ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾನು ‘ಸಂದರ್ಶಕ ವಿದ್ಯಾರ್ಥಿ’ಯಾಗಿದ್ದೆ!

Last Updated 29 ಜೂನ್ 2016, 19:30 IST
ಅಕ್ಷರ ಗಾತ್ರ

ಮೊದಲ ಚಿತ್ರ ‘ಹಾಗೇ ಸುಮ್ಮನೆ’ ಸೋಲು ಕಂಡರೂ ಭರವಸೆಯ ನಟ ಎಂದು ಕರೆಸಿಕೊಂಡವರು ನಟ ಕಿರಣ್‌ ಶ್ರೀನಿವಾಸ್. ಧಾರಾವಾಹಿ, ಸ್ಯಾಂಡಲ್‌ವುಡ್‌, ಬಾಲಿವುಡ್ ಹೀಗೆ ಪ್ರಯಾಣದಲ್ಲಿ ನಿರತರಾಗಿರುವ ಕಿರಣ್‌ ಸದ್ಯ ‘ನಿರುತ್ತರ’ ಎಂಬ ನಿಲ್ದಾಣದಲ್ಲಿದ್ದಾರೆ. ಹೊಸ ರೀತಿಯ ಕಥೆ ಇರುವ ‘ನಿರುತ್ತರ’ ಚಿತ್ರದ ನಾಯಕ ಕಿರಣ್ ‘ಕಾಮನಬಿಲ್ಲು’ ಜೊತೆ ಮಾತನಾಡಿದ್ದಾರೆ.

*ಸಿನಿಮಾಕ್ಕೆ ಗಾಡ್‌ಫಾದರ್‌ ಇಲ್ಲದೇ ಪ್ರವೇಶ ಮಾಡಿದವರು ನೀವು.  ಮೊದಲ ಅನುಭವ ಹೇಗಿತ್ತು?
ಕಾಲೇಜು ಮುಗಿದ ಬಳಿಕ ಜಾಹೀರಾತು, ಮಾಡೆಲಿಂಗ್‌ ಮಾಡುತ್ತಿದ್ದೆ. ಒಂದೂವರೆ ವರ್ಷ ನಾನು ಸಣ್ಣ ಪುಟ್ಟ ಜಾಹೀರಾತುಗಳಲ್ಲಿ ನಟಿಸಿದ್ದೆ. ಜಾಹೀರಾತಿನಲ್ಲಿ ನನ್ನನ್ನು ನೋಡಿದ ನಿರ್ದೇಶಕರೊಬ್ಬರು ‘ಹಾಗೇ ಸುಮ್ಮನೆ’ ಚಿತ್ರದ ನಾಯಕನ ಪಾತ್ರಕ್ಕೆ ಶಿಫಾರಸು ಮಾಡಿದರು.

ಅದಕ್ಕಿಂತ ಮೊದಲು ನಟನೆಯ ಗಂಧಗಾಳಿ ಗೊತ್ತಿರಲಿಲ್ಲ. ಅನುಭವ ಕಡಿಮೆಯಿತ್ತು. ಯಾವ ಗಾಡ್‌ಫಾದರ್‌ಗಳ ಸಲಹೆಯಿಲ್ಲದೇ ಅಷ್ಟಿಷ್ಟು ತಯಾರಿ ಮಾಡಿಕೊಂಡು ಸಿನಿಮಾ ನಾಯಕನಾಗಲು ಹೊರಟೆ.

*ಸ್ಯಾಂಡಲ್‌ವುಡ್‌ನಿಂದ ಬಾಲಿವುಡ್‌ ಅಂಗಳಕ್ಕೆ ಹಾರಲು ರೆಕ್ಕೆ ಬಲಿತದ್ದೆಂತು?
ನನಗೆ ಕನ್ನಡದಲ್ಲಿಯೇ ನಟನೆ ಬಗ್ಗೆ ಏನೂ ಗೊತ್ತಿಲ್ಲದೇ ಇದ್ದಾಗ ಬಾಲಿವುಡ್ ಅವಕಾಶ ಹುಡುಕಿಕೊಂಡು ಬಂತು. ಅವಕಾಶಗಳು ಸುಲಭವಾಗಿ ಬಂದಿದ್ದರಿಂದ ಏನೂ ಕಷ್ಟ ಎದುರಿಸುವಂತಾಗಲಿಲ್ಲ. ಅದರ ಪರಿಣಾಮ, ನಟನೆಯಲ್ಲಿ ನಾನಿನ್ನೂ ಕಲಿಯಬೇಕಾದ್ದು ಬಹಳಷ್ಟಿದೆ ಎಂಬುದು ಅರಿವಾಯಿತು.

ನಂತರ ನಟನೆಯ ಒಂದಷ್ಟು ಟ್ರಿಕ್ಸ್‌ಗಳನ್ನು ಕಲಿತುಕೊಂಡೆ. ಬಾಲಿವುಡ್‌ನಲ್ಲಿ ‘24’, ‘ರಿದಂ’ ಚಿತ್ರದಲ್ಲಿ ನಟಿಸಿದ್ದೇನೆ. ‘ರಿದಂ’ ಬಾಕ್ಸ್‌ ಆಫೀಸ್‌ನಲ್ಲಿ ಹಿಟ್‌ ಆಗ್ಲಿಲ್ಲ. ಮತ್ತೊಂದು ಸಿನಿಮಾ ‘ಚಲ್‌ ಜೂಟೆ’ ಚಿತ್ರ ರಿಲೀಸ್‌ ಆಗಬೇಕಷ್ಟೇ.

* ‘24’ ಚಿತ್ರದಲ್ಲಿ ಅನಿಲ್‌ಕಪೂರ್‌ ಮುಖಾಮುಖಿ ಹೇಗಿತ್ತು?
ಚಿತ್ರದಲ್ಲಿ ನಾನು ದೇವ್‌ ಎಂಬ ಮಾದಕ ವ್ಯಸನಿ ಯುವಕನ ಪಾತ್ರ ಮಾಡಿದ್ದೆ. ಆ ಚಿತ್ರದಲ್ಲಿ ಅನಿಲ್‌ಕಪೂರ್‌ ಮತ್ತು ನನಗೆ ಒಂದೇ ದೃಶ್ಯದಲ್ಲಿ ಅಭಿನಯಿಸುವ ಅವಕಾಶ ಸಿಕ್ಕಿಲ್ಲ. ಆದರೆ ಆ ಚಿತ್ರವನ್ನು ಅನಿಲ್‌ಕಪೂರ್‌ ಅವರೇ ನಿರ್ಮಾಣ ಮಾಡಿದ್ದರಿಂದ ಮೂರು– ನಾಲ್ಕು ಬಾರಿ ಸಂವಾದ ಕಾರ್ಯಕ್ರಮದಲ್ಲಿ ಭೇಟಿ ಮಾಡಿದ್ದೇನೆ.

ಅವರು ತುಂಬ ಸರಳ ವ್ಯಕ್ತಿ. ಚಿತ್ರದ ಪ್ರತಿ ದೃಶ್ಯಗಳು ಹೀಗೆಯೇ ಬರಬೇಕೆಂಬ ಉದ್ದೇಶದಿಂದ ನಟನೆಯ ಬಗ್ಗೆ ಟಿಪ್ಸ್‌ ನೀಡುತ್ತಿದ್ದರು. ಆ ಚಿತ್ರದಲ್ಲಿ ನನ್ನ ಅನುಭವಗಳು ನನಗೆ ನಟನೆಯ ಬಗ್ಗೆ ಹೆಚ್ಚಿನ ಪಾಠಗಳನ್ನು ಹೇಳಿಕೊಟ್ಟಿವೆ.

*‘ನಿರುತ್ತರ’ದ ಬಗ್ಗೆ ನಿಮ್ಮ ಉತ್ತರ ಏನು?
ಮೂರು ವರ್ಷಗಳ ಬಳಿಕ ಕನ್ನಡ ಸಿನಿಮಾದಲ್ಲಿ ನಟಿಸುತ್ತಿದ್ದೇನೆ. ಅಪೂರ್ವ ಕಾಸರವಳ್ಳಿ ಅವರ ಜೊತೆ ಕೆಲಸ ಮಾಡಿದ್ದು ಖುಷಿಯಾಗಿದೆ. ಇದರಲ್ಲಿ ನನ್ನದು ಸಾಮಾನ್ಯ ಯುವಕನೊಬ್ಬ ತನ್ನ ಕನಸಿನ ಸಾಧನೆಯನ್ನು ನನಸು ಮಾಡಿಕೊಳ್ಳಲು ಯತ್ನಿಸುವ ಪಾತ್ರ. ಪಾತ್ರ ಸಾಮಾನ್ಯವಾಗಿದ್ದರೂ ಸ್ವಾಭಾವಿಕವಾಗಿ ನಟಿಸಿ ಸೈ ಎನ್ನಿಸಿಕೊಳ್ಳುವ ಪ್ರಯತ್ನ ಮಾಡಿದ್ದೇನೆ. ಈ ಪಾತ್ರ ನಾನು ನಟಿಸಿದ ಎಲ್ಲಾ ಪಾತ್ರಗಳಿಗಿಂತ ಸವಾಲಿನದ್ದಾಗಿತ್ತು. ಚಿತ್ರದ ಶೂಟಿಂಗ್‌ ಮುಗಿದಿದೆ.

*ಸ್ಕೂಲ್‌ನಲ್ಲಿ ನೀವು ವಿಧೇಯ ವಿದ್ಯಾರ್ಥಿಯಂತೆ?
ಶಾಲಾದಿನಗಳಲ್ಲಿ ನಾನು ಶಿಕ್ಷಕರಿಗೆ ಮೆಚ್ಚಿನ ವಿದ್ಯಾರ್ಥಿಯೇ. ಹೋಮ್‌ವರ್ಕ್ ಅನ್ನು ನೀಟಾಗಿ ಮಾಡ್ತಿದ್ದೆ. ಆದರೆ ಓದಿನಲ್ಲಿ ಹಿಂದೆ. ಕ್ಲಾಸ್‌ ರೂಂ ಹೊರಗೆ ಎಲ್ಲರಂತೆ ನಾನೂ ಕೀಟಲೆ ಮಾಡುತ್ತಿದ್ದೆ. ಅಪ್ಪ– ಅಮ್ಮನಿಗೆ ಎಷ್ಟೋ ಬಾರಿ ತಲೆ ನೋವು ತಂದಿದ್ದಿದೆ.

ಆದರೆ ಕಾಲೇಜಿನಲ್ಲಿ ಇದಕ್ಕೆ ತದ್ವಿರುದ್ಧ. ಜಯನಗರದ ಬಿಎಚ್‌ಎಸ್‌ ಕಾಲೇಜಿನಲ್ಲಿ ಬಿ.ಕಾಂ ಓದಿದ್ದು. ಕ್ರಿಕೆಟ್‌ ಅಂದ್ರೆ ಭಾರಿ ಇಷ್ಟ. ಅಪ್ಪ– ಅಮ್ಮ ಪಿಯುಸಿ ಮುಗಿದ ಬಳಿಕ ಸಿನಿಮಾಗೆ ಸಂಬಂಧಿಸಿದ ಕೋರ್ಸ್‌ ಮಾಡುವಂತೆ ಸಲಹೆ ನೀಡಿದರು. ಆದರೆ ಸ್ನೇಹಿತರೆಲ್ಲ ಡಿಗ್ರಿ ಓದುತ್ತಿದ್ದಾರೆ ಅಂತ ನಾನೂ ಡಿಗ್ರಿ ಸೇರಿಕೊಂಡೆ. ಅಲ್ಲಿ ಸಂದರ್ಶಕ ಪ್ರಾಧ್ಯಾಪಕರಿದ್ದಂತೆ ನಾವು ‘ಸಂದರ್ಶಕ ವಿದ್ಯಾರ್ಥಿಗಳು’. ನಮ್ಮ ತಂಡದ ಬಗ್ಗೆ ಶಿಕ್ಷಕರಿಗೂ ಗೊತ್ತಿದ್ದುದರಿಂದ ಅವರೂ ಏನು  ಹೇಳುತ್ತಿರಲಿಲ್ಲ.

* ಅಂದ್ರೆ ಹುಡುಗಿಯರನ್ನು ರೇಗಿಸುವ ಅವಕಾಶ ತಪ್ಪಿಸಿಕೊಂಡಿಲ್ಲ ಅಂತಾಯ್ತು?
ನಾನು ಹೈಸ್ಕೂಲು ತನಕ ಓದಿದ್ದು ಬಾಲಕರ ಶಾಲೆಯಲ್ಲಿ. ಪಿಯುಸಿಯಲ್ಲಿ ಸಹಶಿಕ್ಷಣ. ಎಲ್ಲ ಹುಡುಗಿಯರನ್ನು ರೇಗಿಸೋಕೆ ಶುರು ಮಾಡಿದ್ವಿ. ಹುಡುಗಿಯರೇನೂ ಕಮ್ಮಿ ಅಲ್ಲ. ಏದಿರೇಟುಗಳೂ ಇದ್ದೇ ಇತ್ತು. ಡಿಗ್ರಿಯಲ್ಲಿ ಹುಡುಗಿಯರನ್ನು ಚುಡಾಯಿಸುತ್ತಿರಲಿಲ್ಲ.

ಜ್ಯೂನಿಯರ್‌ಗಳಿಗೆ ಪ್ರಪೋಸ್‌ ಮಾಡ್ತಿದ್ವಿ. ಆ ಕಾಲಕ್ಕೆ ತುಂಬಾ ಜನರಿಗೆ ಪ್ರಪೋಸ್‌ ಮಾಡಿದ್ದೀನಿ. ಕೆಲವರು ಗ್ರೀನ್ ಸಿಗ್ನಲ್ ಕೂಡ ನೀಡಿದ್ದರು. ನಾನು ಮೊದಲ ಬಾರಿ ಪ್ರಪೋಸ್‌ ಮಾಡಿದ್ದು 10ನೇ ಕ್ಲಾಸ್‌ನಲ್ಲಿ. ಆದರೆ ಆಗ ಲವ್‌ ಮಾಡುವ ಧೈರ್ಯ ಇರಲಿಲ್ಲ.

* ಶೂಟಿಂಗ್‌ನಲ್ಲಿ ಕಿರಣ್‌ ಹೇಗಿರ್ತಾರೆ?
ಶೂಟಿಂಗ್‌ನಲ್ಲಿ ಒಂದು ಎರಡು ಟೇಕ್‌ಗೆ ಯಾವತ್ತೂ ಓಕೆ ಅನಿಸಿಕೊಂಡಿಲ್ಲ. ಏಳು, ಎಂಟು ಟೇಕ್‌ಗೆ ಭೇಷ್ ಎಂದಿದ್ದಿದೆ. ಕ್ಯಾಮೆರಾ ಮುಂದೆ ಇದ್ದಾಗ ಸುತ್ತ 25 ಕಣ್ಣು ನೋಡುತ್ತಿರುತ್ತೆ. ನಟನೆ ಕಷ್ಟ ಅನ್ನಿಸಿಬಿಡುತ್ತೆ. ಈಗ ನಟನೆ ತಂತ್ರಗಳನ್ನು ಕಲಿತು ಮಾತನಾಡುವ ಶೈಲಿ, ಸ್ವರದ ಬಗ್ಗೆ ಮೆಚ್ಚುಗೆ ಪಡೆದಿದ್ದೇನೆ.

* ಬಿಡುವಿನಲ್ಲಿ ಹೇಗೆ ಟೈಂ ಪಾಸ್ ಮಾಡ್ತೀರಾ?
ನಾನು ಮುಂಬೈನಲ್ಲಿ ಇರುವುದರಿಂದ ಬಿಡುವಾದಾಗ ಬೆಂಗಳೂರಿಗೆ ಬರುತ್ತೇನೆ. ಪ್ರವಾಸ, ಹೊಸ ಸ್ಥಳಕ್ಕೆ ಭೇಟಿ... ಇದು ಸಿನಿಮಾದಲ್ಲೇ ಆಗಿಹೋಗಿರುತ್ತದೆ. ಶೂಟಿಂಗ್‌ ಇಲ್ಲದೇ ಇದ್ದಾಗ ಫಿಲ್ಮ್‌ ಮೇಕಿಂಗ್‌, ನಿರ್ದೇಶನ, ಛಾಯಾಗ್ರಹಣದ ಬಗ್ಗೆ ಪುಸ್ತಕ ಓದಿಕೊಳ್ಳುತ್ತೇನೆ.

*ಮುಂದೆ ನಿರ್ದೇಶಕರಾಗುವ ಕನಸು ಇದೆ ಅಂದಾಯಿತು?
ಖಂಡಿತ, ಸಿನಿಮಾ ನಿರ್ದೇಶನ ಮಾಡುವ ಕನಸಿದೆ. ಸದ್ಯ ನಟನೆಯತ್ತ ಗಮನ. ಸ್ಯಾಂಡಲ್‌ವುಡ್‌, ಬಾಲಿವುಡ್‌ನಲ್ಲಿ ಒಳ್ಳೆಯ ಸವಾಲೆನಿಸುವ ಪಾತ್ರಕ್ಕೆ ಕಾಯುತ್ತಿದ್ದೇನೆ.

*ನಿಮಗೆ ಆಗಾಗ ನೆನಪಾಗುವ ತಮಾಷೆ ಸಂಗತಿ ಯಾವುದು?
ನಾನು ಕನ್ನಡ ಸಿನಿಮಾಕ್ಕೆ ಪರಿಚಯವಾದಾಗ ಎಲ್ಲರೂ ನನ್ನನ್ನು ‘ಎಡಕಲ್ಲು ಗುಡ್ಡದ ಮೇಲೆ’ ಚಂದ್ರಶೇಖರ ಅವರ ಮಗನಾ ಎಂದು ಕೇಳುತ್ತಿದ್ದರು. ನಾನು ಅಲ್ಲ ಅಂದಾಗ ಅವರು ನಂಬುತ್ತಿರಲಿಲ್ಲ. ಈಗ ಯಾರಾದರೂ ‘ನೀವು ಅವರ ಮಗನಾ’ ಎಂದು ಕೇಳಿದಾಗ ನಾನು ಹೌದು ಅಂತ ಹೇಳಿ ಸುಮ್ಮನಾಗ್ತೀನಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT