ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿಖಿಯಾ ಪಾಠೋಪಕರಣ ಸೇವೆ

Last Updated 30 ಜುಲೈ 2015, 19:34 IST
ಅಕ್ಷರ ಗಾತ್ರ

‘ನಾನು ಇದುವರೆಗೆ ಶಾಲೆಗೆ ಬ್ಯಾಗ್ ಕೊಂಡೊಯ್ದಿರಲಿಲ್ಲ. ಇದೇ ನನ್ನ ಮೊದಲ ಬ್ಯಾಗ್. ಇನ್ನು ಮುಂದೆ ಪ್ಲಾಸ್ಟಿಕ್ ಕವರ್ ಬದಲಾಗಿ ಬ್ಯಾಗಿನಲ್ಲಿ ಪುಸ್ತಕ ಪೆನ್ಸಿಲ್ ಕೊಂಡೊಯ್ಯುತ್ತೇನೆ. ಬ್ಯಾಗ್‌ ಕೊಟ್ಟಿದ್ದಕ್ಕೆ ಧನ್ಯವಾದಗಳು.’

–ನಾಲ್ಕನೇ ತರಗತಿಯಲ್ಲಿ ಓದುತ್ತಿರುವ ರೋಜಾ ತನಗೆ ಬ್ಯಾಗ್‌ ಅನ್ನು ಉಡುಗೊರೆಯಾಗಿ ನೀಡಿದ ನಿಖಿಯಾಗೆ ಪತ್ರ ಬರೆದು ತನ್ನ ಸಂತೋಷ ಹಂಚಿಕೊಂಡಳು. ರೋಜಾ ಪತ್ರ ಓದಿದ ನಂತರ ನಿಖಿಯಾಳ ಮನದಲ್ಲಿ ಧನ್ಯತಾಭಾವ ಮೂಡಿತು. ರೋಜಾ ಬರೆದಿದ್ದ ನಾಲ್ಕು ವಾಕ್ಯದ ಒಕ್ಕಣೆ ನಿಖಿಯಾಳ ಮನಸ್ಸಿನಲ್ಲಿ ಬಡ ಮಕ್ಕಳಿಗೆ ಮತ್ತಷ್ಟು ಬೆಂಬಲ ನೀಡಬೇಕು ಎಂಬ ಸಂಕಲ್ಪ ಮಾಡಿಕೊಳ್ಳಲು ಕಾರಣವಾಯಿತು.

ಗ್ರೀನ್‌ವುಡ್ ಶಾಲೆಯ ಹದಿಮೂರು ವರ್ಷದ ವಿದ್ಯಾರ್ಥಿನಿ ನಿಖಿಯಾ ಶಂಶೀರ್ ಎಲ್ಲ ವಿದ್ಯಾರ್ಥಿಗಳಂತಲ್ಲ. ಬಡ ಮಕ್ಕಳ ಶಿಕ್ಷಣಕ್ಕೆ ನೆರವಾಗಬೇಕು, ಅವರ ಮೊಗದಲ್ಲೂ ಸರಸ್ವತಿಯ ಕಳೆ ಮೂಡಬೇಕು ಎಂಬ ಕನಸನ್ನು ಪುಟ್ಟ ವಯಸ್ಸಿನಲ್ಲೇ ಕಂಡವಳು. ಕನಸು ಕಂಡು ಸುಮ್ಮನಾಗದ ಈಕೆ ವಿದ್ಯಾರ್ಥಿಗಳು ಬಳಸಿದ ಪುಸ್ತಕ, ಬ್ಯಾಗ್, ಪೆನ್ಸಿಲ್ ಹೀಗೆ ಕಲಿಕೆಗೆ ಬೇಕಾಗುವ ಎಲ್ಲ ವಸ್ತುಗಳನ್ನು ತನ್ನ ಶಾಲೆಯೂ ಸೇರಿದಂತೆ  ಸುತ್ತಮುತ್ತಲಿನ ಶಾಲೆಗಳಲ್ಲಿ ಸಂಗ್ರಹಿಸಿ ಬಡ ಮಕ್ಕಳಿಗೆ ವಿತರಿಸುವ ಕೆಲಸ ಮಾಡುತ್ತಿದ್ದಾರೆ. ಇದಷ್ಟೇ ಅಲ್ಲದೆ ತನ್ನ ಈ ಯೋಜನೆಯ ಲಾಭವನ್ನು  ಬಹುಸಂಖ್ಯಾತ ಬಡ ಮಕ್ಕಳಿಗೆ ತಲುಪಿಸಲು ಬ್ಯಾಗ್ಸ್, ಬುಕ್ಸ್ ಆಂಡ್ ಬ್ಲೆಸ್ಸಿಂಗ್ಸ್.ಕಾಂ  (http://www.bagsbook sandblessings.com) ವೆಬ್‌ಸೈಟ್ ಕೂಡ ಆರಂಭಿಸಿದ್ದಾಳೆ.

‘ನನ್ನ ಜೊತೆ ಕಲಿಯುವ ವಿದ್ಯಾರ್ಥಿಗಳು ಹಾಗೂ ನನ್ನ ಸ್ನೇಹಿತರಿಗೆ ತಮ್ಮ ಹಳೆಯ ಪುಸ್ತಕ, ಬ್ಯಾಗ್ ಹಾಗೂ ಕಲಿಕಾ ಸಾಮಗ್ರಿಗಳನ್ನು ದಾನ ಮಾಡುವಂತೆ ಸ್ಫೂರ್ತಿ ತುಂಬುತ್ತೇನೆ. ನಮ್ಮ ಪುಟ್ಟಪುಟ್ಟ ದಾನಗಳು ರೋಜಾಳಂತಹ ಹಲವು ಬಡ ಮಕ್ಕಳ ಮೊಗದಲ್ಲಿ ಖುಷಿ ಮೂಡಿಸುತ್ತವೆ ಎಂಬುದನ್ನು ತಿಳಿಸಿಕೊಡುತ್ತೇನೆ’ ಎನ್ನುವ ನಿಖಿಯಾ, ತಮ್ಮ ಈ ಆಲೋಚನೆಯನ್ನು ದೊಡ್ಡ ಮಟ್ಟಕ್ಕೆ ಕೊಂಡೊಯ್ಯಲು ಶಾಲೆಯ ಪ್ರಾಂಶುಪಾಲರಾದ ಡಿಮೆಲೊ ಅವರಿಂದ ಅನುಮತಿ ಪಡೆದುಕೊಂಡಿದ್ದಾಳೆ. ಪುಟ್ಟ ಹುಡುಗಿಯ ನಿಸ್ವಾರ್ಥ ಸೇವೆಯ ಮಹತ್ವವನ್ನು ಅರಿತ ಡಿಮೆಲೊ, ಅನುಮತಿಯ ಜೊತೆಗೆ ಅಗತ್ಯ ಸಲಹೆ ಹಾಗೂ ಬೆಂಬಲ ಕೂಡ ನೀಡುತ್ತಿದ್ದಾರೆ.

‘ವಸ್ತುಗಳ ಸಂಗ್ರಹ ಚಟುವಟಿಕೆಯನ್ನು ಮೊದಲಿಗೆ 1ರಿಂದ 5ನೇ ತರಗತಿಯ ಮಕ್ಕಳಿಂದ ಆರಂಭಿಸುವ ಯೋಚನೆ ನನ್ನಲ್ಲಿ ಮೂಡಿತು. ಏಕೆಂದರೆ ಈ ವಯಸ್ಸಿನಲ್ಲಿ ಮಕ್ಕಳ ಬೆಳವಣಿಗೆ ವೇಗವಾಗಿರುತ್ತದೆ.  ಪ್ರತಿವರ್ಷವೂ ಅವರ ಶಾಲಾ ಸಮವಸ್ತ್ರ ಹಾಗೂ ಶೂಗಳ ಅಳತೆ ಬದಲಾಗುತ್ತಿರುತ್ತದೆ. ಈ ಒಂದು ಕಾರಣದಿಂದ ನಮಗೆ ಪುಟ್ಟ ಮಕ್ಕಳಿಂದ ಹೆಚ್ಚಿನ ವಸ್ತುಗಳನ್ನು ದಾನ ಪಡೆದುಕೊಳ್ಳಬಹುದು’ ಎನ್ನುತ್ತಾಳೆ ನಿಖಿಯಾ.

ತನ್ನ ಯೋಜನೆಯನ್ನು ಪ್ರಬಲವಾಗಿ ಕಾರ್ಯರೂಪಕ್ಕೆ ತರಲು ನಿಖಿಯಾ ಭಿತ್ತಿ ಚಿತ್ರಗಳ ನೆರವು ಪಡೆದುಕೊಂಡಿದ್ದಾಳೆ. ತಾನೇ ತಯಾರಿಸಿದ ಭಿತ್ತಿ ಚಿತ್ರಗಳನ್ನು  ಶಾಲೆಯ ಪ್ರತಿ ಮೂಲೆಯಲ್ಲೂ ಪ್ರದರ್ಶಿಸಿದ್ದಾಳೆ. ಚಿಕ್ಕ ಮಕ್ಕಳು ಈ ಸಂಗತಿಯನ್ನು ಪೋಷಕರಿಗೆ ಮುಟ್ಟಿಸುವಲ್ಲಿ ಮರೆತು ಬಿಡುತ್ತಾರೆ ಎಂಬ ಕಾರಣಕ್ಕೆ ಮಕ್ಕಳ ಪೋಷಕರಿಗೆ ಬಳಸಿದ ವಸ್ತುಗಳ ದಾನದ ಕುರಿತಾಗಿ ಇ-ಮೇಲ್ ಕಳುಹಿಸಲು ಪ್ರಾಂಶುಪಾಲರ ನೆರವು ಪಡೆದುಕೊಂಡಿದ್ದಾಳೆ. ಶಾಲೆಯ ಬಿಡುವಿನ ಸಮಯದಲ್ಲಿ ಪ್ರತಿ ಕೊಠಡಿಗೆ ತನ್ನ ಗೆಳತಿಯರೊಡನೆ ಭೇಟಿ ನೀಡಿ ತಮ್ಮ ಯೋಜನೆ ಕುರಿತಾಗಿ ಮಕ್ಕಳಿಗೆ  ತಿಳಿಸಿಕೊಟ್ಟಿದ್ದಾರೆ.

ನಿಖಿಯಾ, ತನ್ನ ಸ್ನೇಹಿತರ ಜೊತೆಗೂಡಿ ಈವರೆಗೆ 2500ಕ್ಕೂ ಹೆಚ್ಚಿನ ಪಠ್ಯ ಪುಸ್ತಕಗಳು, 150ಕ್ಕೂ ಹೆಚ್ಚಿನ ಬ್ಯಾಗ್, 400ಕ್ಕೂ ಹೆಚ್ಚಿನ ಶೂಗಳು, 300ಕ್ಕೂ ಹೆಚ್ಚಿನ ಜ್ಯಾಮಿಟ್ರಿ ಬಾಕ್ಸ್, 270 ನೀರಿನ ಬಾಟಲ್, 100ಕ್ಕೂ ಹೆಚ್ಚಿನ ಊಟದ ಡಬ್ಬಿ ಹಾಗೂ ನೋಟ್ ಪುಸ್ತಕಗಳು, 75ಕ್ಕೂ ಹೆಚ್ಚಿನ ಕಲರ್ ಬಾಕ್ಸ್, 6 ಬ್ಯಾಗ್‌ನಷ್ಟು ಜಾಕೆಟ್‌ಗಳು ಹಾಗೂ ಎರಡು ಬ್ಯಾಗಿನಷ್ಟು ಪೆನ್ಸಿಲ್, ರಬ್ಬರ್ ಹಾಗೂ ಶಾರ್ಪ್‌ನರ್ ಸೇರಿದಂತೆ ವಿವಿಧ ಸ್ಟೇಷನರಿ ಸಾಮಗ್ರಿಗಳನ್ನು ಸಂಗ್ರಹಿಸಿದ್ದಾರೆ. ಹೀಗೆ ಸಂಗ್ರಹಿಸಿದ  ವಸ್ತುಗಳನ್ನು ಶುದ್ಧಗೊಳಿಸಿ ಏಂಜಲ್ ಅನಾಥಾಶ್ರಮ ಹಾಗೂ ಪರಿಕ್ರಮ ಸೆಂಟರ್ ಆಫ್ ಲರ್ನಿಂಗ್‌ನಲ್ಲಿನ ಬಡ ವಿದ್ಯಾರ್ಥಿಗಳಿಗೆ ನೀಡಿದ್ದಾರೆ.

ನಯಾಪೈಸೆ ಖರ್ಚಿಲ್ಲದ ನಿಖಿಯಾಳ ಈ ಯೋಜನೆ ಈಗ ದೊಡ್ಡ ಮಟ್ಟದಲ್ಲಿ ಪ್ರಭಾವ ಬೀರುತ್ತಿದೆ. ಇತರ ವಿದ್ಯಾರ್ಥಿಗಳಿಗೂ ಸ್ಫೂರ್ತಿಯಾಗುತ್ತಿದೆ. ‘ದಾನಿಗಳು ತಾವು ಬಳಸದೇ ಇರುವಂತಹ ವಸ್ತುಗಳನ್ನು ದಾನ ಮಾಡಿದ್ದಾರೆ. ಆ ವಸ್ತುಗಳು ಅಗತ್ಯವಿರುವವರ ಬಳಕೆಗೆ ಲಭ್ಯವಾಗುತ್ತಿವೆ. ಕೊಟ್ಟು ಖುಷಿ ಪಡುವುದರಲ್ಲಿ ಸಿಗುವ ಸುಖ ಮತ್ತಿನ್ಯಾವುದರಲ್ಲೂ ಇಲ್ಲ ಎಂಬ ಅರಿವು  ಈಗ ನಮಗಾಗಿದೆ’ ಎನ್ನುವ ನಿಖಿಯಾಗೆ ಮುಂದೆ ತನ್ನ ಸಾಮಾಜಿಕ ಚಟುವಟಿಕೆಯ ಹರವನ್ನು ಮತ್ತಷ್ಟು ಹಿಗ್ಗಿಸುವ ಉತ್ಸಾಹವಿದೆ. ಇದರ ಜೊತೆಗೆ ಪ್ರತಿ ಶಾಲೆಗಳಲ್ಲಿಯೂ ಬಯಾಲಜಿ, ಕೆಮಿಸ್ಟ್ರಿ ಹಾಗೂ ಮ್ಯಾಥಮೆಟಿಕ್ಸ್ ಲ್ಯಾಬ್‌ಗಳನ್ನು ಆರಂಭಿಸುವ ಉದ್ದೇಶ ಹೊಂದಿದ್ದಾಳೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT