿಗೆ ಆಹಾರ ಭದ್ರತೆಯ ಕಾನೂನನ್ನು ಅನುಷ್ಠಾನ ಮಾಡುವ ಪ್ರಮೇಯವೇ ಬರುತ್ತಿರಲಿಲ್ಲ. ಇಂದಿನ ಈ ಎಲ್ಲ ಅವಾಂತರಗಳು ನಾವು ಗಾಂಧೀಜಿ ವಿಚಾರಗಳನ್ನು ಕಡೆಗಣಿಸಿರುವುದರ ಫಲದ ನೇರ ಪರಿಣಾಮಗಳಾಗಿವೆ.

ಗಾಂಧೀಜಿ ಎಂಬ ಹೆಸರು ಕೇಳಿದಾಕ್ಷಣ ನಮ್ಮ ಕಣ್ಣ ಮುಂದೆ ಬರುವುದು ಉದ್ದುದ್ದ ಭಾಷಣಗಳು, ಅವರ ನೀತಿಗಳನ್ನು ತಿಳಿಸುವ ಪಾಂಡಿತ್ಯದ ಒಣಮಾತುಗಳು. ಅವರ ಸರಳ ಉಡುಪು, ಸರಳ ಜೀವನ, ದೇಶದ ಆಸ್ತಿಗಳಾದ ನೀರು, ವಿದ್ಯುತ್, ಇಂಧನವನ್ನು ಅತ್ಯಂತ ಮಿತವಾಗಿ ಬಳಸಬೇಕೆಂಬ ಹಿತನುಡಿಯನ್ನು ನಾವು ಅಭ್ಯಾಸ ಮಾಡಿಕೊಂಡಿದ್ದೇವೆಯೇ? ನಮ್ಮ ವೃತ್ತಿಗಳೆಲ್ಲ ವ್ಯಾಪಾರವಾಗಿ ಬದಲಾಗಿರುವ ಈ ಕಾಲದಲ್ಲಿ, ನಾವು ಮಾಡುವ ಕಾಯಕವನ್ನು ಸೇವಾವೃತ್ತಿಯೆಂದು ಪರಿಭಾವಿಸಿದ್ದೇವೆಯೇ? ಅವರ ಸ್ವದೇಶಿ ವೈದ್ಯ ಪದ್ಧತಿಯನ್ನು ಸಮಾಜಕ್ಕೆ ಪರಿಚಯಿಸಿದ್ದೇವೆಯೇ?

ಹಳ್ಳಿಗಳ ಪ್ರಗತಿಯಿಂದ ದೇಶದ ಪ್ರಗತಿ ಎಂಬ ಗ್ರಾಮ ರಾಜ್ಯದ ಕನಸು ಕಂಡ ಗಾಂಧಿ ಅವರನ್ನು ನಗರ ಪ್ರಜ್ಞೆಯ ನೆಲೆಯಲ್ಲಿ ಮೂದಲಿಸುತ್ತಿದ್ದೇವೇನೊ ಎಂಬ ವಿಷಾದ ಭಾವ ಕಾಡುತ್ತದೆ. ಕ್ರೌರ್ಯದ ಇನ್ನೊಂದು ಮುಖವೇ ಆಗಿರುವ ಈಗಿನ ಜಗತ್ತಿನಲ್ಲಿ ಗಾಂಧಿ ಚಿಂತನೆಗಳಷ್ಟು ಪ್ರಸ್ತುತವಾದ ಚಿಂತನೆ ಮತ್ತೊಂದಿಲ್ಲವೇನೊ? ನಾವೆಲ್ಲರೂ ನಮ್ಮ ಕಾಯಕವನ್ನು ಪ್ರಾಮಾಣಿಕವಾಗಿ ಮಾಡಲು ಪ್ರಯತ್ನಿಸಿದ್ದೇ ಆದರೆ ಗಾಂಧಿ ಅವರನ್ನು ಹೊರಗೆಲ್ಲೂ  ಹುಡುಕಬೇಕಾಗಿಲ್ಲ, ಅವರು ನಮ್ಮ ಹೃದಯದೊಳಗೇ ಇರುತ್ತಾರೆ.   

ಗಾಂಧೀಜಿ ತಾವೊಬ್ಬ ಸಂತನಲ್ಲ, ಒಬ್ಬ ರಾಜಕಾರಣಿ ಎಂದು ಹೇಳಿದ್ದುಂಟು. ಆದರೆ ಸಂತನಿಗಿರಬೇಕಾದ ಎಲ್ಲ ಗುಣಗಳೂ ಅವರಲ್ಲಿದ್ದವು. ಅದು ಅವರ ವ್ಯಕ್ತಿತ್ವದ ಆಂತರ್ಯದಲ್ಲಿ ಅಡಗಿತ್ತು. ಅವರ ಚಿಂತನೆಗಳ ಆಳಕ್ಕೆ ಇಣುಕಿ ನೋಡದೆ ಕೆಲವರು ಅನುಯಾಯಿಗಳೋ,  ಅಭಿಮಾನಿಗಳೋ ಆದರು. ಇನ್ನು ಕೆಲವರು ಅವರನ್ನು ತಾತ್ವಿಕ ನೆಲೆಯಲ್ಲಿ ವಿವೇಚಿಸದೆ ಟೀಕಾಕಾರರಾದರು.

ಗಾಂಧೀಜಿ ಚಿಂತನೆಗಳನ್ನು  ಒರೆಗೆ ಹಚ್ಚುವ ಪ್ರಯತ್ನವೇ ಇಲ್ಲ ಎನ್ನುವಷ್ಟು ಕಡಿಮೆಯಾಗಿದೆ.  ಅವರು ಪ್ರತಿಪಾದಿಸಿದ  ಮಾನವೀಯ ಮೌಲ್ಯಗಳನ್ನು ಕೊಂಚ ಮಟ್ಟಿಗಾದರೂ ಉಳಿಸಿಕೊಳ್ಳಲು ನಮ್ಮಿಂದ ಆಗುತ್ತಿಲ್ಲ. ಈ ಕಾರಣಕ್ಕಾದರೂ ಪಾಪಪ್ರಜ್ಞೆ ನಮ್ಮನ್ನು ಕಾಡಬೇಕು.

ತಿದ್ದಿಕೊಳ್ಳಲು ಪ್ರೇರೇಪಿಸಬೇಕು. ಲಂಚ ಕೊಡುವ ಮತ್ತು ಸ್ವೀಕರಿಸುವ ಸಂದರ್ಭದಲ್ಲಿ  ನೋಟುಗಳಲ್ಲಿರುವ ಗಾಂಧೀಜಿ ಮುಖವಾದರೂ ನಮ್ಮ ನೈತಿಕ ಪ್ರಜ್ಞೆಯನ್ನು ಮೀಟಬೇಕು.  ಅಭಿವೃದ್ಧಿಯ ಹೆಸರಲ್ಲಿ  ಗೊಂದಲಗಳು ಮುಂದುವರಿದಿವೆ.  ನಮ್ಮ  ದುರಾಸೆಯನ್ನು ನೋಡಿ ಗಾಂಧಿ ನಮ್ಮ ಪಕ್ಕದಲ್ಲಿ ನಿಂತು ನಕ್ಕಂತೆ ಭಾಸವಾಗುತ್ತದೆ.

ಸತ್ಯ, ಅಹಿಂಸೆ, ಸಮಾನತೆ, ಆತ್ಮಶೋಧನೆ, ಎಲ್ಲರನ್ನೂ ಒಳಗೊಳ್ಳುವ ಸ್ವಾತಂತ್ರ್ಯ ಹೀಗೆ ಎಲ್ಲದಕ್ಕೂ ತಕ್ಷಣ ಒದಗಿ ಬರುವ ವ್ಯಕ್ತಿ ಗಾಂಧಿ. ‘ಇಂದಿನ ತಲೆಮಾರಿನವರಿಗೆ  ಗಾಂಧಿ ಬೇಕಿಲ್ಲ’ ಎಂಬ ಸರಳೀಕೃತ ನಿರ್ಣಯಗಳನ್ನು ಮೀರಿ ನಮ್ಮ ಅರಿವಿನ ಫಲಕಗಳಲ್ಲಿ ಗಾಂಧಿ ಮತ್ತೆ ಮತ್ತೆ ಗೋಚರವಾಗುತ್ತಾರೆ. ಅವರ ಚಿಂತನೆಗಳು ಇಂದಿಗೂ ಪ್ರಸ್ತುತ. 

ಮನೆಯ ಗೋಡೆಗೆ ನೇತು ಹಾಕಿದ ದೇವರ ಫೋಟೊಗಳಿಗೆ  ಹೂ ಇಡುವಾಗ ಗಾಂಧಿ ಫೋಟೊಕ್ಕೂ ನನ್ನ ತಂದೆ ಹೂ ಇಡುತ್ತಿದ್ದರು. ‘ಗಾಂಧೀಜಿ ದೇವರಲ್ಲ’ ಎಂದು ಹೇಳಿದರೆ, ‘ನಮಗೆ ಸ್ವಾತಂತ್ರ್ಯ ತಂದುಕೊಟ್ಟವರು ದೇವರಲ್ಲವೇ’ ಎಂದು ಕೇಳಿದ್ದರು. ನಮ್ಮ ಪೂರ್ವಿಕರು ರಾಷ್ಟ್ರ ನಾಯಕರ ಬಗೆಗೆ ಅಂತಹ ಗೌರವ ಇಟ್ಟಿದ್ದರು. ಆದರೆ ನಾವು ಇಂದು ಗಾಂಧಿ ಅವರನ್ನು ಅವರ ಜಯಂತಿಗಷ್ಟೇ ಸೀಮಿತಗೊಳಿಸಿದ್ದೇವೆ.

ಅಹಿಂಸಾ ತತ್ವದ ಪ್ರತಿಪಾದಕರಾಗಿ, ಸತ್ಯಾನ್ವೇಷಣೆಯ ಪರಿಪಾಲಕರಾಗಿ ಬಾಳಿ ಬದುಕಿದ ಗಾಂಧಿ, ಇಡೀ ವಿಶ್ವವೇ ಅವರೆಡೆಗೆ ನೋಡುವ ಹಾಗೆ ಮಾಡಿದರು.  ಸಾಪೇಕ್ಷ ಸಿದ್ಧಾಂತ ಮಂಡಿಸಿದ ಮಹಾನ್‌ ವಿಜ್ಞಾನಿ ಆಲ್‌ಬರ್ಟ್‌ ಐನ್‌ಸ್ಟೀನ್‌ ಅವರ ಇತಿಹಾಸವನ್ನೊಮ್ಮೆ ತಿರುವಿ ಹಾಕಿದರೆ ‘ಜಗತ್ತಿನಲ್ಲಿ ಗಾಂಧಿ ಎಂಬ ಒಬ್ಬ ಧೀಮಂತ ಮಹಾನ್ ವ್ಯಕ್ತಿ ನಡೆದು ಹೋದ ದಾರಿಯೇ ಅಚ್ಚರಿಯನ್ನು ಮೂಡಿಸುತ್ತದೆ’ ಎಂಬ ಅವರ ಮಾತು ಗಮನ ಸೆಳೆಯುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT