ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾಗರಿಕತೆಯ ಹಮ್ಮು– ಅವತಾರ

Last Updated 27 ಮೇ 2016, 19:50 IST
ಅಕ್ಷರ ಗಾತ್ರ

ಜಗದೋಟದಲ್ಲಿ ಈಗ ಇಡೀ ದೇಶವೇ ಒಂದು ಕಂಪೆನಿಯಾಗಿದೆ

ತಾಯಿ ಮಗುವಿಗೆ ಒಳಲೆಯಲ್ಲಿ ಹಾಲೂಡುತ್ತಾ ಕಿವಿಯಲ್ಲಿ ಹೇಳುತ್ತಿದ್ದಳಂತೆ: ‘ಕೆರೆಯಂ ಕಟ್ಟಿಸು ಬಾವಿಯನ್ನು ತೋಡಿಸು...’ ಈ ಮೌಲ್ಯದ ಮಾತು ಕ್ರಿ.ಶ. 1411ರ ವಿಜಯನಗರ ಶಾಸನದ್ದು.  ಅಂತೆಯೇ ಅಶೋಕ ಚಕ್ರವರ್ತಿ ಸಾಲು ಮರಗಳನ್ನು ಹಾಕಿಸಿದ, ಕೆರೆ ಕಟ್ಟೆಗಳನ್ನು ಕಟ್ಟಿಸಿದ ಎಂದು ಸ್ವಾತಂತ್ರ್ಯ ದೊರೆತ ಪ್ರಾರಂಭದಲ್ಲಿ   ಶಾಲೆಗಳಲ್ಲಿ ಮಕ್ಕಳಿಗೆ ಅಕ್ಷರ ಕಲಿಸುವ ವೇಳೆ ಚರಿತ್ರೆಯ ಪಾಠ ಹೇಳುತ್ತಿದ್ದರು.

ಇಂದು ಅಭಿವೃದ್ಧಿ ಪಥದಲ್ಲಿರುವ ಭಾರತವು ‘ಕೆರೆಯಂ ಮುಚ್ಚಿಸು, ಸಾಲು ಮರಗಳನ್ನು ಕತ್ತರಿಸು’ ಎನ್ನುತ್ತಿದೆ. ಅದನ್ನು ಮಾಡಿ ತೋರಿಸುತ್ತಿದೆ. ಇದು ಈಗಿನ ಆತಂಕ. ಮೊನ್ನೆ  ಪತ್ರಿಕೆಗಳಲ್ಲಿ 15,900 ಕೋಟಿ ಟನ್‌ ಹಿಮಗಡ್ಡೆ ಅಂಟಾರ್ಟಿಕಾ ಕಡೆಯಿಂದ ಕರಗಿಬರುತ್ತಿರುವ ಸುದ್ದಿಯಿತ್ತು.

ವರ್ಷಂಪ್ರತಿ ಹೀಗೇ ಕರಗಿ ಬಂದರೆ  ಸಮುದ್ರ ಮಟ್ಟ ಏರಿ ಜಗತ್ತಿನ ಅನೇಕ  ಕಡಲ ತೀರದ ನಗರಗಳೇ ಮುಳುಗುವ ಸ್ಥಿತಿ ಬರುತ್ತದೆ. ನಮ್ಮ ದೇಶದ ಲಕ್ಷದ್ವೀಪಗಳ ಕತೆ ಹಾಗಿರಲಿ ಮುಂಬೈ, ಚೆನ್ನೈಗಳಂಥವು ಸಹಾ ಎಚ್ಚರಿಕೆಯ ವಲಯದಲ್ಲಿವೆ.

ಬಿಸಿಲು ಮಾರಿ ಹಾಗೂ ಜಲದೇವತೆಗಳಿಬ್ಬರೂ ಅಕ್ಕ ತಂಗಿಯರು. ಅವರ ಆಶ್ರಯದಲ್ಲಿ ಕೋಟ್ಯಾನುಕೋಟಿ ದೇವತೆಗಳಿದ್ದಾರೆ. ಅವರೇ ವೃಕ್ಷದೇವತೆಯರು. ಈ ಎಲ್ಲರೂ ನಾಗರಿಕತೆಯ ಹಮ್ಮಿನ ಮನುಷ್ಯನ ಅವತಾರಗಳನ್ನು ನೋಡುತ್ತಲೇ ಇದ್ದಾರೆ. ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ ಈ ದೇಶವೊಂದನ್ನೆ ದಿಟ್ಟಿಸಿದರೆ ಸಾವಿರಾರು  ಕಿ.ಮೀ. ಉದ್ದದ ರಾಷ್ಟ್ರೀಯ ಹೆದ್ದಾರಿಗಳು ಸರ್ಪಗಳ ನುಲಿಗೆಗಳಾಗಿವೆ.

ಉಳ್ಳವರಿಗೆ ಕಲ್ಪವೃಕ್ಷಗಳಾಗಿ ಕಾಣುತ್ತಾ ಅಡ್ಡ ಉದ್ದ ವಿಸ್ತರಿಸಿದಂತೆಲ್ಲಾ ಅಶೋಕನಂಥವನ ಮೌಲ್ಯಗಳೇ ಉರುಳಿಬೀಳುತ್ತಿವೆ. ಸಾಲುಮರದ ತಿಮ್ಮಕ್ಕಅವರಂತಹ ಅನಕ್ಷರಸ್ಥ ಹೃದಯದಲ್ಲಿ ಅಶೋಕನ, ಬುದ್ಧನ ದಾರಿಗಳಿರುತ್ತವೆ. ಗಾಂಧಿ, ನೆಹರೂಗಳಂಥ ಜಗತ್‌ ತಿಳಿವಳಿಕಸ್ಥರ ನಡಿಗೆಯ ರಾಜಕಾರಣಿಗಳ ಹೃದಯದಲ್ಲಿ ಇವು ಏಕೆ ಮಾಯವಾಗುತ್ತಿವೆ?

ಇದೇ ಈಗಿನ ಜಗತ್‌ ಸೂತಕ. ಈ ಸೂತಕಗಳ ನಡುವೆ ಮಲ್ಯರ ಮಾದರಿಯ ದ್ವೀಪಗಳೇ ಸೃಷ್ಟಿಯಾಗಿವೆ. ಈ ದೇಶ ಕುರಿತು ನೊಬೆಲ್‌ ಪ್ರಶಸ್ತಿ ವಿಜೇತ ಗುಂತರ್‌ ಗ್ರಾಸ್‌ ಹೇಳುವಂತೆ ‘ಏರಿಬರುತ್ತಿರುವ  ಬಡತನವೆಂಬ ಸಮುದ್ರದ ನಡುವೆ ಝಗ ಝಗಿಸುತ್ತಿರುವ  ಐಷರಾಮಿ ದ್ವೀಪಗಳು’ ಇವಾಗಿವೆ. ಲಂಡನ್‌ ವಿಮಾನವೇರಿದ ಮಲ್ಯ, ಅಂದು ಅಮೆರಿಕ ವಿಮಾನವೇರಿದ ಭೋಪಾಲ್‌ ದುರಂತ ನಾಯಕ ಇವರೆಲ್ಲರೂ ಕೇವಲ ನಿಮಿತ್ತ.

ಇವೆಲ್ಲದರ ಹಿಂದೆ ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗಗಳೆಲ್ಲವೂ ಮಾಧ್ಯಮ ಅಂಗವನ್ನು ಒಳಸೇರಿಸಿಕೊಂಡಿವೆ. ಇಲ್ಲದಿದ್ದರೆ ‘ಇಷ್ಟು ವರ್ಷ ನನ್ನಿಂದ ಪಡೆದ ಸಹಾಯ, ಆತಿಥ್ಯವನ್ನು ಮಾಧ್ಯಮದ ದೊಡ್ಡವರು ಮರೆಯಬಾರದು’ ಎಂದು ಈ ದೇವೇಂದ್ರನ ತೂಕದ ಮಲ್ಯ ಹೇಳುತ್ತಿರಲಿಲ್ಲ.

ಇಂಥಾದ್ದು ಒಂದು ಕಡೆಯಾದರೆ ಮತ್ತೊಂದು ಕಡೆ ಆಲಮಟ್ಟಿ ಅಣೆಯ ನೀರು ತಳ ಸೇರಿದೆ. ಏಷ್ಯಾದಲ್ಲಿ ಪ್ರಥಮವೆನಿಸಿದ್ದ ಶಿವನಸಮುದ್ರ ವಿದ್ಯುತ್‌ ಸ್ಥಾವರ ಉತ್ಪಾದನೆ ನಿಲ್ಲಿಸಿದೆ. ಇವೆಲ್ಲದರ ಹಿಂದೆ ಇರುವ ಪರಿಸರ ಹರಣಕ್ಕೆ ಈಗಲೂ ಎಗ್ಗಿಲ್ಲದಾಗಿದೆ.

ಭೂಮಿ ತಾಯಿಯ ಮಡಿಲೆಂಬುದು ಅಂಬಾರದಿಂದಿಳಿದು ಬರುವ ಮಳೆರಾಯನನ್ನು ಉಡಿಕಟ್ಟಿಕೊಳ್ಳುವ ತನ್ನ ಮಕ್ಕಳು ಮರಿಗಳಿಗೆ ಗುಟುಕು ನೀಡುವ ಒಂದು ವಿಧಾನ.

ಈ ದೇಶವೊಂದನ್ನೆ ಗಮನಿಸಿದರೆ 36,672 ಕೆರೆಗಳು ನಮ್ಮದೊಂದೇ ರಾಜ್ಯದಲ್ಲಿದ್ದವು ಎಂದು ಅಂಕಿಅಂಶ  ಹೇಳುತ್ತಿದೆ. ಸ್ವತಂತ್ರ  ಬಂತು, ನಾಲೆಗಳು ದೇಶದ ತುಂಬಾ ಹರಿದಾಡಿದವು. ನಾಗರಿಕತೆ ಬಂತು.

ಟಾರು ಸಿಮೆಂಟ್‌ ರಸ್ತೆಗಳು ಸುತ್ತಾಡುತ್ತಿವೆ. ಮನುಷ್ಯ ಗೆಡ್ಡೆ ಗೆಣಸು ತಿನ್ನುತ್ತಿದ್ದಾಗ, ಹೊಟ್ಟೆಪಾಡಿಗೆ ಪ್ರಾಣಿಗಳ ಹಿಂದೆ ಹೊರಟಾಗಲಿನ ಕಾಲುದಾರಿಗಳು ಗಾಡಿ ದಾರಿಗಳಾಗಿ, ಮೋಟಾರು ದಾರಿಗಳಾಗಿ ಅದೇ ಈಗ ರಾಷ್ಟ್ರೀಯ ಹೆದ್ದಾರಿಗಳಾದ ಕಾಲಮಾನದಲ್ಲಿ ಏನೆಲ್ಲಾ ಅಭಿವೃದ್ಧಿ ಎಂಬ ಓಟ ಸಾಗಿದೆ ಎಂಬುದರಲ್ಲಿ ಈ ಹರಣದ ಚರಿತ್ರೆ ಅಡಗಿದೆ.

ಅಂದು ರಾಜರು ಸಾಲು ಮರಗಳನ್ನು ನೆಡಿಸುತ್ತಿದ್ದರು. ಕೃಷಿ ವಿಸ್ತಾರದ ನಡುವೆಯೂ ವೃಕ್ಷ ಸಂಪತ್ತು ಎಲ್ಲರ ಪೋಷಕ ಸ್ಥಾನ ಕೂಡ ಪಡೆದಿತ್ತು. ಇಂದಿನ ಪ್ರಜಾರಾಜ್ಯ ಆತುರದ ಆರ್ಭಟದಲ್ಲಿ ಪ್ರಕೃತಿಯಿರುವುದೇ ಹರಿದು ತಿನ್ನಲು ಎಂದು ನಂಬಿಬಿಟ್ಟಿದೆ. ಅದನ್ನೇ ಅಭಿವೃದ್ಧಿ ಎಂದು ಭಾವಿಸಿದೆ.

ಈಗಲೂ ನೀರು ನೆಲವನ್ನು ಸಂರಕ್ಷಿಸುತ್ತೇವೆಂದು ಹೇಳುತ್ತಿರುವ ದೇಶದ ಪ್ರಧಾನಿಯಾದಿಯಾಗಿ ಮನಸ್ಸು ಮಾಡಿದರೆ ಜಗದ ತಾಪವನ್ನು ಕಡಿಮೆ ಮಾಡಲು ಕಾಣಿಕೆ ನೀಡಬಹುದು. ರಾಷ್ಟ್ರೀಯ ಹೆದ್ದಾರಿಯೇ ಲಕ್ಷ ಕಿ.ಮೀ. ಎಂದು ಹಿಡಿದರೆ ಅಂತಹವುಗಳ ಟಿಸಿಲುಗಳಾದ ರಾಜ್ಯ ಹೆದ್ದಾರಿಗಳು, ಪಟ್ಟಣ ಹಳ್ಳಿ ದಾರಿಗಳೆಲ್ಲ ಸೇರಿದರೆ ಹಲವು ಲಕ್ಷ ಕಿಲೋಮೀಟರುಗಳಾಗುತ್ತವೆ.

ಅಶೋಕ ಚಕ್ರವರ್ತಿಯಂತೆ ಈಗಿನ ಪ್ರಜಾ ಚಕ್ರವರ್ತಿಗಳು ಮನಸ್ಸು ಮಾಡಿದರೆ; ಉದಾಹರಣೆಗೆ ರಸ್ತೆಯ ಎರಡೂ ಬದಿಗೆ ಕಿಲೋ ಮೀಟರಿಗೆ 200 ಮರಗಳೆಂದರೂ ಕೋಟಿ ಕೋಟಿ ವೃಕ್ಷ ಸಂಪತ್ತು ದೇಶದ ಹಸಿರು ಸಂಪತ್ತಾಗುವುದಷ್ಟೆ ಅಲ್ಲ, ಜಗತ್ತನ್ನು ಉಳಿಸುವ ಆಮ್ಲಜನಕ ಖಜಾನೆಯಾಗಿ ಪರಿವರ್ತನೆಯಾಗಿ ಬಿಡುತ್ತದೆ.

ಈಗ  ಜಗದೋಟದಲ್ಲಿ ಇಡೀ ದೇಶವೇ ಒಂದು ಕಂಪೆನಿಯಾಗಿದೆ. ಇದಕ್ಕೆ ದೇಶದ ಪ್ರಧಾನಿ ಸಿ.ಇ.ಒ. ಆಗಿರುವುದು ಆಧುನಿಕತೆ ಹಾಗೂ ನಾಗರಿಕತೆಯ ಒಂದು ಭಾಗ ಮಾತ್ರ. ಈ ಸರಣಿಯ ಹಿಂದೆ ಲಕ್ಷ ಲಕ್ಷ ಹಳ್ಳಿಗಳಿವೆ. ಕೋಟ್ಯಾನುಕೋಟಿ ಜನರ ಬದುಕಿನ ನೀರಡಿಕೆಗಳಿವೆ. ಪ್ರಕೃತಿ ಪರಿಸರ ಕೃಷಿಗಳೆಂಬ ಅಂಗಾಂಗಗಳಿವೆ.

ಕೇವಲ ಭೂಸ್ವಾಧೀನ ಕಾಯ್ದೆ ಹಾಗೂ ಭವಿಷ್ಯ ನಿಧಿ ನಿರೂಪಣೆ ಇಂತಹವುಗಳಿಂದ ಹಿಂದೆ ಸರಿದಾಕ್ಷಣ ನಾಯಕರು, ಸರ್ಕಾರದ ಬಗ್ಗೆ ನಂಬಿಕೆಗಳು ಹುಟ್ಟುವುದಿಲ್ಲ. ವ್ಯಾಪಾರದ ವಿದ್ಯಾಸರಕು ಹಾಗೂ ಆರೋಗ್ಯದ ಸರಕುಗಳು ದಿನೇ ದಿನೇ ಆಮದು ರಫ್ತಿನ ಸ್ಥಾನ ಭದ್ರಪಡಿಸಿಕೊಳ್ಳುತ್ತಿರುವುದು ಕೂಡ ಆತಂಕದ ವಿಚಾರ.

ಒಂದು ದೇಶದ ಚಿಂತನೆಯೆಂದರೆ ಹಳ್ಳಿ, ಪೇಟೆ, ನಗರಗಳನ್ನು ಸಮತೋಲನಗೊಳಿಸುವುದು. ಇದೆಲ್ಲ ಮಹಾತ್ಮ ಗಾಂಧಿ, ಗೌತಮ ಬುದ್ಧರ ನಡಿಗೆ. ಇದನ್ನು ಮರೆತರೆ  ಸಮರ ದಾಸ್ತಾನು ಜಗತ್ತು ಭಾರತವನ್ನಷ್ಟೆ ಬೆದರಿಸುವುದಿಲ್ಲ. ಜಗತ್ತನ್ನೆ ಬೆದರಿಸುತ್ತದೆ. ಅದಾಗದಿರಲಿ!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT