ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾಲ್ಕು ದಶಕಗಳ ‘ರಂಗ ಹೆಜ್ಜೆ’

Last Updated 27 ಜುಲೈ 2016, 19:30 IST
ಅಕ್ಷರ ಗಾತ್ರ

ನಲವತ್ತಾರು ವರ್ಷಗಳಿಂದ ನಿರಂತರ ರಂಗಯಾತ್ರೆ ನಡೆಸುತ್ತಿರುವ ತಂಡ  ‘ರಂಗ ಹೆಜ್ಜೆ’. ಇದರ ಸ್ಥಾಪಕ ಆರ್‌.ರಾಮಮೂರ್ತಿ ಅಪ್ಪಟ ರಂಗಪ್ರೇಮಿ. ರಂಗ ಜಂಗಮ ಬಿ.ವಿ.ಕಾರಂತರಿಂದ ಪ್ರೇರಿತರಾಗಿ ನಾಟಕದ ಎಲ್ಲ ವಿಭಾಗಗಳಲ್ಲಿ  ಪರಿಣಿತಿ ಸಾಧಿಸಿದವರು. ತಾವು ನಿರ್ದೇಶಿಸುವ ನಾಟಕಗಳಿಗೆ ರಂಗಸಜ್ಜಿಕೆ, ಸಂಗೀತ, ಪ್ರಸಾಧನ ಎಲ್ಲವನ್ನೂ ಸ್ವಯಂ ಸಿದ್ಧಪಡಿಸಿಕೊಳ್ಳುತ್ತಾರೆ.

ಉತ್ತಮ ಹಾಡುಗಾರರೂ ಆಗಿರುವ ಇವರು ಸಿ.ಅಶ್ವತ್ಥ್ ಜೊತೆ ಅನೇಕ ಕಾರ್ಯಕ್ರಮಗಳಲ್ಲಿ ಹಾಡಿದ್ದಾರೆ. ಬೇರೆ ತಂಡಗಳ ನಾಟಕಗಳಿಗೂ ಕೆಲಸ ಮಾಡುತ್ತಿದ್ದಾರೆ.1970ರಲ್ಲಿ ರಂಗ ಹೆಜ್ಜೆ ತಂಡ ಕಟ್ಟಿದ ಇವರು ಅದಕ್ಕೂ ಮುಂಚೆ ಬೇರೆ ಬೇರೆ ತಂಡಗಳ ಜೊತೆ ದುಡಿದಿದ್ದಾರೆ.  ಐಟಿಐ ಕಂಪೆನಿಯಲ್ಲಿ ಉದ್ಯೋಗಿಯಾಗಿದ್ದುಕೊಂಡು, ಅಲ್ಲೂ ನಾಟಕ ತಂಡ ಕಟ್ಟಿ ರಂಗಭೂಮಿಯ ನಂಟು ಉಳಿಸಿಕೊಂಡವರು.

ಐಟಿಐ ಲಲಿತಕಲಾ ಸಂಘದಲ್ಲಿ ಸುಮಾರು 18 ವರ್ಷ ಅಧ್ಯಕ್ಷರಾಗಿದ್ದರು. ಅಲ್ಲಿ ಸುಮಾರು 40 ನಾಟಕಗಳನ್ನು ನಿರ್ದೇಶಿಸಿದ್ದಾರೆ. ರಂಗಹೆಜ್ಜೆ ತಂಡದಿಂದ ವರ್ಷಕ್ಕೆ ನಾಲ್ಕರಿಂದ ಆರು ನಾಟಕಗಳನ್ನು ಸಿದ್ಧಪಡಿಸುತ್ತಿದ್ದಾರೆ.

ಪ್ರಮುಖ ನಾಟಕಗಳು
ದೂರದರ್ಶನಕ್ಕಾಗಿ ಇವರು ಸಿದ್ಧಪಡಿಸಿದ ‘ರೊಟ್ಟಿ ಋಣ’, ‘ಮಹಾಯಾನ’, ‘ಕಿರಾತಕ ವಧೆ’ ನಾಟಕಗಳು ಈಗಲೂ ಮರು ಪ್ರಸಾರವಾಗುತ್ತಿರುತ್ತವೆ.
‘ಜೋಕುಮಾರಸ್ವಾಮಿ’, ‘ತಲೆದಂಡ’,‘ದಿವ್ಯದರ್ಶನ’, ‘ಬಿರುಗಾಳಿ’,‘ಹಯವದನ’,‘ರಕ್ತಾಕ್ಷಿ’,‘ಸಂಗ್ಯಾಬಾಳ್ಯ’ ಸೇರಿದಂತೆ ಹಲವು ಪ್ರಮುಖ ನಾಟಕಗಳನ್ನು ನಿರ್ದೇಶಿಸಿದ್ದಾರೆ.

ಡಿ.ಕೆ.ಶಿಂಧೆ ಅವರು ದಾಖಲೆಗಾಗಿ ಮಾಡಿದ 108 ಗಂಟೆಗಳ ನಾಟಕದಲ್ಲಿ 8 ಗಂಟೆಗಳ ಭಾಗವನ್ನು ರಾಮಮೂರ್ತಿ ಅವರು ನಿರ್ದೇಶನ ಮಾಡಿದ್ದಾರೆ. ಇದರ ಜೊತೆಗೆ ಅನೇಕ ಮಕ್ಕಳ ನಾಟಕಗಳನ್ನೂ ನಿರ್ದೇಶಿಸಿದ್ದಾರೆ.

ಬೆಂಗಳೂರು ವಿಶ್ವವಿದ್ಯಾಲಯದಿಂದ ನಾಟಕ ಡಿಪ್ಲೊಮಾ ಪಡೆದಿರುವ ಇವರು ಮೇಕಪ್‌ ನಾಣಿ, ಆರ್.ಟಿ.ರಮಾ, ಬಿ.ಚಂದ್ರಶೇಖರ್‌, ಬಿ.ಜಯಶ್ರೀ ಅವರ ಜೊತೆ ಕೆಲಸ ಮಾಡಿದ್ದಾರೆ. ‘ಘಾಶೀ ರಾಮ್‌ ಕೊತ್ವಾಲ್‌ ’ ನಾಟಕದಲ್ಲಿ ಶ್ಯಾಮಲಾ ಜಿ.ಭಾವೆ ಅವರ ಜೊತೆ ಸಹ ಸಂಗೀತಗಾರರಾಗಿಯೂ ಕೆಲಸ ಮಾಡಿದ ಅನುಭವವೂ ಅವರದು.ಇತ್ತೀಚೆಗೆ ‘ರಂಗಶ್ರೀ’ ನಡೆಸಿದ ನಾಟಕ ಸ್ಪರ್ಧೆಯಲ್ಲಿ ಇವರ ನಿರ್ದೇಶನದ ‘ಕೋಮಲ ಗಾಂಧಾರ’ ನಾಟಕ ಪ್ರಥಮ ಸ್ಥಾನ ಪಡೆದಿದೆ.

ಪ್ರಮುಖ ಕಲಾವಿದರು
ಶ್ರೀನಿವಾಸ ಕೆಂಬ್ತೂರು, ಶಿವಶಂಕರ ಮೂರ್ತಿ, ಮಾದಯ್ಯ, ಭರತ್‌ರಾಜ್‌, ಪೂರ್ಣಿಮಾ, ಗಂಗಾಧರಗೌಡ, ಪ್ರಕಾಶ್‌, ವೆಂಕಟರಮಣ, ನೊಣವಿನಕೆರೆ ರಾಮಕೃಷ್ಣಯ್ಯ, ಮಂಜು ದೊಡ್ಡಮನಿ ರಂಗಹೆಜ್ಜೆ ತಂಡದ ಕಾಯಂ ಕಲಾವಿದರು. ಕಿರುತೆರೆಯಲ್ಲಿ  ಹೆಸರಾದ ಹುಲಿವಾನ ಗಂಗಾಧರಯ್ಯ, ಅಮರನಾಥ್‌, ಆರ್.ಆಂಜಿನಪ್ಪ ಅವರು ರಾಮಮೂರ್ತಿ ಅವರ ಜೊತೆ ರಂಗಭೂಮಿಯಲ್ಲಿ ಕೆಲಸ ಮಾಡಿದವರು.  

ಅಜ್ಜಿ– ಅಜ್ಜ ಪ್ರೇರಣೆ
ನನ್ನೂರು ಮಂಡ್ಯ. ಅಜ್ಜಿ–ತಾತ  ಮಂಟೆಸ್ವಾಮಿಯ ಕತೆಗಳನ್ನು ಹೇಳುವ ನೀಲಗಾರರು. ಅಪ್ಪ ಪೌರಾಣಿಕ ನಾಟಕಗಳಲ್ಲಿ ಪಾತ್ರ ಮಾಡುತ್ತಿದ್ದರು. ಅದನ್ನು ನೋಡುತ್ತಾ ನನಗೂ ರಂಗಭೂಮಿಯ ಸೆಳೆತ ಉಂಟಾಯಿತು.

ನಾಟಕದ ವಿವಿಧ ವಿಭಾಗಗಳಲ್ಲಿ ತೊಡಗಿಕೊಳ್ಳುವಲ್ಲಿ ಬಿ.ವಿ.ಕಾರಂತರೇ ನನಗೆ ಪ್ರೇರಣೆ. ಹಾಗೆಯೇ ಪ್ರಸನ್ನ ಅವರು ನನಗೆ ಮೇರು ಗುರು. ಅವರಿಂದ  ನಾಟಕ ವಿನ್ಯಾಸ ಮಾಡುವುದನ್ನು ಕಲಿತೆ. ಐಟಿಐ ಸಂಸ್ಥೆಯಲ್ಲಿ 29 ವರ್ಷ ಸೇವೆ ಸಲ್ಲಿಸಿದ್ದೆ. ಅಲ್ಲಿನ ಸಿಬ್ಬಂದಿಗಾಗಿ ನಾಟಕ ನಿರ್ದೇಶನ ಮಾಡಿದ್ದೇನೆ. ನನ್ನ ಪತ್ನಿ ನಡೆಸುತ್ತಿರುವ ‘ಅನಿಕೇತನ’ ಸಂಸ್ಥೆಗೆ ನಾಟಕ ನಿರ್ದೇಶನ ಮಾಡಿದ್ದೇನೆ. ಮಕ್ಕಳಿಗಾಗಿ ‘ಕಂಸ’, ‘ಕೀಚಕವಧೆ’ ನಿರ್ದೇಶನ ಮಾಡಿದ್ದೇನೆ.

ರಾಮಾಯಣ ಮಕ್ಕಳ ಬ್ಯಾಲೆ ಅತ್ಯಂತ ಯಶಸ್ವಿ ಪ್ರದರ್ಶನಗಳನ್ನು ಕಂಡಿದೆ. ರಾಜ್ಯದ ಬೇರೆ ಬೇರೆ ಜಿಲ್ಲೆಗಳಲ್ಲಿ ನಮ್ಮ ತಂಡ ಪ್ರದರ್ಶನ ನೀಡಿದೆ. ಕೆಲವು ಚಲನಚಿತ್ರಗಳಿಗೆ  ಕಲಾ ನಿರ್ದೇಶನವನ್ನೂ ಮಾಡಿದ್ದೇನೆ. ಕಿರುತೆರೆಯಲ್ಲಿ ಪಾತ್ರವನ್ನೂ ಮಾಡಿದ್ದೇನೆ. ಆದರೆ, ರಂಗಭೂಮಿಯೇ ನನ್ನ ಕರ್ಮಭೂಮಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT