ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾಗರಹೊಳೆಯೋ ಅಮ್ಮಾಲೆ!

ಸುತ್ತಾಣ
Last Updated 21 ಆಗಸ್ಟ್ 2015, 19:30 IST
ಅಕ್ಷರ ಗಾತ್ರ

ಮಳೆಗಾಲ ಎಂದರೆ ಎಲ್ಲ ನದಿ, ತೊರೆಗಳು ತುಂಬಿ ಹರಿಯುತ್ತವೆ. ಹೀಗಾಗಿಯೇ ಈ ಸಮಯದಲ್ಲಿ ಗುಡ್ಡಗಾಡು ಪ್ರದೇಶದಲ್ಲಿ ಅಲ್ಲಲ್ಲಿ ಸಣ್ಣ ಸಣ್ಣ ಜರಿಗಳು ಕಾಣಿಸಿಕೊಳ್ಳುತ್ತವೆ. ಹೀಗೆ ಕಾಣಿಸಿಕೊಳ್ಳುವ ಜಲಪಾತಗಳಲ್ಲಿ ಕೆಲವು ರುದ್ರ ರೂಪ ತಾಳಿ ಭಯಾನಕವಾಗಿ ಹರಿದರೆ, ಮತ್ತೆ ಕೆಲವು ಶಾಂತವಾಗಿ, ಸೌಮ್ಯವಾಗಿ ಹರಿಯುವ ಮೂಲಕ ಪ್ರವಾಸಿಗರಿಗೆ ಆನಂದವನ್ನು ನೀಡುತ್ತವೆ.

ಇಂತಹುದ್ದೇ ಶಾಂತವಾಗಿ ಹರಿಯುವ ಜಲಪಾತವೊಂದು ನಗರದಿಂದ 260 ಕಿ.ಮೀ. ದೂರದಲ್ಲಿದೆ. ನೀರಿನಲ್ಲಿ ಆಟವಾಡಲು ಬಯಸುವವರಿಗೆ ಇದು ಹೇಳಿ ಮಾಡಿಸಿದ ಸ್ಥಳ. ಮಡಿಕೇರಿಗೆ ಹೋಗುವ ಮಾರ್ಗ ಮಧ್ಯೆ ಸಿಗುವ ಕುಟ್ಟ ಎಂಬಲ್ಲಿ ಶಾಂತವಾಗಿ ಹರಿಯುವ ಈ ‘ಇರ್ಪು ಜಲಪಾತ’ ಇದೆ.

ಶ್ರೀಮಂಗಲ ವನ್ಯಜೀವಿ ವಲಯದ ವ್ಯಾಪ್ತಿಗೆ ಸೇರುವ ಬ್ರಹ್ಮಗಿರಿ ವನ್ಯಜೀವಿ ಅಭಯಾರಣ್ಯದಲ್ಲಿ ಈ ಜಲಪಾತ ಇದೆ. ಬ್ರಹ್ಮಗಿರಿ ಅರಣ್ಯದಲ್ಲಿ ಹರಿಯುವ ಲಕ್ಷ್ಮಣ ತೀರ್ಥ ನದಿಯು ಬೆಟ್ಟಗುಡ್ಡಗಳ ನಡುವೆ ಹರಿಯುತ್ತಾ ಈ ಜಲಪಾತವನ್ನು ನಿರ್ಮಿಸಿದೆ. ಇದು 51.8 ಮೀ. ಎತ್ತರದಿಂದ ಧುಮುಕುತ್ತಾ ಮುಂದೆ ವಾಯುವ್ಯ ದಿಕ್ಕಿಗೆ ಹರಿದು, ನಂತರ ರಾಮತೀರ್ಥ ನದಿಯನ್ನು ಸೇರಿಕೊಳ್ಳುತ್ತದೆ. ಆಮೇಲೆ ಈಶಾನ್ಯ ದಿಕ್ಕಿಗೆ ಹರಿಯುತ್ತಾ ಮೈಸೂರಿನಲ್ಲಿ ಕಾವೇರಿಯನ್ನು ಸೇರುತ್ತದೆ.

ದೇಶದ ಅತ್ಯಾಕರ್ಷಕ ಚಿಟ್ಟೆಗಳಲ್ಲಿ ಒಂದಾದ ಬ್ಯಾಂಡೆಡ್‌ ಪಿಕಾಕ್‌(ಪ್ಯಾಪಿಲಿಯೊ ಬುದ್ದಾ) ಅನ್ನು ಇಲ್ಲಿ ಕಾಣಬಹುದು. ಜತೆಗೆ ಈ ಅರಣ್ಯ ಪ್ರದೇಶ ಜಿಂಕೆ ಹಾಗೂ ಆನೆಗಳ ವಾಸಸ್ಥಾನವಾಗಿದೆ. ಈ ಅರಣ್ಯದಲ್ಲಿ ಪ್ಲಾಸ್ಟಿಕ್‌ ಬಳಕೆಯನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಬೇಸಿಗೆಯಲ್ಲೂ ಬತ್ತದ ಜಲಪಾತ ವರ್ಷವಿಡೀ ಹರಿಯುತ್ತಿರುತ್ತದೆ.

ಈ ಜಲಪಾತಕ್ಕೆ ಹೋಗುವವರು ಬೆಂಗಳೂರಿನಿಂದ ಹೊರಟರೆ ಚನ್ನಪಟ್ಟಣ್ಣ, ಶ್ರೀರಂಗಪಟ್ಟಣ್ಣ, ಮೈಸೂರು ಮಾರ್ಗವಾಗಿ ಹುಣಸೂರಿಗೆ ಹೋಗಬೇಕು. ನಂತರ ಅಲ್ಲಿಂದ ಎಡಕ್ಕೆ ತಿರುಗಿ ವೀರಹೊಸಹಳ್ಳಿ ಕಡೆ ಹೋಗಬೇಕು. ವೀರಹೊಸಹಳ್ಳಿ ನಂತರ ನಾಗರಹೊಳೆ ಅಭಯಾರಣ್ಯ ಸಿಗುತ್ತದೆ. ಇಲ್ಲಿಗೆ ನಗರದಿಂದ 220 ಕಿ.ಮೀ. ಆಗುತ್ತದೆ. ನಾಗರಹೊಳೆ ಅಭಯಾರಣ್ಯದ ಮೂಲಕ ಹೋಗಲು ಬಯಸುವವರು ಕೇವಲ ಕಾರು, ಟಿಟಿ, ಮಿನಿ ಬಸ್‌ಗಳಂತಹ ವಾಹನಗಳಲ್ಲಿ ಮಾತ್ರ ಪ್ರಯಾಣಿಸಬೇಕು. ಕಾರಣ ಇಲ್ಲಿ ದ್ವಿಚಕ್ರ ವಾಹನ ಮತ್ತು ತೆರೆದ ಜೀಪ್‌ಗಳಿಗೆ ಪ್ರವೇಶವಿಲ್ಲ. ಈ ಮಾರ್ಗ ಬೆಳಿಗ್ಗೆ  6ರಿಂದ ಸಂಜೆ 6ರವರೆಗೆ ಮಾತ್ರ ಸಂಚಾರಕ್ಕೆ ಮುಕ್ತವಾಗಿರುತ್ತದೆ.

ನಾಗರಹೊಳೆ ಅರಣ್ಯ ದಾಟುತ್ತಿದ್ದಂತೆಯೇ ನಲ್ಲಕೇರಿ ಅರಣ್ಯ ಪ್ರದೇಶದ ಪ್ರಾರಂಭ. ಇಲ್ಲಿಂದ 20 ಕಿ.ಮೀ. ಅಂತರದಲ್ಲಿ ಇರುವುದೇ ಇರ್ಪು ಜಲಪಾತ. ನಲ್ಲಕೇರಿ ಅರಣ್ಯ ಪ್ರದೇಶದಿಂದ ಕುಟ್ಟ ಎಂಬ ಸ್ಥಳಕ್ಕೆ ಹೋಗಬೇಕು. ಕುಟ್ಟದಿಂದ ಸ್ವಲ್ಪ ದೂರದಲ್ಲೇ ಇರ್ಪು ಜಲಪಾತ ಸಿಗುತ್ತದೆ. ನಲ್ಲಕೇರಿ ಅರಣ್ಯ ಪ್ರದೇಶದವರೆಗೆ ರಸ್ತೆ ತುಂಬಾ ಚೆನ್ನಾಗಿದ್ದು, ಕುಟ್ಟದಿಂದ ಜಲಪಾತದವರೆಗೆ ರಸ್ತೆ ಪ್ರಯಾಣ ಸ್ವಲ್ಪ ಕಷ್ಟಕರವಾಗಿರುತ್ತದೆ.

ಜಲಪಾತದ ಪ್ರದೇಶ ಹತ್ತಿರವಾಗುತ್ತಿದ್ದಂತೆ ವಾಹನ ನಿಲುಗಡೆ ಸ್ಥಳ ಬರುತ್ತದೆ. ಇಲ್ಲಿಂದ ಅರ್ಧ ಕಿ.ಮೀ. ಕಾಲ್ನಡಿಗೆಯಲ್ಲಿ ಸಾಗಿದರೆ ಮಾರ್ಗ ಮಧ್ಯೆ ನೀರು ಧುಮುಕುವ ಶಬ್ದ ತಣ್ಣನೆಯ ಗಾಳಿಯೊಂದಿಗೆ ಕಿವಿಗಳಿಗೆ ಸೋಕುತ್ತದೆ. ಹಂತ ಹಂತವಾಗಿ ನೀರು ಹರಿಯುತ್ತಿರುವುದು ಕಾಣತೊಡಗುತ್ತದೆ. ಗುಡ್ಡಗಳು ಹಾಗೂ ಕಾಡಿನ ಮಧ್ಯೆ ಧುಮುಕುವ ಇರ್ಪು ಜಲಪಾತದ ಸೌಂದರ್ಯವನ್ನು ಕಣ್ತುಂಬಿಕೊಳ್ಳುವುದೇ ಒಂದು ಆನಂದ.

ಬೆಳಿಗ್ಗೆ 5ಕ್ಕೆ ನಗರದಿಂದ ಹೊರಟರೆ 5ರಿಂದ 6 ತಾಸುಗಳಲ್ಲಿ ಇರ್ಪು ತಲುಪಬಹುದು. ನಂತರ ಇಷ್ಟವಿದ್ದಲ್ಲಿ ಅಲ್ಲಿಂದ ಮುಂದೆ ಗೋಣಿಕೊಪ್ಪ, ವಿರಾಜಪೇಟೆ ಮಾರ್ಗವಾಗಿ ಮಡಿಕೇರಿಗೂ ಹೋಗಬಹುದು. ಇರ್ಪು ಜಲಪಾತದ ವಾಹನ ನಿಲುಗಡೆ ಪ್ರದೇಶದಲ್ಲಿ ಒಂದು ಹೋಟೆಲ್‌ ಇದ್ದು, ಅಲ್ಲಿ ಊಟದ ವ್ಯವಸ್ಥೆ ಇರುತ್ತದೆ. ಹೀಗಾಗಿ ಮನೆಯಿಂದ ತೆಗೆದುಕೊಂಡು ಹೋಗುವ ಅಗತ್ಯ ಇರುವುದಿಲ್ಲ. ಆದರೆ ತಂಪು ಪಾನೀಯ ಹಾಗೂ ಇತರೆ ತಿನಿಸುಗಳು ಬೇಕಾದಲ್ಲಿ ಹುಣಸೂರಿನಲ್ಲೇ ತೆಗೆದುಕೊಳ್ಳುವುದು ಉತ್ತಮ.

ಇನ್ನು ನಾಗರಹೊಳೆ ಮತ್ತು ನಲ್ಲಕೇರಿ ಅರಣ್ಯ ಪ್ರದೇಶದಲ್ಲಿ ವನ್ಯಜೀವಿಗಳ ಸಂಚಾರ ಇರುವುದರಿಂದ ಹಾರ್ನ್‌ ಮಾಡುವುದು ಹಾಗೂ ವೇಗವಾಗಿ ವಾಹನ ಚಾಲನೆ ಮಾಡುವುದನ್ನು ನಿಷೇಧಿಸಲಾಗಿದೆ. ಜತೆಗೆ ಯಾವುದೇ ಕಾರಣಕ್ಕೂ ಅರಣ್ಯಪ್ರದೇಶದಲ್ಲಿ ವಾಹನದಿಂದ ಇಳಿದು ಓಡಾಡುವಂತಿಲ್ಲ. ನಾಗರಹೊಳೆಗೆ ಹಾಗೂ ಜಲಪಾತಕ್ಕೆ ಹೋಗುವವರು ತಮ್ಮೊಂದಿಗೆ ಸಾಕು ಪ್ರಾಣಿಗಳನ್ನು ತೆಗೆದುಕೊಂಡು ಹೋಗುವಂತಿಲ್ಲ. ಜಲಪಾತಕ್ಕೆ ಹೋಗಲು ಒಬ್ಬರಿಗೆ ₹ 50 ಪ್ರವೇಶ ಶುಲ್ಕ ನಿಗದಿಪಡಿಸಲಾಗಿದ್ದು, ವಾಹನ ನಿಲುಗಡೆಗೆ ಪ್ರತ್ಯೇಕ ಶುಲ್ಕ ನೀಡಬೇಕು.   

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT