ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾಳದ ತೊಂದರೆಗೂ ಇದೆ ಪರಿಹಾರ

Last Updated 29 ಜುಲೈ 2016, 19:30 IST
ಅಕ್ಷರ ಗಾತ್ರ

ಫ್ಯಾಲೋಪಿಯನ್‌ ಟ್ಯೂಬ್‌ ರೀ–ಕ್ಯಾನಲೈಸೇಷನ್‌ ಎಂದರೇನು?
ಫ್ಯಾಲೋಪಿನ್‌ ನಾಳ(ಟ್ಯೂಬ್‌)ದ ಅಡಚಣೆಯನ್ನು ಶಸ್ತ್ರಚಿಕಿತ್ಸೆಯಿಲ್ಲದೆಯೇ ಸರಿ ಮಾಡುವ ವಿಧಾನವೇ ಫ್ಯಾಲೋಪಿಯನ್‌ ಟ್ಯೂಬ್‌ ರೀ–ಕ್ಯಾನಲೈಸೇಷನ್‌ (FTR). ಟ್ಯೂಬ್‌ನ ಸ್ವಲ್ಪ ಭಾಗ ಮಾತ್ರವೇ ಅಡಚಣೆಯನ್ನು ಒಡ್ಡುತ್ತಿದ್ದರೆ ಈ ವಿಧಾನ ಪರಿಣಾಮಕಾರಿ.

ಫ್ಯಾಲೋಪಿಯನ್‌ ಟ್ಯೂಬ್‌ ರೀ–ಕ್ಯಾನಲೈಸೇಷನ್‌ನನ್ನು ಹೇಗೆ ಮಾಡಲಾಗುತ್ತದೆ?
ಟ್ಯೂಬ್‌ನ ‘ಮರು–ತೆರೆಯುವಿಕೆ’(ರೀ–ಓಪನಿಂಗ್‌)ಯ ವೈಜ್ಞಾನಿಕ ಹೆಸರೇ ‘ರೀ–ಕ್ಯಾನಲೈಸೇಷನ್‌’. ಇದನ್ನು ಅಲ್ಟ್ರಾ–ಸೌಂಡ್‌ ಅಥವಾ ಫ್ಲೋರೋಸ್ಕೋಪಿ ಅಥವಾ ಹಿಸ್ಟಿರಿಯಾಸ್ಕೋಪಿಯ ನೆರವಿನಿಂದ ಮಾಡಲಾಗುತ್ತದೆ. ಟ್ಯೂಬ್‌ಗೆ ಎಷ್ಟು ಹಾನಿಯಾಗಿದೆ ಎನ್ನುವುದು ಈ ಚಿಕಿತ್ಸಾಕ್ರಮದ ಯಶಸ್ಸನ್ನು ನಿರ್ಧರಿಸುತ್ತದೆ.

ಎರಡು ಫ್ಯಾಲೋಪಿಯನ್‌ ಟ್ಯೂಬ್‌ಗಳಲ್ಲಿ ಒಂದು ಸರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾಗ ಗರ್ಭ ಧರಿಸುವ ಸಾಧ್ಯತೆ ಇದೆಯೆ?
ಹೌದು, ಸಾಧ್ಯವಿದೆ. ಎರಡು ಫ್ಯಾಲೋಪಿನ್‌ ಟ್ಯೂಬ್‌ಗಳಲ್ಲಿ ಒಂದು ಅಡಚಣೆಗೆ ತುತ್ತಾಗಿ ಒಂದು ಮಾತ್ರವೇ ಸರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾಗ ಗರ್ಭಧಾರಣೆ ಸಾಧ್ಯವಿದೆ; ಆದರೆ ಇದಕ್ಕಾಗಿ ಬೇಕಾಗುವ ಸಮಯ ಹೆಚ್ಚು.

ಮಹಿಳೆಯ ಶರೀರದ ಎರಡೂ ಭಾಗಗಳಲ್ಲಿ – ಅಂದರೆ ದೇಹದ ಎಡ ಮತ್ತು ಬಲಭಾಗಗಳಲ್ಲಿ – ಒಂದೊಂದು ಅಂಡಾಶಯ ಮತ್ತು ಫ್ಯಾಲೋಪಿನ್‌  ಟ್ಯೂಬ್‌ಗಳಿರುತ್ತವೆ. ಪ್ರತಿ ತಿಂಗಳು ಅಂಡಾಣುಗಳು ಉತ್ಪತ್ತಿಯಾಗಿ ಅವು ಆಯಾ ಭಾಗದ ನಾಳದ ಒಳಕ್ಕೆ ತಳ್ಳಲ್ಪಡುತ್ತವೆ. 

ಇದು ಒಂದಾದ ಮೇಲೊಂದರಂತೆ ನಡೆಯುತ್ತದೆ. ಎಂದರೆ ಈ ತಿಂಗಳು ಈ ಪ್ರಕ್ರಿಯೆ ಎಡಭಾಗದಲ್ಲಿ ನಡೆದರೆ, ಮುಂದಿನ ತಿಂಗಳು ಬಲಭಾಗದಲ್ಲಿ ನಡೆಯುತ್ತದೆ. ಆದರೆ ಕೆಲವೊಮ್ಮೆ ಒಂದು ಭಾಗದ ಅಂಡಾಶಯದಲ್ಲಿ ಅಂಡಾಣುಗಳೇ ಉತ್ಪತ್ತಿಯಾಗದು; ಆಗ ಅದಕ್ಕೆ ಕಾರಣವನ್ನು ಪತ್ತೆ ಮಾಡಬೇಕಾಗುತ್ತದೆ.

ಅಂಡಾಣುವು ಫ್ಯಾಲೋಪಿಯನ್‌ ಟ್ಯೂಬ್‌ ಮೂಲಕ ಹರಿದು ಗರ್ಭಕೋಶದ ಕುಹುರವನ್ನು ಸೇರುತ್ತದೆ. ಈ ಸಮಯದಲ್ಲಿ – ಎಂದರೆ ಈ ತಿಂಗಳ ಕಾಲಾವಧಿಯಲ್ಲಿ – ಸಂಭೋಗ ನಡೆದರೆ, ಆಗ ವೀರ್ಯಾಣುವು ಯೋನಿನಾಳದ ಮೂಲಕ ಒಳಹರಿದು ಗರ್ಭಕೋಶದ ಕುಹುರವನ್ನು ತಲುಪಿ, ಅಲ್ಲಿಂದ ಫ್ಯಾಲೋಪಿಯನ್‌ ಟ್ಯೂಬನ್ನು ಮುಟ್ಟುತ್ತದೆ; ಅಲ್ಲಿ ಈಗಾಗಲೇ ಅಂಡಾಣುವು ಕಾಯುತ್ತಿರುತ್ತದೆ. ಅಲ್ಲಿ ಅಂಡಾಣು ಮತ್ತು ವೀರ್ಯಾಣುವು ಒಂದು ಇನ್ನೊಂದರಲ್ಲಿ ಒಂದಾಗುತ್ತದೆ.

ಅಂಡಾಣವು ಫಲಗೊಳ್ಳಲು ಆವಶ್ಯಕವಾಗಿರುವ ಜೀವರಾಸಾಯನಿಕ ವಾತಾವರಣವನ್ನು ಫ್ಯಾಲೋಪಿಯನ್‌ ಟ್ಯೂಬ್‌ ಒದಗಿಸುತ್ತದೆ. ಹೀಗೆ ಫಲಗೊಂಡ ಅಂಡಾಣುವು ನಿಧಾನವಾಗಿ ಗರ್ಭಕೋಶದ ಕುಹರದ ಕಡೆ ಚಲಿಸಿ, ಅಲ್ಲಿ ಅದು ನಾಟಿಯಾಗುತ್ತದೆ. ಹೀಗಾಗಿ ಅಂಡಾಣುವು ಆರೋಗ್ಯಕರ ಫಲಗೊಳ್ಳಲು ಫ್ಯಾಲೋಪಿಯನ್‌ ಟ್ಯೂಬ್‌ ಅತ್ಯಂತ ಮುಖ್ಯ. ಇದು ಕೇವಲ ಅಂಡಾಣುವು ಗರ್ಭಕೋಶವನ್ನು ಸೇರಲು ಹಾದಿಯನ್ನು ಕಲ್ಪಿಸುವುದಷ್ಟೆ ಅಲ್ಲ, ಅಂಡಾಣು ಮತ್ತು ವಿರ್ಯಾಣುಗಳು ಒಂದಾಗಿ ಸೇರಲು ಬೇಕಾದ ಪರಿಸರವನ್ನೂ ಒದಗಿಸುತ್ತದೆ. 

ಫ್ಯಾಲೋಪಿನ್‌ ಟ್ಯೂಬ್‌ನ ಮುಚ್ಚುವಿಕೆಗೆ ಒಳಗಾಗಿರುವ ಮಹಿಳೆಯರಲ್ಲಿ ಗರ್ಭಧಾರಣೆಗೆ ತೊಂದರೆ ಎದುರಾಗುತ್ತದೆ. ಆದರೆ ಎರಡು ಟ್ಯೂಬ್‌ಗಳಲ್ಲಿ ಒಂದು ಸರಿಯಾಗಿದ್ದರೆ ಈ ಗರ್ಭಧಾರಣೆಯ ಸಮಸ್ಯೆ ಅಷ್ಟಾಗಿ ಕಾಣಿಸದು. ಎರಡೂ ಟ್ಯೂಬ್‌ಗಳು ತೊಂದರೆಗೆ ಒಳಗಾಗಿದ್ದರೆ ಅದಕ್ಕೆ ಚಿಕಿತ್ಸೆಯನ್ನು ಪಡೆದರಷ್ಟೆ ಗರ್ಭಧಾರಣೆ ಸಾಧ್ಯ ಅಥವಾ ಕೃತಕ ಗರ್ಭಧಾರಣೆಯ ಆಸರೆಯನ್ನು ಪಡೆಯಬೇಕಾಗುತ್ತದೆ.

ಫ್ಯಾಲೋಪಿಯನ್‌ ಟ್ಯೂಬ್‌ ಮುಚ್ಚುವಿಕೆಗೆ ತುತ್ತಾಗಿದೆ ಎಂದು ಹೇಗೆ ತಿಳಿಯುತ್ತದೆ?
ಆಶ್ಚರ್ಯ ಎಂದರೆ, ಫ್ಯಾಲೋಪಿಯನ್‌ ಟ್ಯೂಬ್‌ನ ಅಡ್ಡಿಗೆ ತುತ್ತಾಗಿರುವಂಥ ಸಾಕಷ್ಟು ಮಹಿಳೆಯರಿಗೆ ಈ ತೊಂದರೆ ಅನುಭವಕ್ಕೇ ಬರುವುದಿಲ್ಲ. ಈ ತೊಂದರೆ ಇರುವ ಕೆಲವರಲ್ಲಿ ಕಿಬ್ಬೊಟ್ಟೆಯ ಒಂದು ಪಾರ್ಶ್ವದಲ್ಲಿ ಒಂದೇ ಸಮನೆ ನೋವು ಕಾಣಿಸಿಕೊಳ್ಳಬಹುದು. ಈ ನೋವು ಋತುಚಕ್ರದ ಸಮಯದಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳಬಹುದು. ಆದರೆ ಹೀಗೆ ಕಾಣಿಸಿಕೊಳ್ಳುವ ನೋವಿಗೆ ಬೇರೆಯ ಕಾರಣಗಳೂ ಇರುತ್ತವೆ. ಆದುದರಿಂದ ಇಂಥ ನೋವು ಕಾಣಿಸಿಕೊಂಡ ಕೂಡಲೇ ಫ್ಯಾಲೋಪಿಯನ್‌ ಟ್ಯೂಬ್‌ನಲ್ಲಿ ತೊಂದರೆ ಇದೆಯೆಂದು ಭಾವಿಸಿ ಆತಂಕಿತರಾಗಬೇಕಾಗಿಲ್ಲ.

ಫ್ಯಾಲೋಪಿಯನ್‌ ಟ್ಯೂಬ್‌ನ ಸಮಸ್ಯೆಗೆ ಪಡೆಯುವ ಚಿಕಿತ್ಸೆಯಿಂದ (ಟ್ಯೂಬಲ್‌ ಶಸ್ತ್ರಚಿಕಿತ್ಸೆ) ಏನಾದರೂ ತೊಂದರೆಗಳು ಎದುರಾಗುತ್ತವೆಯೆ?
ಒಮ್ಮೊಮ್ಮೆ ಯೋನಿನಾಳದಲ್ಲಿ ರಕ್ತಸ್ರಾವ ಸಂಭವಿಸಬಹುದು. ಕಿಬ್ಬೊಟ್ಟೆಯಲ್ಲಿ ನೋವು ಕಾಣಿಸಿಕೊಳ್ಳಬಹುದು. ಹೀಗೆ ತೊಂದರೆಗಳು ಕಾಣಿಸಿಕೊಂಡ ಕೂಡಲೇ ತಜ್ಞವೈದ್ಯರನ್ನು ಸಂಪರ್ಕಿಸಿ, ಅಗತ್ಯ ಚಿಕಿತ್ಸೆಯನ್ನು ಪಡೆಯಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT