ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾಡಗೀತೆ ಪರಿಷ್ಕರಣೆಯಲ್ಲಿ ಯಾವ ಗೊಂದಲವೂ ಇಲ್ಲ

ಚರ್ಚೆ
Last Updated 4 ಡಿಸೆಂಬರ್ 2014, 19:30 IST
ಅಕ್ಷರ ಗಾತ್ರ

‘ಆ ಎರಡು ನಿಮಿಷದಲ್ಲಿ ಏನೆಲ್ಲಾ ಮಾಡಬಹುದು!’ (ಪ್ರ.ವಾ., ಚರ್ಚೆ, ನ. 26– ಸಮೀರ ಸಿ. ದಾಮ್ಲೆ) ಎಂಬಂತಹ ಭಾವೋದ್ವೇಗದ ಉದ್ಗಾರವನ್ನು ಬದಿಗಿಟ್ಟು, ‘ನಾಡಗೀತೆ ಪರಿಷ್ಕರಣೆ ವಿವಾದ: ಒಂದಿಷ್ಟು ಗೊಂದಲ’ (ಚರ್ಚೆ,- ನ. ೨೫) ಶೀರ್ಷಿಕೆಯಲ್ಲಿ ಡಾ.ಎಂ.ಡಿ. ಒಕ್ಕುಂದ ಅವರು ವ್ಯಕ್ತಪಡಿಸಿದ  ‘ಕುವೆಂಪು ಅವರು ಟ್ಯಾಗೋರರ ಪರಿಷ್ಕೃತ ರಾಷ್ಟ್ರಗೀತೆಯನ್ನು ಅನುಲಕ್ಷಿಸಿ, ಸಾಕಷ್ಟು ಯೋಚಿಸಿ ನಾಡಗೀತೆಗಾಗಿಯೇ ಈ ಗೀತೆ­ಯನ್ನು ಬರೆದಿರುವುದರಿಂದ ಅದನ್ನು ಮತ್ತೆ ಮತ್ತೆ ಮೊಟಕು­ಗೊಳಿಸುವ ಅಥವಾ ಬೇರೇ­ನನ್ನೋ ಸೇರಿಸುವ ಪ್ರಯತ್ನ ಕುವೆಂಪು ಅವರ ವ್ಯಕ್ತಿತ್ವಕ್ಕೆ ಗೌರವ ತರುವಂಥದ್ದಲ್ಲ’ ಎಂದು ಅಭಿಪ್ರಾಯ­ಪಟ್ಟಿದ್ದಾರೆ.  ಅದಕ್್ಕೆ ನನ್ನ ವಿವೇಚನೆ ಈ ರೀತಿ ಇದೆ:

ಕುವೆಂಪು ತಮ್ಮ ‘ನೆನಪಿನ ದೋಣಿಯಲ್ಲಿ’ ಆತ್ಮಕಥೆಯಲ್ಲಿ ೧೯೨೪–-೨೫ರ ತಮ್ಮ ಹಸ್ತಪ್ರತಿಯಲ್ಲಿದ್ದ ‘ಕರ್ಣಾಟಕ ರಾಷ್ಟ್ರ­ಗೀತೆ’ಯನ್ನು ಇಡಿಯಾಗಿ ಕೊಟ್ಟಿದ್ದಾರೆ (ಅದೇ, ಪುಟ ೫೪೫-–೫೪೬). ಪಲ್ಲವಿಯ ಎರಡು ಸಾಲುಗಳೊಂದಿಗೆ, ಏಳು ಸಾಲು­ಗ­ಳುಳ್ಳ ಐದು ನುಡಿಗಳನ್ನು ಅದು ಒಳಗೊಂಡಿದೆ. ಅವರೇ ಹೇಳು­ವಂತೆ, ‘ಅದರ ರಚನೆಯ ರೂಪಾಂಶ ನಾನು ಬೆಳೆದಂತೆಲ್ಲ ಬದ­ಲಾವಣೆ ಹೊಂದುತ್ತ (ಭಾವ ಮತ್ತು ಭಾಷೆ ಎರಡರಲ್ಲಿಯೂ) ಕಡೆಗೆ ‘ಕೊಳಲು’ ಕವನ ಸಂಗ್ರಹ ಅಚ್ಚಾದಾಗ ಒಂದು ಸ್ತಿಮಿತಕ್ಕೆ ನಿಂತಿತು’ (ಅದೇ, ಪುಟ ೫೪೫). ಅಂದರೆ, ‘ಕೊಳಲು’ವಿನ ‘ಜಯಹೇ ಕರ್ನಾಟಕ ಮಾತೆ’, ಮೊದಲು ಬರೆದ ದೀರ್ಘ ಕವಿತೆಯ ಸಂಕ್ಷಿಪ್ತ ರೂಪ ಎನ್ನಬಹುದು. ‘ಮತ್ತೆ ೧೯೭೦–-೭೧­ರಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಅದನ್ನು ನಾಡಗೀತೆಯಾಗಿ ಅಧಿಕೃತವಾಗಿ ಸ್ವೀಕರಿಸಿದಾಗ ಮೂರು ನಿಮಿಷಗಳಲ್ಲಿ ಅದನ್ನು ಹಾಡಿ ಮುಗಿಸುವಂತೆ ಸಂಗ್ರಹಿಸಿಕೊಳ್ಳಲಾಯಿತು’ (ಅದೇ, ಪುಟ: ೫೪೫) ಎಂದಿದ್ದಾರೆ ಕುವೆಂಪು. ಈ ‘ಸಂಗ್ರಹ’ ಕಾರ್ಯ­ವನ್ನು ಸ್ವತಃ ಕವಿಗಳೇ ಮಾಡಿದರೇ ಅಥವಾ ಕಸಾಪ ಯಾರಿಂದ ಲಾದರೂ ಮಾಡಿಸಿತೇ ಎನ್ನುವದು ಸ್ಪಷ್ಟವಾಗಿಲ್ಲ. ಯಾರೇ ಮಾಡಿರಲಿ, ಅದನ್ನು ಸಂಕ್ಷಿಪ್ತಗೊಳಿಸಲು ಅಥವಾ ಮೊಟಕು­ಗೊಳಿಸಲು ಕವಿಗಳ ತಕರಾರು ಇರಲಿಲ್ಲ ಎಂಬುದು ಇದರಿಂದ ಸ್ಪಷ್ಟವಾಗುತ್ತದೆ. ‘ಬೇರೇನನ್ನೊ ಸೇರಿಸುವ ಪ್ರಯತ್ನ’ವನ್ನಂತೂ ಪರಿಷ್ಕರಣ ಸಮಿತಿ ಖಂಡಿತ ಮಾಡಿಲ್ಲ.

ನಾಡಗೀತೆಗೆ ಸಂಬಂಧಪಟ್ಟಂತೆ ಈ ಹಿಂದಿನ ದಾಖಲೆಗಳು ಹೀಗಿವೆ: ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಪ್ರಧಾನ ಕಾರ್ಯ-­ದರ್ಶಿಯಾಗಿದ್ದ ಉಷಾ ಗಣೇಶ್ ಅವರು ಅಂಕಿತ ಹಾಕಿದ ಆದೇಶವನ್ನು ಇಲ್ಲಿ ಉದ್ಧರಿಸುತ್ತಿದ್ದೇನೆ:
‘ಸರ್ಕಾರದ ಆದೇಶ ಸಂಖ್ಯೆ ಸಂ.ಕಿ ೨೦೭ ಕಸಧ ೨೦೦೩, ದಿ: ೭.೧.೨೦೦೪.
ರಾಷ್ಟ್ರಕವಿ ಜ್ಞಾನಪೀಠ ಪುರಸ್ಕೃತ­ರಾದ ಡಾ.ಕುವೆಂಪು ಅವರ ಜನ್ಮಶತ­ಮಾನೋ­ತ್ಸವ­ವನ್ನು ದಿ: ೨೯–-೧೨–-೨೦೦೩ ರಿಂದ ೨೮-–೧೨–-೨೦೦೪ರವರೆಗೆ ಆಚರಿಸಲಾ­ಗು­­ತ್ತಿದ್ದು, ಈ ಹಿನ್ನೆಲೆಯಲ್ಲಿ ರಾಷ್ಟ್ರಕವಿ ಡಾ.ಕುವೆಂಪು­ರವರು ರಚಿಸಿರುವ ‘ಜಯಭಾರತ ಜನನಿಯ ತನುಜಾತೆ’ ಕವನವನ್ನು ‘ನಾಡಗೀತೆ’­ಯಾಗಿ ಘೋಷಿ­ಸಲು ಸರ್ಕಾರವು ಹರ್ಷಿಸುತ್ತದೆ. ಈ ನಾಡ­ಗೀತೆಯನ್ನು ಹಾಡು­ವಾಗ ಈ ಕೆಳಕಂಡ ಮಾರ್ಗ­ಸೂಚಿಗಳನ್ನು ಅಳವಡಿಸಿ­ಕೊಳ್ಳುವದು.
* ಜಯಭಾರತ ಜನನಿಯ ತನುಜಾತೆ ಕವನದ ಅನುಬಂಧ-–೧ರಲ್ಲಿ ವಿವರಿಸಿದ ಆಯ್ದ ಭಾಗವನ್ನು ನಾಡಗೀತೆಯಾಗಿ
ಪರಿ­ಗಣಿಸಿ ಅಳವಡಿಸಿಕೊಳ್ಳುವುದು.
* ಈ ಹಾಡಿನ ಪ್ರಾರಂಭದಿಂದ ಗೀತೆಯು ಮುಗಿಯುವ ತನಕ ಎದ್ದುನಿಂತು ಗೌರವವನ್ನು ಸಲ್ಲಿಸುವದು.
* ಎಲ್ಲಾ ಶಾಲೆಗಳಲ್ಲಿ ನಾಡಗೀತೆಯನ್ನು ದೈನಂದಿನ ಚಟು­ವಟಿಕೆಗಳು ಆರಂಭವಾಗುವ ಮುನ್ನ ಹಾಗೂ ಎಲ್ಲಾ
ಸಾಂಸ್ಕೃ­ತಿಕ, ಸಾಹಿತ್ಯಕ ಹಾಗೂ ಇತರೆ ಅಧಿಕೃತ ಕಾರ್ಯಕ್ರಮ­ಗಳಲ್ಲಿ ಹಾಡುವದು’.

ಸರ್ಕಾರ ಆದೇಶಿಸಿದ ಈ ನಾಡಗೀತೆಯಲ್ಲಿ (ಅನುಬಂಧ-೧ ರಲ್ಲಿ ವಿವರಿಸಿದಂತೆ) ‘ಕೊಳಲು’ ಸಂಗ್ರಹದಲ್ಲಿ ಪ್ರಕಟವಾದ ಕವಿತೆಯ ಮೊದಲ ನುಡಿಯ ನಾಲ್ಕು ಸಾಲುಗಳು ಮಾತ್ರ ಇವೆ. (ಉಳಿದ ಐದು ಸಾಲುಗಳನ್ನು ಕೈಬಿಡಲಾಗಿದೆ.) ಎರಡನೆಯ ನುಡಿ ಪೂರ್ಣವಾಗಿ ಇದೆ. ಮೂರನೆಯ ಹಾಗೂ ನಾಲ್ಕನೆಯ ನುಡಿಗಳನ್ನು ಸಂಪೂರ್ಣ ಕೈಬಿಡಲಾಗಿದೆ. ಕೊನೆಯ ನುಡಿ ಮಾತ್ರ ಪೂರ್ಣವಾಗಿ ಇದೆ. ನಾಡಗೀತೆಯ ಈ ಪಠ್ಯಕ್ಕೂ ಉಷಾ ಗಣೇಶ್ ಅವರು ಸಹಿ ಹಾಕಿದ್ದಾರೆ.

ಇದಕ್ಕೂ ಬಹಳ ವರ್ಷಗಳ ಹಿಂದಿನ ಒಂದು ದಾಖಲೆಯನ್ನು ಲಕ್ಷ್ಯವಿಟ್ಟು ಗಮನಿಸಬೇಕು. ಅದು ಮುಂದಿ­ನಂತಿದೆ:  ಸಾರ್ವ­ಜನಿಕ ಶಿಕ್ಷಣ ಇಲಾಖೆ ಆಯುಕ್ತರ ಕಚೇರಿಯ ಸಂಗೀತ ವಿಭಾ­ಗದ (೧೯೯೩ರ ಸಾಲಿನ)  ಅಧಿಕಾರಿಯಾಗಿದ್ದ ಕೆ.ಬಿ.­ಹೈಮವತಮ್ಮ ಅವರು, ಸಾ.ಶಿ.ಇ. ಆಯುಕ್ತ­ರಿಗೆ ಬರೆದ (ದಿ.೧೬-.೮. ೨೦೦೬) ಪತ್ರದಲ್ಲಿ ಈ ಸಾಲುಗಳಿವೆ:

‘೧೯೮೮-–೮೯ ರ ಸಾಲಿನಲ್ಲಿ ರಾಜ್ಯದ ಎಲ್ಲ ಶಾಲೆಗಳಲ್ಲಿ ಬೆಳಗಿನ ಪ್ರಾರ್ಥನೆಯಾಗಿ ನಾಡಗೀತೆಯನ್ನು ಕಡ್ಡಾಯವಾಗಿ ಹಾಡಿ­ಸುವ ಬಗೆಗೆ ಕರ್ನಾಟಕ ಸರ್ಕಾರವು ಆಯು­ಕ್ತರ ಕಚೇರಿಗೆ ಆದೇಶಿಸಿತು. ಆಯುಕ್ತರ ಕಚೇ­ರಿಯ ಸಂಗೀತ ವಿಭಾಗವು ಆ ಕಾರ್ಯವನ್ನು ನಿರ್ವಹಿಸಿತು. ದೇಶದ ರಾಷ್ಟ್ರಗೀತೆಯು ಸಂಕ್ಷಿಪ್ತಗೊಂಡು ೫೬ ಸೆಕೆಂಡುಗಳಲ್ಲಿ ಹಾಡುವ ಕ್ರಮವನ್ನು ಅನುಸರಿಸಿ, ಸುದೀರ್ಘ-­ವಾದ ನಾಡಗೀತೆಯ ಮೊದಲ ನಾಲ್ಕು ಸಾಲುಗಳು, ಕೊನೆಯ ಚರಣದ ಹತ್ತು ಸಾಲುಗಳನ್ನು ಮಾತ್ರ ಆಯ್ಕೆ ಮಾಡಿಕೊಂಡು, ೬೦ ರಿಂದ ೬೫ ಸೆಕೆಂಡುಗಳಲ್ಲಿ ಶಾಲಾ ಮಕ್ಕಳು ಸಾಮೂಹಿಕ­ವಾಗಿ ಹಾಡಲು ಅನುಕೂಲವಾಗಿರು­ವಂತೆ ರಾಗ ಸಂಯೋಜನೆ ಮಾಡಿತು... ಇಲಾಖೆಯ ಮೇಲಧಿ­ಕಾರಿಗಳೆಲ್ಲರಿಂದ ಮೆಚ್ಚುಗೆ, ಒಪ್ಪಿಗೆ ಪಡೆಯಲಾಯಿತು.

ಅನಂತರ ರಾಷ್ಟ್ರಕವಿ ಕುವೆಂಪು­ಅವರ ಒಪ್ಪಿಗೆಯಾಗಿ  ಮೈಸೂ­ರಿನ ಅವರ ಮನೆಯಲ್ಲಿ 1989ರ ಆ. 21ರಂದು ಆಯುಕ್ತರ ಆದೇಶದಂತೆ ಭೇಟಿ ಮಾಡ­ಲಾ­ಯಿತು. ಧ್ವನಿಸುರುಳಿಯಲ್ಲಿ ಸಂಕ್ಷಿಪ್ತಗೊಂಡ, ರಾಗ ಸಂಯೋ­ಜನೆಯ ಗೀತೆಯನ್ನು ಅವರಿಗೆ ಕೇಳಿಸಲಾಯಿತು. ಗೀತೆಯು ಎಲ್ಲ ದೃಷ್ಟಿಯಿಂದಲೂ ಸೊಗ­ಸಾಗಿ ಮೂಡಿ ಬಂದಿದೆ. ಕರ್ನಾಟಕ ಸರ್ಕಾರದ ತೀರ್ಮಾ­ನಕ್ಕೆ ನನ್ನ ಸಂಪೂರ್ಣ ಒಪ್ಪಿಗೆ ಇದೆ’ ಎಂಬ ವಿಷಯ­ವನ್ನೊಳ­ಗೊಂಡ   ಡಾ.ಕುವೆಂಪು­ರವರ ಪತ್ರ ಪಡೆದ ನಂತರ (೨೨-.೮-.೧೯೮೯), ಆ ಗೀತೆಯನ್ನು ಶಾಲೆ ಗಳಲ್ಲಿ ಹಾಡಿ­ಸುವ ಕಾರ್ಯವು ಸಮರ್ಪಕ­ವಾಗಿ ನಡೆ­ಯುವಂತೆ ಸೂಕ್ತಕ್ರಮ ತೆಗೆದುಕೊಳ್ಳಲಾಯಿತು... ಸಂಕ್ಷಿಪ್ತ­ಗೊಳಿಸಿದ ನಾಡಗೀತೆಯನ್ನು ಸ್ವರ ಪ್ರಸ್ತಾರದೊಂದಿಗೆ ಪ್ರತಿಮಾಡಿಸಿ ಶಾಲೆ ಗಳಿಗೆ ಹಂಚ­ಲಾಯಿತು’.

‘ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯುಕ್ತರಾಗಿದ್ದ ಎಂ.ಎಲ್. ಚಂದ್ರಕೀರ್ತಿಯವರು ರಾಷ್ಟ್ರಕವಿ ಕುವೆಂಪು ಅವರಿಗೆ ಬರೆದ ಪತ್ರದಲ್ಲಿಯೂ (೧೬-.೮.-೧೯೮೯) ‘ಗೀತೆಯ ಸಾಹಿತ್ಯ­ದಲ್ಲಿ ಸಾರ್ವತ್ರಿಕವಾಗಿ ೬೩ ಸೆಕೆಂಡುಗಳಲ್ಲಿ ಹಾಡಲನು­ವಾಗು­ವಂತೆ ಗೀತೆಯ ಪ್ರಾರಂಭದ ೪ ಸಾಲುಗಳನ್ನು ಅಂತ್ಯದ ೧೦ ಸಾಲುಗಳನ್ನು ಮಾತ್ರ ಆಯ್ಕೆ ಮಾಡಿಕೊಳ್ಳಲಾಗಿದೆ’ ಎನ್ನಲಾ­ಗಿದೆ. ಆ ಪತ್ರಕ್ಕೆ ಕುವೆಂಪು ಅವರು ೧೯೮೯ರ ಆಗಸ್ಟ್‌ ೨೨ರಂದು ಚಂದ್ರಕೀರ್ತಿಯವರಿಗೆ ಬರೆದ ಉತ್ತರ ರೂಪದ ಪತ್ರ­ದಲ್ಲಿ ‘ಈ ಗೀತೆಯನ್ನು ಕರ್ನಾಟಕದ ನಾಡಗೀತೆಯಾಗಿ ರಾಜ್ಯದ ಎಲ್ಲ ಶಾಲೆಗಳಲ್ಲಿಯೂ ಕಡ್ಡಾಯವಾಗಿ ಹಾಡಿಸ­ಲಿರುವ ಕರ್ನಾಟಕ ಸರ್ಕಾರದ ತೀರ್ಮಾನಕ್ಕೆ ನನ್ನ ಸಂಪೂರ್ಣ ಒಪ್ಪಿಗೆ ಇದೆಯೆಂದು ತಿಳಿಸಲು ಸಂತೋಷಿಸುತ್ತೇನೆ’.

ಮೇಲಿನ ಸಂಗತಿಗಳನ್ನೆಲ್ಲಾ ಅವಲೋಕಿಸಿದರೆ ಸ್ವತಃ ಕುವೆಂಪು ಅವರೇ ತಾವು ಬರೆದ ‘ಜಯಹೇ ಕರ್ನಾಟಕ ಮಾತೆ’ ನಾಡ­ಗೀತೆಯ ಸಂಕ್ಷಿಪ್ತರೂಪವನ್ನು ಒಪ್ಪಿಕೊಂಡು ಸರ್ಕಾರಕ್ಕೆ ತಮ್ಮ ಕೃತಜ್ಞತೆಯನ್ನು ಸೂಚಿಸಿರುವುದು (೨೨.೮.೧೯೮೯) ಸ್ಪಷ್ಟ­ವಾ­ಗಿದೆ.

ಒಕ್ಕುಂದ ಅವರು ಹೇಳಿರುವಂತೆ ‘ಕುವೆಂಪು ಅವರು ಟ್ಯಾಗೋ­ರರ ಪರಿಷ್ಕೃತ ರಾಷ್ಟ್ರಗೀತೆಯನ್ನು ಅನುಲಕ್ಷಿಸಿ ಸಾಕಷ್ಟು ಯೋಚಿಸಿ ನಾಡಗೀತೆಗಾಗಿಯೇ ಈ ಗೀತೆಯನ್ನು ಬರೆ­ದಿರು­ವರು’ ಎಂಬ ಮಾತನ್ನು ಒಪ್ಪಿಕೊಂಡರೂ, ಕುವೆಂಪು ಅವರು ಈ ಮೊದಲೇ ಒಪ್ಪಿಕೊಂಡಿದ್ದ ನಾಡಗೀತೆಯ ಸಂಕ್ಷಿಪ್ತ­ರೂಪಕ್ಕೆ ನಾವು, ಅವರ ಮೂಲಕವಿತೆಯ ಇನ್ನೂ ಒಂದು ನುಡಿಯನ್ನು ಸೇರಿಸಿದ್ದೇವೆಯೇ ಹೊರತು ಒಕ್ಕುಂದ ಅವರು ಅಂದು­ಕೊಂಡಿ­ರುವಂತೆ ‘ಮತ್ತೆ ಮತ್ತೆ ಮೊಟಕು­ಗೊಳಿಸುವ ಅಥವಾ ಬೇರೇ­ನನ್ನೋ ಸೇರಿಸುವ ಪ್ರಯತ್ನ’ವನ್ನು ಮಾಡಿಲ್ಲ­ವೆಂಬುದನ್ನು ನಮ್ರವಾಗಿ ಸೂಚಿಸ­ಬಯಸುತ್ತೇನೆ.
   (ದಪ್ಪಕ್ಷರಗಳ ಒತ್ತು ನನ್ನದು)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT