ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನವರಾತ್ರಿಗೆ ರಂಗಾಯಣದ ನವನಾಟಕ

Last Updated 2 ಸೆಪ್ಟೆಂಬರ್ 2014, 10:31 IST
ಅಕ್ಷರ ಗಾತ್ರ

ಮೈಸೂರು: ದಸರಾ ಮಹೋತ್ಸವ ಅಂಗವಾಗಿ ನವರಾತ್ರಿಗೆ ಇಲ್ಲಿಯ ರಂಗಾಯಣ ನವ ನಾಟಕಗಳನ್ನು ಪ್ರದರ್ಶಿಸಲು ಸಜ್ಜಾಗುತ್ತಿದೆ.
ಇದಕ್ಕಾಗಿ ಸೆಪ್ಟೆಂಬರ್‌ 25ರಿಂದ ಅಕ್ಟೋಬರ್‌ 3ರವರೆಗೆ ನವರಾತ್ರಿ ನಾಟಕೋತ್ಸವ ರಂಗಾಯಣದ ಭೂಮಿಗೀತದಲ್ಲಿ ನಡೆಯಲಿದೆ.

ಸೆ. 25ರಂದು ಸಂಜೆ 6.30 ಗಂಟೆಗೆ ಉದ್ಘಾಟನೆ ನಂತರ ರಂಗ ಸಂಗೀತ ದೃಶ್ಯಾವಳಿಗಳು ಪ್ರಯೋಗಗೊಳ್ಳಲಿವೆ. ಇದರಲ್ಲಿ ಬಿ.ವಿ. ಕಾರಂತರು ಸಂಗೀತ ನೀಡಿದ ನಾಟಕಗಳನ್ನೇ ಆಡಲಾಗುತ್ತದೆ. ಗಿರೀಶ ಕಾರ್ನಾಡರ ‘ಹಯವದನ’, ಕುವೆಂಪು ಅವರ ‘ಚಂದ್ರಹಾಸ’, ದೇವನೂರ ಮಹಾದೇವ ಅವರ ‘ಕುಸುಮಬಾಲೆ’ -–ಹೀಗೆ ರಂಗಾಯಣದ ಕಲಾವಿದರು ಅಭಿನಯಿಸುವ ನಾಟಕಗಳ ಜತೆಗೆ, ಬಿ.ವಿ. ಕಾರಂತರು ಸಂಗೀತ ಸಂಯೋಜಿಸಿದ ಹೊರಗಿನ ತಂಡಗಳು ಆಡುವ ನಾಟಕಗಳ ದೃಶ್ಯಗಳೂ ಪ್ರದರ್ಶನಗೊಳ್ಳಲಿವೆ. ಒಟ್ಟು ಒಂದೂವರೆ ಗಂಟೆಯ ಈ ಪ್ರದರ್ಶನದಲ್ಲಿ ರಂಗ ಸಂಗೀತದ ರಸಗವಳವೇ ಇರುತ್ತದೆ.

ಸೆ. 26ರಂದು ಆರ್‌. ನಾಗೇಶ್‌ ನಿರ್ದೇಶನದ ‘ಕೃಷ್ಣೇಗೌಡರ ಆನೆ’ ನಾಟಕ ಪ್ರದರ್ಶನಗೊಳ್ಳಲಿದೆ. ಸೆ.27ರಂದು ಚೆಕ್‌ಮೇಟ್‌ ನಾಟಕ ಇರುತ್ತದೆ. ಎಸ್‌. ತಿಪ್ಪೇಸ್ವಾಮಿ ಅನುವಾದಿಸಿದ ಈ ನಾಟಕಕ್ಕೆ ಅನೂಪ್ ಬಂಟಿ ನಿರ್ದೇಶನವಿದೆ. ಸೆ. 28ರಂದು ಶ್ರೀರಂಗರು ರಚಿಸಿದ ‘ಕತ್ತಲೆ ಬೆಳಕು’ ನಾಟಕ, ಸೆ. 29ರಂದು ಶ್ರೀನಿವಾಸಪ್ರಭು ನಿರ್ದೇಶನದ ‘ಹೀಗೊಂದು ಪ್ರಣಯ ಪ್ರಸಂಗ’ ನಾಟಕಗಳು ಪ್ರಯೋಗಗೊಳ್ಳಲಿದೆ. ಸೆ. 30ರಂದು ಪ್ರಸನ್ನ ರಚಿಸಿ, ನಿರ್ದೇಶಿಸಿದ ‘ಹ್ಯಾಮ್ಲೆಟ್‌’ ನಾಟಕ ಇರುತ್ತದೆ.

ಅ. 1ರಂದು ಮೊಲಿಯರ್‌ನ ನಾಟಕವನ್ನು ಪ್ರಸನ್ನ ಅವರು ಕನ್ನಡಕ್ಕೆ ಅನುವಾದಿಸಿ, ನಿರ್ದೇಶಿಸಿದ ‘ಏನ್‌ ಹುಚ್ಚೂರಿ, ಯಾಕಿಂಗ್‌ ಆಡ್ತೀರಿ?’ ನಾಟಕ, ಗಾಂಧಿ ಜಯಂತಿಯಂದು ಡಿ.ಎಸ್‌. ಚೌಗಲೆ ರಚಿಸಿದ, ಸಿ. ಬಸವಲಿಂಗಯ್ಯ ನಿರ್ದೇಶಿಸಿದ ‘ಗಾಂಧಿ ವರ್ಸಸ್‌ ಗಾಂಧಿ’ ನಾಟಕ. ಅ. 3ರಂದು ರಾಮೇಶ್ವರ ವರ್ಮಾ ನಿರ್ದೇಶಿಸಿದ ‘ಮಾಯಾ ಸೀತಾ ಪ್ರಸಂಗ’ ನಾಟಕದೊಂದಿಗೆ ಉತ್ಸವ ಕೊನೆಗೊಳ್ಳಲಿದೆ.

‘ನವರಾತ್ರಿಗೆ ರಂಗಾಯಣದ ಕೊಡುಗೆ ಒಂಬತ್ತು ನಾಟಕಗಳು. ಸ್ಥಳೀಯ ಪ್ರೇಕ್ಷಕರಜತೆಗೆ, ಹೊರಗಿನಿಂದ ಬರುವ ಪ್ರೇಕ್ಷಕರಿಗೂ ಇಷ್ಟವಾಗುವ ನಾಟಕಗಳಿವು. ಇನ್ನು ನವರಾತ್ರಿಗೆ ರಂಗಾಯಣ ಸಿಂಗಾರಗೊಳ್ಳಲಿದೆ. ರಂಗ ತೋರಣದೊಂದಿಗೆ ಪ್ರೇಕ್ಷಕರನ್ನು ಸ್ವಾಗತಿಸು ವುದರ ಜತೆಗೆ, ನವರಾತ್ರಿಗೆ ಸಂಬಂಧಪಟ್ಟ ವಿನ್ಯಾಸವೂ ಇರಲಿದೆ.

ಅಲ್ಲದೆ, ದಸರಾ ಗೊಂಬೆ ಪ್ರದರ್ಶನ, ವಿವಿಧ ಕಲಾಪ್ರದರ್ಶನಗಳಿರುತ್ತವೆ. ನಾಟಕದ ಆರಂಭಕ್ಕೆ ಮುನ್ನ ಜಾನಪದ ಕಲಾವಿದರು ಹಾಡುವ ಹಾಡುಗಳು ಪ್ರೇಕ್ಷಕರನ್ನು ಹಿಡಿದಿಡಲಿವೆ’ ಎಂದು ರಂಗಾಯಣ ನಿರ್ದೇಶಕ ಎಚ್‌. ಜನಾರ್ದನ್ ‘ಪ್ರಜಾವಾಣಿ’ಗೆ ತಿಳಿಸಿದರು. ‘ಒಂಬತ್ತು ದಿನಗಳ ನಾಟಕಕ್ಕೆ ಮುನ್ನ ನಿತ್ಯ ಒಬ್ಬ ಸಾಧಕರನ್ನು ಸನ್ಮಾನಿಸಲಾಗುತ್ತದೆ. ನಾಡಿನಾದ್ಯಂತ ಪ್ರಚಾರ ಸಿಗದ ಸಾಧಕರನ್ನು ಗುರುತಿಸಿ ಸನ್ಮಾನಿಸಲಾಗುತ್ತದೆ’ ಎನ್ನುತ್ತಾರೆ ಅವರು.

ದಸರಾ ಮಹೋತ್ಸವ ಸಮಿತಿ ವತಿಯಿಂದಲೂ ನಗರದ ಪುರಭವನದಲ್ಲಿ ಸೆ. 25ರಿಂದ ಅ. 3ರವರೆಗೆ ನಿತ್ಯ ಕಂಪನಿ ನಾಟಕ, ಹವ್ಯಾಸಿ ನಾಟಕ ಪ್ರದರ್ಶನ ಗೊಳ್ಳಲಿವೆ. ಯಕ್ಷಗಾನ, ಬಯಲಾಟವೂ ಇರುತ್ತವೆ.

ದಸರಾ; ಗಿಡ–-ಕಲಾಕೃತಿ ನೀಡಿ: ಡಿಸಿ
ಮೈಸೂರು: ಅನಗತ್ಯ ವೆಚ್ಚಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಈ ಬಾರಿಯ ದಸರಾ ಮಹೋತ್ಸವದ ಪ್ರಯುಕ್ತ ನಡೆಯುವ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಅತಿಥಿ, ಗಣ್ಯರಿಗೆ ದುಬಾರಿ ಹಾರ-–ತುರಾಯಿ, ನೆನಪಿನ ಕಾಣಿಕೆ ಅರ್ಪಿಸುವ ಬದಲು ಪುಸ್ತಕ, ಸಸಿಗಳು ಇಲ್ಲವೆ ಕಲಾಕೃತಿಗಳನ್ನು ನೀಡುವಂತೆ ಜಿಲ್ಲಾಧಿಕಾರಿ ಸಿ. ಶಿಖಾ ಸೂಚಿಸಿದರು.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ದಸರಾ ಸಿದ್ಧತೆ ಕುರಿತು ಉಪ ಸಮಿತಿ ಕಾರ್ಯಾಧ್ಯಕ್ಷರು ಮತ್ತು ವಿವಿಧ ಇಲಾಖೆ ಅಧಿಕಾರಿಗಳೊಂದಿಗೆ ಸೋಮವಾರ ಸಭೆ ನಡೆಸಿ ಅವರು ಮಾತನಾಡಿದರು.

ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಡಾ.ಪುಷ್ಪಾವತಿ ಅಮರನಾಥ್ ಅವರು ಈಗಾಗಲೇ ಜಿಲ್ಲಾ ಉಸ್ತುವಾರಿ ಸಚಿವರಲ್ಲಿ ಮನವಿ ಮಾಡಿದ್ದು, ಪರಿಸರಕ್ಕೆ ಪೂರಕವಾಗುವಂತೆ ಅತಿಥಿಗಳಿಗೆ ಸಸಿಗಳನ್ನು ವಿತರಣೆ ಮಾಡಬೇಕೆಂದು ವಿನಂತಿಸಿದ್ದಾರೆ. ಚಿತ್ರಕಲಾ ಸಮಿತಿಯಿಂದ ದಸರಾ ಆರಂಭಕ್ಕೆ ಮುನ್ನವೇ ಚಿತ್ರಕಲಾ ಶಿಬಿರ ಏರ್ಪಡಿಸಿ. ಶಿಬಿರದಲ್ಲಿ ರಚನೆಯಾಗುವ ಕಲಾಕೃತಿಗಳನ್ನು ಅತಿಥಿಗಳಿಗೆ ನೆನಪಿನ ಕಾಣಿಕೆಯಾಗಿ ನೀಡಬಹುದು. ಇಲ್ಲವೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಪ್ರಕಟಿಸಿರುವ ಪುಸ್ತಕಗಳನ್ನು ನೀಡಬಹುದು. ಮೂಲಿಕಾ ದಸರಾ ಸಮಿತಿಯವರು ಗಿಡಗಳನ್ನು ಉಚಿತವಾಗಿ ನೀಡುವುದಾಗಿ ತಿಳಿಸಿದ್ದಾರೆ. ವಿವಿಧ ಸಮಿತಿಗಳು ತಮ್ಮ ಬೇಡಿಕೆಗಳನ್ನು ತಿಳಿಸಿದಲ್ಲಿ ನೆನಪಿನ ಕಾಣಿಕೆ ಒದಗಿಸಿಕೊಡಲಾಗುವುದು, ಜಿಲ್ಲಾ ಪಂಚಾಯಿತಿ ಉಪ ನಿರ್ದೇಶಕ ಮಹದೇವ್ ಅವರನ್ನು ಈ ಕಾರ್ಯಕ್ಕೆ ನೋಡೆಲ್ ಅಧಿಕಾರಿಯಾಗಿ ನೇಮಿಸಲಾಗುವುದು ಎಂದು ತಿಳಿಸಿದರು.

ವೆಚ್ಚಗಳ ಪುನರಾವರ್ತನೆ ಆಗುವುದನ್ನು ತಪ್ಪಿಸಬೇಕು, ವಿವಿಧ ಸಮಿತಿಗಳು ತಮಗೆ ಅಗತ್ಯವಿರುವ ವಸತಿ ವ್ಯವಸ್ಥೆ ಬಗ್ಗೆ ಮಾಹಿತಿ ನೀಡಿದರೆ ವಸತಿ ಸಮಿತಿಯಿಂದ ಅನುಕೂಲ ಕಲ್ಪಿಸಲಾಗುವುದು. ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ತಂಡಗಳನ್ನು ಸಾಂಸ್ಕೃತಿಕ ಸಮಿತಿಯಿಂದ ಪಡೆದುಕೊಳ್ಳಬೇಕು. ದಸರಾ ಸಮಿತಿಗಳು ನಿಗದಿಪಡಿಸಿದ ಅನುದಾನದ ಮಿತಿಯಲ್ಲಿಯೇ ಕಾರ್ಯಕ್ರಮ ರೂಪಿಸಬೇಕು. ಸಾಧ್ಯವಿರುವ ಕಡೆ ಇಲಾಖಾ ಅನುದಾನ ಹಾಗೂ ಪ್ರಾಯೋಜಕತ್ವ ಪಡೆದುಕೊಳ್ಳಬೇಕು ಎಂದು ಸೂಚಿಸಿದರು. ದಸರಾ ಕಾರ್ಯಕ್ರಮಗಳಿಗೆ ಸರ್ಕಾರ ₨12 ಕೋಟಿ ನಿಗದಿಪಡಿಸಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT