ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾಪತ್ತೆ ಪ್ರಕರಣ ವರದಿ ವಿರಳ

‘ಅಂತರರಾಷ್ಟ್ರೀಯ ಕಾಣೆಯಾದ ಮಕ್ಕಳ ದಿನ’ ಆಚರಣೆ
Last Updated 26 ಮೇ 2015, 7:11 IST
ಅಕ್ಷರ ಗಾತ್ರ

ಧಾರವಾಡ: ‘ಭಾರತದಲ್ಲಿ ಪ್ರತಿ ವರ್ಷ ಸುಮಾರು 1.5 ಲಕ್ಷ ಮಕ್ಕಳು ಕಾಣೆಯಾಗುತ್ತಿದ್ದಾರೆ. ಆದರೆ ಇಂಥ ಪ್ರಕರಣಗಳು ವರದಿಯಾಗುವ ಸಂಖ್ಯೆ ತೀರಾ ವಿರಳ’ ಎಂದು ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಡಾ.ಬಿ.ಉಷಾ ಆತಂಕ ವ್ಯಕ್ತಪಡಿಸಿದರು.

ಜಿಲ್ಲಾ ಕಾನೂನು ಸೇವೆಗಳ ಪ್ರಾಧಿ­ಕಾರ, ವಕೀಲರ ಸಂಘ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಪೊಲೀಸ್‌ ಇಲಾಖೆ, ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ, ದರ್ಶನ ಶಿಕ್ಷಣ ಹಾಗೂ ಗ್ರಾಮೀಣಾಭಿ­ವೃದ್ಧಿ ಸಂಸ್ಥೆ ಹಾಗೂ ವಾರ್ತಾ ಇಲಾಖೆ ಆಶ್ರಯದಲ್ಲಿ ಸೋಮವಾರ ನಗರದ ಹೊಸ ಬಸ್ ನಿಲ್ದಾಣದಲ್ಲಿ ಆಯೋಜಿಸ­ಲಾಗಿದ್ದ ‘ಅಂತರರಾಷ್ಟ್ರೀಯ ಕಾಣೆಯಾದ ಮಕ್ಕಳ ದಿನ’ದ ಅಂಗವಾಗಿ ಜಾಗೃತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಪ್ರಾಸ್ತಾವಿಕವಾಗಿ ಮಾತನಾಡಿದರು.

‘ಯಾವುದೋ ಕಾರಣಕ್ಕೆ ಮನೆ ಬಿಟ್ಟು ಹೋದ ಮಕ್ಕಳು ಮಾರಾಟ ಜಾಲವೆಂಬ ವಿಷವರ್ತುಲದಲ್ಲಿ ಸಿಲುಕು­ತ್ತಿ­ದ್ದಾರೆ. ಪ್ರಕೃತಿ ವಿಕೋಪದ ಸಂದರ್ಭ­ದಲ್ಲೂ ಮಕ್ಕಳು ತಪ್ಪಿಸಿಕೊಳ್ಳುತ್ತಿದ್ದಾರೆ. ಅಂಥ ಮಕ್ಕಳು ವಿವಿಧ ಸಾಮಾಜಿಕ ಅನಿಷ್ಠ ಪದ್ಧತಿಗೆ ಸಿಲುಕಿ ತಮ್ಮ ಬಾಲ್ಯ ಕಳೆದುಕೊಳ್ಳುತ್ತಿದ್ದಾರೆ. ಇದನ್ನು ತಡೆ­ಯಲು ಪಾಲಕರು, ಸಮುದಾಯ, ವಿವಿಧ ಇಲಾಖೆಯ ಪದಾಧಿಕಾರಿಗಳು ಮುಂಜಾ­ಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು’ ಎಂದು ಹೇಳಿದರು.

ಜಿಲ್ಲಾ ಕಾನೂನು ಸೇವೆಗಳ ಪ್ರಾಧಿ­ಕಾರದ ಕಾರ್ಯದರ್ಶಿ ಎಸ್‌.ಎನ್‌.ಹೆಗಡೆ, ‘ಕಾಣೆಯಾದ ಮಕ್ಕಳನ್ನು ಪತ್ತೆ ಮಾಡು­ವಲ್ಲಿ ವಿಳಂಬ ಮಾಡಿದರೆ ಮಕ್ಕಳು ಸಮಾಜ ದ್ರೋಹಿ ಮತ್ತು ಸಮಾಜ­ಘಾತುಕ ಚಟುವಟಿಕೆಗಳಲ್ಲಿ ಭಾಗಿ­ಯಾಗುವ ಸಾಧ್ಯತೆ ಇರುತ್ತದೆ. ದೇಶದಲ್ಲಿ ಪ್ರತಿ 8 ನಿಮಿಷಕ್ಕೆ ಒಂದು ಮಗು ಕಾಣೆಯಾಗುತ್ತಿರುವುದು ಆತಂಕದ ಸಂಗತಿ. ಇದರಲ್ಲಿ ಶೇ 60ರಷ್ಟು ಮಕ್ಕಳು ಪತ್ತೆಯಾಗದೇ ಉಳಿದಿರುವುದು ಒಂದು ಸವಾಲಾಗಿದೆ’ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಕಾಣೆಯಾದ ಮಕ್ಕಳ ಕುರಿತಾದ ಮಾಹಿತಿ ಒಳಗೊಂಡ ಕರಪತ್ರ ಹಾಗೂ ಸ್ಟಿಕರ್‌ಗಳನ್ನು ಜಿಲ್ಲಾ ನ್ಯಾಯಾಧೀಶ ಎಂ.ರಮೇಶ ರಾವ್‌ ಬಿಡುಗಡೆ ಮಾಡಿದರು. ‘ಮಕ್ಕಳನ್ನು ಒಳ್ಳೆಯ ದಾರಿಯಲ್ಲಿ ನಡೆಯುವಂತೆ ಮಾಡುವ ಜವಾಬ್ದಾರಿ ತಂದೆ ತಾಯಿಯರದ್ದು. ಮಕ್ಕಳ ಸರ್ವತೋಮುಖ ಅಭಿವೃ­ದ್ಧಿಗಾಗಿ ಪೋಷಕರು ಹಾಗೂ ಸಮಾಜ ಶ್ರಮಿಸಬೇಕು’ ಎಂದು ಹೇಳಿದರು.

ನಂತರ ನಗರದ ತಾತ್ಕಾಲಿಕ ಬಸ್‌ ನಿಲ್ದಾಣಗಳಾದ ಶಿವಾಜಿ ವೃತ್ತ, ಜ್ಯುಬಿಲಿ ವೃತ್ತ, ಕೋರ್ಟ್‌ ವೃತ್ತದಲ್ಲಿ ಕರಪತ್ರಗಳನ್ನು ಹಂಚಲಾಯಿತು. ಸಾರ್ವಜನಿಕ ಸ್ಥಳಗಳಲ್ಲಿ ಸ್ಟಿಕರ್‌ಗಳನ್ನು ಅಂಟಿಸಲಾಯಿತು. ಪೊಲೀಸ್‌ ವಾಹನದಲ್ಲಿ ನಗರದ ವಿವಿಧ ಬಡಾವಣೆಗಳಿಗೆ ತೆರಳಿ ಧ್ವನಿವರ್ಧಕದ ಮೂಲಕ ಕಾಣೆಯಾಗುತ್ತಿರುವ ಮಕ್ಕಳ ಕುರಿತು ಜಾಗೃತಿ ಮೂಡಿಸಲಾಯಿತು.

ನ್ಯಾಯಾಧೀಶ­ರಾದ ಈಶಪ್ಪ ಭೂತೆ, ಎ.ವಿ.ಶ್ರೀನಾಥ, ಎಂ.ಆರ್‌.ಒಡೆಯರ್‌, ಎಂ.ಡಿ.ರೂಪಾ, ಪೊಲೀಸ್‌ ಇಲಾಖೆಯ ಡಿಸಿಪಿ ಎಂ.ಎಸ್‌.ಜೋಗಳೇಕರ, ಎಸಿಪಿ ವಾಸುದೇವ, ಸಿಪಿಐ ಚನ್ನಕೇಶವ ಟಿಂಗರೀಕರ್‌, ಶಿವಾನಂದ ಚಲವಾದಿ, ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ನಿಯಂತ್ರಣಾಧಿಕಾರಿ ಎಸ್‌.ಆರ್.­ಜೋಶಿ, ಬಿ.ಎಸ್‌.ಸಂಗಟಿ, ಪ್ರಫುಲ್ಲಾ ನಾಯಕ, ವಿ.ಡಿ.ಕಾಮರಡ್ಡಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT